ಸೋಮವಾರ, ಮಾರ್ಚ್ 8, 2021
19 °C
ನಗರದೆಲ್ಲೆಡೆ ಪೊಲೀಸ್‌ ಬಿಗಿ ಬಂದೋಬಸ್ತ್‌

ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ

ಬೆಂಗಳೂರು: ‘ನಗರದ ಮಾಣೆಕ್‌ ಷಾ ಕವಾ­ಯತು ಮೈದಾನದಲ್ಲಿ ಮಂಗಳವಾರ ನಡೆಯಲಿರುವ  ರಾಜ್ಯಮಟ್ಟದ ಗಣರಾಜ್ಯೋತ್ಸವ ಸಮಾರಂಭಕ್ಕೆ ಪೂರ್ವಸಿದ್ಧತೆಗಳು ಪೂರ್ಣ­ಗೊಂ­ಡಿದ್ದು, ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸ­ಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್‌ ಎನ್‌.ಎಸ್‌. ಮೇಘರಿಕ್‌ ಹೇಳಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೈದಾನದ­ಲ್ಲಿ ನಿಗಾ ವಹಿಸಲು 40 ಸಿಸಿ ಟಿವಿ ಕ್ಯಾಮೆರಾ ಅಳವ­ಡಿ­ಸ­ಲಾಗಿದೆ.  ಬಂದೋಬಸ್ತ್‌ಗೆ 9 ಡಿಸಿಪಿ, 16 ಎಸಿಪಿ, 48 ಇನ್‌ಸ್ಪೆಕ್ಟರ್‌, 101 ಪಿಎಸ್‌ಐ,13 ಮಹಿಳಾ ಪಿಎಸ್‌ಐ, 77 ಎಎಸ್‌ಐ, 182 ಹೆಡ್‌ ಕಾನ್‌ಸ್ಟೆಬಲ್‌, 459 ಕಾನ್‌­ಸ್ಟೆಬಲ್‌, 99 ಮಹಿಳಾ ಸಿಬ್ಬಂದಿ, 152 ಮಫ್ತಿ ಸಿಬ್ಬಂದಿ,  6 ಕೆಎಸ್‌ಆರ್‌ಪಿ ಮತ್ತು ಸಿಎಆರ್‌ ತುಕಡಿ ಹಾಗೂ 2 ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಲಾಗಿದೆ’ ಎಂದರು.‘ಮೊದಲ ಬಾರಿಗೆ ಗರುಡ ಪಡೆ ಹಾಗೂ ಮಿಲಿಟರಿ ವತಿಯಿಂದ ಲೋಹಶೋಧಕ ದಳವನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಪಥಸಂಚಲನದಲ್ಲಿ ಒಂದು ಶ್ವಾನದಳದ ತಂಡ ಹಾಗೂ ಮಹಾರಾಷ್ಟದ ಸಶಸ್ತ್ರ ಪಡೆಯ ಒಂದು ತುಕಡಿ ಕೂಡ ಭಾಗವಹಿಸಲಿದೆ’ ಎಂದು ಹೇಳಿದರು.‘ನಗರದ ಹೋಟೆಲ್‌ಗಳು, ಲಾಡ್ಜ್‌, ತಂಗುದಾಣ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುವವರ ಮೇಲೆ ನಿಗಾ ಇಡಲಾಗಿದೆ. ಕಾರ್ಯಕ್ರಮದ ದಿನ ನಗರದಲ್ಲಿ ಡ್ರೋನ್‌ ಕ್ಯಾಮೆರಾಗಳ ಬಳಕೆ ನಿಷೇಧಿಸಲಾಗಿದೆ’ ಎಂದು ತಿಳಿಸಿದರು. ಬಿಬಿಎಂಪಿ ಆಯುಕ್ತ ಜಿ. ಕುಮಾರ್‌ ನಾಯಕ್‌ ಮಾತನಾಡಿ, ‘ಬೆಳಿಗ್ಗೆ 9 ಗಂಟೆಗೆ ರಾಜ್ಯಪಾಲರು ಧ್ವಜಾ­ರೋಹಣ ನೆರವೇರಿಸುವರು. ಬಳಿಕ ಗೌರವರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ’ ಎಂದರು.‘ಪಥ ಸಂಚಲನದಲ್ಲಿ ಪೊಲೀಸ್‌, ಸ್ಕೌಟ್ಸ್‌ ಮತ್ತು ಗೈಡ್ಸ್‌, ಎನ್‌ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳೂ ಸೇರಿದಂತೆ 61 ತುಕಡಿಗಳ 2,100 ಮಂದಿ ಭಾಗವಹಿಸುವರು. 2,550  ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ. ಜತೆಗೆ, ಬೆಂಗಳೂರು ದಕ್ಷಿಣ ವಲಯದ ಎ.ಎಸ್‌.ಸಿ ಸೆಂಟರ್‌ನ 28 ಮಂದಿಯಿಂದ ಟಾರ್ನೆಡೋಸ್‌ ಬೈಕ್‌ ಸಾಹಸ ಪ್ರದರ್ಶನವಿದೆ’ ಎಂದು ತಿಳಿಸಿದರು.‘ಕಾರ್ಯಕ್ರಮ ವೀಕ್ಷಿಸಲು ಬರುವ ಅತಿಗಣ್ಯ, ಗಣ್ಯ, ಆಹ್ವಾನಿತರು ಹಾಗೂ ಸಾರ್ವಜನಿಕರಿಗೆ ಒಟ್ಟು 11 ಸಾವಿರ  ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಜಿ-2 ಪ್ರವೇಶದ್ವಾರದಲ್ಲಿ ಅತಿ ಗಣ್ಯವ್ಯಕ್ತಿಗಳಿಗೆ, ಜಿ-1 ಪ್ರವೇಶದ್ವಾರದಲ್ಲಿ ಗಣ್ಯ ವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆಯ ಅಧಿಕಾರಿ­ಗಳಿಗೆ, ಜಿ-3 ಪ್ರವೇಶದ್ವಾರದಲ್ಲಿ ಇತರ ಎಲ್ಲ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಬಿಎಸ್‍ಎಫ್ ಅಧಿಕಾರಿಗಳಿಗಾಗಿ ಹಾಗೂ ಜಿ-4 ಪ್ರವೇಶದ್ವಾರದಲ್ಲಿ ಸಾರ್ವಜನಿಕರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ’ ಎಂದರು. ಬೆಂಗಳೂರು ನಗರ ಜಿಲ್ಲಾಧಿಕಾರಿ  ವಿ. ಶಂಕರ್, ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಎಂ.ಎ. ಸಲೀಂ  ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.