ಬುಧವಾರ, ಏಪ್ರಿಲ್ 14, 2021
32 °C

ಜಿ.ಪಂ. ಸಭೆ: ಎಂಜಿನಿಯರ್ ಕಾರ್ಯ ವೈಖರಿಗೆ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಜಿಲ್ಲಾ ಪಂಚಾಯಿತಿಯ ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಾಮರಾಜ್ ಅವರು ಸಕಲೇಶಪುರ ವಿಭಾಗದ ಎಇಇ ನಾಗರಾಜ ಅವರ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ‘ಇವರು ಸುಳ್ಳು ಮಾಹಿತಿ ನೀಡಿ ಇಲಾಖೆಯ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ನೇರವಾಗಿ ಆರೋಪ ಮಾಡಿದ ಪ್ರಸಂಗ ನಡೆಯಿತು.ಜಿ.ಪಂ. ನೂತನ ಅಧ್ಯಕ್ಷ ಬಿ.ಡಿ. ಚಂದ್ರೇಗೌಡ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ಆಯೋಜಿಸಲಾಗಿತ್ತು. ಶಿಕ್ಷಣ ಇಲಾಖೆಯ ಸರದಿ ಬಂದಾಗ ಡಿಡಿಪಿಐ ಚಾಮರಾಜ್ ಅವರು ಇಲಾಖೆಯ ಪ್ರಗತಿ ಬಗ್ಗೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತೆ ಮತ್ತಿತರ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಕೊನೆಯಲ್ಲಿ ಶಾಲಾ ಕೊಠಡಿ ನಿರ್ಮಾಣದ ವಿಚಾರ ಬಂದಾಗ ಸಕಲೇಶಪುರ ಹಾಗೂ ಹಾಸನ ತಾಲ್ಲೂಕಿನಲ್ಲಿ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ. ಅದರಲ್ಲೂ ಸಕಲೇಶಪುರದಲ್ಲಿ ತೀರ ವಿಳಂಬವಾಗುತ್ತಿದೆ. ಎಂಜಿನಿಯರುಗಳನ್ನು ಕೇಳಿದರೆ ಸುಳ್ಳು ಮಾಹಿತಿ ನೀಡಿ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.ಎಇಇ ನಾಗರಾಜು ಅವರನ್ನು ಕರೆದು ಕೇಳಿದರೆ ‘ಹಾಗೇನೂ ಮಾಡಿಲ್ಲ, ಎಲ್ಲ ಕೆಲಸಗಳು ಅಂತಿಮ ಹಂತದಲ್ಲಿವೆ’ ಎಂದರು. ಈ ಉತ್ತರ ಚಾಮರಾಜ್ ಅವರನ್ನು ಸಿಟ್ಟಿಗೇಳುವಂತೆ ಮಾಡಿತು. ‘ನಾಗರಾಜ್ ಸುಳ್ಳು ಹೇಳುತ್ತಿದ್ದಾರೆ. ಉದಯವಾರ ಹಾಗೂ ಬೆಳಗೋಡು ಶಾಲಾ ಕಟ್ಟಡಗಳನ್ನು ಪೂರ್ಣಗೊಳಿಸಿರುವುದಾಗಿ ವರದಿ ನೀಡಿದ್ದಾರೆ. ಆದರೆ ಇಲ್ಲಿ ಒಂದುಕಡೆ ಕಿಟಿಕಿಗಳನ್ನು ಇನ್ನೂ ಜೋಡಿಸಿಲ್ಲ, ಇನ್ನೊಂದೆಡೆ ಛಾವಣಿಯೇ ಆಗಿಲ್ಲ. ಇವರು ನೀಡಿರುವ ದಾಖಲೆಗಳಿಗೂ ವಸ್ತು ಸ್ಥಿತಿಗೂ ಒಂದಿಷ್ಟೂ ತಾಳೆಯಾಗುವುದಿಲ್ಲ.ಒಣಗೂರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಸಮಸ್ಯೆ ಇತ್ತು. ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಭೂಮಿಯನ್ನು ಹಸ್ತಾಂತರಿಸಿ ಆರು ತಿಂಗಳಾಗಿದೆ. ಐದು ಲಕ್ಷ ರೂಪಾಯಿಯೂ ಬಿಡುಗಡೆಯಾಗಿದೆ. ಆದರೆ ಇನ್ನೂ ಕಾಮಗಾರಿ ಆರಂಭಿಸಿಲ್ಲ. ಕೇಳಿದರೆ ಅಪ್ರೂವಲ್  ಸಿಕ್ಕಿಲ್ಲ ಅಂತಾರೆ. ಆರು ತಿಂಗಳಾದರೂ ಬರಿಯ ಐದು ಲಕ್ಷ ರೂಪಾಯತಿ ಕಾಮಗಾರಿಗೆ ಅಪ್ರೂವಲ್ ಪಡೆಯಲು ಇವರಿಂದ ಆಗಿಲ್ಲ’ ಎಂದರು.