ಮಂಗಳವಾರ, ಜನವರಿ 21, 2020
29 °C

ಗುಲ್ಬರ್ಗ: ಅನುರಣಿಸಿದ ದೇಶಭಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸ್ಥಳೀಯ ಚಂದ್ರಶೇಖರ್ ಪಾಟೀಲ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ದಿನ ವಿವಿಧ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿಯ ಹಾಡುಗಳ ತಾಳಕ್ಕೆ ಪ್ರದರ್ಶಿಸಿದ ಸಾಮೂಹಿಕ ನೃತ್ಯ; ನೆರೆದವರನ್ನು ಪುಳಕಿತಗೊಳಿಸಿತು.



  ಶಾಲಾ ವಿದ್ಯಾರ್ಥಿಗಳು ನೃತ್ಯ ಪ್ರದರ್ಶದ ವೇಳೆ ಸನ್ನಿವೇಶ ಸೃಷ್ಟಿಗಾಗಿ ಚಕ್ಕಡಿಗಳನ್ನು ತರಿಸಿದ್ದರು. ಅನುರಣಿಸುತ್ತಿದ್ದ ದೇಶಭಕ್ತಿ ಗೀತೆ, ವಿದ್ಯಾರ್ಥಿಗಳ ಸುಂದರ ನೃತ್ಯ ನೋಡುತ್ತಾ ಮೈಮರೆತಿದ್ದ ಸಚಿವ ಬಸವರಾಜ ಬೊಮ್ಮಾಯಿ, ಮೈದಾನಕ್ಕೆ ಆಗಮಿಸಿದ ಎತ್ತುಗಳನ್ನು ನೋಡಿ ಪುಳಕಿತಗೊಂಡರು. 



 ವೇದಿಕೆಯಿಂದ ಕೆಳಗೆ ಹೋಗಿ, ಸಂಗೀತ ಸದ್ದಿಗೆ ಬೆದರುತ್ತಿದ್ದ ಎತ್ತುಗಳ ಮೈಯನ್ನು ಪ್ರೀತಿಯಿಂದ ಸವರಿ, ಮುತ್ತುಕೊಟ್ಟು ಧನ್ಯತಾಭಾವ ಸೂಸಿದರು.



ಶಾಲಾ ವಿದ್ಯಾರ್ಥಿಗಳಿಂದ ತುಂಬಿದ್ದ ಕ್ರೀಡಾಂಗಣವು ಕೇಸರಿ, ಬಿಳಿ, ಹಸಿರು ವೇಷಭೂಷಣದಲ್ಲಿ ಮಿಂದೆದ್ದಂತೆ ಕಾಣುತ್ತಿತ್ತು. ಧ್ವಜಾರೋಹಣ, ಪೊಲೀಸ್ ಪರೇಡ್‌ನೊಂದಿಗೆ ಗಂಭೀರತೆಗೆ ಜಾರಿದ ಜನಜಂಗುಳಿಗೆ ಗಣತಂತ್ರ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳು ಮನವರಿಕೆ ಮಾಡಿದರು.



ಬಳಿಕ ದೇಶದ ಹಿರಿಮೆ ಕೊಂಡಾಡುವ ಹಾಡುಗಳ ಸಾಮೂಹಿಕ ನೃತ್ಯ ಪ್ರದರ್ಶನದ ನೋಟ ಮನಮೋಹಕವಾಗಿತ್ತು. ವಿಕಾಸ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು ತ್ರಿವರ್ಣ ಧ್ವಜಾಕಾರದಲ್ಲಿ ನಿಂತು `ಜೈ ಹೋ..ಜೈ ಹೋ...~ ಗೀತೆಗೆ ನೃತ್ಯ ಪ್ರದರ್ಶಿಸಿಸುವಾಗ ಜನರು ಚಪ್ಪಾಳೆಗಳ ತಾಳಹಾಕಿ ಭಾಗಿಯಾದರು.



ಡಾಮಿನೆಂಟ್ ಪ್ರೌಢಶಾಲೆಯ ವಿದ್ಯಾರ್ಥಿಗಳು `ಮೇರಿ ದೇಶ್‌ಕಿ ಧರ್‌ತಿ...~ ಹಾಡಿಗೆ ಪ್ರದರ್ಶಿಸಿದ ನೃತ್ಯರೂಪಕವು ಗ್ರಾಮೀಣ ಜೀವನದ ಸನ್ನಿವೇಶವನ್ನು ಸುಂದರವಾಗಿ ಸೃಷ್ಟಿಸಿತು. ಫರ‌್ಹಾನ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸರ್ಕಾರಿ ಎಸ್‌ಸಿ/ಎಸ್‌ಟಿ ಕನ್ಯಾ ಪ್ರೌಢಶಾಲೆ, ಪ್ರಜ್ಞಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯಗಳು ದೇಶಭಕ್ತಿಯನ್ನು ಗಟ್ಟಿಗೊಳಿಸಿ ಗಣರಾಜ್ಯ ಆಚರಣೆ ಉತ್ಸವದ ಉತ್ಸಾಹವನ್ನು ಇಮ್ಮಡಿಗೊಳಿಸಿದವು.

ಪ್ರತಿಕ್ರಿಯಿಸಿ (+)