ಮಂಗಳವಾರ, ಮೇ 17, 2022
25 °C

ಜಮೀನಿಗೆ ನೀರು ಕೊಡಿ, ಇಲ್ಲವೇ ವಿಷ ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುರುಗೋಡು: ನಮ್ಮ ಜಮೀನಿಗೆ ನೀರು ಕೊಡಿ ಇಲ್ಲವಾದರೆ ವಿಷ ಕೊಡಿ ಎಂದು ನಂ. ಡಿ.7 ಸೂಗೂರು ವಿತರಣಾ ನಾಲೆ ವ್ಯಾಪ್ತಿಯ ವಿವಿಧ ಗ್ರಾಮದ ರೈತರು ಪಟ್ಟಣದ ತುಂಗಭದ್ರಾ ಮೇಲ್ಮಟ್ಟ ಕಾಲುವೆ ಉಪ ವಿಭಾಗದ ಕಚೇರಿ ಎದುರು ಸೋಮವಾರ ಅನಿರ್ಧಿಷ್ಟ ಧರಣಿ ಆರಂಭಿಸಿದ್ದಾರೆ.ರೈತ ಮುಖಂಡ ಪಂಪಾಪತಿ, ಹಲವು ಬಾರಿ ರೈತರು ನಡೆಸಿದ ಹೋರಾಟಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವ ಬದಲು ಕೇಲವ ಭರವಸೆ ನೀಡಿದ್ದಾರೆ. ಕಾಲುವೆಯ ವ್ಯಾಪ್ತಿಯಲ್ಲಿ ನಿಯಂತ್ರಣ ವಿಲ್ಲದೆ ಅಕ್ರಮ ನೀರು ಬಳಕೆಯಾಗುತ್ತಿದೆ.ಇದನ್ನು ನಿಯಂತ್ರಿಸಲು ನೀರು ಬಳಕೆದಾರರ ಸಂಘದ ಕಾರ್ಯಕರ್ತರು ಇಲಾಖೆಗೆ ಸಹಕಾರ ನೀಡಿದರೆ, ಅಧಿಕಾರಿಗಳು ಒಳಗಿಂದೊಳಗೆ ಅಕ್ರಮ ನೀರು ಬಳಕೆಗೆ ಸಹಕರಿಸುತ್ತಾರೆ. ಕಾರಣ ಕಾಲುವೆಯಲ್ಲಿ ಸಮರ್ಪಕ ನೀರು ಸರಬರಾಜುಗೊಳ್ಳದೆ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆ ಒಣಗುತ್ತಿವೆ. ರೈತರ ಜಮೀನಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಒಣಗಿದ ಬೆಳೆ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.  ಇದಕ್ಕೆ ಮಳೆ ಬಾರದ ನೆಪ ಹೇಳಿ, ಧರಣಿ ಹಿಂಪಡೆಯುವಂತೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕುಮಾರ್ ಮನವಿಗೆ ಒಪ್ಪದ ರೈತರು ಧರಣಿ ಮುಂದುವರೆಸಿದರು.  ಮಾತುಕತೆ: ಕೆಲ ಸಮಯದ ನಂತರ ಸಹಾಯಕ ಆಯುಕ್ತ ಶಶಿಕಾಂತ್ ಸಿಂದಲ್ ಹಾಗೂ ವಿಶೇಷ ತಹಸೀಲ್ದಾರ್ ದಾಸಪ್ಪ, ಉಪ ತಹಸೀಲ್ದಾರ್ ಎಚ್. ವಿಶ್ವನಾಥ್ ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು. ಇಲಾಖೆ ಅಧಿಕಾರಿ ಭ್ರಷ್ಟರಾಗಿದ್ದಾರೆ. ಕಚೇರಿಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬರುವುದಿಲ್ಲ. ಅಕ್ರಮ ನೀರು ಬಳಕೆಗೆ ಅಳವಡಿಸಿದ ಪಂಪ್‌ಸೆಟ್ ವಶಪಡಿಸಿಕೊಳ್ಳಬೇಕು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು. ನೀರು ಸರಬರಾಜಿಗೆ ಸಿಸಿ ಕಾಲುವೆ ನಿರ್ಮಿಸಬೇಕು, ಕಾಲುವೆ ಉಸ್ತುವಾರಿಗೆ ಕಾಯಂ ಲಸ್ಕರ್ ಒದಗಿಸಬೇಕು, ಎಂಬ ಬೇಡಕೆಯನ್ನು ಮುಂದಿಟ್ಟಿರು.ರೈತರ ಅಹವಾಲು ಸ್ವೀಕರಿಸಿದ ಸಹಾಯಕ ಆಯುಕ್ತ ಮಾತನಾಡಿ, ಎಇಇ ಸುಬ್ರಮಣ್ಯರನ್ನು ಬೇರೆಡೆ ವರ್ಗಾಯಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ವಿತರಣಾ ಕಾಲುವೆ ಮತ್ತು ಬೆಳೆ ಪರಿಸ್ಥಿತಿ ವೀಕ್ಷಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಪರಿಶೀಲನೆ: ಆಯುಕ್ತರ ನೇತೃತ್ವದಲ್ಲಿ ಕಂದಾಯ, ನೀರಾವರಿ ಇಲಾಖೆ ಅಧಿಕಾರಿ ಮತ್ತು ನೀರು ಬಳಕೆದಾರರ ಸಂಘದ ಮುಖಂಡರ ತಂಡ ಕರೆಕರೆ, ಶ್ರೀನಿವಾಸ ನಗರ ಕ್ಯಾಂಪ್, ಲಕ್ಷ್ಮಿಪುರ ಗ್ರಾಮದ ಜಮೀನಿಗೆ ಭೇಟಿ ನೀಡಿ ಬೆಳೆ ಹಾಗೂ ಕಾಲುವೆ ಸ್ಥಿತಿಗತಿ ಪರಿಶೀಲನೆ ನಡೆಸಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.