ಭಾನುವಾರ, ಏಪ್ರಿಲ್ 18, 2021
25 °C

ಗುರಿ ತಪ್ಪಿದ ಬಾಣ...

ಮಹಮ್ಮದ್ ನೂಮಾನ್ Updated:

ಅಕ್ಷರ ಗಾತ್ರ : | |

ಬಲವಾಗಿ ಗಾಳಿ ಬೀಸುತ್ತಿದ್ದ ಕಾರಣ ನಿಖರವಾಗಿ ಗುರಿ ಹಿಡಿಯಲು ಸಾಧ್ಯವಾಗಿಲ್ಲ; ಲಂಡನ್‌ಗೆ ಬಂದಿಳಿದ ಕೂಡಲೇ ಜ್ವರದಿಂದ ಬಳಲಿದ್ದೆವು. ಇದು ಪ್ರದರ್ಶನದ ಮೇಲೆ ಪರಿಣಾಮ ಬೀರಿತು; ನನ್ನ ಮೊದಲ ಒಲಿಂಪಿಕ್ಸ್ ಇದಾಗಿತ್ತು. ಅನುಭವದ ಕೊರತೆ ಕಾಡಿತು....ಒಲಿಂಪಿಕ್ಸ್ ಬಿಲ್ಲುಗಾರಿಕೆಯಲ್ಲಿ ಗುರಿ ತಪ್ಪಿದ ಬಳಿಕ ಭಾರತದ ಸ್ಪರ್ಧಿಗಳು ತಮ್ಮ ಸೋಲಿಗೆ ನೀಡಿದ ಕಾರಣಗಳಿವು. ಬಿಲ್ಲಿನಿಂದ ಬಿಟ್ಟ ಬಾಣದಷ್ಟೇ ವೇಗದ್ಲ್ಲಲಿ ಈ ಕಾರಣಗಳು ಒಂದರ ಹಿಂದೆ ಒಂದರಂತೆ ಕೇಳಿಬಂದವು. ಒಲಿಂಪಿಕ್ಸ್‌ನಂತಹ ಪ್ರಮುಖ ಕೂಟವೊಂದರಲ್ಲಿ ಹೀನಾಯ ಸೋಲು ಅನುಭವಿಸಿ ಅದಕ್ಕೆ ಕಾರಣಗಳನ್ನು ಹುಡುಕುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತದ ಬಿಲ್ಲುಗಾರಿಕೆ ತಂಡದಿಂದ ಅಚ್ಚರಿಯನ್ನು ನಿರೀಕ್ಷಿಸಲಾಗಿತ್ತು. ಉತ್ತಮ ಸಾಧನೆ ತೋರಿ ಅಚ್ಚರಿ ಉಂಟುಮಾಡುವ ಬದಲು ನೀರಸ ಪ್ರದರ್ಶನದಿಂದ ಸುದ್ದಿಯಾದದ್ದು ವಿಪರ್ಯಾಸ. ವಿಶ್ವದ ಅಗ್ರ ರ‌್ಯಾಂಕಿಂಗ್‌ನ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಕೂಡಾ ಗುರಿ ಕಂಡುಕೊಳ್ಳಲು ಪರದಾಟ ನಡೆಸಿದ್ದು ಉತ್ತರವಿಲ್ಲದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.18ರ ಹರೆಯದ ದೀಪಿಕಾ ಭಾರತಕ್ಕೆ ಪದಕ ಗೆದ್ದುಕೊಡುವ `ಫೇವರಿಟ್~ ಎನಿಸಿದ್ದರು. ಇದಕ್ಕೆ ಕಾರಣಗಳೂ ಇದ್ದವು. ನವದೆಹಲಿ ಕಾಮನ್‌ವೆಲ್ತ್ ಕೂಟದಲ್ಲಿ ಎರಡು ಚಿನ್ನ ಜಯಿಸಿದ್ದ ರಾಂಚಿಯ ಈ ಹುಡುಗಿ ವಿಶ್ವ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮೇ ತಿಂಗಳಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಬಂಗಾರ ಗೆದ್ದಿದ್ದರು. ಇದರಿಂದಾಗಿಯೇ ದೀಪಿಕಾ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿತ್ತು.ಆದರೆ ದೀಪಿಕಾ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯಲು ವಿಫಲವಾದದ್ದು ಮಾತ್ರವಲ್ಲ ವೈಯಕ್ತಿಕ ವಿಭಾಗದ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು. ಭಾರತದ ಪುರುಷ ಮತ್ತು ಮಹಿಳಾ ಸ್ಪರ್ಧಿಗಳು ವಿಶ್ವದ ಮಹಾಮೇಳವನ್ನು ಗಂಭೀರವಾಗಿ ಪರಿಗಣಿಸಿಲ್ಲವೇ? ಅಥವಾ ಒಲಿಂಪಿಕ್ಸ್‌ಗೆ ಮುನ್ನ ಮಾಧ್ಯಮಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಚಾರ ನೀಡಿತೇ? ಇಂತಹ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿವೆ.`ದೀಪಿಕಾ ಒಳಗೊಂಡಂತೆ ಭಾರತದ ಬಿಲ್ಲುಗಾರಿಕೆ ತಂಡಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಚಾರ ಲಭಿಸಿತ್ತು. ಮಾತ್ರವಲ್ಲ ಯಾರೊಬ್ಬರೂ ಒಲಿಂಪಿಕ್ಸ್‌ನಂತಹ ಪ್ರಮುಖ ಕೂಟವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡಿಲ್ಲ~ ಎಂಬುದು ಕರ್ನಾಟಕ ಆರ್ಚರಿ ತಂಡದ ಕೋಚ್ ಬ್ರಿಜೇಶ್ ಕುಮಾರ್ ಅವರ ಅಭಿಪ್ರಾಯ.`ದೀಪಿಕಾ ಕುಮಾರಿ ಸ್ಪರ್ಧೆಯ ಬಹಳ ಸಂದಿಗ್ಧ ಸಂದರ್ಭದಲ್ಲಿ ನಗುತ್ತಾ ನಿಂತಿದ್ದನ್ನು ನಾನು ಟೀವಿಯಲ್ಲಿ ನೋಡಿ ಅಚ್ಚರಿಗೊಂಡಿದ್ದೆ. ಇದು ನಿಜವಾಗಿಯೂ ನನಗೆ ಆಶ್ಚರ್ಯ ಉಂಟುಮಾಡಿತು.

