ಗುರುವಾರ , ಜೂನ್ 24, 2021
27 °C

ಜೀತದಿಂದ ಮುಕ್ತಿ–ಷರೀಫ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕಸಭಾ ಚುನಾವ­ಣೆಗೆ ಟಿಕೆಟ್‌ ನಿರಾಕರಿಸಿರುವ ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್‌ ಷರೀಫ್, ‘ಜೀತ­ದಿಂದ ಮುಕ್ತನಾಗಿರುವುದಕ್ಕೆ ನನಗೆ ಸಂತೋಷ­ವಾಗಿದೆ’ ಎಂದಿದ್ದಾರೆ.



ಕಾಂಗ್ರೆಸ್‌ ಪಕ್ಷ ಮತ್ತು ಸರ್ಕಾರ­ಗಳಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿ­ಸಿ­­ರುವ ಹಿರಿಯ ಮುಖಂಡರಾಗಿರುವ ಜಾಫರ್‌ ಷರೀಫ್ ಬೆಂಗಳೂರು ಕೇಂದ್ರ ಲೋಕ­ಸಭಾ ಕ್ಷೇತ್ರದಿಂದ ಟಿಕೆಟ್‌ ಕೇಳಿ­ದ್ದರು. ಆದರೆ, ಅವರಿಗೆ ಟಿಕೆಟ್‌ ನಿರಾ­ಕರಿ­ಸಿದ ಹೈಕಮಾಂಡ್‌, ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರಿಜ್ವಾನ್‌ ಅರ್ಷದ್‌ ಅವರನ್ನು ಕಣಕ್ಕಿಳಿ­ಸುವ ತೀರ್ಮಾನವನ್ನು ಪ್ರಕಟಿಸಿದೆ.



ಇದರಿಂದ ಅಸಮಾಧಾನ­ಗೊಂಡಿ­ರುವ ಷರೀಫ್‌ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರುವ ಇಂಗಿತವನ್ನು ಹೊರ­ಹಾಕಿ­ದ್ದಾರೆ. ಆದರೆ, ಮೆಕ್ಕಾ ಯಾತ್ರೆಗೆ ಹೊರಟಿ­ರುವ ಅವರು, ಇದೇ 19ರಂದು ವಾಪಸಾದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳು­ವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರದ ಕುರಿತು ಷರೀಫ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿ ಪ್ರತಿಕ್ರಿಯೆ ಕೇಳಿದಾಗ, ‘ಇನ್ನೂ ಚುನಾವಣೆಯಲ್ಲಿ ಸ್ಪರ್ಧಿ­ಸುವ ಶಕ್ತಿ ನನಗೆ ಖಂಡಿತವಾಗಿಯೂ ಇದೆ. ಯಾವುದೇ ಕ್ಷೇತ್ರದಿಂದ ಬೇಕಾ­ದರೂ ಚುನಾವಣಾ ಕಣಕ್ಕಿಳಿಯುವ ತಾಕತ್ತು ಇದೆ’ ಎಂದು ಉತ್ತರಿಸಿದರು.



ಕಾಂಗ್ರೆಸ್‌ ಜೊತೆಗಿನ ಸುದೀರ್ಘ ಸಂಬಂಧ ಕಡಿದುಕೊಳ್ಳುವ ನಿರ್ಧಾರಕ್ಕೆ ಬಂದಿ­ದ್ದೀರಾ ಎಂದು ಕೇಳಿದಾಗ, ‘ಪಕ್ಷಕ್ಕೆ ವಿದಾಯ ಹೇಳುವ ಕಾಲ ಬಂದಿದೆ ಅನಿಸುತ್ತಿದೆ’ ಎಂದರು. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.­ದೇವೇಗೌಡರ ವಿರುದ್ಧ ಅಭ್ಯರ್ಥಿ ಹಾಕದಂತೆ ಪತ್ರ ಬರೆದಿದ್ದು ಮುಳುವಾಯಿತೇ ಎಂಬ ಪ್ರಶ್ನೆಗೆ, ‘ಗೌಡರು ಹಿರಿಯ ರಾಜಕಾರಣಿ. ಅವರಿಗೆ ಸ್ಪರ್ಧೆ ಒಡ್ಡುವುದು ಬೇಡ ಎಂಬ ಸದುದ್ದೇಶದಿಂದಷ್ಟೇ ಪತ್ರ ಬರೆದಿದ್ದೆ’ ಎಂದು ಹೇಳಿದರು.



ಋಣಮುಕ್ತ

ನಾನು ಇದುವರೆಗೂ ಪಕ್ಷದ (ಕಾಂಗ್ರೆಸ್‌) ಋಣದಲ್ಲಿ ಇದ್ದೆ. ಈಗ ದೇವರು ಆ ಋಣ­ದಿಂದ  ಮುಕ್ತಗೊಳಿಸಿದ್ದಾನೆ. ಇದರಿಂದಾಗಿ ದೇಶದ ಭವಿಷ್ಯದ ಬಗ್ಗೆ ಯೋಚಿಸಲು ನನಗೆ ಅವಕಾಶ ದೊರೆಯುತ್ತಿದೆ. ನಾನು ಮೆಕ್ಕಾಗೆ ಹೊರಟಿದ್ದೇನೆ. ಮುಂದಿನ ನಿರ್ಧಾರದ ಬಗ್ಗೆ ದೇವರ ಆಶೀರ್ವಾದ ಬೇಡುತ್ತೇನೆ.

-–ಜಾಫರ್‌ ಷರೀಫ್‌



ಜೆಡಿಎಸ್‌ ಟಿಕೆಟ್‌


ದೇವೇಗೌಡ ಮತ್ತು ಷರೀಫ್‌ ಅವರ ನಡುವೆ ದೀರ್ಘಕಾಲದ ರಾಜಕೀಯ ಸಂಬಂಧ ಇದೆ. ಇಬ್ಬರಿಗೂ ಇದು ಕೊನೆಯ ಚುನಾವಣೆ ಅನಿಸುತ್ತಿದೆ. ಜೆಡಿಎಸ್‌ ಸೇರಿ, ಚುನಾವಣೆಗೆ ನಿಲ್ಲುವ ಅವಕಾಶ ಷರೀಫ್‌ ಅವರಿಗೆ ಮುಕ್ತವಾಗಿದೆ.

–ಎಚ್‌.ಡಿ. ಕುಮಾರಸ್ವಾಮಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.