ಸೋಮವಾರ, ಮಾರ್ಚ್ 8, 2021
31 °C
ಕ್ರೀಡಾ ಹಾಸ್ಟೆಲ್‌ ಕಥೆ–ವ್ಯಥೆ

ಕೋಚ್‌ಗಳಿದ್ದರೂ ಸೌಲಭ್ಯ ಇಲ್ಲ

ಉದಯ ಯು. Updated:

ಅಕ್ಷರ ಗಾತ್ರ : | |

ಕೋಚ್‌ಗಳಿದ್ದರೂ ಸೌಲಭ್ಯ ಇಲ್ಲ

ಹಾಸನದಲ್ಲಿ 2006ರಲ್ಲಿ ಕ್ರೀಡಾ ಹಾಸ್ಟೆಲ್‌ ಆರಂಭವಾಯಿತು. ವಿದ್ಯಾರ್ಥಿಗಳು ಮೊದಲ ಕೆಲವು ವರ್ಷಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿರುವ ಕೊಠಡಿಗಳಲ್ಲೇ ವಾಸ ಮಾಡಿದ್ದರು. ಇಲ್ಲಿ ನೆಲೆಸಿದ್ದ ಅಷ್ಟು ವರ್ಷಗಳನ್ನು ಅವರು ಕಷ್ಟದಿಂದಲೇ ಕಳೆದಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲೇ ಹೊಸ ಹಾಸ್ಟೆಲ್‌ ಉದ್ಘಾಟನೆಯಾಗಿದೆ. ಇಲ್ಲಿ ಒಂದೇ ಕಟ್ಟಡದ ನೆಲ ಅಂತಸ್ತಿನಲ್ಲಿ ಬಾಲಕಿಯರು ಮತ್ತು ಮೊದಲ ಅಂತಸ್ತಿನಲ್ಲಿ ಬಾಲಕರಿಗೆ ಕೊಠಡಿಗಳನ್ನು ಒದಗಿಸಲಾಗಿದೆ. ಒಟ್ಟಾರೆ 34 ವಿದ್ಯಾರ್ಥಿಗಳು ವಾಸವಾಗಿದ್ದಾರೆ.ಈ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಹಾಕಿ, ವಾಲಿಬಾಲ್‌ ಹಾಗೂ ಕಳೆದ ವರ್ಷದಿಂದ ಬ್ಯಾಸ್ಕೆಟ್‌ಬಾಲ್‌ ತರಬೇತಿಯನ್ನೂ ನೀಡಲಾಗುತ್ತಿದೆ. ‘ಜಿಲ್ಲೆಯಲ್ಲಿ ಹಾಕಿಗೆ ಹೆಚ್ಚಿನ ಆದ್ಯತೆ ಇದೆ. ಆದರೆ ನಮಗೆ ಅನೇಕ ಸಮಸ್ಯೆಗಳಿವೆ’ ಎಂಬುದು ವಿದ್ಯಾರ್ಥಿಗಳ ದೂರು. ಎಲ್ಲ ಕ್ರೀಡೆಗಳಿಗೂ ಕೋಚ್‌ ಇದ್ದಾರೆ, ಆದರೆ ಸೌಲಭ್ಯಗಳ ಕೊರತೆ ಇದೆ. ಬೇರೆ ಜಿಲ್ಲೆ ಅಥವಾ ರಾಜ್ಯಗಳಿಗೆ ಆಡಲು ಹೋದರೆ ಟರ್ಫ್‌ ಮೈದಾನದಲ್ಲಿ ಹಾಕಿ ಪಂದ್ಯಗಳು ನಡೆಯುತ್ತವೆ. ನಮ್ಮಲ್ಲಿ ಆ ವ್ಯವಸ್ಥೆ ಇಲ್ಲ. ಮೈದಾನ ಇದೆ. ಆಟವಾಡುವಾಗ ವಿಪರೀತ ದೂಳು ಏಳುತ್ತದೆ. ಇಲ್ಲಿ ಆಟವಾಡಿ ಬೇರೆ ಕಡೆ ಹೋದರೆ ಟರ್ಫ್‌ ಮೈದಾನಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು.