ಶನಿವಾರ, ಜೂನ್ 12, 2021
24 °C

ಗೋಕೃ ಸಮಗ್ರ ಕೃತಿಗಳ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕೃ ಸಮಗ್ರ ಕೃತಿಗಳ ಲೋಕಾರ್ಪಣೆ

ಬೆಂಗಳೂರು: `ಸಣ್ಣಕತೆಗಳ ರಚನಾಕಾರರ ಸಾಲಿನಲ್ಲಿ ಸಾಹಿತಿ ಕೆ.ಗೋಪಾಲಕೃಷ್ಣರಾಯರ ಹೆಸರನ್ನು ಪ್ರಸ್ತಾಪಿಸದೇ ತಪ್ಪು ಮಾಡಲಾಗುತ್ತಿದೆ. ಗೋಕೃ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯುತ್ತಮ ಸಣ್ಣಕತೆಗಳನ್ನು ನೀಡಿದ್ದಾರೆ~ ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹೇಳಿದರು.ಕೆ.ಗೋಪಾಲಕೃಷ್ಣರಾಯ ಸಾಹಿತ್ಯ ಪ್ರತಿಷ್ಠಾನವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕೆ.ಗೋಪಾಲಕೃಷ್ಣರಾಯ ಅವರ ಸಮಗ್ರ ಕೃತಿಗಳ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.`ಗೋಕೃ ಅವರು ಸಣ್ಣ ಕತೆ ಮಾತ್ರವಲ್ಲ, ಪ್ರಬಂಧ, ಕವಿತೆ, ನಾಟಕ ಸೇರಿದಂತೆ ಎಲ್ಲಾ ವಲಯದಲ್ಲೂ ದೊಡ್ಡ ಮಟ್ಟಿನ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಅವರ ಜೀವಿತಾವಧಿಯಲ್ಲಿ ಈ ಪುಸ್ತಕಗಳು ಮುದ್ರಣದ ಚೌಕಟ್ಟಿಗೆ ಒಳಪಡಬೇಕಿತ್ತು~ ಎಂದು ವಿಷಾದಿಸಿದ ಅವರು, ` ಯಾವುದೇ ಪ್ರೋತ್ಸಾಹವನ್ನು ಬಯಸದೇ ಅನುಭವವನ್ನು ಅಕ್ಷರಕ್ಕೆ ಇಳಿಸಿ, ವಿಭಿನ್ನ ಚಿಂತನೆಯನ್ನು ಸಾಹಿತ್ಯದ ಮೂಲಕ ನೀಡಿದ್ದಾರೆ. ಅವರ ಸರಳ ತತ್ವಗಳು ಮತ್ತು ಆದರ್ಶಗಳು ಇಂದಿನ ಪೀಳಿಗೆಗೆ ಆದರ್ಶನೀಯ~ ಎಂದರು.ಗೋಕೃ ಅವರ ಪುತ್ರಿ ಜಾನಕಿ ಶ್ರೀನಿವಾಸ್, `ಮೊದಲಿಗೆ ನನ್ನ ತಂದೆಯ ಸಾಹಿತ್ಯದ ಬಗ್ಗೆ ಅಷ್ಟೇನು ತಿಳಿದುಕೊಂಡಿರಲಿಲ್ಲ. ಕೆಲವು ವರ್ಷಗಳಿಂದೀಚೆಗೆ ತಂದೆಯ ಎಲ್ಲಾ ಕೃತಿಗಳನ್ನು ಸಂಗ್ರಹಿಸುವ ಮನಸ್ಸಾಯಿತು. ಅದರ ಫಲವೇ ಈ ಪುಸ್ತಕ. ತಂದೆ ನೀಡಿದ ಸರಳ ಜೀವನ ಸೂತ್ರಗಳೇ ಎಲ್ಲಾ ಸಂಕಷ್ಟಗಳನ್ನು ತಾಳ್ಮೆಯಿಂದ ಎದುರಿಸುವಂತೆ ಮಾಡಿದೆ~ ಎಂದು ಭಾವುಕರಾದರು.ಇದೇ ಸಂದರ್ಭದಲ್ಲಿ ಗೋಕೃ ಕುರಿತ ವೆಬ್‌ಸೈಟ್‌ನ್ನು ಬಿಡುಗಡೆ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, ಸಾಹಿತಿ ಡಾ.ಗೀತಾ ರಾಮಾನುಜಂ, ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ.ರಮೇಶ್ ಕಾಮತ್ ಇತರರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.