ಶನಿವಾರ, ಏಪ್ರಿಲ್ 10, 2021
30 °C

ಗಿರಿಕಂದರಗಳ ನಡುವೆ ಕ್ಯಾಥರಿನ್ ಚೆಲುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಿರಿಕಂದರಗಳ ನಡುವೆ ಕ್ಯಾಥರಿನ್ ಚೆಲುವೆ

ಹಳ್ಳ ದಿಣ್ಣೆಗಳು, ಮುಳ್ಳುಕಂಟಿಗಳು, ಬಂಡೆಕಲ್ಲುಗಳ ಹಾದಿ. ಈ ಏಳುಬೀಳಿನ ದಾರಿ ಸವೆಸಿದರೆ ಭೋರ್ಗರೆಯುತ್ತಾ ಧುಮ್ಮಿಕ್ಕುವ ಕ್ಯಾಥರಿನ್ ಜಲಪಾತದ ದರ್ಶನ. ಅಲ್ಲಿಗೆ ತಲುಪುವುದು ಎಷ್ಟು ಕಷ್ಟವೋ, ಆ ನೀರಿನಲ್ಲಿ ಈಜುವುದು, ಸ್ನಾನ ಮಾಡುವುದು ಅಷ್ಟೇ ಕಷ್ಟ.

 

ಜಲಪಾತದ ನೀರು ಸುರಿಯುವ ಬಂಡೆಗಳ ಕೊರಕಲುಗಳಲ್ಲಿ ಕಾಲಿಟ್ಟರೆ ಜಾರುವ ಸಂಭವ ಇರುತ್ತದೆ. ಅಂಥ ಕಷ್ಟಗಳನ್ನು ಎದುರಿಸುವ ಸಾಹಸಿಗರು ಇಲ್ಲ ಎಂದೇನಲ್ಲ. ಅಡೆತಡೆಗಳಿಗೆ ಬೆನ್ನು ಮಾಡಿ ಅಲ್ಲಿಗೆ ಬಂದು ನೀರಿನಲ್ಲಿ ಮುಳುಗಿ ಖುಷಿ ಅನುಭವಿಸುವವರ ಸಂಖ್ಯೆ ಕಡಿಮೆ ಏನಿಲ್ಲ.ತಮಿಳಿನಾಡಿನ ಅತ್ಯಂತ ಎತ್ತರದ ಜಲಪಾತಗಳಲ್ಲಿ ಎರಡನೇ ಸಾಲಿನಲ್ಲಿ ನಿಲ್ಲುವ ಜಲಪಾತ ಕ್ಯಾಥರಿನ್. ನೀಲಗಿರಿ ಜಿಲ್ಲೆಗೆ ಸೇರಿದ ಕ್ಯಾಥರೀನ್ ಜಲಪಾತ ಕೋಟಗಿರಿ ಗಿರಿಧಾಮದ ನಡುವೆ ಇದೆ. ಕೋಟಗಿರಿಯಲ್ಲಿ ಹರಿಯುವ ಕೊಲ್ಲಾರ್ ನದಿ ಇದರ ಸೃಷ್ಟಿಕರ್ತ. 250 ಅಡಿ ಎತ್ತರದಿಂದ ಕ್ಯಾಥರೀನ್ ಜಲಪಾತದಲ್ಲಿ ಕೊಲ್ಲಾರ್ ನದಿ ಧರೆಗೆ ಬೀಳುತ್ತದೆ. ಕೋಟಗಿರಿಯ ಡಾಲ್ಫಿನ್ಸ್ ನೋಸ್ ಮತ್ತು ರಂಗಸ್ವಾಮಿ ಪೀಕ್‌ನಿಂದ ಈ ಜಲಪಾತದ ದರ್ಶನ ಸೊಗಸಾಗಿ ಆಗುತ್ತದೆ. ಹತ್ತಿರ ಹೋಗಲು ಮಾತ್ರ ಹರಸಾಹಸ ಪಡಬೇಕು.ಕೋಟಗಿರಿಯಲ್ಲಿ ಪ್ರಥಮ ಬಾರಿಗೆ ಕಾಫಿ ತೋಟ ಮಾಡಿದ ಬ್ರಿಟಿಷ್ ಅಧಿಕಾರಿ ಎಂಎಇ ಕೊಕ್‌ಬುರ್ನ್ ತಮ್ಮ ಪತ್ನಿ ಕ್ಯಾಥರಿನ್ ಅವರ ಹೆಸರನ್ನು ಈ ಜಲಪಾತಕ್ಕೆ ಇಟ್ಟಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಜಲಪಾತ ಅವರ ಕಾಫಿ ತೋಟದ ಒಂದು ಭಾಗವಾಗಿತ್ತು. ಆದರೆ ಭಾರತ ಸ್ವತಂತ್ರ ಪಡೆದ ನಂತರವೂ ಹಳೆಯ ಹೆಸರನ್ನೇ ಜಲಪಾತ ಹೊತ್ತುಕೊಂಡಿದೆ.ಜಲಪಾತದಿಂದ ಮೂರು ಕಿಮೀ ದೂರದಲ್ಲಿ ಗಡ್ಡೆ ಹಳ್ಳ ಇದೆ. ಅಲ್ಲಿ ಹೈಕಿಂಗ್ ಅನುಭವ ಪಡೆಯಬಹುದು. ಅದಕ್ಕೆ ಅರಣ್ಯ ಇಲಾಖೆಯ ನೌಕರರ ಮಾರ್ಗದರ್ಶನ ಸಿಗುತ್ತದೆ. ಜೊತೆಗೆ ಕೋಟಗಿರಿಯ ಸುತ್ತ ಹರಡಿರುವ ಶೋಲಾ ಕಾಡಿನಲ್ಲಿ ಅಲೆಯುತ್ತಾ ಚಾರಣದ ಅನುಭವವನ್ನೂ ಪಡೆಯಬಹುದು.

 

ಸೆಪ್ಟೆಂಬರ್‌ನಿಂದ ನವೆಂಬರ್ ತಿಂಗಳ ನಡುವೆ ಕ್ಯಾಥರಿನ್ ಜಲಪಾತ ಧುಮ್ಮಿಕ್ಕಿ ಹರಿಯುತ್ತದೆ. ಅಲ್ಲಿಗೆ ಭೇಟಿ ನೀಡಲು ಅದೇ ಸೂಕ್ತ ಸಮಯ. ಕೂನೂರಿನಿಂದ 20 ಕಿಮೀ, ಕೋಟಗಿರಿಯಿಂದ 5 ಕಿಮೀ, ಮೆಟ್ಟುಪಾಳ್ಯಂನಿಂದ 28 ಕಿಮೀ, ಊಟಿಯಿಂದ 22 ಕಿಮೀ ದೂರದಲ್ಲಿ ಈ ಜಲಪಾತ ಇದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.