ಗುರುವಾರ , ಮೇ 6, 2021
32 °C

ಖಾಸಗಿ ಸತ್ಯಗಳನ್ನು ಮೀರಿದ ಅನುಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಸಾರ್ವಜನಿಕ ಸತ್ಯ ಹಾಗೂ ಖಾಸಗಿ ಸತ್ಯವನ್ನು ಹೇಳುತ್ತಲೇ ಆತ್ಮಕಥೆ ಪ್ರಾಕಾರವನ್ನು ಮೀರುವ ಕೃತಿಗಳು ಕನ್ನಡದಲ್ಲಿ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕಾಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.ನಗರದ ಕಮಲಾ ನೆಹರು ಕಾಲೇಜಿನಲ್ಲಿ ಅಹರ್ನಿಶಿ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ಕವಯತ್ರಿ ಪ್ರತಿಭಾ ನಂದಕುಮಾರ ಅವರ ಆತ್ಮಕಥನ `ಅನುದಿನದ ಅಂತರಗಂಗೆ~ ಮತ್ತು ಪತ್ರಕರ್ತ ಬಿ.ಎಂ. ಬಶೀರ್ ಅವರ `ಅಂಗೈಯಲ್ಲೇ ಆಕಾಶ~ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.ಆತ್ಮಕಥೆ ಎನ್ನುವ ಪ್ರಾಕಾರಕ್ಕೆ ವಿಶಿಷ್ಟ ಅರ್ಥ, ಆವರಣ ಸೃಷ್ಟಿ ಮಾಡುವ ರೀತಿಯಲ್ಲಿ ಈ ಆತ್ಮಕಥನ ಪ್ರಕಟವಾಗಿದೆ ಎಂದ ಅವರು, ಮುಚ್ಚಿ ಹೋದ ಜಗತ್ತಿನ ಅನಾವರಣ ಇಲ್ಲಿದೆ. ಇದನ್ನು ಅಪ್ಪಟ ಲೇಖಕಿಯಾಗಿ ಬರೆದಿದ್ದಾರೆ ಹೊರತು, ಸ್ತ್ರೀವಾದಿ ಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.ಸಾಮಾಜಿಕ ಸತ್ಯದ ಬಗ್ಗೆ ಹೆಣ್ಣುಮಕ್ಕಳು ಬರೆಯುವುದು ಕಡಿಮೆ; ಆದರೆ, ಇಲ್ಲಿ ಕೇವಲ ಖಾಸಗಿ ಸತ್ಯಗಳಿಲ್ಲ; ಅವುಗಳನ್ನು ಮೀರಿದ ಅನುಭವಗಳಿವೆ. ಗದ್ಯವನ್ನು ಮೀರಿದ ಪದ್ಯ, ಪದ್ಯವನ್ನು ಮೀರಿದ ಗದ್ಯದಲ್ಲಿ ಅನುಭವ ವಲಯನ್ನು ಮಿಶ್ರಣ ಮಾಡುವ ತಂತ್ರವನ್ನು ಇಲ್ಲಿ ಪ್ರತಿಭಾ ಅನುಸರಿಸಿದ್ದಾರೆ ಎಂದು ವಿಶ್ಲೇಷಿಸಿದರು.ಲೇಖಕಿ ಕಮಲಾದಾಸ್ ಅವರ `ಮೈ ಸ್ಟೋರಿ~ ಆತ್ಮಕಥನ ಬಂದ ನಂತರದಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಯ ಸೃಜನಶೀಲ ಲೇಖಕಿಯರ ಮೇಲೆ ಪ್ರಭಾವ ಬೀರಿತು. ಹೊಸ ಬರವಣಿಗೆಯ ಲೋಕವನ್ನು ತೆರೆದಿಟ್ಟಿತು ಎಂದು ಅವರು ಹೇಳಿದರು.ಪ್ರಸ್ತುತ ಆತ್ಮಕಥೆಯಲ್ಲಿ ಪ್ರತಿಭಾ ಅವರ ಬಾಲ್ಯ, ಅವರನ್ನು ಲೇಖಕಿಯಾಗಿ ರೂಪಿಸಿದ ಹೋರಾಟಗಳು ಗೈರು ಆಗಿವೆ ಎಂದು ಕೃಷ್ಣಮೂರ್ತಿ ಗುರುತಿಸಿದರು.ಪತ್ರಕರ್ತ ಬಿ.ಎಂ. ಬಶೀರ್ ಅವರ ಕಥೆಗಳು ಪ್ರಶ್ನೋತ್ತರ ಮಾದರಿ ಮೂಲಕ ಜ್ಞಾನವನ್ನು ಹೇಳುತ್ತವೆ. ಮುಖ್ಯವಾಗಿ ಮಹಿಳೆ, ತಾಯಿ, ಕೆಳವರ್ಗದ ಜನರ ಬಗ್ಗೆ ಇವರದ್ದು ಅಪಾರ ಕಾಳಜಿ ಎಂದು ವಿಶ್ಲೇಷಿಸಿದರು.ಸ್ತ್ರೀಭಾಷೆಯ ಆತ್ಮಕಥನ:
