ಖಾಸಗಿ ವಿವಿ ಕೈಬಿಡದಿದ್ದರೆ ಸಚಿವರಿಗೆ ಘೇರಾವ್

ಶುಕ್ರವಾರ, ಜೂಲೈ 19, 2019
24 °C

ಖಾಸಗಿ ವಿವಿ ಕೈಬಿಡದಿದ್ದರೆ ಸಚಿವರಿಗೆ ಘೇರಾವ್

Published:
Updated:

ಶಿವಮೊಗ್ಗ: ಯುಜಿಸಿಯ ಕಪ್ಪುಪಟ್ಟಿಯಲ್ಲಿ ಸೇರಿರುವ ಹಲವು ಡೀಮ್ಡ ವಿಶ್ವವಿದ್ಯಾಲಯಗಳನ್ನು ಖಾಸಗಿ ವಿಶ್ವವಿದ್ಯಾಲಯ ಹೆಸರಿನಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯದಿದ್ದರೆ 15 ದಿವಸದಲ್ಲಿ ರಾಜ್ಯಾದ್ಯಂತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಲ್ಲ ಸಚಿವರಿಗೆ ಘೇರಾವ್ ಹಾಕಲಿದೆ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ವಿನಯ್ ಬಿದರೆ ಎಚ್ಚರಿಕೆ ನೀಡಿದರು.

ಯಾವುದೇ ಪೂರ್ವ ತಯಾರಿ, ಸ್ಪಷ್ಟ ಮಾರ್ಗಸೂಚಿಗಳಿಲ್ಲದೇ ರಾಜ್ಯದಲ್ಲಿ 7ರಿಂದ 10 ಖಾಸಗಿ ವಿವಿ ಆರಂಭಕ್ಕೆ ಅನುಮತಿ ನೀಡಲು ಹೊರಟಿರುವ ಸರ್ಕಾರದ ಕ್ರಮ, ಹಲವು ಅನುಮಾನಕ್ಕೆ ಕಾರಣವಾಗಿದೆ. ಇಂತಹ ಮಹತ್ವದ ನಿರ್ಧಾರ ಕೈಗೊಳ್ಳುವ ಮುನ್ನ ಸರ್ಕಾರ ವಿದ್ಯಾರ್ಥಿ ಸಂಘಟನೆ ಗಳು, ಪೋಷಕರ, ಶಿಕ್ಷಣ ತಜ್ಞರ ಸಲಹೆಗಳನ್ನು ತೆಗೆದುಕೊಂಡಿಲ್ಲ. ಇದು ಸರ್ಕಾರದ ಅಪ್ರಜಾಸತಾತ್ಮಕ ಧೋರಣೆಗೆ ಉದಾಹರಣೆಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಶಿಕ್ಷಣ ಖಾತೆಗೆ ಸಚಿವರೇ ಇಲ್ಲ. ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಸರ್ಕಾರ ಕುಣಿಯುತ್ತಿದೆ. ಸರ್ಕಾರ ತನ್ನ ನಿಲುವು ಬದಲಿಸಿಕೊಳ್ಳದಿದ್ದರೆ ರಾಜ್ಯಾದ್ಯಂತ ಘೇರಾವ್ ಚಳವಳಿ ಅನಿವಾರ್ಯ ಎಂದರು.

ವಿವಿ ಹಗರಣ: ಕುಲಪತಿ ರಾಜೀನಾಮೆಗೆ ಆಗ್ರಹ

ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ ಹಗರಣದ ನೈತಿಕ ಹೊಣೆ ಹೊತ್ತು ಕುಲಪತಿ, ಪರೀಕ್ಷಾಂಗ ಕುಲಸಚಿವರು ತಮ್ಮ-ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

10 ವರ್ಷಗಳ ಅಂಕಪಟ್ಟಿ, ದಾಖಲಾತಿ, ಮೌಲ್ಯಮಾಪನ ವಿಭಾಗದ ಹಗರಣಗಳನ್ನು ಸಿಒಡಿ ತನಿಖೆಗೆ ನೀಡಬೇಕು ಎಂದು ಒತ್ತಾಯಿಸಿದ ಅವರು, ಈ ಅವಧಿಯಲ್ಲಿನ ಎಲ್ಲಾ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಇಂತಹ ದೊಡ್ಡ ಹಗರಣದ ವಾಸನೆಯ ಸುಳಿವು ಕುಲಪತಿ ಅವರಿಗೆ ವರ್ಷಗಳ ಹಿಂದೆಯೇ ಗೊತ್ತಿದ್ದರೂ ಮೌನ ವಹಿಸಿದ್ದಾರೆ ಎಂದು ದೂರಿದ ಅವರು, ವಿಶ್ವವಿದ್ಯಾಲಯದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಇಲ್ಲ ಎಂದು ಪರಿಸ್ಥಿತಿ ಇರುವುದು ಕೂಡ ಈ ರೀತಿಯ ಹಗರಣ ನಡೆಯಲು ಕಾರಣವಾಗಿದೆ ಎಂದು ಉದಾಹರಣೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಾಳಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry