ಮಂಗಳೂರು: ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿ ಹೀಗೆ ಸಾಲು ಸಾಲು ತರಕಾರಿ ಬೆಲೆ ಗಗನಮುಖಿ ಎನಿಸಿ ದೇಶಾದ್ಯಂತ ಸುದ್ದಿ ಮಾಡಿದ್ದವು. ಇದೀಗ ಕೋಳಿ ಸರದಿ...
ಮುನಿಸಿಕೊಂಡು ಉಪ್ಪರಿಗೆ ಏರಿ ಕುಳಿತ ಕೋಳಿಯಂತೆ ಬೆಲೆಯೂ ದಿಢೀರನೆ ಏರಿಕೆಯ ಹಾದಿ ಹಿಡಿದಿದ್ದು, ಕಳೆದ ಡಿಸೆಂಬರ್- ಜನವರಿಯಲ್ಲಿ ಕೆ.ಜಿಯೊಂದಕ್ಕೆ ರೂ. 60 ಇದ್ದ ಕೋಳಿ ಮಾಂಸದ ಬೆಲೆ ಪ್ರಸ್ತುತ ಕೆಜಿಗೆ ರೂ.160 ಆಗಿದ್ದು, ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ ಶೇ.150ರಷ್ಟು ಹೆಚ್ಚಳಗೊಂಡಿದೆ. ಗ್ರಾಹಕ ಚಿಕನ್ ವ್ಯಾಮೋಹ ಬಿಟ್ಟು ಅನಿವಾರ್ಯವಾಗಿ ಮೀನು ಹಾಗೂ ಇತರೆ ಮಾಂಸ ಖರೀದಿ ಮಾಡಬೇಕಾಗಿದೆ.

ಕುಕ್ಕಟ ಪುರಾಣ: ಉತ್ಪಾದನೆ ವೆಚ್ಚ ಹೆಚ್ಚಳ, ಕಡಿಮೆಯಾಗುವ ಇಳುವರಿ, ಬೇಡಿಕೆಗೆ ಅನುಗುಣವಾಗಿ ಪೂರೈಕೆಯಲ್ಲಿ ವ್ಯತ್ಯಯದಿಂದ ಕೋಳಿ ಬೆಲೆ ಏರಿಕೆಯಾಗಿದೆ ಎಂಬುದು ಮಂಗಳೂರಿನ ಕುಕ್ಕುಟ ಉದ್ಯಮ ನೀಡುವ ಕಾರಣವಾದರೆ, ಇದು ಉದ್ಯಮದವರೇ ಸೃಷ್ಟಿಸಿರುವ ಕೃತಕ ಅಭಾವ ಎಂಬುದು ಕೋಳಿ ವ್ಯಾಪಾರಿಗಳ ಅಳಲು. ಇನ್ನು ಮೆನು ದರ ಅಷ್ಟೇ ಇದ್ದರೂ ಕೋಳಿ ಬೆಲೆ ದುಬಾರಿಯಾಗಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.

ಬೇಡಿಕೆ ಹೆಚ್ಚಳ: ಬೈಂದೂರಿನಿಂದ ಮಂಗಳೂರು ಒಳಗೊಂಡಂತೆ ಕಾಸರಗೋಡುವರೆಗಿನ ಕರಾವಳಿ ಭಾಗದಲ್ಲಿ ತಿಂಗಳೊಂದಕ್ಕೆ ಸುಮಾರು 12 ಲಕ್ಷ ಕೋಳಿಗೆ ಬೇಡಿಕೆ ಇದ್ದು, ಇದರಲ್ಲಿ ಶೇ.80ರಷ್ಟು ಸ್ಥಳೀಯವಾಗಿ ಪೂರೈಕೆಯಾಗುತ್ತಿದ್ದರೆ ಉಳಿದಂತೆ ಶೇ. 20ರಷ್ಟು ಹೊರ ರಾಜ್ಯಗಳಿಂದ ಪೂರೈಕೆಯಾಗುತ್ತಿದೆ.ಸ್ಥಳೀಯವಾಗಿ ಪುತ್ತೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನದಿಂದ ಕೋಳಿ ಪೂರೈಕೆಯಾಗುತ್ತಿದ್ದರೆ, ಹೊರಗಿನಿಂದ ತಮಿಳುನಾಡಿನ ಸೇಲಂ. ಆಂಧ್ರಪ್ರದೇಶ ಹಾಗೂ ಕೇರಳದಿಂದಲೂ ಕೋಳಿ ಮಾಂಸ ನಿತ್ಯ ಸ್ಥಳೀಯ ಮಾರುಕಟ್ಟೆಗೆ ಬರುತ್ತಿದೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಆಹಾರ ಹೆಚ್ಚು ಸೇವಿಸುವುದರಿಂದ ಸಮೃದ್ಧವಾಗಿ ಬೆಳೆಯುವ ಕೋಳಿ ಬೇಸಿಗೆಯಲ್ಲಿ ತೂಕ ಕಳೆದುಕೊಳ್ಳುತ್ತದೆ. ಇದರಿಂದ ಚಳಿಗಾಲದಲ್ಲಿ ಒಂದು ಕೆ.ಜಿ ತೂಗುವ ಕೋಳಿ ಬೇಸಿಗೆಯ ವೇಳೆಗೆ ಕನಿಷ್ಟ 200 ಗ್ರಾಂ ತೂಕ ಕಳೆದುಕೊಂಡು 800 ಗ್ರಾಂ ತೂಗುತ್ತದೆ. ಇದರಿಂದ ಒಟ್ಟಾರೆ ಉತ್ಪನ್ನ ಕಡಿಮೆಯಾಗುತ್ತದೆ. ಕೋಳಿ ಮಾಂಸ ಉತ್ಪಾದನೆಯಲ್ಲಿ ಆಗುವ ಈ ವ್ಯತ್ಯಯ ದಿಢೀರ್ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಭಾರತ್ ಅಗ್ರೋ ಸೀಡ್ಸ್ ಅಂಡ್ ಫಾರ್ಮ್ಸ್ನ ಡಾ.ಅರುಣ್ ರೈ.

ಪೌಲ್ಟ್ರಿಗಳಲ್ಲಿ ಕೋಳಿ ಆಹಾರವಾಗಿ ಶೇ.70ರಷ್ಟು ಭಾಗ ಮೆಕ್ಕೆಜೋಳ ಬಳಕೆಯಾಗುತ್ತಿದ್ದು, ಕಳೆದ ವರ್ಷ ಕೆ.ಜಿಗೆ ರೂ.9 ಇದ್ದ ಮೆಕ್ಕೆಜೋಳದ ಬೆಲೆ ಈ ಬಾರಿ ರೂ.12.50ಕ್ಕೆ ಏರಿದೆ. ಇದರಿಂದ ಕೋಳಿಯ ಬೆಲೆಯೂ ಹೆಚ್ಚಾಗಿದೆ ಎಂಬುದು ಡಾ.ಅರುಣ್ ವಿವರಣೆ.ಮಂಗಳೂರು ಮಾರುಕಟ್ಟೆಯಲ್ಲಿ ಟೈಸನ್ ಹಾಗೂ ಬ್ರಾಯ್ಲರ್ ಕೋಳಿ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಹೈದರಾಬಾದ್ ಮೂಲದ ವೆಂಕಟೇಶ್ವರ ಹ್ಯಾಚರೀಸ್ ಇಲ್ಲಿನ ಶೇ.90ರಷ್ಟು ಬೇಡಿಕೆಯನ್ನು ಪೂರೈಸುತ್ತಿದ್ದರೆ, ಸುಗುಣ ಚಿಕನ್ಸ್ ಉಳಿದ ಪಾಲು ಹೊಂದಿದೆ.