ವಿಮರ್ಶಕಿ ಎಂ.ಎಸ್. ಆಶಾದೇವಿ ಮಾತನಾಡಿ, ಪ್ರಸ್ತುತ ಆತ್ಮಕಥೆ, ಸ್ತ್ರೀ ಸಮಯ, ಸ್ತ್ರೀ ಭಾಷೆಯ ಆತ್ಮಕಥನ ಎಂದು ವಿಶ್ಲೇಷಿಸಿದರು.ಇಡೀ ಆತ್ಮಕಥೆಯ ನೆಲೆ ಇರುವುದು ನನ್ನ ಬದುಕಿಗೆ ನಾನು ಮಾತ್ರ ಉತ್ತರದಾಯಿತ್ವ ಎಂಬ ಅಂಶದಲ್ಲಿ ಎಂದ ಅವರು, ಹೆಣ್ಣಿಗೆ ಬಿಡುಗಡೆ ಹೊರಗಿನಿಂದ ಅಲ್ಲ; ಒಳಗಿನಿಂದ ಎಂಬ ಭಾವನೆಯಲ್ಲಿ ಇದು ಪ್ರಕಟವಾಗಿದೆ ಎಂದು ಹೇಳಿದರು.ಈಚೆಗೆ ದಲಿತ, ಮಹಿಳಾ ಆತ್ಮಕಥೆಗಳು ಹೆಚ್ಚುಹೆಚ್ಚು ಬರುತ್ತಿದ್ದು, ಇವು ಅನಾವರಣ ಪರ್ವದ ಕಥೆಗಳು; ಇವು ಏಕಕಾಲಕ್ಕೆ ಸಾರ್ವಜನಿಕವೂ, ವೈಯಕ್ತಿಕವೂ ಹೌದು. ಈ ನಡುವೆ ಈ ಆತ್ಮಕಥೆಗಳು ನಿಭಾಯಿಸುತ್ತಿರುವ ಪಾತ್ರ ಏನು ಎಂಬುದು ಮುಖ್ಯ ಎಂದರು.ಪ್ರತಿಭಾ ಆತ್ಮಕಥೆ ಸೃಷ್ಟಿಸಬಹುದಾದ ಸಂಚಲನದ ರೋಚಕ ವಿವರಣೆಗಳ ಆಚೆಗೂ ಅದನ್ನು ನಿಭಾಯಿಸುತ್ತಿರುವುದು ಆ ಕೃತಿಯ ಸ್ತ್ರೀಭಾಷೆ ಎಂದು ಹೇಳಿದರು.ಕನ್ನಡದ ಮಹಿಳಾ ಆತ್ಮಕಥೆಗಳನ್ನು ಎರಡು ಬಗೆಯ ವಿನ್ಯಾಸದಲ್ಲಿ ವಿಶ್ಲೇಷಿಸಬಹುದು ಎಂದ ಅವರು, ಒಂದು ಋಣಭಾರದ ಆತ್ಮಕಥೆ, ಇನ್ನೊಂದು ಆರೋಪಭಾರದಲ್ಲಿ ನಲುಗಿ ಹೋದ ಕಥೆಗಳು. ಈ ನಡುವೆ ಮೂರನೇ ವಿನ್ಯಾಸದ ಆತ್ಮಕಥನ ಆರಂಭವಾಗಿದ್ದು ಪ್ರೇಮಾ ಕಾರಂತ, ಭಾರ್ಗವಿ ನಾರಾಯಣ, ಡಾ.ವಿಜಯಮ್ಮ ಅವರಿಂದ ಎಂದರು.ಇನ್ನೊಂದು ಕೃತಿ:  ಕವಯತ್ರಿ ಪ್ರತಿಭಾ ನಂದಕುಮಾರ್ ಮಾತನಾಡಿ, `ಈ ಕೃತಿಯನ್ನು ಜನ ಹೇಗೆ ಸ್ವೀಕರಿಸುತ್ತಾರೆಂಬುದು ಗೊತ್ತಿಲ್ಲ. ಆದರೆ, ಇದು ಕೇವಲ ಪ್ರೀತಿಗಾಗಿ ಹುಡುಕಾಟ ಮಾಡಿದ್ದು; ನನ್ನನ್ನು ಶೋಧಿಸಿಕೊಂಡಿದ್ದು~ ಎಂದರು.ಬಾಲ್ಯ ಮತ್ತು ಬೆಂಗಳೂರಿನ ಇತಿಹಾಸದಲ್ಲಿ ರೋಚಕ ಸಂಗತಿಗಳು, ಆದ ಅನುಭವಗಳನ್ನು ಇನ್ನೊಂದು ಕೃತಿಯಲ್ಲಿ ಬರೆಯುವುದಾಗಿ ಪ್ರತಿಭಾ ಪ್ರಕಟಿಸಿದರು.ಪತ್ರಕರ್ತ ಬಿ.ಎಂ. ಬಶೀರ್, ಕಲಾವಿದೆ ಸುರೇಖಾ ಉಪಸ್ಥಿತರಿದ್ದರು. ಪ್ರಕಾಶಕಿ ಕೆ. ಅಕ್ಷತಾ, ಕವಯತ್ರಿ ಡಾ.ಪಿ. ಭಾರತಿದೇವಿ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.