ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಗೀತೆ– ಬಂದೀಶ್‌ ಅಪೂರ್ವ ಮಿಲನ

Last Updated 14 ಮೇ 2015, 19:30 IST
ಅಕ್ಷರ ಗಾತ್ರ

‘ಇಂದು ಸಿನಿಮಾ ಗೀತೆಗಳಲ್ಲಿನ ಮಾಧುರ್ಯ ಮಾಯವಾಗಿದೆ.  ಒಂದೊಳ್ಳೆ ಮಾಧುರ್ಯ ಪ್ರಧಾನ ಗೀತೆಯನ್ನು ಕೇಳಬೇಕು ಎಂದರೆ ನಾವು 90ರ ದಶಕದ ಚಿತ್ರಗಳಿಗೇ ಮರಳಬೇಕಾಗಿರುವಂತಹ ಪರಿಸ್ಥಿತಿ ಇದೆ. ಆ ಕಾಲದ ಸಿನಿಮಾ ಗೀತೆಗಳು ಎವರ್‌ಗ್ರೀನ್‌.

ಯಾಕೆಂದರೆ ಆ ಗೀತೆಗಳು ಶಾಸ್ತ್ರೀಯ ಸಂಗೀತದ ರಾಗವನ್ನು ಆಧರಿಸಿ ಸಂಯೋಜಿಸಿದ ಗೀತೆಗಳಾಗಿರುತ್ತಿದ್ದವು. ಆದರೆ, ಇಂದು ಪರಿಸ್ಥಿತಿ ಹಾಗಿಲ್ಲ. ಸಂಗೀತ ಸಂಯೋಜನೆಯಲ್ಲಿ ಶಾಸ್ತ್ರೀಯ ರಾಗಗಳ ಅವಲಂಬನೆ ಕಡಿಮೆಯಾಗಿದೆ. ಆದ್ದರಿಂದಲೇ ಚಿತ್ರಗೀತೆಗಳಲ್ಲಿ ಮಾಧುರ್ಯವೂ ಮಾಯವಾಗಿದೆ’

ಶಿವಶಕ್ತಿ ಗ್ರೂಪ್‌ ಆಫ್ ಕಂಪನಿ ಅಧ್ಯಕ್ಷ ಮಹೇಶ್‌ ಮಹಾದೇವ್‌ ಇಂದಿನ ಸಿನಿಮಾ ಗೀತೆಗಳನ್ನು ವಿಶ್ಲೇಷಿಸುವುದು ಹೀಗೆ. ಚಿತ್ರಗೀತೆಗಳಲ್ಲಿ ಕಾಣೆಯಾಗಿರುವ ಮಾಧುರ್ಯದ ಶಕ್ತಿಯನ್ನು ಮತ್ತೆ ಮರಳಿಸಲು ಶಿವಶಕ್ತಿ ಗ್ರೂಪ್‌ ‘ಗೀತ್‌ ಬಂದಿಶ್‌ ಮಿಲನ್‌’ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಹಳೆಯ ಚಿತ್ರಗೀತೆ ಮತ್ತು ಹಿಂದೂಸ್ತಾನಿ ಬಂದೀಶ್‌ಗಳನ್ನು ಒಂದೇ ವೇದಿಕೆಯಲ್ಲಿ ಉಣಬಡಿಸುವುದು ಆ ಕಾರ್ಯಕ್ರಮದ ವಿಶೇಷ.

ಮೇ 16ರಂದು ನಗರದ ಅಂಬೇಡ್ಕರ್‌ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅವರ ಈ ಪ್ರಯತ್ನಕ್ಕೆ ಹಿನ್ನೆಲೆ ಗಾಯಕಿ ಪ್ರಿಯದರ್ಶಿನಿ ಮತ್ತು ಹಿಂದೂಸ್ತಾನಿ ಗಾಯಕ ಜಯತೀರ್ಥ ಮೇವುಂಡಿ ಕೈಜೋಡಿಸುತ್ತಿದ್ದಾರೆ.  ಇಲ್ಲಿ ಪ್ರಿಯದರ್ಶಿನಿ ಶಾಸ್ತ್ರೀಯ ರಾಗಾಧಾರಿತ ಹಳೆಯ ಚಿತ್ರಗೀತೆಗಳನ್ನು ಹಾಡಿದರೆ ಜಯತೀರ್ಥ ಮೇವುಂಡಿ ಹಿಂದೂಸ್ತಾನಿ ಬಂದಿಶ್‌ಗಳನ್ನು ಹಾಡಿ ತೋರಿಸಲಿದ್ದಾರೆ.

