ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಗುಲ್ಬರ್ಗ: ಪ್ರವಾಸಿ ಟ್ಯಾಕ್ಸಿಗಳ ವಿತರಣೆ

Published:
Updated:

ಗುಲ್ಬರ್ಗ: ಪ್ರವಾಸೋದ್ಯಮ ಇಲಾಖೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಮಂಜೂರಾದ ಪ್ರವಾಸಿ ಟ್ಯಾಕ್ಸಿ ಕಾರುಗಳನ್ನು ಪಶುಸಂಗೋಪನಾ ಸಚಿವ ರೇವುನಾಯಕ್ ಬೆಳಮಗಿ ಅವರು 31 ನಿರುದ್ಯೋಗಿ ಯುವಕರಿಗೆ ಮಂಗಳವಾರ ವಿತರಿಸಿದರು.`ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರಿಗೆ ಈ ಯೋಜನೆ ಉಪಯುಕ್ತವಾಗಿದ್ದು, ಟ್ಯಾಕ್ಸಿಗಳನ್ನು ಪಡೆದ ನಿರುದ್ಯೋಗಿ ಯುವಕರು ಯೋಜನೆಯ ಲಾಭ ಪಡೆದು ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬೇಕು` ಎಂದು ಸಚಿವರು ಕರೆ ನೀಡಿದರು.ಪ್ರಾದೇಶಿಕ ಆಯುಕ್ತ ಡಾ. ರಜನೀಶ್ ಗೋಯಲ್, ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್., ಪ್ರಾದೇಶಿಕ ಸಾರಿಗೆ ಅಧಿಕಾರಿ ಈಶ್ವರ ಅವಟೆ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ ಹಾಜರಿದ್ದರು.ಪ್ರವಾಸೋದ್ಯಮ ಇಲಾಖೆಯ ಈ ಯೋಜನೆಯಡಿ ಪ್ರವಾಸಿ ಟ್ಯಾಕ್ಸಿ ಬೆಲೆ ರೂ. 3.60 ಲಕ್ಷ ಇದ್ದು, ಶೇ. 50ರಷ್ಟು ಸಹಾಯಧನ ನೀಡಲಾಗುವುದು. ಟಾಟಾ ಇಂಡಿಕಾ ಹವಾನಿಯಂತ್ರಿತ ಪ್ರವಾಸಿ ಟ್ಯಾಕ್ಸಿ ಖರೀದಿಗಾಗಿ 1.80 ಲಕ್ಷ ರೂಪಾಯಿಗಳಲ್ಲಿ 18,000 ರೂಪಾಯಿಗಳನ್ನು ಫಲಾನುಭವಿ ಭರಿಸಬೇಕು.

 

ಉಳಿದ ರೂ. 1.62 ಲಕ್ಷವನ್ನು ಇಲಾಖೆಯು ಬ್ಯಾಂಕಿನಿಂದ ಸಾಲದ ರೂಪದಲ್ಲಿ ಒದಗಿಸಿ ಒಟ್ಟು ರೂ. 3.60 ಲಕ್ಷ ಹಣವನ್ನು ಗುಲ್ಬರ್ಗದಲ್ಲಿ ಟಾಟಾ ವಾಹನಗಳ ಅಧಿಕೃತ ವಿತರಕರಾದ ಮೇ. ವಿ.ಕೆ.ಜಿ. ಮೋಟರ್ಸ್‌ಗೆ ಪಾವತಿಸಿ, ಆಯ್ಕೆಯಾದ ಫಲಾನುಭವಿಗಳಿಗೆ ಪ್ರವಾಸಿ ಟ್ಯಾಕ್ಸಿ ಒದಗಿಸಿದೆ.ಕಳೆದ ವರ್ಷ ಜಿಲ್ಲಾಡಳಿತ ಜಿಲ್ಲಾ ಲೀಡ್ ಬ್ಯಾಂಕ್ ಮೂಲಕ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಕೈಗೊಂಡು, ಎಂಟು ಬ್ಯಾಂಕುಗಳ ಮುಖಾಂತರ ಆಯ್ಕೆಯಾದ ಒಟ್ಟು 31 ಫಲಾನುಭವಿಗಳಿಗೆ ಟ್ಯಾಕ್ಸಿಗಳಿಗೆ ಸಾಲದ ವ್ಯವಸ್ಥೆ ಮಾಡಿದೆ.

Post Comments (+)