ಶುಕ್ರವಾರ, ಮೇ 14, 2021
32 °C

ಜಿಲ್ಲೆಯ ಎಲ್ಲೆಡೆ ರಾಮನಾಮ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ತಾಲ್ಲೂಕಿನಾದ್ಯಂತ ಶ್ರೀರಾಮನವಮಿ ಅಂಗವಾಗಿ ಪಾನಕ, ಮಜ್ಜಿಗೆ ವಿತರಣೆ, ಅಶ್ವತ್ಥಕಟ್ಟೆ ಪೂಜೆ ಹಾಗೂ ಮೊಳಕೆ ಪೈರಿಗೆ ಪೂಜೆ ಸಂಭ್ರಮದಿಂದ ನಡೆಯಿತು.ನಗರದ ನೆಲದಾಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮ, ಆಂಜನೇಯ ಸ್ವಾಮಿ  ವಿಗ್ರಹಕ್ಕೆ ಪೂಜೆ ಸಲ್ಲಿಸಲಾಯಿತು.

 

ರಾಜಘಟ್ಟದ ಆಂಜನೇಯಸ್ವಾಮಿ, ಶ್ರೀಚೌಡೇಶ್ವರಿ ಗುಡಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ದೇವಾಲಯಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ   ಪಾನಕ, ಕೋಸಂಬರಿ ಪ್ರಸಾದಗಳನ್ನು ವಿತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮೂರ್ತಿ ಪ್ರತಿಷ್ಠಾಪನೆ :ನಗರದ ನೆಲದಾಂಜನೇಯ ಸ್ವಾಮಿ ದೇವಾಲಯದಲ್ಲಿ ಆಲಿಂಗನ ಶ್ರೀರಾಮಾಂಜಿನೇಯ ಬೃಹತ್ ಮೂರ್ತಿಯ ಬಳಿ ಶ್ರೀರಾಮಾಂಜಿನೇಯ ಮೂರ್ತಿಯನ್ನು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಕುಟುಂಬದವರಿಂದ ಪ್ರತಿಷ್ಠಾಪಿಸಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.ಪೈರಿಗೆ ಪೂಜೆ: ಯುಗಾದಿ ಹಬ್ಬದ ದಿನ ಬಿತ್ತನೆ ಮಾಡಿದ ವಿವಿಧ ಬೀಜಗಳ ಪೈರಿಗೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಶ್ರೀರಾಮನವಮಿ ದಿನ ಪೂಜೆ ಸಲ್ಲಿಸಿ ಹೊರ ಬಿಡಲಾಯಿತು.ಈ ಪೈರಿನ ಪೂಜೆ ವಿಶೇಷ ಅಂದರೆ ಯುಗಾದಿ ಹಬ್ಬದ ದಿನದಂದು ರೈತರು ಮುಂದಿನ ಮಳೆಗಾದಲ್ಲಿ ಬಿತ್ತನೆಗಾಗಿ ಸಂಗ್ರಹಿಸಲಾದ ರಾಗಿ, ಅವರೆ ಕಾಳು, ಜೋಳ, ಉದ್ದು, ಅಲಸಂದೆ ಸೇರಿದಂತೆ ವಿವಿಧ ಬಿತ್ತನೆ ಬೀಜಗಳನ್ನು ಸುಮಾರು ಒಂದು ಅಡಿ ಸುತ್ತಳತೆಯ ಮರದ ಹಲಗೆ ಮೇಲೆ ಮಣ್ಣು, ಗೊಬ್ಬರದಲ್ಲಿ ಮಿಶ್ರಣ ಮಾಡಿ ಬಿತ್ತನೆ ಮಾಡಲಾಗುತ್ತಿದೆ. ಯುಗಾದಿ ಹಬ್ಬದ ನಂತರ ಒಂಭತ್ತು ದಿನಗಳಿಗೆ ಮೊಳಕೆ ಬಂದಿರುತ್ತವೆ. ಈ ಮೊಳಕೆಯ ಆಧಾರದ ಮೇಲೆ ಈ ವರ್ಷದ ಮಳೆ, ಬೆಳೆ ಯಾವ ರೀತಿ ಆಗಬಹುದು ಹಾಗೂ ಮಳೆಗಾಲದಲ್ಲಿ ಬಿತ್ತನೆಗಾಗಿ ಸಂಗ್ರಹಿಸಿರುವ ಬೀಜಗಳ ಮೊಳಕೆ ಬರುವ ಸಾಮಾರ್ಥ್ಯ ಎಷ್ಟರಮಟ್ಟಿಗೆ ಇವೆ ಎನ್ನುವುದು ಇದರಿಂದ ತಿಳಿಯುತ್ತದೆ ಎನ್ನುವ ನಂಬಿಕೆ ಕೃಷಿಕರದು.ಪಾನಕ- ಕೋಸಂಬರಿ ವಿತರಣೆದೇವನಹಳ್ಳಿ: ಶ್ರಿರಾಮನವಮಿ ಅಂಗವಾಗಿ ಭಾನುವಾರ ಪಟ್ಟಣದ ವಿವಿಧ ದೇವಾಲಯಗಳಲ್ಲಿ ಮತ್ತು ಪ್ರಮುಖ ಬೀದಿಗಳಲ್ಲಿ  ಮಜ್ಜಿಗೆ, ಪಾನಕ ಮತ್ತು ಕೋಸಂಬರಿ ವಿತರಣೆ ನಡೆಯಿತು.ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯ, ತರಗುಪೇಟೆ ಆಂಜನೇಯ ದೇವಾಲಯ, ರಂಗನಾಥ ಸ್ವಾಮಿ ದೇವಾಲಯ, ರಾಮಧೂತ ಅಚಲ ಮಂದಿರ, ಮುನೇಶ್ವರ ದೇವಾಲಯ, ತಾಲ್ಲೂಕಿನ ಸಾವಕನಹಳ್ಳಿ  ವೇಣುಗೋಪಾಲ ಸ್ವಾಮಿ ಹಾಗೂ ಮುತ್ತು ರಾಯಸ್ವಾಮಿ ಮತ್ತು ಲಕ್ಷ್ಮಿಪುರ ಆಂಜನೇಯ ಸ್ವಾಮಿ, ಸೀತಾರಾಮಾಂಜನೇಯ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಅಲಂಕಾರ ಮತ್ತು ವಿಶೇಷ ಪೂಜೆಗಳು ನಡೆಯಿತು. ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು.ಕೆಲವೆಡೆ ಅನ್ನ ಸಂತರ್ಪಣೆ ನಡೆಯಿತು. ಪಟ್ಟಣದ ರಾಮ ಅಚಲ ಮಂದಿರ ಬಳಿ  ಜೆ.ಸಿ. ಸಂಸ್ಥೆ ವತಿಯಿಂದ  ಸಾರ್ವಜನಿಕರಿಗೆ ಪಾನಕ ವಿತರಿಸಲಾಯಿತು.ಜೆ.ಸಿ. ನಿಕಟಪೂರ್ವ ಅಧ್ಯಕ್ಷ ಜಿ.ಎ.ರವೀಂದ್ರ ಮಾತನಾಡಿ, ಧಾರ್ಮಿಕ ಆಚರಣೆಗಳು ಕಡಿಮೆಯಾಗುತ್ತಿವೆ.  ಭಕ್ತಿ, ಸಾಮರಸ್ಯ, ಸದ್ಬಾವನೆ ಮೂಡಿಸಲು ಧಾರ್ಮಿಕ ಆಚರಣೆಗಳು ಅಗತ್ಯ ಎಂದರು. ಜೆ.ಸಿ.ರೇಟ್ ಅಧ್ಯಕ್ಷ ಭಾಗ್ಯ ರಮೇಶ್, ಯುವ ಜೆ.ಸಿ.ನವೀನ್, ನಿಕಟಪೂರ್ವ ಅಧ್ಯಕ್ಷ, ಡಿ.ಎನ್.ನಾರಾಯಣಸ್ವಾಮಿ, ಯೋಜನಾ ನಿರ್ದೇಶಕಿ ಆಶಾ ರವೀಂದ್ರ, ತಿಲಕ್, ವೀರೇಂದ್ರ, ವಕೀಲ ವಿಶ್ವನಾಥ್, ಜಿ.ಕೆ.ಕೃಷ್ಣಪ್ಪ, ಜೆ.ಸಿ.ಐ ಪದಾಧಿಕಾರಿಗಳು, ಗುಟ್ಟಹಳ್ಳಿ ಕುಟುಂಬ ಉಪಸ್ಥಿತರಿದ್ದರು.ನಿಸ್ವಾರ್ಥ ಜೀವನಕ್ಕೆ ಸಲಹೆದೊಡ್ಡಬಳ್ಳಾಪುರ: ನಿಸ್ವಾರ್ಥ ಪರವಾದ ಜೀವನದಿಂದ ಸಮಾಜಕ್ಕೆ ಉತ್ತಮ ಕೊಡುಗೆಗಳು ಲಭಿಸಲಿದ್ದು, ಸೇವಾಕಾರ್ಯಗಳನ್ನು ಮಾಡುವುದು ಸಹ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳುವ ಹಾದಿಯಾಗಿದೆ ಎಂದು  ಪುಷ್ಪಾಂಡಜ ಮಹಿರ್ಷಿ ಆಶ್ರಮದ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ಹೇಳಿದರು.ನಗರದ ಕುಚ್ಚಪ್ಪನಪೇಟೆ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಶ್ರೀರಾಮ ನವಮಿ ಹಾಗೂ ನವಗ್ರಹ ದೇವತಾ ಮೂರ್ತಿಗಳ ಪ್ರತಿಷ್ಠಾಪನಾ ಮಹೋತ್ಸವದ ವಿಶೇಷ ಪೂಜಾ ಕಾರ್ಯಕ್ರಮದ ಅಂಗವಾಗಿ ಕಿಮ್ಸ ಅಧ್ಯಕ್ಷ ಬಿ.ಮುನೇಗೌಡ ಮತ್ತು ಸಹೋದರರಿಂದ ಸುಮಂಗಲಿಯರಿಗೆ ಬಾಗಿನ  ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಕೃತಿಯನ್ನು ಎದುರಿಸಿ ಮಾನವ ಬದುಕಲಾರ. ಮಾನವನ ಜಾಗೃತಿಗಾಗಿ ದೈವತ್ವದ ಅಗತ್ಯವಿದ್ದು, ಸೇವಾ ಮನೋಭಾವದ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕಿದೆ. ನಮ್ಮ ಭಾರತೀಯ ಸಾಂಸ್ಕೃತಿಕ ಪರಂಪರೆ ವಿಶ್ವ ಶ್ರೇಷ್ಟವಾಗಿದೆ.