ಇದರ ಮೂಲಕ ಹಳೆ ಚಿತ್ರಗೀತೆಗಳಲ್ಲಿನ ಮಾಧುರ್ಯ ಮತ್ತು ಅದರ ಹಿಂದಿನ ಶಾಸ್ತ್ರೀಯ ಸಂಗೀತದ ಶಕ್ತಿಯ ಕುರಿತು ಜನರಲ್ಲಿ ಅರಿವು ಮೂಡಿಸುವುದು ಮತ್ತು ಅಭಿರುಚಿ ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ‘ಒಂದು ಸಿನಿಮಾ ಗೀತೆಯನ್ನು ಐದು ನಿಮಿಷದಲ್ಲಿ ಕೇಳಿಬಿಡಬಹುದು.

ಆದರೆ ಆ ಸಿನಿಮಾ ಗೀತೆಯಲ್ಲಿನ ಬಂದೀಶ್‌ ಮತ್ತು ಅವುಗಳ ಬೆಳವಣಿಗೆಗಳನ್ನು ಅರಿತುಕೊಳ್ಳಲು ಹೆಚ್ಚು ಸಮಯ ಹಿಡಿಯುತ್ತದೆ. ಈ ಕಾರ್ಯವನ್ನು ಜಯತೀರ್ಥ ಮೇವುಂಡಿ ಮಾಡಲಿದ್ದಾರೆ. ಯಾವುದೋ ಒಂದು ರಾಗವನ್ನು ಆಧರಿಸಿದ ಸಿನಿಮಾ ಗೀತೆಗಳನ್ನು ಪ್ರಿಯದರ್ಶಿನಿ ಹಾಡುತ್ತಾರೆ. ಆ ರಾಗದ ಬಂದೀಶ್‌ಗಳನ್ನು ಜಯತೀರ್ಥ ಮೇವುಂಡಿ ವಿಸ್ತರಿಸಿ ಹಾಡಿ ತೋರಿಸುತ್ತಾರೆ’ ಎಂದು ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸುತ್ತಾರೆ ಮಹೇಶ್‌.

ಕಥಕ್‌ ಝಲಕ್‌!
ಬರೀ ಚಿತ್ರಗೀತೆ ಮತ್ತು ಶಾಸ್ತ್ರೀಯ ಸಂಗೀತ ಅಷ್ಟೇ ಅಲ್ಲ, ಕಥಕ್‌ ನೃತ್ಯದ ಝಲಕ್‌ ಕೂಡ ಇರುವುದು ಈ ಕಾರ್ಯಕ್ರಮದ ವಿಶೇಷಗಳಲ್ಲಿ ಒಂದು. ಬರೀ ಗಾಯನವೊಂದೇ ಇದ್ದರೆ ಪ್ರೇಕ್ಷಕರಿಗೆ ಏಕತಾನತೆ ಕಾಡುತ್ತದೆ. ಆದ್ದರಿಂದ ಗಾಯನದ ಮಧ್ಯದಲ್ಲಿ ನೃತ್ಯವೂ ಇದ್ದರೆ ಆ ಏಕತಾನತೆಯನ್ನು ತೊಡೆಯಬಹುದು ಮತ್ತು ಗಾಯಕರಿಗೂ ಕೊಂಚ ವಿಶ್ರಾಂತಿ ದೊರೆಯುತ್ತದೆ ಎಂಬ ಕಾರಣಕ್ಕೆ ಕಥಕ್‌ ಅನ್ನೂ ಈ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಕಥಕ್‌ ಕಾರ್ಯಕ್ರಮವನ್ನು ನೀಡಲು ಮುಂಬೈನಿಂದ ಬಿರ್ಜು ಮಹಾರಾಜ್‌ ಅವರ ‘ಆಲಾಪ್‌’ ನೃತ್ಯತಂಡವನ್ನು ಆಹ್ವಾನಿಸಲಾಗಿದೆ. ‘ಬಿರ್ಜು ಮಹಾರಾಜ್‌ ಕಥಕ್‌ ನೃತ್ಯಕ್ಷೇತ್ರದಲ್ಲಿ ದೊಡ್ಡ  ಹೆಸರು ಗಳಿಸಿರುವ ಕಲಾವಿದರು. ಅವರು ತಮ್ಮ ಶಿಷ್ಯರೊಂದಿಗೆ ಸೇರಿ ಕಟ್ಟಿಕೊಂಡಿರುವ ತಂಡ ‘ಆಲಾಪ್‌’. ಅತ್ಯುತ್ತಮ ಕಲಾವಿದರನ್ನೊಳಗೊಂಡ ಆ ತಂಡ ಕಥಕ್‌ನ ಅದ್ಭುತ ಲೋಕವನ್ನು ತೆರೆದಿಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಮಹೇಶ್‌.

