ಶನಿವಾರ, ಜನವರಿ 18, 2020
20 °C

ಕ್ರಿಸ್‌ಮಸ್ ಕಲರವ

ಸವಿತಾ ಬೆಂಗಳೂರು,ದುಸನಾ Updated:

ಅಕ್ಷರ ಗಾತ್ರ : | |

ಕ್ರಿಸ್‌ಮಸ್ ಕಲರವ

ಎರಡು ವಾರಗಳ ಹಿಂದಷ್ಟೇ ಪುನರ್‌ ನಿರ್ಮಾಣಗೊಂಡು ಗಾಜಿನ ಕಲಾಕೃತಿಗಳಿಂದ ಕಂಗೊಳಿಸುತ್ತಿರುವ ಹುಬ್ಬಳ್ಳಿಯ ಕ್ಲಬ್‌ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಕ್ಯಾಥೊಲಿಕ್ ಚರ್ಚ್‌ನಲ್ಲೀಗ ಕ್ರಿಸ್‌ಮಸ್‌ ಸಡಗರ. ಮೂರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಚರ್ಚ್‌ನ ವಿಶೇಷತೆ ಬ್ರೆಜಿಲ್ ಮಾದರಿಯ ಸಂತ ಜೋಸೆಫ್‌ರ ಸ್ಮಾರಕ. ಅವರ ಕಲಾಕೃತಿಗಳನ್ನು 14 ವರ್ಣದ ಗಾಜಿನಿಂದ ನಿರ್ಮಿಸಿ ಅಭೂತಪೂರ್ವ ಕಲೆ ಪ್ರದರ್ಶಿಸಲಾಗಿದೆ. 15/25 ಮತ್ತು 8/12 ಅಡಿಯ ಕಲಾಕೃತಿಗಳನ್ನು ತ್ರಿಶೂರಿನ ಮೊಯಾಲನ್ ಸಿರಾಮಿಕ್ಸ್‌ನಲ್ಲಿ ತಯಾರಿಸಲಾಗಿದ್ದು, ಇದಕ್ಕೆ ಸುಮಾರು ₨ 6 ಲಕ್ಷ ಖರ್ಚಾಗಿದೆ. ಮರಗೆಲಸದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಶಿರಸಿಯ ಗುಡಿಗಾರರ ಕೈಚಳಕವಿದೆ.ಮುಖ್ಯದ್ವಾರದ ಎದುರಿಗೆ ಸಂತ ಜೋಸೆಫ್‌ ಅವರ ದೊಡ್ಡ ಆಕೃತಿ ನಿರ್ಮಿಸಲಾಗಿದೆ. ಪ್ರಧಾನ ಪ್ರವೇಶದ್ವಾರದ ಪಾರ್ಶ್ವಬಾಗಿಲಲ್ಲಿ ಸಂತ ಪ್ರೇತರ ಚಿತ್ರಿಕೆ, ಬಲ ಬದಿಯ ಪ್ರವೇಶದ್ವಾರದಲ್ಲಿ ಸಂತ ಪೌಲರ ಆಕೃತಿ, ಎಡಬದಿಯ ಪ್ರವೇಶದ್ವಾರದಲ್ಲಿ ಸಂತ ಕನ್ಯಾಮರಿಯಮ್ಮ ನವರ ಆಕೃತಿಗಳನ್ನು ನಿರ್ಮಿಸಲಾಗಿದೆ.ಜತೆಗೆ ಅನ್ನದಾನ, ಪಾನದಾನ, ವಸ್ತ್ರದಾನ, ಆಶ್ರಯದಾನ, ಸ್ವಾಸ್ಥ್ಯದಾನ, ಬಂಧ ಮುಕ್ತಿ ಸೇವೆ, ದೇಹ ಮುಕ್ತಿ ದಾನ, ಮಂತ್ರಾಲೋಚನೆ-ಬೋಧನೆ, ಜ್ಞಾನ ಬೋಧನೆ, ಸನ್ಮಾರ್ಗ ತೋರುವುದು, ಸಮಾಧಾನ ಹೇಳುವುದು, ಕ್ಷಮದಾನ ನೀಡುವುದು, ಪ್ರಾರ್ಥನೆ, ತಾಳ್ಮೆ ಕಂಡುಕೊಳ್ಳುವುದು ಸೇರಿದಂತೆ ಧರ್ಮ ಸಂದೇಶ ಸಾರುವ ಪ್ರತಿಯೊಂದು ಕಲಾಕೃತಿಗಳನ್ನು ಗಾಜಿನಿಂದ ನಿರ್ಮಿಸಲಾಗಿದೆ. ಸರ್ವಧರ್ಮ ಪೂಜನೀಯ

