ಶನಿವಾರ, ಮೇ 28, 2022
31 °C

ಜಿಲ್ಲಾ ಪಂಚಾಯ್ತಿ ಮಹಿಳಾ ಸದಸ್ಯರು ಸ್ವತಂತ್ರರಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಎಲ್ಲ ರಂಗಗಳಲ್ಲಿ ಮಹಿಳೆಯರಿಗೆ ವಿಪುಲ ಅವಕಾಶಗಳನ್ನು ನೀಡಿದ್ದರೂ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಇದಕ್ಕೆ ಜಿಲ್ಲಾ ಪಂಚಾಯ್ತಿಯೂ ಉದಾಹರಣೆ ಯಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಜಯರಾಂ ವಿಷಾದಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಬುಧವಾರ ಆಯೋಜಿಸಿದ್ದ ಮಹಿಳೆಯರ ಮತ್ತು ಮಕ್ಕಳ ಸಾಗಾಟ ನಿವಾರಣೆ ಹಾಗೂ ಬಾಲ್ಯವಿವಾಹ ನಿಷೇಧದ ಬಗ್ಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರಿಗೆ ಅವಕಾಶಗಳೇ ಇಲ್ಲ ಎಂದು ದೂರುತ್ತಾರೆ. ಆದರೆ, ಸರ್ಕಾರ ಮತ್ತು ಸಮಾಜ ಹಲವಾರು ರೀತಿಯ ಸೌಲಭ್ಯಗಳನ್ನು ಮಹಿಳೆಯರಿಗೆ ನೀಡಿದೆ. ಆದರೆ, ಅದನ್ನು ಬಳಸಿಕೊಳ್ಳುವಲ್ಲಿ ಮಹಿಳೆಯರು ಹಿಂದೆ ಬಿದ್ದಿದ್ದಾರೆ. ಜಿಲ್ಲಾ ಪಂಚಾಯ್ತಿಯಲ್ಲಿ 34 ಸದಸ್ಯರ ಪೈಕಿ 18 ಮಹಿಳಾ ಸದಸ್ಯರಿದ್ದಾರೆ. ಆದರೆ, ಅವರಲ್ಲಿ ಬೆರಳಣಿಕೆಯಷ್ಟು ಸದಸ್ಯರು ಮಾತ್ರ ನಿಜವಾಗಿ ಸದಸ್ಯರ ಕೆಲಸವನ್ನು  ನಿರ್ವಹಿಸುತ್ತಾರೆ. ಉಳಿದ ಮಹಿಳಾ ಸದಸ್ಯರು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮಹಿಳಾ ಸದಸ್ಯರ `ಮನೆಯವರು~ ಪರೋಕ್ಷವಾಗಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ. ಮಹಿಳಾ ಸದಸ್ಯರ ಸಂಬಂಧಿಕರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸಲ್ಲದು. ಇನ್ನೂ ಮುಂದಾದರೂ ಮಹಿಳಾ ಸದಸ್ಯರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿ ಎಂದು ಆಶಯ ವ್ಯಕ್ತಪಡಿಸಿದರು.

