ಸೋಮವಾರ, ಮಾರ್ಚ್ 1, 2021
30 °C
ಬರದ ಅಬ್ಬರ: ರೈತ ಸಮೂಹ ತತ್ತರ

ಜಿಲ್ಲೆಯಲ್ಲಿ ನಿಲ್ಲದ ರೈತರ ಆತ್ಮ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲೆಯಲ್ಲಿ ನಿಲ್ಲದ ರೈತರ ಆತ್ಮ ಹತ್ಯೆ

ವಿಜಯಪುರ: ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದೆ. 2015ರ ಜೂನ್‌ ತಿಂಗಳಿನಿಂದ ಆರಂಭಗೊಂಡ ರೈತರ ಆತ್ಮಹತ್ಯೆ, ದಿನಗಳು ಉರುಳಿದಂತೆ ಹೆಚ್ಚುತ್ತಿವೆ.2015ರ ಏಪ್ರಿಲ್‌ 1ರಿಂದ 2016ರ ಜನವರಿ 25ರವರೆಗೆ 36 ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆ. ಜ 24ರ ಭಾನುವಾರ ಇಂಡಿ ತಾಲ್ಲೂಕಿನ ಗೊಳಸಾರ ಗ್ರಾಮದ ರೈತ ಪ್ರಕಾಶ ಭೀಮಣ್ಣ ಮಸಳಿ ನೇಣಿಗೆ ಶರಣಾದ ಘಟನೆ ನಡೆದಿದೆ. ಈ ಪ್ರಕರಣ ಕೃಷಿ ಇಲಾಖೆಯಲ್ಲಿ ನೋಂದಣಿಗೊಂಡಿಲ್ಲ.2015ರ ಜೂನ್‌, ಜುಲೈ, ಆಗಸ್ಟ್‌, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿವೆ. ವರ್ಷವೊಂದರಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಆತ್ಮಹತ್ಯೆ ಮಾಡಿಕೊಂಡ ದಾಖಲೆ ಇದಾಗಿದೆ.‘ಸತತ ಬರದ ಹೊಡೆತಕ್ಕೆ ಜಿಲ್ಲೆಯ ರೈತ ಸಮೂಹ ಕಂಗೆಟ್ಟಿದೆ. ಹಿಂದಿನ ವರ್ಷವೂ ಬರ. ಈ ವರ್ಷವೂ ಮುಂಗಾರು–ಹಿಂಗಾರು ಎರಡೂ ವಿಫಲ. ಸಮೃದ್ಧ ಫಸಲು ರೈತರ ಮನೆ ಸೇರಲಿಲ್ಲ. ಸಾಲದ ಮೊತ್ತ ಹೆಚ್ಚಿತು. ಇದರ ಜತೆಗೆ ಬೆಲೆ ಕುಸಿತ. ವೈಯಕ್ತಿಕ ಕಾರಣಗಳಿಗೆ ಮಾಡಿಕೊಂಡ ಸಾಲ ತೀರಿ ಸಲಾಗದ ಸ್ಥಿತಿ ರೈತರದ್ದು. ಸಾಲಗಾರರಿಗೆ ಹೆದರಿ, ಮಾನಕ್ಕಂಜಿ ಪ್ರಾಣ ಬಿಡುವ ರೈತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿದೆ’ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು. ‘ರೈತರ ಆತ್ಮಹತ್ಯೆ ತಡೆಗಟ್ಟಲು ಜಿಲ್ಲಾಡಳಿತ ಸಭೆ ನಡೆಸಿದೆ. ಗ್ರಾಮೀಣ ಪ್ರದೇಶದಲ್ಲಿ ಕರಪತ್ರ ಹಂಚಿ ಧೈರ್ಯ ತುಂಬುವ ಕೆಲಸ ನಡೆಸಿದೆ. ಕೃಷಿ ಭಾಗ್ಯ ಯೋಜನೆ ಸೌಲಭ್ಯಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಹಮ್ಮಿ ಕೊಂಡಿದೆ. ಆದರೂ ಕೆಲ ರೈತರು ಸಾವಿಗೆ ಶರಣಾಗುವುದು ನಿಂತಿಲ್ಲ’ ಎನ್ನುತ್ತಾರೆ.22 ಕುಟುಂಬಕ್ಕೆ ಪರಿಹಾರ: ಜಿಲ್ಲಾಡಳಿತದ ಅಂಕಿ–ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 36. ಈಗಾಗಲೇ 22 ಕುಟುಂಬಗಳಿಗೆ ರಾಜ್ಯ ಸರ್ಕಾರ ₹ 5 ಲಕ್ಷ ಪರಿಹಾರ ಒದಗಿಸಿದೆ. ಆರಂಭದಲ್ಲಿ ₹ 1, 2 ಲಕ್ಷ ಪರಿಹಾರ ನೀಡಲಾಗಿತ್ತು. ನಂತರ ₹ 5ಲಕ್ಷ ಪರಿಹಾರವನ್ನು 22 ಕುಟುಂಬ ಗಳಿಗೂ ತಲುಪಿಸಲಾಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿ ಶಿವನಗೌಡ ಬಿರಾದಾರ.ಉಪವಿಭಾಗಾಧಿಕಾರಿ ನೇತೃತ್ವದ ‘ಆತ್ಮಹತ್ಯೆ ಪರಿಹಾರ ಪರಿಶೀಲನಾ ಸಮಿತಿ’ ರೈತರ ಎಲ್ಲ ಆತ್ಮಹತ್ಯೆ ಪ್ರಕರಣಗಳನ್ನು ದಾಖಲಿಸಿಕೊಂಡು ಆಗಾಗ್ಗೆ ಸಭೆ ಸೇರಿ ಪರಿಹಾರ ವಿತರಿಸುವ ನಿರ್ಣಯ ಕೈಗೊಳ್ಳುತ್ತದೆ. ಅದರಂತೆ ದಾಖಲಾದ ಪ್ರಕರಣಗಳಲ್ಲಿ ಸಮರ್ಪಕ ಕಾರಣ ಲಭ್ಯ ವಾಗದ 7 ಪ್ರಕರಣಗಳನ್ನು ತಿರಸ್ಕೃತಗೊಳಿಸಿದೆ ಎಂದು ಹೇಳಿದರು.ಸಾಲ ಮನ್ನಾ ಮಾಡಿ: ‘ರೈತರ ಆತ್ಮಹತ್ಯೆಗೆ ಇತಿಶ್ರೀ ಹಾಕಬೇಕು ಎಂದರೆ ಅದಕ್ಕಿರುವ ಒಂದೇ ಮಾರ್ಗ ಸಾಲ ಮನ್ನಾ. ಬೇರೆ ಇನ್ಯಾವುದೇ ಮಾರ್ಗವೂ ರೈತರ ಸಾವು ತಡೆಗಟ್ಟಲ್ಲ. ಬೆಳೆ ಕೈಕೊಟ್ಟಿದೆ. ಆದರೆ ಸಾಲ ಕೊಟ್ಟವರೂ ಬಿಡುತ್ತಿಲ್ಲ. ಸಾಲ ವಸೂಲಿಗೆ ಮನೆ ಬಳಿ ಬರುತ್ತಾರೆ.ಸಾಲಗಾರರ ಕಿರಿಕಿರಿ ತಾಳದೆ, ಮರ್ಯಾದೆಗೆ ಅಂಜಿ ರೈತರು ಸಾವಿಗೆ ಶರಣಾಗುತ್ತಿದ್ದಾರೆ. ರೈತರ ಸಂಕಷ್ಟ ತಪ್ಪಿ ಸಲು ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಲು ಮುಂದಾಗಬೇಕು’ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.