ಬೆಂಗಳೂರಿನ ವಿವೇಕನಗರದಲ್ಲಿರುವ ಬಾಲಯೇಸುವಿನ ದೇವಾಲಯವು ತನ್ನ ಪವಾಡಶಕ್ತಿಯ ಕಾರಣದಿಂದ ಎಲ್ಲ ಧರ್ಮದವರನ್ನೂ ಕೈಬೀಸಿ ಕರೆಯುತ್ತಿದೆ. ಅರ್ಧ ವರ್ತುಲಾಕಾರದಲ್ಲಿ ಕಟ್ಟಲಾದ ಈ ಬೃಹತ್ ಕಟ್ಟಡದೊಳಗೆ ಪೂಜಾ ಪೀಠದ ಹಿಂಬದಿಯ ಗೋಡೆಯಲ್ಲಿ ಕ್ರಿಸ್ತಜನನದ ಬೃಹತ್ ಪಟವನ್ನು ಚಿತ್ರಿಸಲಾಗಿದೆ. ಏಕಕಾಲಕ್ಕೆ ಹತ್ತುಸಾವಿರ ಮಂದಿ ಪೂಜೆಯಲ್ಲಿ ಭಾಗವಹಿಸುವಂತೆ ಈ ಚರ್ಚನ್ನು ರೂಪಿಸಲಾಗಿದೆ.ಇದೇ ರೀತಿ ಎಲ್ಲರನ್ನೂ ಸೆಳೆಯುವ ಚರ್ಚ್ ಎಂದರೆ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಸಂತ ಪ್ಯಾಟ್ರಿಕ್ ಚರ್ಚ್. 19ನೇ ಶತಮಾನದಲ್ಲಿ ಸ್ಕಾಟಿಷ್ ಸೈನಿಕರು ತಮ್ಮ ಉಪಯೋಗಕ್ಕಾಗಿ ಇದನ್ನು ಕಟ್ಟಿಕೊಂಡರು. ಸುಂದರವಾದ ಒಳಾಂಗಣ ವಿನ್ಯಾಸ, ಅಷ್ಟೇ ಸುಂದರವಾದ ಹೊರಾಂಗಣ, ಮುಗಿಲಿಗೆ ಚಾಚಿದ ಎರಡು ಗೋಪುರಗಳು, ಬಲು ವಿಸ್ತಾರವಾದ ಜಗಲಿ ಮತ್ತು ವಿಶಾಲವಾದ ನಿವೇಶನದ ಮಧ್ಯೆಯಿದ್ದು ಪ್ರಶಾಂತವಾಗಿದೆ. ಅವಿಭಜಿತ ಮೈಸೂರು ಡಯಾಸೀಸಿನ ಆಡಳಿತ ಕೇಂದ್ರವು ಇದೇ ಆವರಣದಲ್ಲಿದ್ದುದರಿಂದ ಈ ಚರ್ಚ್ ಪ್ರಧಾನಾಲಯವಾಗಿ ಸಹ ಕಾರ್ಯನಿರ್ವಹಿಸಿದೆ.ಕೆಜಿಎಫ್‌ನ ಜಯಮಾತೆ