 

ಈ ದಿಸೆಯಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕಾಗಿದೆ ಎಂದರು. ಕಿಮ್ಸ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿದರು. ಪದ್ಮಾವತಿ ಮುನೇಗೌಡ ಮಹಿಳೆಯರಿಗೆ ಬಾಗಿನ ವಿತರಿಸಿದರು.ಸಮಾರಂಭದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ, ಮೂರು ಸಾವಿರ ಮಹಿಳೆಯರಿಗೆ ಬಾಗಿನ  ಕೊಡಲಾಯಿತು. ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರದ ಶ್ರೀ ಶಿವಸಾಯಿಬಾಬಾ, ನಗರ ಸಭೆ ಸದಸ್ಯ ಟಿ.ಎನ್.ಪ್ರಭುದೇವ್ ಚಂದ್ರಶೇಖರ್, ಜೆಡಿಎಸ್ ತಾಲ್ಲೂಕು ಮಾಜಿ ಅಧ್ಯಕ್ಷ ಅಪ್ಪಯ್ಯಣ್ಣ, ಜಿ.ಪಂ.ಮಾಜಿ ಸದಸ್ಯ ಎ.ನರಸಿಂಹಯ್ಯ, ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷ ಲಕ್ಷ್ಮೀಪತಯ್ಯ, ಪ್ರಧಾನ ಕಾರ್ಯದರ್ಶಿ  ಲಕ್ಷ್ಮೀನಾರಾಯಣ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.