ಬಾಲ್ಯದಲ್ಲಿ ವಿವಾಹ ಮಾಡುವುದರಿಂದ ಅದರ ದುಷ್ಟ ಪರಿಣಾಮ ಬಾಲಕಿಯ ಮೇಲೆ ಬೀಳುತ್ತದೆ. ಜತೆಗೆ, ದೈಹಿಕವಾಗಿ ಆಂಗವಿಕಲ ಮಕ್ಕಳು ಜನಿಸುತ್ತಾರೆ. ಮಹಿಳೆ ನಿಜವಾಗಿಯೂ ಸಬಲಳು. ಆದರೆ ಆಕೆಗೆ ಸರಿಯಾದ ರೀತಿಯಲ್ಲಿ ಸ್ಥಾನ ನೀಡದೆ ಆಕೆಯನ್ನು ಅಬಲೆಯನ್ನಾಗಿ ಮಾಡುತ್ತಿದ್ದಾರೆ. ಸಮಾಜ ಮತ್ತು ಸರ್ಕಾರ ನೀಡುವ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ನುಡಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ದೈನಂದಿನ ಕೆಲಸದ ನಡುವೆ ಗ್ರಾಮದಲ್ಲಿನ ನಿರ್ಗತಿಕರ ಮತ್ತು ಅನಾಥ ಮಕ್ಕಳ ಪಟ್ಟಿ ಮಾಡಿ ಅವರ ಬಗ್ಗೆ ನಿಗಾವಹಿಸಬೇಕು. ಅವರು ಕಾಣೆಯಾದರೆ ಪೋಲಿಸರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನಿಪುರಿ ಮಾತನಾಡಿ, ಮಹಿಳೆಗೆ ಇರುವ ಸ್ಥಾನಮಾನಗಳನ್ನು ನಿಜವಾಗಿಯೂ ನೀಡುವಲ್ಲಿ ನಾವು ಹಿಂದುಳಿದಿದ್ದೇವೆ. ಸಮಾಜ ಮತ್ತು ಕಾನೂನಿನಲ್ಲಿ ಮಹಿಳೆಗೆ ಹಲವಾರು ರೀತಿಯ ಸೌಲಭ್ಯ ನೀಡಿದ್ದರೂ ಆಕೆ ಇನ್ನೂ ಅಬಲೆ ಎಂದು ಬಿಂಬಿತವಾಗಿದ್ದಾಳೆ. ರಾಜಕೀಯವಾಗಿ, ಸಾಮಾಜಿಕವಾಗಿ,  ಆರ್ಥಿಕವಾಗಿ, ಶೈಕ್ಷಣಿಕವಾಗಿ ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆ ಸಾಧನೆ ಮಾಡಿದರೂ ರಕ್ಷಣೆ ಮತ್ತು ಗೌರವ ನೀಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಉಪವಿಭಾಗಾಧಿಕಾರಿ ನಾಗರಾಜ್ ಮಾತನಾಡಿ ಮಹಿಳೆಯನ್ನು ಸಬಲಿಕರಣ ಮಾಡಲು ಹಲವಾರು ರೀತಿಯ ಸೌಲಭ್ಯವನ್ನು ನೀಡಲಾಗಿದೆ. ಆದರೆ, ಸೌಲಭ್ಯಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಮಹಿಳೆ ಮತ್ತು ಮಕ್ಕಳ ಸಾಗಾಟ ಹಾಗೂ ಬಾಲ್ಯ ವಿವಾಹ ಸೂಕ್ಷ್ಮವಾದ ವಿಚಾರವಾಗಿದ್ದು, ಇದರ ಪರಿಹಾರಕ್ಕೆ ಸರ್ಕಾರ ಮಾತ್ರವಲ್ಲದೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.

ಗ್ರಾಮಾಂತರ ಪ್ರದೇಶದಲ್ಲಿರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸಮಸ್ಯೆಗಳನ್ನು ಆಲಿಸಿ  ಪರಿಹಾರ ಸೂಚಿಸುವ ಕಾರ್ಯ ಮಾಡಬೇಕಾಗಿದೆ. ಬಾಲ್ಯವಿವಾಹಗಳನ್ನು ತಡೆಯುವ ಮೂಲಕ ಪೋಷಕರಿಗೆ  ತಿಳಿವಳಿಕೆ ನೀಡಬೇಕು ಎಂದು ಕರೆ ನೀಡಿದರು.

ವೃತ್ತ ನೀರಿಕ್ಷಕ ಓಂಕಾರಮೂರ್ತಿ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಸಾಗಾಟ ಹಾಗೂ ಬಾಲ್ಯ ವಿವಾಹ ಸಮಾಜಕ್ಕೆ ಅಂಟಿದ ಶಾಪವಾಗಿದೆ. ಇಂತಹ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಲು ಸಾರ್ವಜನಿಕರ ಸಹಕಾರ ಆಗತ್ಯ. ಎಲ್ಲಿಯಾದರೂ ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ಹಾಗೂ ಬಾಲ್ಯ ವಿವಾಹದ ಬಗ್ಗೆ ಅನುಮಾನ ಮೂಡಿದರೆ ಪೋಲಿಸರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಂಜೇಗೌಡ ಪ್ರಸ್ತಾವಿಕ ಮಾತನಾಡಿ, ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿಗಳನ್ನು ತಡೆಯಲು ಇಲಾಖೆ ಜತೆಗೆ ಹಲವಾರು ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. 2011-12ರಲ್ಲಿ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ತಂಡಗಳನ್ನು ರಚಿಸುವ ಮೂಲಕ ಸಭೆಗಳನ್ನು ನಡೆಸಿ ಜನರಯಲ್ಲಿ ಜಾಗೃತಿ ಮೂಡಿಸಲಾಯಿತು. 2011-12ರಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ 6, ಚಳ್ಳಕೆರೆಯಲ್ಲಿ 10, ಹಿರಿಯೂರಿನಲ್ಲಿ 9, ಹೊಳಲ್ಕೆರೆಯಲ್ಲಿ 1, ಹೊಸದುರ್ಗದಲ್ಲಿ 2, ಮೊಳಕಾಲ್ಮೂರಿನಲ್ಲಿ 6 ಸೇರಿದಂತೆ ಒಟ್ಟು 34 ಬಾಲ್ಯ ವಿವಾಹ ತಡೆಗಟ್ಟಲಾಗಿದೆ ಎಂದು ತಿಳಿಸಿದರು.

ವರ್ಷ ಪ್ರಾರ್ಥಿಸಿದರು. ನಿರೂಪಣಾಧಿಕಾರಿ ಭಾಸ್ಕರ್ ವಂದಿಸಿದರು. ವೀಣಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.