ಗುರುವಾರ , ಜೂಲೈ 9, 2020
23 °C

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ

ಮಂಡ್ಯ: ಕುಡಿಯುವ ನೀರು ಸಮಸ್ಯೆಯಂತಹ ಸಮಸ್ಯೆಗಳ ವಿಷಯ ದಲ್ಲಿಯೂ ಅಧಿಕಾರಿಗಳು ಜನಪ್ರತಿನಿಧಿಗಳ ಮಾತಿಗೆ ಸ್ಪಂದಿಸುತ್ತಿಲ್ಲ ಎಂದು ಶುಕ್ರವಾರ ಜಿಲ್ಲಾ ಪಂಚಾಯಿತಿ ನೂತನ ಚುನಾಯಿತ ಸದಸ್ಯರು, ಮೊದಲ ಸಾಮಾನ್ಯ ಸಭೆಯಲ್ಲಿಯೇ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಬಸವರಾಜ್ ಅವರು, ಜಿಲ್ಲೆಯ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ತಲೆದೋರಿದೆ. ಕೊಳವೆಬಾವಿ ಕೊರೆಸುವ ಅಗತ್ಯ ಇದ್ದರೂ ಬಹುತೇಕ ಸಂದರ್ಭದಲ್ಲಿ ಅಧಿಕಾರಿಗಳು ಹಣ ಇಲ್ಲ, ಕೊರತೆ ಇದೆ ಎಂದು ಸಬೂಬು ಹೇಳುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.ಕುಡಿಯವ ನೀರು ಉದ್ದೇಶಕ್ಕಾಗಿ 100 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವರು ವಿಧಾನಸಭೆಯಲ್ಲಿ ಹೇಳುತ್ತಾರೆ. ಅಧಿಕಾರಿಗಳ ಉತ್ತರ ಅದಕ್ಕೆ ಭಿನ್ನವಾಗಿದೆ. ಕುಡಿಯುವ ನೀರು ವಿಷಯ ಜಿಲ್ಲಾ ಪಂಚಾಯಿತಿಗೆ ಬರುವು ದಿಲ್ಲ ಎಂದಾದರೂ ತಿಳಿಸಿದರೆ ಸುಮ್ಮನಿರ ಬಹುದು ಎಂದರು.ಒಂದು ವೇಳೆ ಹಣ ಬಿಡುಗಡೆ ಆಗಿದ್ದರೆ ಈ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ವಿಭಾಗ ಸ್ಥಾಪಿಸಿ. ಜವಾಬ್ದಾರಿಯುತ ಎಂಜಿನಿಯರ್ ಗಳನ್ನು ನೇಮಕ ಮಾಡಿ. ಇಂದು ಕ್ಷೇತ್ರದ ಜನರು ಪ್ರಮುಖವಾಗಿ ಉಲ್ಲೇಖಿಸುವ ಬೇಡಿಕೆ ಕುಡಿಯುವ ನೀರು ಆಗಿದೆ ಎಂದರು.ಅಧಿಕಾರಿಗಳ ಅಸಹಕಾರ ಕಾರಣ: ಜೆಡಿಎಸ್‌ನ ಡಾ. ಎಸ್.ಸಿ.ಶಂಕರೇಗೌಡ ಅವರು, ಎಂಜಿನಿಯರ್‌ಗಳು ಮತ್ತು ಪಿಡಿಒಗಳ ಅಸಹಕಾರವೇ ಬಹುತೇಕ ಕಡೆ ಸಮಸ್ಯೆಗಳು ಉಳಿಯಲು ಕಾರಣವಾಗಿವೆ ಎಂದು ನೇರವಾಗಿ ಟೀಕಿಸಿದರು.ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಕೈಗೊಂಡಿರುವ ಸ್ವಜಲಧಾರಾ ಯೋಜನೆಯನ್ನೇ ಉಲ್ಲೇಖಿಸಿದ ಅವರು, ಹೆಚ್ಚಿನ ಆಸಕ್ತಿ ನಡುವೆಯೂ ಪೂರ್ಣಪ್ರಮಾಣದಲ್ಲಿ ಎಲ್ಲರಿಗೂ ನೀರು ಕೊಡಲು ಆಗುತ್ತಿಲ್ಲ. ಇದಕ್ಕೆ ಎಂಜಿನಿ ಯರ್‌ಗಳೇ ಕಾರಣ. ಯಾವುದೇ ಎಂಜಿನಿಯರ್ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದರು.ಬೋರ್‌ವೆಲ್ ಕೆಲಸ ಮಾಡುತ್ತಿದೆಯಾ, ಮೀಟರ್ ರೀಡಿಂಗ್ ತೆರಿಗೆ ಸಂಗ್ರಹ ಕುರಿತು ಎಂಜಿನಿಯರ್‌ಗಳು, ಪಿಡಿಒಗಳು ಗಮನ ಹರಿಸುತ್ತಿಲ್ಲ. ಇದು, ನಮ್ಮ ಕೆಲಸವಲ್ಲ ಎಂದು ಅವು ಭಾವಿಸಿದಂತಿದೆ. ಸಮಸ್ಯೆ ಬಗೆಹರಿಸ ಬೇಕಾದರೆ ಮೊದಲು ಮೀಟರ್ ಅಳವಡಿಸಿ ಹಾಗೂಕನಿಷ್ಠ ನಿರ್ವಹಣೆಗಾದರೂ ತೆರಿಗೆ ಸಂಗ್ರಹಿಸಿ ಎಂದು ಸಲಹೆ ಮಾಡಿದರು.ಪಕ್ಷೇತರದ ಸದಸ್ಯ ಮರಿಗೌಡ ಅವರು, ಅರಕೆರೆ ಗ್ರಾಮದ ವ್ಯಾಪ್ತಿಯಲ್ಲಿ ಬೋರ್‌ವೆಲ್ ಕೊರೆದು ಸಂಪರ್ಕ ಕಲ್ಪಿಸಲು ಕೋರಿ ಗ್ರಾಮ ಪಂಚಾಯಿತಿ ಪತ್ರ ಬರೆದು ಆರು ತಿಂಗಳಾದರೂ ಸ್ಪಂದನೆ ಇಲ್ಲ ಎಂದರು. ಜೆಡಿಎಸ್ ಪಕ್ಷದ ಕುಮಾರ್ ಅವರು,  ಗ್ರಾಮ ಪಂಚಾಯತಿ ಹಂತದಲ್ಲಿ ತುರ್ತು ಸಂದರ್ಭದಲ್ಲಿ ಬಳಕೆಗೆ ಹೆಚ್ಚುವರಿಯಾಗಿ ಮೋಟಾರ್ ಕಾಯ್ದಿಡಬೇಕು. ಈಗ ಮೋಟಾರ್ ಕೆಟ್ಟರೆ ತ್ವರಿತವಾಗಿ ದುರಸ್ತಿ ಪಡಿಸುವ ವ್ಯವಸ್ಥೆಯೂ ಇಲ್ಲವಾಗಿದೆ ಎಂದರು.ಶೇ 50ಕ್ಕೂ ಅಧಿಕ ಮಹಿಳಾ ಸದಸ್ಯರು ಇದ್ದರೂ ಮೊದಲ ಸಭೆಯಲ್ಲಿ ಇಬ್ಬರು ಸದಸ್ಯೆಯರನ್ನು ಹೊರತು ಪಡಿಸಿದರೆ ಉಳಿದವರು ಮೌನದ ಮೊರೆ ಹೋಗಿದ್ದರು. ಕುಡಿಯುವ ನೀರು ಕೊರತೆ ವಿಷಯ ಚರ್ಚೆ ಆಗುವ ಸಂದರ್ಭದಲ್ಲಿಯೂ ಅವರು ಮೌನ ವಾಗಿದ್ದರು.ಮೊದಲ ಸಭೆ ಅರ್ಧಗಂಟೆ ವಿಳಂಬವಾಗಿ ಆರಂಭವಾದರೂ ಯಾವುದೇ ವಾಗ್ವಾದ, ಗೊಂದಲವಿಲ್ಲದೇ ನಡೆಯಿತು. ಸಾಮಾನ್ಯವಾಗಿ ಸಭೆಯಲ್ಲಿ ಸದಸ್ಯರು, ಅಧಿಕಾರಿಗಳಿಗೆ ಮಿನರಲ್ ನೀರು ಒದಗಿಸುವುದು ವಾಡಿಕೆ.  ಶುಕ್ರವಾರ ಕುಡಿಯವ ನೀರು ಸಮಸ್ಯೆ ಚರ್ಚೆಯಾಗುವಾಗ ನೀರಿನ ಜೊತೆಗೆ ತಂಪು ಪಾನೀಯವನ್ನು ಒದಗಿಸಿದ್ದು ವಿಶೇಷ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.