ಬುಧವಾರ, ಮೇ 18, 2022
25 °C

ಜೈಲಿನಲ್ಲಿ ಉಪಗ್ರಹ ಚಿಕಿತ್ಸೆ ಆರಂಭವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇವಲ ರಾಜಕೀಯ ಅಧಿಕಾರದಿಂದ ಗಣ್ಯರೆನಿಸಿಕೊಂಡವರು ಜೈಲು ಸೇರಿದ ತಕ್ಷಣ ಕಾಯಿಲೆ ಪೀಡಿತರಾಗಿ ಆಸ್ಪತ್ರೆ ಸೇರುವುದು ಕರ್ನಾಟಕದಲ್ಲಂತು ಸಾಮಾನ್ಯ ವಿದ್ಯಮಾನವಾಗಿರುವುದು ಹಾಸ್ಯಾಸ್ಪದ.ಕರ್ನಾಟಕ ಬಿಟ್ಟರೆ ಬೇರೆಲ್ಲೂ ಇಂತಹ ನಾಟಕ ಕಾಣಸಿಗದು. ಗಣ್ಯಾತಿಗಣ್ಯರು ಪಾಪ ಮಾಡಿ ಸೇರಿಕೊಂಡಿರುವ ನವದೆಹಲಿಯ ತಿಹಾರ್ ಜೈಲಿನಲ್ಲೂ ಇಂತಹ ಕಾಯಿಲೆ ಪ್ರಹಸನ ಕಂಡುಬರುತ್ತಿಲ್ಲ.ಅಂದರೆ ಕರ್ನಾಟಕದ ಈ ನಾಯಕರು ಆಂತರಿಕವಾಗಿ ಹಲವು ರೋಗಗಳಿಂದ ನರಳುತ್ತಿರುವವರು ಇಲ್ಲವೇ ಕಾನೂನಿನ ಕಣ್ಣಿಗೆ ಮಣ್ಣೆರಚುವ ಕಪಟ ನಾಯಕರು ಆಗಿರಲಿಕ್ಕೆ ಸಾಕು.

 

ಕರ್ನಾಟಕದಲ್ಲೇ ಅದರಲ್ಲೂ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇಂತಹ ಕಾಯಿಲೆಯ ವೈರಸ್ ಕಂಡುಬರುತ್ತಿರುವುದಕ್ಕೆ ಉನ್ನತ ವೈದ್ಯಕೀಯ, ನ್ಯಾಯಾಂಗ ಸದಸ್ಯರನ್ನೊಳಗೊಂಡ ತನಿಖೆ ನಡೆಸಲು ಇದು ಸಕಾಲವಾಗಿದೆ.

 

ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಸಾಮಾನ್ಯ ಸೌಕರ್ಯಗಳಿರುವ ಆಸ್ಪತ್ರೆ (ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವಂತೆ) ಇದೆ.

 

ವಿಪರ‌್ಯಾಸವೆಂದರೆ ಸಾಮಾನ್ಯ ಮಧುಮೇಹ, ಬಿಪಿ, ಸೊಂಟನೋವು, ವಾಂತಿ ಭೇದಿಯಂತಹ ಸಾಮಾನ್ಯ ಕಾಯಿಲೆಗಳಿಗೂ ಇಲ್ಲಿ ಚಿಕಿತ್ಸೆ ದೊರಕುವುದಿಲ್ಲವೇ? ಕುಗ್ರಾಮದ ನಾಟಿ ವೈದ್ಯರಲ್ಲೂ ಚಿಕಿತ್ಸೆ ಸಿಗುವ ಇಂತಹ ರೋಗಗಳಿಗೆ ಜೈಲಾಸ್ಪತ್ರೆಯಲ್ಲಿ ದೊರಕದಿರುವ ರಹಸ್ಯವನ್ನು ತಿಳಿಯಲಾರದಷ್ಟು ಮುಗ್ಧರಲ್ಲ ಕನ್ನಡಿಗರು.ಇದಕ್ಕೆ ಪರಿಹಾರವೆಂದರೆ, ಉಪಗ್ರಹ ಆಧಾರಿತ ಚಿಕಿತ್ಸಾ ವ್ಯವಸ್ಥೆ ವಿಶ್ವದ ಅನೇಕ ಕಡೆ ಈಗ ಜಾರಿಯಲ್ಲಿದೆ. ಅನೇಕ ಕ್ಲಿಷ್ಟ ಶಸ್ತ್ರಕ್ರಿಯೆಗಳನ್ನು ಉಪಗ್ರಹ ಮೂಲಕ ದೂರದ ಪ್ರದೇಶದಲ್ಲಿರುವ ರೋಗಿಗಳಿಗೆ ವೈದ್ಯರು ಮಾಡುತ್ತಿದ್ದಾರೆ.ಬೆಂಗಳೂರಿನ ನಾರಾಯಣ ಹೃದಯಾಲಯದಿಂದ ಈ  ತಂತ್ರಜ್ಞಾನ ಮೂಲಕ ಬಿಳಿಗಿರಿರಂಗಬೆಟ್ಟ ಸೇರಿದಂತೆ ಆನೇಕ ಕುಗ್ರಾಮಗಳ ರೋಗಿಗಳಿಗೆ ಖ್ಯಾತ ವೈದ್ಯಕೀಯ ತಜ್ಞರ ಸಲಹೆಯೊಂದಿಗೆ ಚಿಕಿತ್ಸೆ ನೀಡಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಬೆಂಗಳೂರಿನ ಹಲವಾರು ಸುಸಜ್ಜಿತ ಹೈ-ಟೆಕ್ ಆಸ್ಪತ್ರೆಗಳು ಈ ತಂತ್ರಜ್ಙಾನವನ್ನು ಅಳವಡಿಸಿವೆ. ರೋಗಿ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ, ಚಿಕಿತ್ಸೆಯ ವ್ಯವಸ್ಥೆ ಮಾಡಲು ಉಪಗ್ರಹ ಆಧರಿತ ಚಿಕಿತ್ಸಾ ವ್ಯವಸ್ಥೆಯಿಂದ ಸಾಧ್ಯವಿದೆ.

 

ಇದೇ ತಂತ್ರಜ್ಙಾನವನ್ನು ಪರಪ್ಪನ ಅಗ್ರಹಾರ ಜೈಲಿನ ಆಸ್ಪತ್ರೆಯಲ್ಲಿ ತುರ್ತಾಗಿ ಆರಂಭಿಸಬೇಕಿದೆ.ಇದರಿಂದ ಜೈಲಿನಲ್ಲಿರುವ ಕೈದಿಗಳು (ಮುಖ್ಯವಾಗಿ ಪಾಪ ಮಾಡಿಕೊಂಡು ಜೈಲು ಸೇರಿದ ಗಣ್ಯರಿಗೆ) ಯಾವುದೇ ಕಾಯಿಲೆ ಪೀಡಿತರಾದರೂ ಜೈಲಿನ ಆಸ್ಪತ್ರೆಯಲ್ಲೇ, ಉಪಗ್ರಹದ ಮೂಲಕ ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರ ಸಲಹೆ, ನೆರವಿನೊಂದಿಗೆ ಚಿಕಿತ್ಸೆ ಕೊಡಿಸಬಹುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.