ಸಭೆಯಲ್ಲೇ ಈ ಇಬ್ಬರು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೊನೆಯಲ್ಲಿ ಜಿ.ಪಂ. ಅಧ್ಯಕ್ಷ ಬಿ.ಡಿ. ಚಂದ್ರೇಗೌಡ ಹಾಗೂ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಟಿ. ಅಂಜನಕುಮಾರ್ ಅವರೂ ನಾಗರಾಜು ಅವರನ್ನು ತರಾಟೆಗೆ ತೆಗೆದುಕೊಂಡರು. ಈವರ್ಷದಲ್ಲಿ ಹಣ ಬಿಡುಗಡೆಯಾಗಿರುವ ಕಾಮಗಾರಿಗಳನ್ನು ಕಡ್ಡಾಯವಾಗಿ ಈ ವರ್ಷವೇ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿ ಬಾಕಿ ಉಳಿಸುವಂತಿಲ್ಲ. ಯಾವುದೇ ಇಲಾಖೆಯಲ್ಲಿ ಇಂಥ ಕಾಮಗಾರಿ ಉಳಿದು ಹಣ ವಾಪಸ್ ಆದರೆ ಅದಕ್ಕೆ ಆಯಾ ಇಲಾಖೆಯ ಮುಖ್ಯಸ್ಥರೇ ಜವಾಬ್ದಾರರಾಗಿರುತ್ತಾರೆ ಎಂಬ ಎಚ್ಚರಿಕೆಯನ್ನೂ ಅಂಜನ್ ಕುಮಾರ್  ನೀಡಿದರು.ಮಳೆಗಾಲ ಸಮೀಪಿಸುತ್ತಿದ್ದು, ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ‘ಪ್ರಸಕ್ತ ಇಲಾಖೆಯಲ್ಲಿ 25 ಸಾವಿರ ಮೆಟ್ರಿಕ್  ಟನ್ ದಾಸ್ತಾನು ಇದೆ. ಮುಂದಿನ ಹಂಗಾಮಿನಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ನಿರ್ದೇಶಕ ಶಿವರಾಜ್ ಭರವಸೆ ನೀಡಿದರು.ಕಳೆದಬಾರಿ ಗೊಬ್ಬರ ಪೂರೈಕೆಯಲ್ಲಿ ಕೊರತೆ ಉಂಟಾಗಿದ್ದಲ್ಲದೆ ಕಳಪೆ ಗುಣಮಟ್ಟದ ಗೊಬ್ಬರ ಬಂದಿರುವ ಬಗೆಗೂ ದೂರು ದಾಖಲಾಗಿತ್ತು. ಅನೇಕ ಕಡೆ ಗೊಬ್ಬರ ಕಾಳಸಂತೆಯಲ್ಲೂ ಮಾರಾಟವಾಗಿತ್ತು. ಈ ಬಾರಿ ಹಾಗಾಗಬಾರದು ಎಂದು ಎಚ್ಚರಿಕೆ ನೀಡಲಾಯಿತು.‘ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ 200 ಹಾಸ್ಟೆಲ್‌ಗಳಲ್ಲೂ ಅನೇಕ ಸಮಸ್ಯೆಗಳಿವೆ. ಅವರಿಗೆ ಸರಿಯಾಗಿ ಊಟ-ತಿಂಡಿ ನೀಡುತ್ತಿಲ್ಲ. ಅನೇಕ ಕಡೆ ಕೊಳೆತ ತರಕಾರಿ ಬಳಸಿ ಅಡುಗೆ ಮಾಡಲಾಗುತ್ತಿದೆ’ ಎಂದು ಜಿ.ಪಂ. ಅಧ್ಯಕ್ಷರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಹಾಸ್ಟೆಲ್‌ಗಳಲ್ಲಿ ಹಾಜರಾತಿ ವ್ಯವಸ್ಥೆ ಸರಿಯಾಗಿಲ್ಲ. ಮುಂದಿನ ದಿನದಲ್ಲಿ ಎಲ್ಲ ಹಾಸ್ಟೆಲ್‌ಗಳಿಗೂ ಹಟಾತ್ ಭೇಟಿ ನೀಡಲಾಗುವುದು. ಯಾವುದೇ ಲೋಪ ಕಂಡುಬಂದರೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಅಂಜನ್ ಕುಮಾರ್ ಎಚ್ಚರಿಕೆ ನೀಡಿದರು.