ಶನಿವಾರ, ಮೇ 15, 2021
24 °C

ಜೈ ಜೈಲಮ್ಮ...!

ಬಿ.ಎನ್. ಮಲ್ಲೇಶ್ Updated:

ಅಕ್ಷರ ಗಾತ್ರ : | |

`ಜೈ ಜೈಲಮ್ಮೋ...~ ಅಂದ ಪರಮೇಶಿ. `ಯಾವುದೋ ಅದು ಹೊಸ ದೇವರು? ಸುಗ್ಲಮ್ಮನ ತಂಗಿನಾ?~ ತೆಪರೇಸಿ ನಗುತ್ತ ಕೇಳಿದ.`ತಂಗಿ ಅಲ್ಲಲೆ, ಅಕ್ಕ. ಗಣಿಕೋರರು ಸುಗ್ಲಮ್ಮನ ದೇವಸ್ಥಾನಕ್ಕೆ ಡೈನಮೈಟ್ ಇಟ್ಟು `ಢಂ~ ಅನ್ನಿಸಿದ್ರಲ್ಲ, ಆ ಅನ್ಯಾಯಕ್ಕೆ ಈಗ ಜೈಲಮ್ಮ ಸೇಡು ತೀರಿಸ್ಕಂತಿದಾಳೆ. ಅದ್ಕೆ ಜೈ ಜೈಲಮ್ಮ ಅಂದೆ. ದೇವರನ್ನ ತಡವಿಕೊಂಡ್ರೆ ಉಳೀತಾರಾ?~ ಎಂದ.

ತಕ್ಷಣ `ಒಂದು ನಿಮಿಷ~ ಅಂದ ಗುಡ್ಡೆ ಒಂದು ದಿಢೀರ್ ಚುಟುಕ ಹೊಸೆದ.ನಿನ್ನೆ ಕೆ.ಜಿ. ಗಟ್ಟಲೆ ಚಿನ್ನ

ಸುಖ ಸುಪ್ಪತ್ತಿಗೆಯ ಅರಮನೆ

ಇಂದು ಗ್ರಾಂ ಲೆಕ್ಕದ ಅನ್ನ

ಚಾಪೆ ದಿಂಬುಗಳ ಸೆರೆಮನೆ!`ವಾವ್, ಮಸ್ತ್ ಹೇಳಿದಿ ಮಗಾ, ಇದಕ್ಕೆ `ಲೈಫು ಇಷ್ಟೇನೆ~ ಅಂತ ಟೈಟ್ಲ್ ಕೊಟ್‌ಬಿಟ್ರೆ ಚೆನ್ನಾಗಿರುತ್ತೆ~ ಎಂದು ಗುಡ್ಡೆಯ ಡುಬ್ಬ ಚಪ್ಪರಿಸಿದ ಪರಮೇಶಿ. ಖುಷಿಯಾದ ಗುಡ್ಡೆ `ಮೀಸೆ ತಿರುವಿ ಕುಣಿದೋರೆಲ್ಲ ಮಣ್ಣಾದರು... ಗಣಿ ಮಣ್ಣಾದರು...~ ಎಂದ ರಾಗವಾಗಿ.

`ಕರೆಕ್ಟ್~ ಎಂದ ತೆಪರೇಸಿ, `ಈಗೀಗ ನಮ್ಮ ಕೋರ್ಟ್‌ಗಳೂ ಮಾತಾಡೋಕೆ ಶುರು ಮಾಡಿದ ಮೇಲೆ ಕರಿ ಕೋಟುಗಳ ಖದರ‌್ರೇ ಬದಲಾಯ್ತು ಕಣ್ರಲೆ, ಯಾರ ಬಾಯಲ್ಲಿ ಕೇಳು ಜಮೀನು- ಜಾಮೀನು, ಬೇಲು-ಜೈಲು! ಘಟಾನುಘಟಿಗಳೆಲ್ಲ ಗಡಗಡ!~ ಎಂದು ನಕ್ಕ.`ಈಗ ತಿಹಾರ್ ಜೈಲಿನಾಗೆ ಆರು ಜನ ಎಂ.ಪಿ.ಗಳು ಮುದ್ದೆ... ಅಲ್ಲಲ್ಲ ಗೋಧಿ ರೊಟ್ಟಿ ಮುರೀತಾ ಕೂತಿದಾರಂತೆ. ಇಲ್ಲಿ ನಮ್ಮ ಒಬ್ಬ ಶಾಸಕ ಕಂ ಮಾಜಿ ಮಂತ್ರಿ ಜೈಲು ಸೇರಿ ಆತು. ಕ್ಯೂನಲ್ಲಿ ಇನ್ನು ಯಾರ‌್ಯಾರಿದಾರೋ...! ಎಂದಳು ಮಿಸ್ಸಮ್ಮ.`ಎಲ್ರಿಗೂ ಈಗ ಜಾಮೀನು ಸಿಗೋದೇ ದೊಡ್ಡ ಸಮಸ್ಯೆ ಆಗೇತಪ. ಇರೋವು, ಇಲ್ದೆ ಇರೋವು ನೂರೆಂಟು ಕಾಯಿಲೆ ನೆಪ ಹೇಳಿದ್ರೂ ಕೋರ್ಟ್‌ಗಳು `ಡೋಂಟ್ ಕೇರ್~ ಅಂದ್ರೆ ಹೆಂಗಲೆ? ಹೋಗ್ಲಿ ಯಾವ ಕಾಯಿಲೆಗೆ ಜಾಮೀನು ಸಿಗುತ್ತೆ ಅಂತನಾದ್ದೂ ಹೇಳಿದ್ರೆ ಅದೇ ಕಾಯಿಲೆ ಅಂತ ಡಾಕ್ಟ್ರು ಸರ್ಟಿಫಿಕೇಟ್ ಮಾಡಿಸ್ಕಂಡು ಬರಬಹುದಪ್ಪ ಅಲ್ವಾ?...~ ತೆಪರೇಸಿ ಹೇಳಿದಾಗ, `ಯಾವುದಾರ ಫಾರಿನ್ ಕಾಯಿಲೆ ಹೆಸರು ಹೇಳಿದ್ರೆ ಹೆಂಗೆ? ಜಡ್ಜ್‌ಗಳು ಯಾವತ್ತೂ ಕೇಳಿರಬಾರ್ದು ಅಂಥದ್ದು. ಆಗ ತೆಲಿ ಕೆಟ್ಟು ` ಮೊದ್ಲು ಹೋಗೋ ಮಾರಾಯ, ಅದು ನಮಗೂ ಅಂಟಿಕೊಂಡಾತು~ ಅಂತ ಜಾಮೀನು ಕೊಟ್ಟು ಕಳಿಸ್ತಾರೆ ನೋಡು~ ಗುಡ್ಡೆ ಕೀಟಲೆ ಮಾಡಿದ.`ಸುಮ್ನೆ ಅದೆಲ್ಲ ಯಾಕಪ, `ಜಾಮೀನು ಪ್ರಾಪ್ತಿ ಹೋಮ~ ಮಾಡಿಸಿ ತಲೆ ಬೋಳಿಸ್ಕಂಡ್ರೆ ಗ್ಯಾರಂಟಿ ಜಾಮೀನು ಸಿಕ್ಕೇ ಸಿಗುತ್ತೆ ಅಂದ್ರಂತೆ ನಮ್ಮ ಕೃಷ್ಣಯ್ಯ ಶೆಟ್ರು. ಯಾಕೆ ಮಾಡಿಸ್ಬಾರ್ದು?~ ಎಂದ ದುಬ್ಬೀರ.`ಈಗ ನಮ್ಮ ಕುಮಾರಣ್ಣಂಗೆ ಜಾಮೀನು ಸಿಗ್ತಲ್ಲ, ಅವರು ಯಾವ ಹೋಮ ಮಾಡಿಸಿದ್ರಂತೆ?~`ನ್ಯಾಯಾಧೀಶರ ಮನಃ ಪರಿವರ್ತನಾ ಹೋಮ!~ ದುಬ್ಬೀರ ಹೇಳಿದಾಗ ಎಲ್ಲರೂ ನಕ್ಕರು.`ಅದೂ ಬೇಕಿಲ್ಲ ಕಣ್ರಲೆ, ಸುಮ್ನೆ `ಜೈಲುಗಳ ಸರ್ವನಾಶ ಹೋಮ~ ಮಾಡಿಸಿಬಿಟ್ರೆ ಸ್ವಚ್ಛ ಆಗ್ತತಿ ನೋಡು. ಜೈಲೇ ಇಲ್ಲದ ಮೇಲೆ ಬೇಲ್ ಯಾಕೆ?