 

ಗೆಲುವಿನ ತುಡಿತ ಕಂಡುಬರಲಿಲ್ಲ~ ಎಂಬುದು ಬ್ರಿಜೇಶ್ ಹೇಳಿಕೆ. ಇಂಗ್ಲೆಂಡ್‌ನ ಆಮಿ ಒಲಿವರ್ ವಿರುದ್ಧದ ಸ್ಪರ್ಧೆಯಲ್ಲಿ ದೀಪಿಕಾ 2-6 ರಲ್ಲಿ ಸೋಲು ಅನುಭವಿಸಿದ್ದರು. ಭಾರತದ 6 ಸ್ಪರ್ಧಿಗಳಲ್ಲಿ ನಾಲ್ಕು ಮಂದಿ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದು ಆಘಾತ ಉಂಟುಮಾಡಿದೆ.`ಇದೀಗ ಸ್ಪರ್ಧಿಗಳು ಸೋಲಿಗೆ ವಿವಿಧ ಕಾರಣಗಳನ್ನು ನೀಡುತ್ತಿದ್ದಾರೆ. ಇದು ಒಳ್ಳೆಯದಲ್ಲ. ಸೋಲನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕಿತ್ತು. ಕೆಲವರು ಇದು ಮೊದಲ ಒಂಪಿಕ್ಸ್ ಎಂಬ ಕಾರಣ ಹೇಳುತ್ತಿದ್ದಾರೆ. ಆದರೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಇದೇ ಸ್ಪರ್ಧಿಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾದರೆ, ಒಲಿಂಪಿಕ್ಸ್‌ನಲ್ಲಿ ಏನಾಯಿತು?~ ಎಂಬುದು ಅವರು ಕೇಳುವ ಪ್ರಶ್ನೆ. `ಬಲವಾಗಿ ಬೀಸುತ್ತಿದ್ದ ಗಾಳಿ ಪ್ರದರ್ಶನದ ಮೇಲೆ ಪರಿಣಾಮ ಬೀರಿತು ಎಂಬುದು ಇನ್ನೊಂದು ಕಾರಣ. ಆದರೆ ಇತರ ಸ್ಪರ್ಧಿಗಳಿಗೆ ಈ ಸಮಸ್ಯೆ ಎದುರಾಗಲಿಲ್ಲವೇ? ಎಲ್ಲರೂ ಒಂದೇ ತಾಣದಲ್ಲಿ ಸ್ಪರ್ಧಿಸಿದ್ದಾರಲ್ಲವೇ?. ಇದಕ್ಕೆ ಉತ್ತರ ಹುಡುಕುವುದು ಕಷ್ಟ~ ಎಂದು ಬ್ರಿಜೇಶ್ ನುಡಿಯುತ್ತಾರೆ. ಭಾರತ ತಂಡದವರ ಹೆಚ್ಚಿನ ಸ್ಪರ್ಧೆಗಳು ಅತ್ಯುತ್ತಮ ವಾತಾವರಣದಲ್ಲಿ ನಡೆದಿತ್ತು ಎಂಬ ಸತ್ಯವನ್ನು ಮರೆಮಾಚುವಂತಿಲ್ಲ. `ಒಲಿಂಪಿಕ್ಸ್‌ಗೆ ತಂಡದ ಆಯ್ಕೆಯ ವೇಳೆ ಎಡವಟ್ಟು ಉಂಟಾಗಿದೆ. ದೇಶದಲ್ಲಿ ಇನ್ನೂ ಉತ್ತಮ ಪ್ರತಿಭೆಗಳಿದ್ದಾರೆ. ಆದರೆ ಅವರಿಗೆ ಅವಕಾಶದ ಬಾಗಿಲು ತೆರೆಯಲಾಗುತ್ತಿಲ್ಲ. ಆಯ್ಕೆಯ ಸಂದರ್ಭ ಒಂದು ಸ್ಪಷ್ಟ ನೀತಿ ಅನುಸರಿಸಿದ್ದರೆ ಚೆನ್ನಾಗಿತ್ತು. ಇಲ್ಲಿ ಎಲ್ಲವೂ ನಿಗೂಢವಾಗಿ ನಡೆಯುತ್ತವೆ.

 

ಈ ವ್ಯವಸ್ಥೆಯಲ್ಲಿ ಬದಲಾವಣೆ ಉಂಟಾಗಬೇಕು. ಮಹಿಳಾ ತಂಡದಲ್ಲಿ ಚೆಕ್ರವೊಲು ಸ್ವರೊ ಅವರಿಗಿಂತ ಡೋಲಾ ಬ್ಯಾನರ್ಜಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಅವರು ತಂಡ ಸೇರದಂತೆ ನೋಡಿಕೊಳ್ಳಲಾಯಿತು~ ಎಂಬುದು ಬ್ರಿಜೇಶ್ ಹೇಳಿಕೆ.ದೀಪಿಕಾ, ಬೊಂಬ್ಯಾಲ ದೇವಿ ಮತ್ತು ಸ್ವರೊ ಅವರನ್ನೊಳಗೊಂಡ ಭಾರತ ತಂಡ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ರ‌್ಯಾಂಕಿಂಗ್‌ನಲ್ಲಿ ತನಗಿಂತ ಕೆಳಗಿನ ಸ್ಥಾನದಲ್ಲಿರುವ ಡೆನ್ಮಾರ್ಕ್ ಎದುರು ಪರಾಭವಗೊಂಡಿತ್ತು. ರಾಹುಲ್ ಬ್ಯಾನರ್ಜಿ, ತರುಣ್‌ದೀಪ್ ಮತ್ತು ಜಯಂತ್ ತಾಲೂಕ್ದಾರ್ ಅವರನ್ನೊಳಗೊಂಡ ಪುರುಷರ ತಂಡ ಜಪಾನ್ ಎದುರು ಪರಾಭವಗೊಂಡಿತ್ತು.ಸೂಕ್ತ ಅಭ್ಯಾಸ ನಡೆಸದೇ ಇದ್ದುದು ಸೋಲಿಗೆ ಕಾರಣ ಎಂಬ ಅಭಿಪ್ರಾಯ ಬ್ರಿಜೇಶ್ ಅವರದ್ದು. `ಪ್ರತಿದಿನ 800 ಬಾಣಗಳನ್ನು ಗುರಿಯತ್ತ ಬಿಟ್ಟು ಅಭ್ಯಾಸ ನಡೆಸುತ್ತಿದ್ದುದಾಗಿ ಭಾರತ ತಂಡದವರು ಹೇಳಿದ್ದಾರೆ. ಇದು ನಿಜವಲ್ಲ. ಏಕೆಂದರೆ ಈ ರೀತಿಯಲ್ಲಿ ಅಭ್ಯಾಸ ನಡೆಸಿದ್ದರೆ ಇಂತಹ ಕೆಟ್ಟ ಪ್ರದರ್ಶನ ಮೂಡಿಬರುತ್ತಿರಲಿಲ್ಲ~ ಎಂದಿದ್ದಾರೆ.`ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಕ್ರೀಡಾಳುಗಳು ಫೇಸ್‌ಬುಕ್, ಟ್ವಿಟರ್ ಒಳಗೊಂಡಂತೆ ವಿವಿಧ ಸಾಮಾಜಿಕ ಜಾಲತಾಣಗಳ `ಬಂಧಿ~ಯಾಗಿದ್ದರು. ಭಾರತದ ಕ್ರೀಡಾಳುಗಳೂ ಇದರಿಂದ ಹೊರತಾಗಿರಲಿಲ್ಲ. ಕೇವಲ ಅಭ್ಯಾಸ ಮತ್ತು ಸ್ಪರ್ಧೆಯ ಮೇಲೆ ಗಮನ ಕೇಂದ್ರೀಕರಿಸುವ ಬದಲು ಇತರ ವಿಷಯಗಳತ್ತ ಚಿತ್ತ ಹರಿಸಿದರು. ಅದರ ಪರಿಣಾಮವೇ ಈ ಕೆಟ್ಟ ಪ್ರದರ್ಶನ~ ಎಂದು ಹೇಳಿದ್ದಾರೆ. ಭಾರತ ಕ್ರಿಕೆಟ್ ತಂಡ 1983ರ ವಿಶ್ವಕಪ್ ಟೂರ್ನಿಯ ಟ್ರೋಫಿ ಎತ್ತಿಹಿಡಿದ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಆರ್ಚರಿ ಸ್ಪರ್ಧಿಗಳು ಪದಕದೆಡೆಗೆ ಗುರಿಯಿಡುವರು ಎಂದು ಹೆಚ್ಚಿನವರು ಭಾವಿಸಿದ್ದರು. ಆದರೆ ಅದು ಹುಸಿಯಾಗಿದೆ. ಆರ್ಚರಿಯಲ್ಲಿ ಒಲಿಂಪಿಕ್ಸ್ ಪದಕಕ್ಕಾಗಿ ಇನ್ನೂ ನಾಲ್ಕು ವರ್ಷ ಕಾಯಬೇಕು...

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.