ಬುಧವಾರ, ಮೇ 25, 2022
30 °C

ಗೇಮ್‌ಪ್ಲಾನ್: ಅದ್ಭುತ ಪಂದ್ಯ!

ಕೆವಿನ್ ಪೀಟರ್‌ಸನ್, ಇಂಗ್ಲೆಂಡ್ ತಂಡದ ಆಟಗಾರ Updated:

ಅಕ್ಷರ ಗಾತ್ರ : | |

ಭಾರತದ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ನಾನು ಅನುಭವಿಸಿದಷ್ಟು ಸಂತಸ, ರೋಮಾಂಚನವನ್ನು ಹಿಂದೆಂದೂ ಅನುಭವಿಸಿಲ್ಲ. ಭಾರತದಲ್ಲಿ ನಾವು ಹೆಚ್ಚಿನ ಏಕದಿನ ಪಂದ್ಯಗಳನ್ನು ಗೆದ್ದಿಲ್ಲ. ಭಾನುವಾರ ನಡೆದ ಪಂದ್ಯದಲ್ಲಿ ನಮಗೆ ಸುಲಭ ಗೆಲುವು ಪಡೆಯಬಹುದಿತ್ತು. ಅದೇ ರೀತಿ ಪಂದ್ಯದಲ್ಲಿ ನಾವು ಸೋಲು ಅನುಭವಿಸುವ ಸಾಧ್ಯತೆಯೂ ಇತ್ತು. ಆದರೆ ಅದು ‘ಟೈ’ನಲ್ಲಿ ಕೊನೆಗೊಂಡಿತು. ಹೋ... ಅದ್ಭುತ ಪಂದ್ಯ! ಇಂತಹ ಪಂದ್ಯದ ಬಳಿಕ ನಿಮಗೆ ಯಾವ ರೀತಿಯ ಪ್ರತಿಕ್ರಿಯೆ ನೀಡಲು ಸಾಧ್ಯ?ಪಂದ್ಯದಲ್ಲಿ ಗೆದ್ದು ಎರಡು ಪೂರ್ಣ ಪಾಯಿಂಟ್ ಗಿಟ್ಟಿಸಿದ್ದರೆ ಚೆನ್ನಾಗಿತ್ತು. ಆದರೂ ಈ ಹೋರಾಟ ರೋಚಕ ಅಂತ್ಯ ಕಂಡಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದ ಪ್ರೇಕ್ಷಕರು ಮಾತ್ರವಲ್ಲ, ಟಿವಿ ಮುಂದೆ ಕುಳಿತು ಪಂದ್ಯ ವೀಕ್ಷಿಸಿದ ಎಲ್ಲರೂ ಸಾಕಷ್ಟು ಮನರಂಜನೆ ಅನುಭವಿಸಿದರು. ಕೆಲವರಿಂದ ಅದ್ಭುತ ಬ್ಯಾಟಿಂಗ್ ಜೊತೆಗೆ ಟಿಮ್ ಬ್ರೆಸ್ನನ್ ಮತ್ತು ಜಹೀರ್ ಖಾನ್ ಅವರಿಂದ ಸೊಗಸಾದ ಬೌಲಿಂಗ್ ಪ್ರದರ್ಶನ ಮೂಡಿಬಂತು. 300ಕ್ಕೂ ಅಧಿಕ ರನ್‌ಗಳನ್ನು ಚೇಸ್ ಮಾಡುವ ಸಂದರ್ಭ ಸೋಲು ಎದುರಾಗುವ ಸಾಧ್ಯತೆ ಅಧಿಕ ಇರುತ್ತದೆ. ಆದರೆ ನಾವು ಸೊಗಸಾದ ಪ್ರದರ್ಶನ ನೀಡಿದೆವು.ಇಲ್ಲಿನ ವಿಕೆಟ್ ಕೂಡಾ ಚೆನ್ನಾಗಿತ್ತು. ಎರಡನೇ ಎಸೆತದ ಬಳಿಕ ಸ್ಟ್ರಾಸ್ ನನ್ನ ಹತ್ತಿರ ಬಂದು ‘ಈ ವಿಕೆಟ್ ಫ್ಲಾಟ್ ಆಗಿದೆ’ ಎಂದು ಹೇಳಿದರು. ಚೆನ್ನಾಗಿ ಬ್ಯಾಟ್ ಮಾಡಿದರೆ ನಮಗೆ ಈ ಮೊತ್ತವನ್ನು ಬೆನ್ನಟ್ಟಬಹುದು ಎಂಬುದು ಅವರ ಮಾತಿನ ಅರ್ಥವಾಗಿತ್ತು. ನನಗೆ ತಂಡಕ್ಕೆ ಉತ್ತಮ ಆರಂಭ ನೀಡಲು ಸಾಧ್ಯವಾಯಿತು. ಆದರೆ ದುರದೃಷ್ಟದಿಂದ ಔಟ್ ಆದೆ. ನಾಯಕ ಸ್ಟ್ರಾಸ್ ಬಳಿಕ ಸೊಗಸಾದ ಆಟವಾಡಿದರು. ಭಾರತದ ಪರ ಸಚಿನ್ ಕೂಡಾ ಮಿಂಚಿದರು. ಆದರೆ ಭಾನುವಾರದ ನಿಜವಾದ ಹೀರೊ ಸ್ಟ್ರಾಸ್. ಅವರಿಂದ ಈ ಹಿಂದೆ ಇಂತಹ ಇನಿಂಗ್ಸ್ ಮೂಡಿಬಂದಿಲ್ಲ.ಇಯಾನ್ ಬೆಲ್ ಕೂಡಾ ಸ್ಟ್ರಾಸ್‌ಗೆ ಉತ್ತಮ ಬೆಂಬಲ ನೀಡಿದರು. ಅವರ ವಿರುದ್ಧದ ಎಲ್‌ಬಿಡಬ್ಲ್ಯು ಮನವಿಯನ್ನು ಅಂಪೈರ್ ತಿರಸ್ಕರಿಸಿದ್ದು ಅದೃಷ್ಟ ಎನ್ನಬೇಕು. ಈ ಮನವಿಯನ್ನು ಮೂರನೇ ಅಂಪೈರ್ ಕೂಡಾ ತಿರಸ್ಕರಿಸುವರು ಎಂಬುದನ್ನು ನಾವು ಯೋಚಿಸಿಯೇ ಇರಲಿಲ್ಲ. ಬ್ಯಾಟಿಂಗ್ ಪವರ್ ಅವಧಿಯಲ್ಲಿ ನಾವು ಸ್ಟ್ರಾಸ್ ಮತ್ತು ಬೆಲ್ ಅವರನ್ನು ಕಳೆದುಕೊಂಡೆವು. ಇದರಿಂದ ಗೆಲುವಿನ ಉತ್ತಮ ಅವಕಾಶ ಕಳೆದುಕೊಂಡೆವು. ಬುಧವಾರ ನಾವು ಐರ್ಲೆಂಡ್ ವಿರುದ್ಧ ಪೈಪೋಟಿ ನಡೆಸುವೆವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.