~ ಗುಡ್ಡೆ ಹೋಲ್‌ಸೇಲ್ ಮಾತಾಡಿದ.`ಜೈಲುಗಳು ಇರಬೇಕು ಗುಡ್ಡೆ, ಆದ್ರೆ ಮಾಡ್ರನ್ ಆಗಬೇಕು. ಜುಜುಬಿ ಕಳ್ಳರಿಗೆ ಬೇಕಾದ್ರೆ ಮಾಮೂಲಿ ಸೆಲ್‌ಗಳು ಇರ‌್ಲಿ. ಆದ್ರೆ ದೊಡ್ಡೋರಿಗೆ? ಅದ್ರಲ್ಲೂ ರಾಜಕಾರಣಿಗಳಿಗೆ? ಸ್ಪೆಶಲ್ ಸೆಲ್‌ಗಳು ಬೇಕೇಬೇಕು. ಬಸ್ಸಲ್ಲಿ, ರೈಲಲ್ಲಿ, ವಿಮಾನದಾಗೆಲ್ಲ ಎಮ್ಮೆಲ್ಲೆ-ಎಂಪಿಗಳಿಗೆ ಸ್ಪೆಶಲ್ ಸೀಟು ಇರೋವಾಗ ಜೈಲಲ್ಲಿ ಯಾಕಿರಬಾರ್ದು? ಜೈಲಲ್ಲೂ ಶಾಸಕರ ಸೆಲ್, ಮಂತ್ರಿಗಳ ಸೆಲ್, ಮುಖ್ಯಮಂತ್ರಿಗಳ ಸೆಲ್ ಅಂತ ಯಾಕೆ ಕಟ್ಟುಸ್ಬಾರ್ದು?~ ಪರಮೇಶಿ ಕಳಕಳಿ ವ್ಯಕ್ತಪಡಿಸಿದಾಗ `ಹಾಗೇ ಫ್ಯಾಮಿಲಿ ಸೆಲ್‌ಗಳೂ ಇರ‌್ಲಿ~ ಎಂದ ಗುಡ್ಡೆ ನಗುತ್ತ.`ನಮ್ಮ ಗಾಂಧಿವಾದಿ ಅಣ್ಣಾ ಹಜಾರೆ ಬಂದೇ ಬಂದ್ರು ಕಣಯ್ಯ, ಭ್ರಷ್ಟರೆಲ್ಲ ಜೈಲು ಸೇರಂಗಾತು ಅಲ್ವಾ?~ ಪರಮೇಶಿಗೆ ಖುಷಿ.`ಯಾಕೆ ನಮ್ಮ ಮನಮೋಹನಸಿಂಗು ಗಾಂಧಿವಾದಿ ಅಲ್ಲೇನು?~ ಆದ್ರೆ ಅವರ ಗಾಂಧಿ ಬೇರೆ ಅಷ್ಟೆ...~ ತೆಪರೇಸಿ ನಕ್ಕ.`ಏನೇ ಆಗ್ಲಿ, ನಮ್ಮ ಗಣಿ ಧಣಿಗೆ ಹಿಂಗೆ ಆಗಬಾರದಿತ್ತು. ಪಾಪ `ಟನ್‌ಗಟ್ಲೆ ಅದಿರು ತೆಗೆದ್ರೂ ಗ್ರಾಂ ಗಟ್ಲೆ ಅನ್ನವೇ ಗತಿ~ ಅನ್ನಂಗಾತ್ರಲ್ಲೋ...~ ಮಿಸ್ಸಮ್ಮ ಕನಿಕರ ವ್ಯಕ್ತಪಡಿಸಿದಳು.`ಗಣಿ ಧಣಿ ಅಂದ್ರೆ ನಿಜಕ್ಕೂ ಚಿನ್ನದ ಗಣೀನೇ ಮಿಸ್ಸಮ್ಮ, ಮುತ್ತು, ರತ್ನ, ವಜ್ರ, ವೈಢೂರ‌್ಯ, ಕೆಜಿ ಗಟ್ಲೆ ಚಿನ್ನ... ಸಿಬಿಐ ನೋರು ತೆಗೆದಷ್ಟೂ ಸಿಗ್ತಾನೇ ಇತ್ತಂತೆ. ಕೇರಳದ ಅನಂತಪದ್ಮನಾಭನೂ ಇವರ ಮುಂದೆ ಬಿದ್ದೋದ ಅನ್ಸುತ್ತಪ್ಪ...~ ಗುಡ್ಡೆ ವರ್ಣಿಸಿದ.ಆಗ ಯಬಡೇಶಿ `ನಿಮಗೆ ಗೊತ್ತಿಲ್ಲೇನು? ನಮ್ಮ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರು ರಾಮಚಂದ್ರಪ್ಪ ಅದಾರಲ್ಲ, ಅವ್ರ, ನನಗೆ ಈ ಜುಜುಬಿ ನಿಗಮ ಬ್ಯಾಡ, `ಗಣಿಧಣಿ ಐಶ್ವರ್ಯ ಉಸ್ತುವಾರಿ ಪ್ರಾಧಿಕಾರ~ ಅಂತ ಮಾಡಿ ಅದಕ್ಕೆ ನನ್ನ ಅಧ್ಯಕ್ಷನನ್ನಾಗಿ ಮಾಡ್ರಿ ಅಂತ ಮುಖ್ಯಮಂತ್ರಿಗೆ ಗಂಟು ಬಿದ್ದಾರಂತೆ ನೋಡು...~ ಎಂದ ನಗುತ್ತ.