‘ಟರ್ಫ್‌ ಅಳವಡಿಸಲು ನಾವು ಪ್ರಸ್ತಾವನೆ ಕಳುಹಿಸುತ್ತಲೇ ಇದ್ದೇವೆ. ಅನುದಾನ ಬಂದರೆ ಕೂಡಲೇ ಕೆಲಸ ಆರಂಭಿಸುತ್ತೇವೆ’ ಎಂದು ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿ ನಾಡಗೀರ ಹೇಳುತ್ತಾರೆ. ಜಿಲ್ಲೆಯಲ್ಲಿ ಹಾಸ್ಟೆಲ್‌ ನಿರ್ಮಾಣವಾದಾಗ ಸಮಸ್ಯೆ ಬಗೆಹರಿಯಿತು ಎಂದು ಭಾವಿಸಲಾಗಿತ್ತು. ಆದರೆ ಕಟ್ಟಡ ನಿರ್ಮಾಣದ ನಂತರ ಅಲ್ಲಿ ಯಾವ ಕಾಮಗಾರಿಯೂ ಆಗಿಲ್ಲ. ಕಾಂಪೌಂಡ್‌ ಕಾಮಗಾರಿ ಈಚೆಗೆ ಆರಂಭವಾಗಿದೆ. ಹಾಸ್ಟೆಲ್‌ ತಗ್ಗು ಪ್ರದೇಶದಲ್ಲಿರುವುದರಿಂದ ಮಳೆಗಾಲದಲ್ಲಿ ನೀರು ನಿಂತು ಕ್ರೀಡಾಂಗಣದ ಕಡೆಗೆ ಬರಬೇಕಾದರೆ ಸುತ್ತಿ ಬಳಸಿ ಬರಬೇಕು. ಅರಣ್ಯ ಇಲಾಖೆ ಸಹಯೋಗದಲ್ಲಿ ಹಾಸ್ಟೆಲ್‌ ಸುತ್ತ ಗಿಡಗಳನ್ನು ನೆಡಲಾಗಿದೆ. ಆದರೆ ಕಾಂಪೌಂಡ್‌ ತುಂಬ ಕಳೆ, ಕಸ ತುಂಬಿದೆ.  ಹಸು ಮೇಯಿಸುವವರೂ ಒಳಗೆ ಬರುತ್ತಾರೆ, ನಾಯಿ–ಕೋಳಿಗಳೂ ಕಾಂಪೌಂಡ್‌ ಸುತ್ತ ಓಡಾಡುತ್ತವೆ. ದಿನನಿತ್ಯ ಓಡಾಡುವ ಕಾಲುದಾರಿ ಬಿಟ್ಟರೆ ಹಾಸ್ಟೆಲ್‌ ಸುತ್ತ ಓಡಾಡಲು ಆಗದಂಥ ಸ್ಥಿತಿ ಇದೆ.ಇಲಾಖೆಯ ವತಿಯಿಂದ ವಿವಿಧ ಸಂಘ ಸಂಸ್ಥೆಗಳಿಗೆ ವಿತರಿಸಲು ತಂದಿರುವ ಕಂಬಗಳು ಹಾಗೂ ಇತರ ಕ್ರೀಡಾ ಪರಿಕರಗಳನ್ನು ಹಾಸ್ಟೆಲ್‌ನಲ್ಲಿ ಇಡಲಾಗಿದೆ. ಇದಕ್ಕೆ ಪ್ರತ್ಯೇಕ ಜಾಗ ಮಾಡಿ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ವಿದ್ಯಾರ್ಥಿಗಳ ಪೋಷಕರು ಒತ್ತಾಯಿಸುತ್ತಾರೆ. ಹಾಸ್ಟೆಲ್‌ ಸಮೀಪದಲ್ಲೇ ಹಾಕಿ, ಬ್ಯಾಸ್ಕೆಟ್‌ಬಾಲ್‌ ಹಾಗೂ ವಾಲಿಬಾಲ್‌ ಅಂಗಣಗಳಿವೆ. ಸುಮಾರು ಮುಕ್ಕಾಲು ಕಿ.ಮೀ. ದೂರದಲ್ಲಿ ಶಾಲೆಯೂ ಇದೆ. ಶಿಕ್ಷಣ ಮತ್ತು ಕ್ರೀಡಾ ಸೌಲಭ್ಯಗಳ ವಿಚಾರದಲ್ಲಿ ಇವರು ಇತರ ಜಿಲ್ಲೆಯ ವಿದ್ಯಾರ್ಥಿಗಳಿಗಿಂತ ಅನುಕೂಲಸ್ಥರು.‘2013–14ನೇ ಸಾಲಿನಲ್ಲಿ ಸ್ಕೂಲ್‌ ಗೇಮ್ಸ್‌ ಫೆಡರೇಷನ್ಸ್‌ ನವರು ಆಯೋಜಿಸಿದ್ದ ಹಾಕಿ ಟೂರ್ನಿಯಲ್ಲಿ ನಮ್ಮ ವಿದ್ಯಾರ್ಥಿಗಳು ಚಾಂಪಿಯನ್‌ ಆಗಿದ್ದರು. ಕಳೆದ ವರ್ಷ ಎರಡನೇ ಸ್ಥಾನ ಪಡೆದಿದ್ದಾರೆ. ಹಾಕಿಯಲ್ಲಿ ನಮ್ಮ ಜಿಲ್ಲೆಯ ಸಾಧನೆ ಗಮನಾರ್ಹವಾಗಿದೆ. ಸಣ್ಣಪುಟ್ಟ ಕೆಲವು ಸಮಸ್ಯೆಗಳಿದ್ದರೂ, ಹಾಸ್ಟೆಲ್‌ ವ್ಯವಸ್ಥೆ ನಮ್ಮಲ್ಲಿ ಉತ್ತಮವಾಗಿದೆ’ ಎಂದು ಹಾಕಿ ಕೋಚ್‌ ರವೀಶ್‌ ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.