ಧರ್ಮ ಗುರುವಾಗಿ ಕೆಲಸ ಮಾಡಿದ ಫ್ರೇಸಿ 1889ರಿಂದ 1907ರವರೆಗೂ ಧರ್ಮ ಪ್ರಚಾರದಲ್ಲಿ ತೊಡಗಿದ್ದರು. ಇವರ ಅವಧಿಯಲ್ಲಿ ರಾಜ್ಯದಲ್ಲಿ ಹತ್ತು ಪ್ರಮುಖ ಚರ್ಚ್‌ಗಳು ನಿರ್ಮಾಣವಾದವು. ಅದರಲ್ಲಿ ಕೆಜಿಎಫ್‌ನ ಚಾಂಪಿಯನ್‌ರೀಫ್ಸ್‌ನ ಜಯಮಾತೆ ಚರ್ಚ್ (ಲೇಡಿ ಆಫ್ ವಿಕ್ಟರೀಸ್ ಚರ್ಚ್) ಕೂಡಾ ಒಂದು.ಚಿನ್ನದ ಗಣಿಯನ್ನು ಜಾನ್ ಟೇಲರ್ ಸುಮಾರು 120 ವರ್ಷಗಳ ಹಿಂದೆ ಸ್ಥಾಪನೆ ಮಾಡಿದ್ದಕ್ಕೆ ದಾಖಲೆಗಳಿದ್ದರೂ, ಚರ್ಚ್ ದಾಖಲೆ ಪ್ರಕಾರ ಕ್ರಿ.ಶ.77ರಲ್ಲಿ ರೋಮನ್ ಇತಿಹಾಸಕಾರ ಪ್ಲಿನಿ ಕೆಜಿಎಫ್ ಪ್ರದೇಶದ ಮೂಲಕ ಹಾದುಹೋಗಿದ್ದ. ಇಲ್ಲಿನ ಚಿನ್ನ ಮತ್ತು ಬೆಳ್ಳಿ ನಿಕ್ಷೇಪಗಳ ಕುರಿತು ದಾಖಲಿಸಿದ್ದ. 1850ರಲ್ಲಿ ಐರಿಷ್ ಸೈನಿಕ ಲಾವೆಲ್ಲೆ ಈ ಬಗ್ಗೆ ಸಂಶೋಧನೆ ನಡೆಸಿದ್ದ.ಆತನ ಸೇವೆ ಸ್ಮರಣೆಯಲ್ಲಿ ಬೆಂಗಳೂರಿನ ಭಾರತೀಯ ಸರ್ವೇಕ್ಷಣಾ ಇಲಾಖೆ ಇರುವ ಕಂಟೋನ್ಮೆಂಟ್ ಪ್ರದೇಶದಲ್ಲಿನ ರಸ್ತೆಯೊಂದಕ್ಕೆ ಲಾವೆಲ್ಲೆ ರಸ್ತೆ ಎಂದು ಹೆಸರಿಡಲಾಗಿದೆ. ಬ್ರಿಟಿಷರು ನಗರಕ್ಕೆ ಬರುವ ಮೊದಲೇ ಕ್ಯಾಥೊಲಿಕ್ ಪಂಗಡದವರು ವಾಸಿಸುತ್ತಿದ್ದರು. ಇಲ್ಲಿ ಇವರಿಗಾಗಿ ಪ್ರಾರ್ಥನಾ ಮಂದಿರ ಇರಲಿಲ್ಲ. 1912ರ ಅವಧಿ­ಯಲ್ಲಿ ನಿರ್ಮಿಸಿದ ಎರಡು ಚರ್ಚ್‌ಗಳಲ್ಲಿ ಜಯಮಾತೆ ಸಹ ಒಂದು.ಚರ್ಚ್‌ನ ಪ್ರಧಾನ ಆಕರ್ಷಣೆಯಾಗಿರುವ ವಿಕ್ಟರಿ ಲೇಡಿಗೂ ಇತಿಹಾಸವಿದೆ. ಇಟಲಿಯ ಮೈನಿಂಗ್ ಕಾರ್ಮಿಕರು ಆರಾಧಿಸುತ್ತಿದ್ದ ‘ವಿಕ್ಟರಿ ಲೇಡಿ’ ಎಲ್ಲ ಬಂಧನಗಳಿಂದ ಮುಕ್ತ ಮಾಡುತ್ತಾಳೆ ಎಂದು ನಂಬಿಕೆ ಇಟ್ಟಿದ್ದರು. ಅದಕ್ಕಾಗಿ ಮಾತೆಯ 15 ಅಡಿ ವಿಗ್ರಹವನ್ನು ಪೋರ್ಚುಗಲ್‌ನಿಂದ ತರಲಾಯಿತು. ಆಕರ್ಷಕ ವಿನ್ಯಾಸವುಳ್ಳ ಚರ್ಚ್ 1952ರಲ್ಲಿ ಗಣಿಯೊಳಗೆ ಉಂಟಾದ ಭೂಕಂಪಕ್ಕೆ ತುತ್ತಾಗಿ ಕುಸಿದು ಬಿತ್ತು. ಆದರೆ ಲೇಡಿ ಆಫ್ ವಿಕ್ಟರಿಗೆ ಯಾವುದೇ ಹಾನಿಯಾಗಲಿಲ್ಲ. ಈ ಘಟನೆ ಭಕ್ತರಲ್ಲಿ ವಿಸ್ಮಯ ಮೂಡಿಸಿದೆ.ಶತಮಾನದ ಪೇಟ ಚರ್ಚ್

