ಸೋಮವಾರ, ಏಪ್ರಿಲ್ 19, 2021
23 °C

ಜೀವನ ಕಲೆ ರೂಪಿಸುವ ಕಾರ್ಯ ತಳಮಟ್ಟದಿಂದ ನಡೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ಗಾಂಧಿಯಂತಹ ಧೀಮಂತ ದೇಶ ಭಕ್ತರ ಜೀವನ ಚರಿತ್ರೆಯನ್ನು ಶಿಕ್ಷಣದಲ್ಲಿ ಅಳವಡಿಸಿಕೊಂಡು ಆ ಮೂಲಕ ಜೀವನ ಕಲೆಯನ್ನು ರೂಪಿಸುವ ಕಾರ್ಯ ತಳಮಟ್ಟದಿಂದ ನಡೆಯಬೇಕು~ ಎಂದು ವಿಧಾನಸಭಾ ಉಪಸಭಾಧ್ಯಕ್ಷ ಯೋಗೀಶ್ ಭಟ್ ಸೋಮವಾರ ಇಲ್ಲಿ ತಿಳಿಸಿದರು.ನಗರದ ಕೆನರಾ ಹೆಣ್ಮಕ್ಕಳ ಪ್ರೌಢಶಾಲೆಯಲ್ಲಿ ಕೇರಳ ಗಾಂಧಿ ಸ್ಮಾರಕ ನಿಧಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೇರಳ ಸರ್ಕಾರದ ಯುವಜನ ಕಲ್ಯಾಣ ಇಲಾಖೆ ಮತ್ತು ರಾಷ್ಟ್ರೀಯ ಕೋಮು ಸೌಹಾರ್ದ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಕನ್ಯಾಕುಮಾರಿಯಿಂದ ಮಂಗಳೂರಿನವರೆಗೆ ಆಯೋಜಿಸಲಾದ ಅಂತರರಾಜ್ಯ ಗಾಂಧಿ ಶಾಂತಿ ಬಸ್ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಯುವ ಜನಾಂಗದ ಭವಿಷ್ಯ ಶಿಕ್ಷಣದಲ್ಲಿದೆ. ರ‌್ಯಾಂಕ್ ಮೂಲಕ ಬುದ್ಧಿಮಟ್ಟ ಅಳೆಯುವ ಮನ:ಸ್ಥಿತಿ ದೂರವಾಗಿ ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಗಾಂಧಿ ಕಂಡ ಹಿಂಸಾಮುಕ್ತ ಸಮಾಜದ ನಿರ್ಮಾಣ ನಮ್ಮ ಗುರಿಯಾಗಬೇಕು. ಎಲ್ಲಾ ಕಡೆಯೂ ಹಿಂಸಾತ್ಮಕ ವಾತಾವರಣ ಇರುವ ಸಂದರ್ಭದಲ್ಲಿ ಈ ಕಾರ್ಯಕ್ರಮ ಗಾಂಧಿಯ ಸಂದೇಶ ಸಾರುವಲ್ಲಿ ಯಶಸ್ವಿಯಾಗಿದೆ ಎಂದರು. ಯಾತ್ರೆಯ ಅಧ್ಯಕ್ಷ ಡಾ.ಎನ್.ರಾಧಕೃಷ್ಣನ್ ಮಾತನಾಡಿ `ದೇಶದ ಯುವ ಜನತೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಕಳೆದುಕೊಂಡು, ಕಾನೂನನ್ನು ತಾವೇ ಕೈಗೆತ್ತಿಕೊಳ್ಳುತ್ತಿದ್ದಾರೆ. ಆನೇಕ ಯುವಕರು ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಪಠ್ಯಪುಸ್ತಕಗಳಲ್ಲಿ ಗಾಂಧಿಯ ತತ್ವ ಸಿದ್ಧಾಂತಗಳು ಇಲ್ಲವಾಗಿದೆ. ಮಾದಕ ವಸ್ತುಗಳ ಸೇವನೆ ಜೀವನ ಶೈಲಿಯಾಗಿದೆ. ಸ್ತ್ರೀಯರಿಗೆ ರಕ್ಷಣೆಯಿಲ್ಲ, ಹಿರಿಯರಿಗೆ ಗೌರವವಿಲ್ಲದ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಎಲ್ಲಾ ಹಿಂಸೆಗಳಿಗೂ ಗಾಂಧಿಯ ಸಂದೇಶ ಉತ್ತರವಾಗಬಲ್ಲದು, ಅವರ ತತ್ವ ಸಿದ್ಧಾಂತಗಳ ಬಗ್ಗೆ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವುದು ಈ ಯಾತ್ರೆಯ ಮೂಲ ಉದ್ದೇಶ~ ಎಂದರು.40 ಸ್ವಯಂ ಸೇವಕರು ಮತ್ತು 20 ಗಾಂಧಿವಾದಿಗಳನ್ನು ಒಳಗೊಂಡ ಯಾತ್ರೆ  ಜೂನ್ 17ರಂದು ಕನ್ಯಾಕುಮಾರಿಯಿಂದ ಆರಂಭವಾಗಿ ದಕ್ಷಿಣ ಭಾರತದಲ್ಲಿ ಗಾಂಧೀಜಿ ಅವರು ಸಂಚರಿಸಿದ 68 ಸ್ಥಳಗಳಿಗೆ ಭೇಟಿ ನೀಡಿದೆ.ಗಾಂಧಿ ಸಾಹಿತ್ಯ, ಗಾಂಧಿ ಚರಕ ಮತ್ತು ಗಾಂಧಿ ಸಂದೇಶ ಸಾರುವ ಪ್ರಚಾರ ವಾಹನಗಳು ಯಾತ್ರೆಯಲ್ಲಿದ್ದವು. ಸುಮಾರು 1200ಕೀ.ಮಿ. ಸಂಚರಿಸಿ,16 ದಿನಗಳನ್ನು ಪೂರೈಸಿ ನಗರಕ್ಕೆ ಆಗಮಿಸಿದ ಯಾತ್ರೆ ಮೊದಲು ಕಂಕನಾಡಿಯ ಗರೋಡಿಯಲ್ಲಿರುವ ದೇಶದ ಏಕೈಕ ಗಾಂಧಿ ಮಂದಿರಕ್ಕೆ ಭೇಟಿ ನೀಡಿ, ಬಳಿಕ 1934ರಲ್ಲಿ ಗಾಂಧೀಜಿ ಅವರು ಶಂಕು ಸ್ಥಾಪನೆ ಮಾಡಿದ ಕೆನರಾ ಪ್ರೌಢ ಶಾಲೆಯ ಕೃಷ್ಣ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ಮುಕ್ತಾಯಗೊಂಡಿತು.ಕಾರ್ಯಕ್ರಮದಲ್ಲಿ ಶಾಸಕ ಯು.ಟಿ ಖಾದರ್, ಕೆನರಾ ಕಾಲೇಜಿನ ಅಧ್ಯಕ್ಷ ಎಸ್.ಎಸ್. ಕಾಮತ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಧ್ಯಾನ್‌ದೇವ್ ಶೆಣೈ, ಇಂಡಿಯಾ ಟುಡೇ ಸಂಪಾದಕ ವಿ.ಎ.     ಜಾರ್ಜ್, ಮಂಗಳೂರು ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ಜಿ.ಎನ್.ಧರ್ಮ, ಮಂಗಳೂರು ಮಹಾನಗರಪಾಲಿಕೆ ಮೇಯರ್ ಗುಲ್ಜಾರ್ ಭಾನು ಮೊದಲಾದವರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.