ಹಳ್ಳಿ ಹಳ್ಳಿಗಳಿಗೆ ಅಬಕಾರಿ ಇಲಾಖೆಯಿಂದಲೇ ವಾಹನಗಳಲ್ಲಿ ಮದ್ಯ ಸರಬರಾಜು ಮಾಡಲಾಗುತ್ತಿದೆ ಎಂಬ ದೂರಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹೆಚ್ಚು ದಾಳಿಗಳನ್ನು ನಡೆಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಬಕಾರಿ ಇನ್‌ಸ್ಪೆಕ್ಟರ್ ಹೈದರ್ ಅಲಿಗೆ ಸೂಚನೆ ನೀಡಲಾಯಿತು.ಸಕಲೇಶಪುರ ತಾಲ್ಲೂಕಿನಲ್ಲಿ ಈಚೆಗೆ ನಡೆದ ಬೀಟೆ ಮರವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ಮಾಡಬೇಕು.ಸಾಮಿಲ್ ಮಾಲೀಕರಿಗೆ ದೂರವಾಣಿ ಕರೆ ಮಾಡಿದ ಅರಣ್ಯ ಇಲಾಖೆ ಅಧಿಕಾರಿ ಯಾರು ಎಂಬುದನ್ನು ಪತ್ತೆಮಾಡಬೇಕು ಎಂದು ಅಧ್ಯಕ್ಷರು ಒತ್ತಾಯಿಸಿದರು. ಮುಂದಿನ ಸಭೆಯಲ್ಲಿ ಮರಗಳ ಅಕ್ರಮ ಸಾಗಾಣಿಕೆ ಬಗ್ಗೆ ವಿಸ್ತೃತ ವರದಿ ನೀಡುವಂತೆಯೂ ಅವರು ಸೂಚಿಸಿದರು. ಬಿತ್ತನೆ ಆಲೂಗೆಡ್ಡೆ ನಗರಕ್ಕೆ ಬರಲಾರಂಭಿಸಿದ್ದು, ಇದರ ಗುಣಮಟ್ಟ ಪರೀಕ್ಷೆಗೆ ಕ್ರಮ ಕೈಗೊಳ್ಳಬೇಕು. ಉತ್ತಮ ಗುಣಮಟ್ಟದ ಸಾಕಷ್ಟು ಬಿತ್ತನೆ ಬೀಜ ಸಿದ್ಧಮಾಡಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಲಾಯಿತು. ಮೀನುಗಾರಿಕೆ ಇಲಾಖೆಯ ಕಾರ್ಯ ವೈಖರಿಗೆ ಆಕ್ಷೇಪ ವ್ಯಕ್ತವಾಯಿತು. ಜಿ.ಪಂ. ಉಪಾಧ್ಯಕ್ಷೆ ಪಾರ್ವತಮ್ಮ ನಂಜುಂಡಾಚಾರ್, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ಪರೀಕ್ಷೆಗೆ ಸಿದ್ಧತೆ ಪೂರ್ಣ:  ಏಪ್ರಿಲ್ 1ರಿಂದ ಎಸ್ ಎಸ್‌ಎಸಎಲ್‌ಸಿ ಪರೀಕ್ಷೆ ಆರಂಭವಾಗಲಿದ್ದು, ಪರೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಯಾಗಿದೆ ಎಂದು ಡಿಡಿಪಿಐ ಚಾಮರಾಜ್ ತಿಳಿಸಿದರು. ಈ ಬಾರಿ ಜಿಲ್ಲೆಯಲ್ಲಿ 24,307 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅವರಲ್ಲಿ 2709 ಮಂದಿ ಮರು ಪರೀಕ್ಷೆ ಬರೆಯುತ್ತಿದ್ದಾರೆ. 896 ಮಂದಿ ಖಾಸಗಿ ಶಾಲೆಗಳಿಂದ ಪರೀಕ್ಷೆಗೆ ಹಾಜರಾಗುವರು. ಈ ಬಾರಿ ಉತ್ತಮ ಫಲಿತಾಂಶ ಬರಬೇಕೆಂಬ ನಿಟ್ಟಿನಿಂದ ಎಲ್ಲ ಪ್ರಯತ್ನಗಳನ್ನೂ ಮಾಡಲಾಗಿದೆ’ ಎಂದು ಅವರು ತಿಳಿಸಿದರು.ಮಾರ್ಚ್ 17ರಿಂದ ಪಿಯುಸಿ ಪರೀಕ್ಷೆಗಳು ಆರಂಭವಾಗಲಿದ್ದು, 15ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಡಿಡಿಪಿಯು ಕೃಷ್ಣಯ್ಯ ತಿಳಿಸಿದರು. ಕಳೆದ ಬಾರಿ ಪಿಯುಸಿ ಫಲಿತಾಂಶಗಳಲ್ಲಿ ಜಿಲ್ಲೆ 16ನೇ ಸ್ಥಾನವಿತ್ತು ಈ ಬಾರಿ ಅದನ್ನು ಕನಿಷ್ಠ 12ನೇ ಸ್ಥಾನಕ್ಕೆ ಏರಿಸುವ ಗುರಿ ಹೊಂದಲಾಗಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.