ಗುರುವಾರ , ಮೇ 6, 2021
26 °C

ಗಣೇಶ್ ಆಟೋಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರ ಬಿಡುಗಡೆಗೂ ಮುನ್ನವೇ ತಮ್ಮ `ಆಟೋರಾಜ' ಜನರನ್ನು ತಲುಪಿದ ಖುಷಿ ನಿರ್ದೇಶಕ ಉದಯ್ ಪ್ರಕಾಶ್ ಅವರದ್ದಾದರೆ, ಸಾಲು ಸಾಲು ಸೋಲುಗಳಿಂದ ಗಣೇಶ್ ಅವರನ್ನು ಹೊರ ತರಲಿದೆ ಎನ್ನುವ ಆಶಾವಾದ ಅಭಿಮಾನಿಗಳದ್ದು. ಇಂದು (ಜೂನ್ 21) ತೆರೆಗೆ ಬರಲಿರುವ `ಆಟೋರಾಜ' ಜನರಲ್ಲಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಆ ನಿರೀಕ್ಷೆಗಳನ್ನು ಚಿತ್ರ ಭಂಗಗೊಳಿಸುವುದಿಲ್ಲ ಎನ್ನುವುದು ಚಿತ್ರ ತಂಡದ ಪ್ರತಿಪಾದನೆ.ಮೂವತ್ತಮೂರು ವರ್ಷಗಳ ಹಿಂದೆ ಬಂದ ಶಂಕರ್ ನಾಗ್ ಅವರ `ಆಟೋರಾಜ' ಕಥೆಗೂ, ಈ ಆಟೋಕಥೆಗೂ ವ್ಯತ್ಯಾಸವಿದೆ. ನಡುನಡುವೆ ಶಂಕರ್‌ನಾಗ್ ಅವರಲ್ಲಿದ್ದ ಸಾಮಾಜಿಕ ಜವಾಬ್ದಾರಿಯ ತುಡಿತವನ್ನು ಗಣೇಶ್ ಮೂಲಕ ನಿರ್ದೇಶಕರು ಹೇಳಿಸಿದ್ದಾರಂತೆ.ಚಿತ್ರದ ಆದಿಯಿಂದ ಅಂತ್ಯದವರೆಗೂ ದೈಹಿಕ ಮತ್ತು ಮಾನಸಿಕವಾಗಿ ಶಂಕರ್ ಛಾಯೆ ಢಾಳಾಗಿ ಇದೆ. ಶಂಕರ್‌ನಾಗ್ ತಮ್ಮ ಯೋಜನಾ ಲಹರಿಗಳ ಮೂಲಕ ಚಿತ್ರದಲ್ಲಿ ಗೋಚರಿಸುತ್ತಾರೆ ಎನ್ನುವ ನಿರ್ದೇಶಕರ ಮಾತುಗಳಲ್ಲಿ ಕನ್ನಡದ ಆಟೋಕಥೆಗಳು ಶಂಕರ್‌ನಾಗ್‌ರ ಛಾಯೆಯಿಂದ ಹೊರಬರಲು ಸಾಧ್ಯವ್ಲ್ಲಿಲ ಎಂಬುದನ್ನು ಸ್ಪಷ್ಟಪಡಿಸಿದೆ. ಚಿತ್ರದ ಪ್ರಚಾರಾರ್ಥ ಜಿಲ್ಲಾ ಕೇಂದ್ರಗಳಲ್ಲಿ ನಡೆಸಿದ ಆಟೋ ಜಾಥಾಕ್ಕೆ ದೊರೆತ ಸ್ಪಂದನದಿಂದ ಪುಳಕಿತರಾಗಿರುವ ಗಣೇಶ್ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದಾರೆ. ಸಾಲು ಸೋಲುಗಳಿಗೆ ವಿರಾಮ ನೀಡುವ ಹವಣಿಕೆ ಅವರದ್ದು.  