ಶುಕ್ರವಾರ, ಮೇ 14, 2021
29 °C

ಚಿನ್ನದ ಪದಕ ಪಡೆದ ಕೃಷಿ ಪದವೀಧರರ ನುಡಿ :ಕೃಷಿ ಕ್ಷೇತ್ರದ ಸಮರ್ಪಕ ನಿರ್ವಹಣೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನೀರಿನ ಸದ್ಬಳಕೆ, ಕೃಷಿಯ ಸಮರ್ಪಕ ನಿರ್ವಹಣೆ, ಬಿತ್ತನೆ ಬೀಜ ಆಯ್ಕೆ, ಮಣ್ಣಿನ ಫಲವತ್ತತೆ ಬಗ್ಗೆ ಹೆಚ್ಚಿನ ಮಾರ್ಗದರ್ಶನವನ್ನು ರೈತ ಸಮುದಾಯಕ್ಕೆ ತಲುಪಿಸುವುದು ಪ್ರಥಮ ಆದ್ಯತೆ ಆಗಬೇಕು. ಈ ಕ್ಷೇತ್ರದಲ್ಲಿ ಸುಧಾರಣೆಯಾದರೆ ಮಾತ್ರ ರೈತ ವರ್ಗಕ್ಕೆ ಹೆಚ್ಚು ಉಪಯೋಗ ಆಗುತ್ತದೆ ಎಂದು ಭಾನುವಾರ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ದ್ವಿತೀಯ ಘಟಿಕೋತ್ಸವದಲ್ಲಿ ಚಿನ್ನದ ಪದಕ ವಿಜೇತರು ನುಡಿದರು.ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕ ಪಡೆದವರ ಪಟ್ಟಿ ಘೋಷಣೆಯಾಗುತ್ತಿದ್ದಂತೆ ಪದಕ ಪಡೆದ ವಿದ್ಯಾರ್ಥಿಗಳು, ಅವರ ಪಾಲಕರ ಸಂತೋಷಕ್ಕೆ ಪಾರವೇ ಇರಲಿಲ್ಲ.ಕೃಷಿ ಪದವಿ ವಿಭಾಗದಲ್ಲಿ ತಲಾ ನಾಲ್ಕು ಚಿನ್ನದ ಪದಕ ಪಡೆದ  ಕಮಲೇಶಕುಮಾರ, ಪ್ರದೀಪ್‌ಕುಮಾರ ಹಾಗೂ ಕೃಷಿ ತಾಂತ್ರಿಕ ವಿಭಾಗದಲ್ಲಿ 4 ಚಿನ್ನದ ಪದಕ ಮತ್ತು 2 ನಗದು ಪುರಸ್ಕಾರ ಪಡೆದ ರತ್ನೇಶಕುಮಾರ ಮುಂದಿನ ಉನ್ನತ ವ್ಯಾಸಂಗ, ಸಂಶೋಧನೆ, ಅಧ್ಯಯನದ ಬಗ್ಗೆ ಹೇಳಿಕೊಂಡರು.ನಮ್ಮದು ಅವಿಭಕ್ತ ರೈತ ಕುಟುಂಬ. ರಾಜಸ್ತಾನದಲ್ಲಿ 36 ಎಕರೆ ಜಮೀನು ಇದೆ. ನಮ್ಮಲ್ಲಿ ನೀರಿನ ಸಮಸ್ಯೆ ಇದೆ. ಇದ್ದರೂ ಉಪ್ಪು ನೀರು. 300-400 ಅಡಿ ಆಳ ಕೊರೆದರೂ ಇಂಥದ್ದೇ ನೀರು. ಹೀಗಾಗಿ ರೈತರ ಸಮಸ್ಯೆ ನನಗೆ ಗೊತ್ತು. ಸಂಶೋಧನೆ ಕ್ಷೇತ್ರದಲ್ಲಿ ಸಾಧನೆ ಮಾಡಿ ಸ್ಪಂದಿಸುವ ಆಶಯವಿದೆ. ಕೃಷಿ ಅಧ್ಯಯನ ಮಾಡುವ ನಮ್ಮಂಥ ಯುವಕರು  ಕೃಷಿ ಕ್ಷೇತ್ರದ ಏಳ್ಗೆಗೆ ಪ್ರಯತ್ನಿಸಬೇಕು ಎಂದು ಕಮಲೇಶಕುಮಾರ್ ಅಭಿಪ್ರಾಯ ಹಂಚಿಕೊಂಡರು. ಕೃಷಿ ವ್ಯವಸ್ಥಾಪನ ಅಧ್ಯಯನ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡುವ ಆಶಯವಿದೆ. ಕೃಷಿ ಪದವಿ ಪಡೆದವರು ಬ್ಯಾಂಕಿಂಗ್, ರಾಸಾಯನಿಕ ಕಂಪನಿ, ಕೃಷಿ ಯಂತ್ರೋಪಕರಣ ತಯಾರಿಕೆ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕ್ಷೇತ್ರಗಳಲ್ಲೂ ಕೃಷಿ ಪದವೀಧರರ ಅಗತ್ಯವಿದೆ ಎಂಬ ಭಾವನೆ ನನ್ನದು ಎಂದು ಬಿಹಾರದ ರತ್ನೇಶಕುಮಾರ್ ಹೇಳಿದರು.ಹೈದರಾಬಾದ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಅಧ್ಯಯನ ಮಾಡುವ ಉದ್ದೇಶವಿದೆ. ಕೃಷಿ  ಅಧ್ಯಯನಕ್ಕಾಗಿ ಬಂದ ನಾವು ಈ ಕ್ಷೇತ್ರಕ್ಕೆ ನಮ್ಮದೇ ಆದ ರೀತಿಯಲ್ಲಿ ಉಪಯುಕ್ತ ಕೊಡುಗೆ ಕೊಡುವ ಉದ್ದೇಶ ಹೊಂದಿರಬೇಕು. ಈ ದಿಕ್ಕಿನಲ್ಲಿ ಪ್ರಯತ್ನ ಮುಂದುವರಿಯಲಿದೆ ಎಂದು ಕೃಷಿ ಪದವಿ ವಿಭಾಗದಲ್ಲಿ 4 ಚಿನ್ನದ ಪದಕ ಪಡೆದ ಪ್ರದೀಪ್‌ಕುಮಾರ್ ಆಶಯವನ್ನು `ಪ್ರಜಾವಾಣಿ~ಯೊಂದಿಗೆ ಹಂಚಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.