ಶುಕ್ರವಾರ, ಏಪ್ರಿಲ್ 23, 2021
31 °C

ಜೆಡಿಎಸ್, ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ತಾಲ್ಲೂಕಿನ ಬರ ಪರಿಹಾರ ಕಾಮಗಾರಿಗೆ ಸರ್ಕಾರದಿಂದ ಬಂದ ರೂ ಒಂದು ಕೋಟಿ ಅನುದಾನ ಹಂಚಿಕೆ ಕುರಿತು ಗುರುವಾರ ತಾ.ಪಂ. ಸಭಾಂಗಣದಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಸದಸ್ಯರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು.ಸಭೆಯು ಆರಂಭವಾಗುತ್ತಿದ್ದಂತೆ ಬರ ಪರಿಹಾರದ ಅನುದಾನವನ್ನು ತಾಲ್ಲೂಕು ಪಂಚಾಯಿತಿಯ 19 ಕ್ಷೇತ್ರಗಳಿಗೂ ಸಮನಾಗಿ ಹಂಚಬೇಕು ಎಂದು ಬಿಜೆಪಿ ಸದಸ್ಯರಾದ ವೀರಭದ್ರಯ್ಯ, ಹನುಮಂತಯ್ಯ, ರಮೇಶ್ ಹೇಳಿದರು. ಅವರ ಮಾತನ್ನು ಕೇಳಿದ ಕೂಡಲೇ ಕೆಂಡಾಮಂಡಲರಾದ ತಾ.ಪಂ. ಅಧ್ಯಕ್ಷೆ ಜಯಮ್ಮ, ಬಿಜೆಪಿ ಸದಸ್ಯರು ಇದುವರೆಗೂ ತಾ.ಪಂ. ವಿಚಾರದ ಯಾವುದೇ ಕಾರ್ಯಗಳಿಗೂ ಸ್ಪಂದಿಸಿಲ್ಲ. ಆದರೂ ಅನುದಾನವನ್ನು ಸಮನಾಗಿ ಹಂಚುವಂತೆ ಕೇಳುತ್ತಿರುವುದು ಸರಿಯಲ್ಲ ಎಂದು ಏರಿದ ಧ್ವನಿಯಲ್ಲಿ ಪ್ರತಿಕ್ರಿಯಿಸಿದರು.ಅನುದಾನ ಕೊಟ್ಟಿರುವುದು ಸರ್ಕಾರವೇ ಹೊರತು ತಾ.ಪಂ ಅಧ್ಯಕ್ಷರಲ್ಲ. ಸರ್ಕಾರದ ಹಣವನ್ನು ಎಲ್ಲ ಪಕ್ಷದ ಸದಸ್ಯ ಕ್ಷೇತ್ರಗಳಿಗೂ ಸಮನಾಗಿ ಹಂಚಿಕೆ ಮಾಡಬೇಕು. ತಾಲ್ಲೂಕು ಬರದಿಂದ ಬಳಲುತ್ತಿರುವಾಗಲೂ ಪಕ್ಷಭೇದ ಮಾಡುವುದು ಸರಿಯೇ? ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ಸದಸ್ಯರು ತಾಲ್ಲೂಕು ಪಂಚಾಯ್ತಿಯಲ್ಲಿ ಅಧಿಕಾರ ಇರುವುದು ನಮಗೆ. ನಮ್ಮ ಪಕ್ಷಕ್ಕೇ ಕೋರಂ ಇದೆ. ಹಾಗಾಗಿ ನಾವು ಹೇಳಿದಂತೆಯೇ ನಡೆಯಬೇಕು ಎಂದರು. ಆಗ ಬಿಜೆಪಿ ಸದಸ್ಯ ವೀರಭದ್ರಯ್ಯ, ಬರ ನಿವಾರಣೆಗೆ ಅನುದಾನ ಹಂಚಲು ಕೋರಂ ಅವಶ್ಯಕವೇ ಎಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಸದಸ್ಯ ಮಾರೇಗೌಡ, ಟಾಸ್ಕ್‌ಪೋರ್ಸ್ ಸಮಿತಿ ವಿಚಾರದಲ್ಲಿ ನಿಮಗೂ ಮತ್ತು ನಿಮ್ಮ ಮಂತ್ರಿಗಳಿಗೂ ತಾಲ್ಲೂಕು ಪಂಚಾಯ್ತಿಯ ಜೆಡಿಎಸ್ ಸದಸ್ಯರ ಬೆಂಬಲ ಬೇಕಿಲ್ಲ. ಆದರೆ ಅನುದಾನ ಮಾತ್ರ ಬೇಕೆ? ಎಂದು ಪ್ರಶ್ನಿಸಿದರು.