ಆಟೋರಾಜದಲ್ಲೂ ತಮ್ಮ ಪ್ರೀತಿಯ ಗಮನವನ್ನು ಉಳಿಸಿಕೊಂಡು ಸಾಹಸಕ್ಕೆ ಮುಂದಾಗಿರುವ ಗಣೇಶ್, ಕೆಲವು ದೃಶ್ಯಗಳಲ್ಲಿ ಶಂಕರ್ ನಾಗ್‌ರನ್ನು ಅನುಕರಿಸಿದ್ದಾರಂತೆ. ತಮ್ಮ ಏಕತಾನತೆಯ ಇಮೇಜನ್ನು ಗಣೇಶ್ ಇಲ್ಲೂ ಒರೆಗೆ ಹಚ್ಚಿದ್ದಾರೆ. ಮಳೆಯ ಜತೆಗಿನ ಅವಿನಾಭಾವ ಸಂಬಂಧವನ್ನು ಬಿಟ್ಟುಕೊಡದೆ, ನಾಯಕಿಯ ನೆನಪಿನಲ್ಲಿ ವರ್ಷಧಾರೆಯಲ್ಲಿ ಮಿಂದಿದ್ದಾರೆ.`ಮುಂಗಾರುಮಳೆ'ಯಲ್ಲಿ ಜತೆಯಾಗಿದ್ದ ಮೊಲ `ದೇವದಾಸ'ನಂತೆ, ಆಟೋರಾಜನಲ್ಲಿ ಬೆಕ್ಕಿನ ಗೆಳೆತನ. ವಾಹನಗಳ ಚಾಲನೆ ವೇಳೆ ಬೆಕ್ಕು ಅಡ್ಡ ಬಂದರೆ ಕ್ಷಣ ನಿಂತುಹೋಗುವುದು ರೂಢಿ. ಆದರೆ ಚಿತ್ರದಲ್ಲಿ ಬೆಕ್ಕು ಅಪಶಕುನವಲ್ಲ, ಶುಭಶಕುನ ಎನ್ನುವುದನ್ನು ತೋರಿಸಲಾಗಿದೆಯಂತೆ. ಜನರು ಶಂಕರ್‌ನಾಗ್ ಅವರನ್ನು ಆಟೋರಾಜನನ್ನಾಗಿ ಒಪ್ಪಿದಂತೆಯೇ ಗಣೇಶ್ ಅವರನ್ನೂ ಒಪ್ಪಿಕೊಂಡಿದ್ದಾರೆ.ಗಣೇಶ್ ಅವರ ಆರೇಳು ವರ್ಷಗಳ ಸಿನಿಯಾನದ ಪಕ್ವತೆ ಮತ್ತು ಪ್ರಬುದ್ಧತೆ ಚಿತ್ರದಲ್ಲಿ ಬಳಕೆಯಾಗಿದೆ ಎನ್ನುವುದು ಚಿತ್ರತಂಡ ಮಾತು. ಆ ಪಕ್ವತೆಯನ್ನು ತೆರೆಯ ಮೇಲೆ ನೋಡಬೇಕಂತೆ. ಆಟೋ ಚಾಲಕರ  ಸಮವಸ್ತ್ರ ಖಾಕಿಯನ್ನು ಚಿತ್ರದ ಕೊನೆಯವರೆಗೂ ಗಣೇಶ್ ತೊಟ್ಟಿದ್ದಾರೆ.ಬೇರೆ ಚಿತ್ರಗಳ ಚಿತ್ರೀಕರಣಗಳಲ್ಲಿ ಪಾಲ್ಗೊಂಡಿರುವ ಕಾರಣ ಚಿತ್ರದ ನಾಯಕಿಯರು ಪ್ರಚಾರದಲ್ಲಿ ತೊಡಗಿಲ್ಲ, ಅನ್ಯಥಾ ಬೇರೆ ಅರ್ಥಕಲ್ಪಿಸಬಾರದು ಎನ್ನುವುದು ಚಿತ್ರತಂಡದ ಸಮಜಾಯಿಷಿ. `ಆಟೋರಾಜ'ನ ಏಳು ಬೀಳುಗಳನ್ನು ಪ್ರತಿ 25 ದಿನಕ್ಕೊಮ್ಮೆ ಚಿತ್ರ ತಂಡ ಹಂಚಿಕೊಳ್ಳಲಿದೆಯಂತೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.