1901ರಲ್ಲಿ ಪ್ರಾರಂಭವಾದ ಬೀದರ್‌ನ ಹಳೆ ನಗರದ ಮಂಗಲಪೇಟ ಬಡಾವಣೆಯಲ್ಲಿರುವ ಪೇಟ ಚರ್ಚ್‌ನಲ್ಲಿ

ಕ್ರಿಸ್‌ಮಸ್‌ ಸಂದರ್ಭದಲ್ಲಿ ಜಾತ್ರಾ ಸಡಗರ. ಬ್ರಿಟಿಷರ ಕಾಲದ ಭವ್ಯವಾದ ಕಟ್ಟಡದಿಂದ ಇದು ಆಕರ್ಷಣೀಯವಾಗಿದೆ. ಕ್ರೈಸ್ತ ಧರ್ಮೀಯರ ಏಸು ಸ್ವಾಮಿಯ ಆರಾಧನೆ ಮತ್ತು ಆತನ ಸಂದೇಶಗಳನ್ನು ಮನನ ಮಾಡಿಕೊಳ್ಳುವ ಕೇಂದ್ರವಾಗಿದೆ. ಬೀದರಿನಲ್ಲಿ ಮೊಟ್ಟ ಮೊದಲ ಕನ್ನಡ ಶಾಲೆ ಆರಂಭಿಸಿದ ಹಿರಿಮೆ ಕ್ರೈಸ್ತ ಮಿಶನರಿಗಳಿಗೆ ಸಲ್ಲುತ್ತದೆ. ನಾರ್ಮಾ ಫ್ರೆಡ್ರಿಕ್ ಎಂಬ ಕ್ರಿಶ್ಚಿಯನ್ ಮಹಿಳೆಯು ಕನ್ನಡ ಶಾಲೆ ಆರಂಭಿಸಿದರು. ಆಗ ಆರಂಭವಾದ ಶಾಲೆಯು ಸದ್ಯ ಎನ್.ಎಫ್.ಎಚ್.ಎಸ್. ಎಂಬ ಹೆಸರಿನಿಂದ ಪರಿಚಿತವಾಗಿದೆ.ಮಂಗಳೂರು ಧರ್ಮಪ್ರಾಂತ್ಯದ ಅತೀ ಪ್ರಾಚೀನ ಚರ್ಚ್ ಎಂದು ಪರಿಗಣಿಸಲ್ಪಡುವ ದಿ ಮೋಸ್ಟ್ ಹೋಲಿ ಸೇವ್ಹಿಯರ್ ಚರ್ಚ್ ಅಗ್ರಾರ್ ಪ್ರಖ್ಯಾತ ಧಾರ್ಮಿಕ ಶ್ರದ್ಧಾಕೇಂದ್ರವಾಗಿದೆ. ಇಲ್ಲಿನ ರೋಮನ್ ಶೈಲಿಯ ಕಲಾತ್ಮಕ ಚಿತ್ರಗಳು ಹಾಗೂ ಕಟ್ಟಡ ಶೈಲಿಯು ಆಕರ್ಷಕವಾಗಿದೆ. ಇದು ಶೈಕ್ಷಣಿಕ ಕೇಂದ್ರವೂ ಆಗಿದೆ. ಇಲ್ಲಿ ಆಚರಿಸುವ ಹಬ್ಬವು ಧಾರ್ಮಿಕ ಮಹತ್ವವನ್ನು ಹೊಂದಿದೆ.ಅತಿ ದೊಡ್ಡ ಚರ್ಚ್

ಭಾರತದ ಎರಡನೇ ಅತಿ ದೊಡ್ಡ ಚರ್ಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಚರ್ಚ್. ಈ ಹಿಂದೆ ಸಣ್ಣ ಕಟ್ಟಡದಲ್ಲಿ ಇದ್ದ ಚರ್ಚ್ ೨೦೦೧-೦೨ರಲ್ಲಿ ಇದು ಮಹಾ ಸ್ವರೂಪವನ್ನು ಪಡೆದುಕೊಂಡಿದೆ.ಈ ಚರ್ಚಿನಲ್ಲಿ ಇಂದು ೫ಸಾವಿರ ಜನರು ಕುಳಿತು ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಈ ಚರ್ಚ್ ನಗರದ ಹೃದಯ ಭಾಗದಲ್ಲಿದೆ. ಈ ಚರ್ಚನ್ನು ರೋಮನ್ ಗ್ರಾಫಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಚರ್ಚ್‌ನ ಒಳಭಾಗದಲ್ಲಿ ಏಸುವಿನ ಜೀವನದ ಪ್ರಮುಖ ಘಟನಾವಳಿಗಳ ತೈಲಚಿತ್ರಗಳು ನಮ್ಮನ್ನು ಕ್ರೈಸ್ತನ ಕಾಲಕ್ಕೆ ಕೊಂಡೊಯ್ಯುತ್ತವೆ. ಈ ಪ್ರಾರ್ಥನಾ ಮಂದಿರದೊಳಗಿನ ಪ್ರಶಾಂತತೆಯು ಯಾರನ್ನಾದರೂ ಆಕರ್ಷಿಸದೆ ಇರಲಾರದು.1978ರಲ್ಲಿ ಕಟ್ಟಿದ ಸೇಂಟ್‌ ಫ್ರಾನ್ಸಿಸ್ ಝೇವಿಯರ್ ಚರ್ಚ್ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರದಲ್ಲಿದೆ. ಸೀಮೆಯ ಕ್ರೈಸ್ತರೆಲ್ಲ ಹರಕೆ ಹೊತ್ತುಕೊಳ್ಳುವ ಪ್ರಸಿದ್ಧ ಚರ್ಚ್ ಇದು. ಗಾಥಿಕ್ ಶೈಲಿಯ ಕಮಾನು ಕಿಟಕಿ ಮತ್ತು ಬಾಗಿಲುಗಳಿಂದ ಕಣ್ಮನ ಸೆಳೆಯುತ್ತಿದೆ ಗುಲ್ಬರ್ಗದ ಮರಿಯಮ್ಮ ಚರ್ಚ್‌ನಲ್ಲೂ ಕ್ರಿಸ್‌ಮಸ್‌ ಸಡಗರ.

ಪ್ರತಿಕ್ರಿಯಿಸಿ (+)