ಸೋಮವಾರ, ಮೇ 17, 2021
30 °C

ಜಗಳೂರು: ಡೆಂಗೆ ನಿಯಂತ್ರಣಕ್ಕೆ ಅಗತ್ಯ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಳೂರು: ತಾಲ್ಲೂಕಿನಲ್ಲಿ 17 ಶಂಕಿತ ಡೆಂಗೆ ಪ್ರಕರಣಗಳು ಪತ್ತೆಯಾಗಿದ್ದು, ಡೆಂಗೆ ಜ್ವರ ನಿಯಂತ್ರಣಕ್ಕೆ  ಫಾಗಿಂಗ್ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಭಾರಿ ತಾಲ್ಲೂಕು ವೈದ್ಯಾಧಿಕಾರಿ ಡಾ. ನಾಗರಾಜ್ ಸ್ಪಷ್ಟಪಡಿಸಿದರು.ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಾಮಾನ್ಯ ಸಭೆಯಲ್ಲಿ ಅವರು  ಮಾಹಿತಿ ನೀಡಿದರು.ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಜನವರಿ ತಿಂಗಳಿಂದ ಇಲ್ಲಿಯವರೆಗೆ ಜ್ವರದಿಂದ ಬಳಲುತ್ತಿರುವ ರೋಗಿಗಳಲ್ಲಿ 17  ಶಂಕಿತ ಡೆಂಗೆ ಪ್ರಕರಣಗಳಾಗಿವೆ. ಗ್ರಾಮ ಪಂಚಾಯ್ತಿ  ವ್ಯಾಪ್ತಿಯಲ್ಲಿ ಫಾಗಿಂಗ್‌ಗೆ ಕ್ರಮ ಕೈಗೊಳ್ಳಲಾಗಿದೆ. ಪಟ್ಟಣ ಮತ್ತು ಹಳ್ಳಿಗಳಲ್ಲಿ ಶಾಲಾ ಮಕ್ಕಳ  ಜಾಥಾ ಹಮ್ಮಿಕೊಳ್ಳುವ ಮೂಲಕ ಡೆಂಗೆ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ತಾಲ್ಲೂಕಿನ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದೆ ಎಂದು ಅವರು ತಿಳಿಸಿದರು.ರಂಗಯ್ಯನದುರ್ಗ   ಅರಣ್ಯ ಪ್ರದೇಶವನ್ನು ಕೊಂಡುಕುರಿ ವನ್ಯಧಾಮವಾಗಿ ಘೋಷಿಸುವುದರಿಂದ  ಆ ಭಾಗದ ರೈತರು ಮತ್ತು ಜನ, ಜಾನುವಾರುಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಕಾನೂನು ಬಿಗಿಯಾಗಿದೆ ಎಂದು ವಲಯ ಅರಣ್ಯಾಧಿಕಾರಿ ರಾಜಾಸಾಬ್ ಹೇಳಿದರು.   ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ. ಸದಸ್ಯ ಬಿ.ಆರ್. ಅಂಜಿನಪ್ಪ, ಒಬ್ಬ ಅಧಿಕಾರಿಯಾಗಿ ನೀವು ಸರ್ಕಾರದ ಆದೇಶವನ್ನು ಸಮರ್ಥಿಸಿಕೊಳ್ಳುವ ಬದಲು ಸರ್ಕಾರದ ಅಧಿಕೃತ ಕಾರ್ಯಕ್ರಮದ ವಿರುದ್ಧವೇ ಮಾತನಾಡುತ್ತೀರಿ. ವನ್ಯಧಾಮ ಪ್ರತ್ಯೇಕ ವನ್ಯಜೀವಿ ವಿಭಾಗಕ್ಕೆ ಹಸ್ತಾಂತರವಾದರೆ ಅನುದಾನ ನಿಮ್ಮ ಕೈತಪ್ಪುತ್ತದೆ ಎಂಬ ಕಾರಣಕ್ಕೆ ನೀವು ಜನಪ್ರತಿನಿಧಿಗಳಿಗೆ, ಸಾಮಾನ್ಯ ಜನರಿಗೆ ಸತ್ಯವನ್ನು ತಿರುಚಿ ಹೇಳುತ್ತಿದ್ದೀರಾ. ಕೊಂಡುಕುರಿಯಂತಹ  ಅಪರೂಪ ಜೀವಿಯ ಸಂರಕ್ಷಣಾ ಕ್ರಮದ ಬಗ್ಗೆ ಅಧಿಕಾರಿಯಾಗಿ ಹೀಗೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆ ಕಾರ್ಯ ಬಿರುಸಿನಿಂದ ಸಾಗಿದೆ. 9 ಕೇಂದ್ರಗಳ ಮೂಲಕ ಬಿತ್ತನೆ ಬೀಜ ಹಾಗೂ 23 ಸಹಕಾರಿ ಸಂಘಗಳ ಮೂಲಕ ರಸಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಬೀ, ಗೊಬ್ಬರ ಕೊರತೆ ಇಲ್ಲ. ಅಗತ್ಯ ದಾಸ್ತಾನು ಇದೆ ಎಂದು ಕೃಷಿ ಅಧಿಕಾರಿ ಉಮೇಶ್ ಹೇಳಿದರು.ತಾಲ್ಲೂಕಿನಲ್ಲಿ 241 ಅಂಗನವಾಡಿ ಕೇಂದ್ರಗಳಿದ್ದು, 76 ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲ.128 ಕೇಂದ್ರಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. 81 ಶೌಚಾಲಯಗಳು ಹಾಳಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಾಂತಮ್ಮ ಸಭೆಯ ಗಮನ ಸೆಳೆದರು.ಪ್ರತಿ ಗ್ರಾಮದಲ್ಲಿ ಗ್ರಾಮಸಭೆಗಳಲ್ಲಿ ಮೂಲಸೌಕರ್ಯಗಳ ಬೇಡಿಕೆಯನ್ನು ಸೇರಿಸಿ. ಉದ್ಯೋಗಖಾತ್ರಿ ಯೋಜನೆಯಲ್ಲಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಯೋಜನಾಧಿಕಾರಿ ಮಲ್ಲಾನಾಯ್ಕ ಸೂಚಿಸಿದರು.ಗಾಳಿ, ಮಳೆಗೆ ವಿವಿಧೆಡೆ 70ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಪರಿವರ್ತಕಗಳು ವಿಫಲವಾಗಿದ್ದು  ಕುಡಿಯುವ ನೀರು, ಪಂಪ್‌ಸೆಟ್‌ಗಳಿಗೆ ಸಮಸ್ಯೆಯಾಗದಂತೆ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಸ್ಕಾಂ ಎಇಇ ಭವಾನಿ ರಾವ್ ಮಾಹಿತಿ ನೀಡಿದರು.ತಾಲ್ಲೂಕಿನ ಹಲವು ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು ಸಂಚರಿಸಲು ಸಮಸ್ಯೆಯಾಗಿದೆ. ತಕ್ಷಣವೇ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಿ ಎಂದು ಸದಸ್ಯರಾದ ರಾಮಚಂದ್ರಪ್ಪ. ಶ್ರೀನಿವಾಸ್, ರವಿ ಒತ್ತಾಯಿಸಿದರು.ತಾ.ಪಂ. ಅಧ್ಯಕ್ಷೆ ಸುಮಾ ಸಿದ್ದಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ  ಸುಮಲತಾ ಸತೀಶ್. ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ ಪ್ರಕಾಶ್, ಕಾರ್ಯ ನಿಉರ್ವಾಹಕ ಅಧಿಕಾರಿ ಜಯಣ್ಣ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.