ಗುರುವಾರ , ಮೇ 6, 2021
25 °C

ಗ್ರಾಮ ಪಂಚಾಯ್ತಿ ನೌಕರರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸದುರ್ಗ: ಬಾಕಿ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ತಾಲ್ಲೂಕಿನ ದೇವಪುರ ಗ್ರಾ.ಪಂ. ನೌಕರರು ಎಐಟಿಯುಸಿ ನೇತೃತ್ವದಲ್ಲಿ ಬುಧವಾರ ಪಂಚಾಯ್ತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ಗ್ರಾಮೀಣ ಜನರಿಗೆ ಮೂಲಸೌಲಭ್ಯ ಒದಗಿಸುವ ನೌಕರರನ್ನು ಗ್ರಾಮ ಪಂಚಾಯ್ತಿ ಪುಕ್ಕಟೆ ದುಡಿಸಿಕೊಳ್ಳುತ್ತಿದೆ. 18 ತಿಂಗಳಿಂದ ವೇತನ ನೀಡದೇ ಇರುವುದರಿಂದ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಪ್ರತಿಭಟನಾನಿರತ ನೌಕರರು ತಮ್ಮ ಸಮಸ್ಯೆ ತೋಡಿಕೊಂಡರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲ್ಲೂಕು ಎಐಟಿಯುಸಿ ಅಧ್ಯಕ್ಷ ಕೆ.ಎನ್. ರಮೇಶ್ ಮಾತನಾಡಿ, ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ತಾಲ್ಲೂಕಿನ ಬಹುತೇಕ ಗ್ರಾ.ಪಂ.ಗಳಲ್ಲಿ ನೌಕರರಿಗೆ ಹಲವಾರು ತಿಂಗಳುಗಳಿಂದ ವೇತನ ನೀಡದೇ ದುಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು.ಸರ್ಕಾರದ ಆದೇಶದಂತೆ ಗ್ರಾ.ಪಂ. ನೌಕರರರಿಗೆ ಏಪ್ರಿಲ್‌ನಿಂದ ಪರಿಷ್ಕೃತ ವೇತನ ನೀಡಬೇಕಿದೆ. ಆದರೆ ಯಾವುದೇ ಪಂಚಾಯ್ತಿಯೂ ನೌಕರರಿಗೆ ಪರಿಷ್ಕೃತ ವೇತನ ನೀಡುತ್ತಿಲ್ಲ. ಚುನಾಯಿತ ಸದಸ್ಯರು ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸರ್ಕಾರದ ಅದೇಶದಂತೆ ನೌಕರರಿಗೆ ವೇತನ ನೀಡಬೇಕು ಎಂದು ಆಗ್ರಹಿಸಿದರು.ಗ್ರಾಮ ಪಂಚಾಯ್ತಿಗಳು ನೌಕರರಿಗೆ ಅಗತ್ಯ ಸೌಲಭ್ಯ ಒದಗಿಸುತ್ತಿಲ್ಲ. ಅನೇಕ ಗ್ರಾಮಗಳಲ್ಲಿ ಪಂಪ್‌ಹೌಸ್‌ಗಳು ದೂರ ಇರುವುದರಿಂದ ಅಲ್ಲಿಗೆ ಹೋಗಿ ಬರಲು ಅನುಕೂಲವಾಗುವಂತೆ ಬೈಸಿಕಲ್ ಕೊಡುವುದರ ಜತೆಗೆ ರಾತ್ರಿ ವೇಳೆ ಓಡಾಡಲು ಟಾರ್ಚ್‌ಗಳನ್ನು ನೀಡಬೇಕು ಎಂದು ರಮೇಶ್ ಮನವಿ ಮಾಡಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಮಿಕ ನಿರೀಕ್ಷಕಿ ಗಿರಿಜಾ ಮಧ್ಯಸ್ಥಿಕೆಯಲ್ಲಿ ಚರ್ಚೆ ನಡೆದು ಗ್ರಾ.ಪಂ. ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿ ಲಭ್ಯ ಇರುವ ಅನುದಾನದಲ್ಲಿ ಎರಡು ತಿಂಗಳ ವೇತನ ಬಿಡುಗಡೆ ಮಾಡಲು ಸಮ್ಮತಿಸಿದ ಮೇರೆಗೆ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.ಎಐಟಿಯುಸಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಸಿ. ಕುಮಾರಸ್ವಾಮಿ, ನೌಕರರಾದ ಗುರುಸಿದ್ದಪ್ಪ, ಹನುಮಂತಪ್ಪ ಮತ್ತಿತರರು ಭಾಗವಹಿಸಿದ್ದರು.ಸಾಕ್ಷರ ಜಾಥಾ


ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಬುಧವಾರ ಕೆಲ್ಲೋಡು ಗ್ರಾಮದಲ್ಲಿ ಸಾಕ್ಷರ ಜಾಥಾ ನಡೆಸಲಾಯಿತು.ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಹಾಗೂ ಶಿಕ್ಷಕರು, ಸ್ಥಳೀಯ ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳು ಜಾಥಾದಲ್ಲಿ ಭಾಗವಹಿಸಿ ಅಕ್ಷರದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.ಜಾಥಾದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೃಷ್ಣ ನಾಯಕ್, ಸದಸ್ಯರಾದ ರೇಣುಕಮ್ಮ, ವರಲಕ್ಷ್ಮಮ್ಮ, ರತ್ನಮ್ಮ, ಮಂಜುನಾಥ್, ಮುಖ್ಯಶಿಕ್ಷಕ ಮೋಹನ್ ಕುಮಾರ್, ಪ್ರೇರಕರಾದ ಬಸವರಾಜ್, ಲಕ್ಷ್ಮೀದೇವಿ ಮತ್ತಿತರರು ಭಾಗವಹಿಸಿದ್ದರು.ಸಾಕ್ಷರತಾ ಸಪ್ತಾಹದ ಅಂಗವಾಗಿ ಕೆಲ್ಲೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ದಿನಕ್ಕೊಂದು ಗ್ರಾಮದಂತೆ ಏಳು ಗ್ರಾಮಗಳಲ್ಲಿ ಚರ್ಚಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ನವ ಸಾಕ್ಷರರಿಗೆ ಓದು ಬರಹ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.