ಕೃತಕ ಅಭಾವ ಆರೋಪ: ಕೋಳಿ ಬೆಲೆ ಏರಿಕೆಗೆ ಕುಕ್ಕುಟೋದ್ಯಮ ನೀಡುವ ವಿವರಣೆ ಒಪ್ಪದ ಕಂಕನಾಡಿಯ ಕೋಳಿ ವ್ಯಾಪಾರಿ ರಫೀಕ್, ಇದೆಲ್ಲ ಫೌಲ್ಟ್ರಿ ಫಾರಂಗಳ ಹುನ್ನಾರ. ಕೃತಕ ಅಭಾವ ಸೃಷ್ಟಿಗಾಗಿ ಕೋಳಿಯನ್ನು ಮಾರುಕಟ್ಟೆಗೆ ಕೊಡುತ್ತಿಲ್ಲ ಎನ್ನುವ ಅವರು ಶನಿವಾರ ಮಂಗಳೂರಿನಿಂದ ಕೇರಳಕ್ಕೆ ಕೋಳಿ ತರಲು 8 ಲಾರಿ ತೆರಳಿದ್ದರೂ ಕೇವಲ 4 ಲಾರಿ ಮಾತ್ರ ಕೋಳಿ ತಂದಿವೆ. ಬೇಸಿಗೆ ಬಂತೆಂದರೆ ಕರಾವಳಿ ಭಾಗದಲ್ಲಿ ಮದುವೆ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಳಗೊಳ್ಳಲಿದ್ದು, ಕೋಳಿ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತದೆ. ಬೆಲೆ ಹೆಚ್ಚಳಕ್ಕಾಗಿ ಇದೆಲ್ಲಾ ಸ್ಥಳೀಯ ಮಟ್ಟದಲ್ಲಿ ನಡೆಯುವ ಗಿಮಿಕ್ ಎನ್ನುತ್ತಾರೆ.

ಬೆಳೆದ ಕೋಳಿಯನ್ನು ಹೆಚ್ಚು ಕಾಲ ಬಿಡಲು ಸಾಧ್ಯವಿಲ್ಲ. ಮೂರು ತಿಂಗಳ ಹಿಂದೆ ಫಾರಂಗಳಲ್ಲಿ ರೂ.39ಕ್ಕೆ ಮಾರಾಟವಾಗಿದ್ದ ಕೋಳಿಯೊಂದು ಈಗ ಬೇಡಿಕೆ ಹೆಚ್ಚುತ್ತಿದ್ದಂತೆಯೇ ರೂ.95ಕ್ಕೆ ಮಾರಾಟವಾಗುತ್ತಿದೆ. ಇದರಲ್ಲಿ ಕೃತಕ ಬೇಡಿಕೆ ಸೃಷ್ಟಿಸುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ಹೆಸರು ಹೇಳಬಯಸದ ಉದ್ಯಮಿಯೊಬ್ಬರು.ಇತ್ತೀಚಿನ ದಿನಗಳಲ್ಲಿ ಮೀನಿನ ರೀತಿ ಕೋಳಿಯ ಬೆಲೆಯಲ್ಲಿಯೂ ಭಾರಿ ಏರಿಳಿತ ಕಂಡುಬರುತ್ತಿದ್ದು, ಮೆನುವಿನಲ್ಲಿ ಮಾತ್ರ ಹಳೆಯ ದರವೇ ಇದೆ ಎನ್ನುತ್ತಾರೆ ಬಲ್ಮಠದ ಮೀನಾ ಹೋಟೆಲ್ ಮಾಲಿಕ ವಿಜಯಕುಮಾರ್ ಶೆಟ್ಟಿ.

ಭಾನುವಾರ ಚಿಕನ್ ಹೊರತುಪಡಿಸಿ ಉಳಿದ ದಿನ ಮೀನು ಸೇವಿಸುತ್ತೇವೆ. ಕೋಳಿ ಬೆಲೆ ನೋಡಿದರೆ ಇನ್ನು ಅದನ್ನು ಬಿಡಬೇಕಿದೆ ಎನ್ನುತ್ತಾರೆ ಕಂಕನಾಡಿ ಮಾರುಕಟ್ಟೆಯಲ್ಲಿ ಮೀನು ಖರೀದಿಸುತ್ತಿದ್ದ ತುಂಗಪ್ಪ ಪೂಜಾರಿ.ಕೋಳಿ ಕೇಳಿ ಮಸಾಲೆ ಅರೆಯ ಬೇಕೆ ಎನ್ನುತ್ತಿದ್ದ ಗ್ರಾಹಕರು ಈಗ ಕೋಳಿಯ ಬೆಲೆ ಮೊದಲು ಕೇಳಿ ನಂತರ ಮಸಾಲೆ ಸಜ್ಜುಗೊಳಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.