ನಂತರ ಮತ್ತೊಬ್ಬ ಜೆಡಿಎಸ್ ಸದಸ್ಯ ಚಿನ್ನಗಿರಿಗೌಡ ಮಾತನಾಡಿ, ಬರ ಪರಿಹಾರ ಕಾಮಗಾರಿ ವಿಚಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಇಡೀ ತಾಲ್ಲೂಕು ಬರದಬೇಗೆಯಲ್ಲಿದೆ. ಇಂತಾ ಸಂದರ್ಭದಲ್ಲಿ ನಾವು ಪಕ್ಷತಾರತಮ್ಯ ಮಾಡದೆ ಬಂದಿರುವ ಅನುದಾನವನ್ನು ಎಲ್ಲ ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳಿಗೂ ಸಮನಾಗಿ ಹಂಚುವುದು ಸೂಕ್ತ ಎಂದು ಸಲಹೆ ನೀಡಿದರು.ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಮಾತನಾಡಿ, ಎಲ್ಲಾ ತಾ.ಪಂ ಕ್ಷೇತ್ರಗಳಿಗೂ ಕುಡಿಯುವ ನೀರು ಪೂರೈಸಲು ತಲಾ ರೂ 10 ಲಕ್ಷ ಹಣ ನೀಡಲಾಗುವುದು. ಇದಕ್ಕೆ ಎಲ್ಲ ಸದಸ್ಯರು ಮಾರ್ಗ ಸೂಚಿಯಂತೆ ಕಾಮಗಾರಿ ಪಟ್ಟಿ ನೀಡುವ ಮುಲಕ ಸಹಕಸಬೇಕು ಎಂದು ಮನವಿ ಮಾಡಿದರು. ತಹಸೀಲ್ದಾರ್ ಅರುಣಪ್ರಭಾ ಮಾತನಾಡಿ, 13ನೇ ಹಣಕಾಸು ಯೋಜನೆಯಡಿ ತಾಲ್ಲೂಕಿನ 31 ಗ್ರಾಮ ಪಂಚಾಯಿತಿಗಳಲ್ಲಿ ಶಾಶ್ವತ ಕುಡಿಯುವ ನೀರಾವರಿ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ತಾ.ಪಂ. ಅಧ್ಯಕ್ಷೆ ಜಯಮ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸವಿತಾ ಹಾಜರಿದ್ದರು.ಬರ ಪರಿಹಾರ ಕಾಮಗಾರಿಗೆ ಅನುದಾನ ಹಂಚುವ ವಿಚಾರದಲ್ಲಿ ಎರಡು ಪಕ್ಷಗಳ ನಡುವೆ ನಡೆದ ಮಾತಿನ ಚಕಮಕಿ, ಕೂಗಾಟಗಳೇ ಸಭೆಯ ವೇಳೆಯನ್ನೆಲ್ಲ ನುಂಗಿಹಾಕಿತು. ಇದರಿಂದ ಸಭೆಯಲ್ಲಿ ಹಾಜರಿದ್ದ ತಾಲ್ಲೂಕು ಮಟ್ಟದ ಇಲಾಖಾಧಿಕಾರಿಗಳು ಏನೂ ಕೆಲಸವಿಲ್ಲದೆ ಮೌನ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.