ತಿರುಗಾಟದ ಯೋಜನೆ
ಇಂಥ ಪ್ರಯತ್ನ ಇಲ್ಲಿಗೇ ನಿಲ್ಲಬಾರದು ಎಂಬ ಯೋಚನೆಯಿಂದ ಈ ಕಾರ್ಯಕ್ರಮವನ್ನು ದೇಶ ವಿದೇಶಗಳ ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋಗಲು ಯೋಜಿಸಿದ್ದಾರೆ. ‘ಇನ್ನು ಎರಡು ತಿಂಗಳಿಗೆ ಹುಬ್ಬಳ್ಳಿಯಲ್ಲಿ ಇದೇ ಕಾರ್ಯಕ್ರಮ ನಡೆಯಲಿದೆ. ನಂತರ ಕೋಲ್ಕತ್ತ, ಪುಣೆ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಷ್ಟೇ ಅಲ್ಲದೇ ಲಂಡನ್‌ನಲ್ಲಿಯೂ ಈ ಕಾರ್ಯಕ್ರಮವನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಕನ್ನಡ ಮತ್ತು ಹಿಂದಿ ಹಾಡುಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುವುದು. ಮುಂದಿನ ಕಾರ್ಯಕ್ರಮಗಳಲ್ಲಿ ಆಯಾ ಪ್ರಾದೇಶಿಕ ಭಾಷೆ ಮತ್ತು ಹಿಂದಿ ಹಾಡುಗಳನ್ನು ಸೇರಿಸಿಕೊಂಡು ಕಾರ್ಯಕ್ರಮ ರೂಪಿಸಲಾಗುವುದು’ ಎಂದು ಮಹೇಶ್‌ ಹೇಳುತ್ತಾರೆ.

ಉಚಿತ ಪಾಸ್‌
ಈ ಕಾರ್ಯಕ್ರಮಕ್ಕೆ ಯಾವುದೇ ಪ್ರವೇಶ ಶುಲ್ಕ ನಿಗದಿಪಡಿಸಿಲ್ಲ. ಆಸಕ್ತರು ಉಚಿತ ಪಾಸ್‌ಗಳನ್ನು ಪಡೆದುಕೊಂಡು ಈ ಕಾರ್ಯಕ್ರಮ ಸೊಬಗನ್ನು ಆಸ್ವಾದಿಸಬಹುದು. ಪಾಸ್‌ ಪಡೆಯಲು 99010 03542 ಮತ್ತು 90191 55499 ಸಂಖ್ಯೆಯನ್ನು ಸಂಪರ್ಕಿಸಬಹುದು. 

ಗೀತ್‌ ಬಂದಿಶ್‌ ಮಿಲನ್‌ ನಡೆಯುವ ಸ್ಥಳ: ಅಂಬೇಡ್ಕರ್‌ ಭವನ, ವಸಂತ ನಗರ. ಸಮಯ: ಮೇ 16 ಸಂಜೆ 5.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT