ಜನ ಒಪ್ಪಿದ ಯೋಜನೆ ಟೀಕೆ ಸಲ್ಲದು: ಸಿ.ಎಂ

ಹುಬ್ಬಳ್ಳಿ: ‘ಹಸಿದವರಿಗೆ ಅನ್ನ ಕೊಡು ವುದು ತಪ್ಪಲ್ಲ’ ಎಂದು ಹೇಳಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಅನ್ನಭಾಗ್ಯ ಮತ್ತು ಕ್ಷೀರ ಭಾಗ್ಯ ಯೋಜನೆಗಳನ್ನು ಬಲವಾಗಿ ಸಮರ್ಥಿಸಿಕೊಂಡರು.
ಕುಂದಗೋಳ ತಾಲ್ಲೂಕಿನ ಹೊಸಳ್ಳಿಯಲ್ಲಿ ಕೃಷಿ ಭಾಗ್ಯ ಹಾಗೂ ಕೃಷಿ ಯಂತ್ರಧಾರೆ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಸಂಶಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸರ್ಕಾರ ಜಾರಿಗೆ ತಂದಿರುವ ‘ಅನ್ನಭಾಗ್ಯ’ದಂತಹ ಯೋಜನೆಗಳು ಜನರ ಉದ್ಧಾರಕ್ಕೆ ಅಲ್ಲ’ ಎಂದು ಸಾಹಿತಿ ದೇ. ಜವರೇಗೌಡ ಅವರು ಸೋಮವಾರ ದಾವಣಗೆರೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಮುಖ್ಯಮಂತ್ರಿ ಈ ಪ್ರತಿಕ್ರಿಯೆ ನೀಡಿದರು.
‘ಅನ್ನಭಾಗ್ಯ ಯೋಜನೆ ಸರಿ ಎನ್ನುವವರು ಕೈ ಎತ್ತಿ’ ಎಂದು ಅವರು ಜನರಿಗೆ ಹೇಳಿದಾಗ, ಸಭಾಂಗಣದಲ್ಲಿದ್ದ ಸುಮಾರು ಮೂರು ಸಾವಿರ ಮಂದಿ ಕೈ ಎತ್ತಿದರು. ಇದನ್ನು ಗಮನಿಸಿದ ಅವರು ‘ಜನರು ಒಪ್ಪಿಕೊಂಡ ಯೋಜನೆಗಳನ್ನು ಟೀಕಿಸುವುದು ಸರಿಯಲ್ಲ. ಜನರನ್ನು ಸೋಮಾರಿಗಳನ್ನಾಗಿಸುವುದಕ್ಕಾಗಿ ಅಲ್ಲ; ಅವರಿಗೆ ಎರಡು ಹೊತ್ತು ಅನ್ನ ಕೊಡು ವುದಕ್ಕಾಗಿ ಈ ಯೋಜನೆ ಜಾರಿಗೆ ತರಲಾಗಿದೆ’ ಎಂದರು.
‘ಅನ್ನಭಾಗ್ಯ ಯೋಜನೆಯಿಂದ ರೈತರಿಗೆ ಅನುಕೂಲವೂ ಆಗಿದೆ. ಅವರು ಬೆಳೆದ ಅಕ್ಕಿ, ಜೋಳ, ರಾಗಿ ಇತ್ಯಾದಿಗಳನ್ನು ಸರ್ಕಾರ ಖರೀದಿಸುತ್ತಿದೆ. ಕ್ಷೀರಭಾಗ್ಯ ಯೋಜನೆಯಿಂದ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚುತ್ತದೆ. ಶಾಲೆಗಳಲ್ಲಿ ಹಾಜರಾತಿ ಹೆಚ್ಚುತ್ತಿದೆ’ ಎಂದರು.
ಟೀಕೆ ಸರಿಯಲ್ಲ (ವಿಜಯಪುರ ವರದಿ): ಇಲ್ಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ‘ಅನ್ನ ಭಾಗ್ಯ ಯೋಜನೆ ಕುರಿತು ಟೀಕೆ ಮಾಡುವುದು ಸರಿಯಲ್ಲ’ ಎಂದು ಯೋಜನೆಯನ್ನು ಸಮರ್ಥಿಸಿಕೊಂಡರು. ‘ಬಡವರಿಗೆ ಸಹಾಯ ಮಾಡುವುದು ತಪ್ಪಾ? ಉಚಿತ ವಾಗಿ ಅಕ್ಕಿ ಕೊಟ್ಟರೆ ಯಾರೂ ಸೋಮಾರಿ ಗಳಾಗುವುದಿಲ್ಲ. ಉಳಿದ ಅವಶ್ಯಕತೆಗಳಿಗೆ ಎಲ್ಲರೂ ದುಡಿಯುತ್ತಾರೆ. ಈ ಕುರಿತು ಟೀಕೆ ಸರಿಯಲ್ಲ’ ಎಂದರು.
ಕೇಂದ್ರದ ಓಲೈಕೆಗೆ ಟೀಕೆ (ಮಂಡ್ಯ ವರದಿ): ಕೇಂದ್ರ ಸರ್ಕಾರದ ಓಲೈಕೆಗಾಗಿ ಕೆಲ ಸಾಹಿತಿಗಳು ‘ಅನ್ನಭಾಗ್ಯ’ ಯೋಜನೆಯನ್ನು ಟೀಕಿಸುತ್ತಿದ್ದಾರೆ ಎಂದು ಕವಿ ನಾಗತಿಹಳ್ಳಿ ರಮೇಶ್ ಇಲ್ಲಿ ಟೀಕಿಸಿದರು.
‘ಶೂದ್ರರ ಮನೆಯಲ್ಲಿ ವಾರಾನ್ನ ತಿಂದು ಬೆಳೆದವರು. ಈಗ ‘ಅನ್ನಭಾಗ್ಯ’ದ ಬಗ್ಗೆ ಟೀಕೆ ಮಾತನಾಡುತ್ತಿದ್ದಾರೆ. ಇದು ಸರಿಯಲ. ಬಡವರ ಹಸಿವಿನ ಬಗ್ಗೆ ಬರೆದಿರುವ ಕುಂ. ವೀರಭದ್ರಪ್ಪ ಅವರು, ಜ್ಞಾನಪೀಠ ಪ್ರಶಸ್ತಿಗಾಗಿ ‘ಅನ್ನಭಾಗ್ಯ’ ಯೋಜನೆ ಟೀಕಿಸುತ್ತಿದ್ದಾರೆ’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.