ಶುಕ್ರವಾರ, ಏಪ್ರಿಲ್ 16, 2021
20 °C

ಕ್ರೈಸ್ತ ಸಂಘದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಕನ್ನಡ ಭಾಷೆಯಲ್ಲಿ ಪ್ರಾರ್ಥನೆ ಮಾಡಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಕ್ಯಾಥೋಲಿಕ್ ಕನ್ನಡ ಕ್ರೈಸ್ತರ ಸಂಘದ ಸದಸ್ಯರು ಹಾಗೂ ಸ್ಥಳೀಯ ಕನ್ನಡಿಗರು ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಹೆಗ್ಗಡೆ ನಗರದ ಸೇಂಟ್ ಮೆರೀಸ್ ಚರ್ಚ್ ಆವರಣದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಫಾದರ್ ಜೇಕಬ್ ಅವರು ಬೆಳಿಗ್ಗೆ 7 ಗಂಟೆಗೆ ತಮಿಳು ಭಾಷೆಯಲ್ಲಿ ಪ್ರಾರ್ಥನೆ ಮತ್ತು ಪೂಜೆ ಆರಂಭಿಸಿದರು. ಇದರಿಂದ ಕೋಪಗೊಂಡ ಕನ್ನಡಿಗರು ಪ್ರಾರ್ಥನೆಗೆ ವಿರೋಧ ವ್ಯಕ್ತಪಡಿಸಿ ಬೈಬಲ್ ಕಸಿದುಕೊಂಡು ಇಂಗ್ಲಿಷ್ ಅಥವಾ ತಮಿಳು ಭಾಷೆಯಲ್ಲಿ ಪ್ರಾರ್ಥನೆ ಮಾಡದೆ ಕನ್ನಡದಲ್ಲಿ ಮಾತ್ರ ಪ್ರಾರ್ಥನೆ ಮಾಡಬೇಕೆಂದು ಪಟ್ಟುಹಿಡಿದರು.ಇದರಿಂದ ಅಸಮಧಾನಗೊಂಡ ಪಾದ್ರಿಗಳು, ಪ್ರಾರ್ಥನಾ ಸ್ಥಳದಿಂದ ಪಕ್ಕಕ್ಕೆ ಸರಿದರು. ಗಾಬರಿಗೊಂಡ ತಮಿಳರು ದೇವಾಲಯದ ಹೊರಗೆ ಬಂದು ನಿಂತರು. ಆಗ ಪ್ರತಿಭಟನಾಕಾರರು ಕನ್ನಡದಲ್ಲಿ ಪ್ರಾರ್ಥನೆ ಆರಂಭಿಸಿದರು. ನಂತರ 8.30ಕ್ಕೆ ತಮಿಳರು ದೇವಾಲಯದ ಒಳಗೆ ಪ್ರವೇಶಿಸಿ ಪ್ರಾರ್ಥನೆ ಮಾಡಲು ಮುಂದಾದಾಗ ಕನ್ನಡಿಗರು ಇದಕ್ಕೆ ಅವಕಾಶ ನೀಡದೆ ಪ್ರತಿಭಟಿಸಿದರು.ಈ ಸಂದರ್ಭದಲ್ಲಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಸ್ಥಳಕ್ಕೆ ಆಗಮಿಸಿದ ಸಂಪಿಗೆಹಳ್ಳಿ ಪೊಲೀಸರು ಇಬ್ಬರನ್ನೂ ಸಮಾಧಾನಗೊಳಿಸಿ ದೇವಾಲಯದಿಂದ ಹೊರಗೆ ಕಳುಹಿಸಿದರು. ಹೊರಗೆ ಬಂದ ಕನ್ನಡಿಗರು ಮತ್ತೆ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.ಫಾದರ್ ಸ್ಪಷ್ಟನೆ: ದೇವಾಲಯದಲ್ಲಿ ಇಲ್ಲಿಯವರೆಗೂ ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಪ್ರಾರ್ಥನೆ, ಪೂಜೆ ನೆರವೇರಿಸಲಾಗುತ್ತಿತ್ತು. ಎಲ್ಲ ಭಾಷೆಯ ಭಕ್ತರು ಆಗಮಿಸುವುದರಿಂದ ಭಕ್ತರ ಮನವಿಯ ಮೇರೆಗೆ ಆಂಗ್ಲ ಭಾಷೆಯಲ್ಲಿಯೂ ಪ್ರಾರ್ಥನೆ ಮಾಡಬೇಕೆಂದು ಬಿಷಪ್ ಬರ್ನಾಡ್ ಮೋರಸ್ ಆದೇಶಿಸಿರುವ ಹಿನ್ನೆಲೆಯಲ್ಲಿ ಆಂಗ್ಲ ಭಾಷೆಯಲ್ಲಿ ಪ್ರಾರ್ಥನೆ ಆರಂಭಿಸಲಾಗಿದೆ ಎಂದು ಫಾದರ್ ಜೇಕಬ್ ಸ್ಪಷ್ಟನೆ ನೀಡಿದರು.ಅಖಿಲ ಕರ್ನಾಟಕ ಕ್ಯಾಥೋಲಿಕ್ ಕನ್ನಡ ಕ್ರೈಸ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಫಾಯಲ್‌ರಾಜ್ ಮಾತನಾಡಿ, `ಸುಮಾರು 20 ವರ್ಷಗಳಿಂದ ಈ ದೇವಾಲಯದಲ್ಲಿ ಕನ್ನಡ ಹಾಗೂ ಶೇ 10ರಷ್ಟು ತಮಿಳು ಭಾಷೆಯಲ್ಲಿ ಪ್ರಾರ್ಥನೆ, ಪೂಜೆ ನೆರವೇರಿಸಿಕೊಂಡು ಬರಲಾಗುತ್ತಿದೆ.ಆದರೆ ಫಾದರ್ ಜೇಕಬ್ ಅಧಿಕಾರ ವಹಿಸಿಕೊಂಡ ತಕ್ಷಣ ಏಕಾಏಕಿ ಆಂಗ್ಲ ಭಾಷೆಯಲ್ಲಿ ಪ್ರಾರ್ಥನೆ ಆರಂಭಿಸುವ ಮೂಲಕ ಎಲ್ಲರನ್ನೂ ಇಬ್ಭಾಗ ಮಾಡಲು ಹೊರಟಿದ್ದಾರೆ ಎಂದರು.  ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿಗೆ ಧಕ್ಕೆ ಬಾರದ ರೀತಿ ಪ್ರಾರ್ಥನೆ ಸಲ್ಲಿಸುವಂತೆ ಜೇಕಬ್ ಅವರಿಗೆ ಈಶಾನ್ಯ ವಿಭಾಗದ ಡಿಸಿಪಿ ಡಾ.ರಮೇಶ್ ಸೂಚಿಸಿದರು. ಅಲ್ಲದೆ ಬಿಷಪ್ ಅವರ ಬಳಿ ಮಾತುಕತೆಗೆ ಸಮಯ ನಿಗದಿಪಡಿಸಿದರೆ, ಸಮಸ್ಯೆಗೆ ಪರಿಹಾರ ಪ್ರಯತ್ನ ನಡೆಸೋಣ ಎಂದು ಭರವಸೆ ನೀಡಿದರು.ಮುಖ್ಯಾಂಶಗಳು

* ಕನ್ನಡಲ್ಲಿ  ಪ್ರಾರ್ಥನೆಗೆ ಆಗ್ರಹ

* ಫಾದರ್ ಸ್ಪಷ್ಟನೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.