`ಓ ಹಂಗಾ? ಏನರೆ ಆಗ್ಲೆಪ, ಇಷ್ಟು ದಿನಕ್ಕೆ ಮೊನ್ನೆ, ನಮ್ಮ ಕಟ್ಟಾ ಸಾಹೇಬ್ರು ಜೈಲಿನಲ್ಲಿ ಕಣ್ತುಂಬ ನಿದ್ದಿ ಮಾಡಿದ್ರಂತೆ...~ ದುಬ್ಬೀರ ಹೇಳಿದಾಗ `ಹೌದಾ? ಅದ್ಯಾಕಂತೆ?~ ಗುಡ್ಡೆ ಪ್ರಶ್ನಿಸಿದ.`ಏನೋ ಒಂಥರ ಖುಷಿ, ಸಮಾಧಾನ ಅವರಿಗೆ. ನಾನೊಬ್ನೆ ಜೈಲು ಪಾಲಾಗಿಲ್ಲ, ಈಗ ಗಣಿಧಣಿ ಸ್ನೇಹಿತ್ರೂ ಬಂದಿದಾರೆ. ಅವರ‌್ನೂ ಪರಪ್ಪನ ಅಗ್ರಹಾರಕ್ಕೆ ಕರೆಸ್ಕೊಂಡ್‌ಬಿಟ್ರೆ ಕಷ್ಟ ಸುಖ ಮಾತಾಡ್ತಾ ನೆಮ್ಮದಿಯಾಗಿ ದಿನ ಕಳೀಬಹುದು ಅಂತ ಲೆಕ್ಕ ಹಾಕ್ಕೊಂಡು ಖುಷಿಯಾಗಿ ನಿದ್ದೆ ಮಾಡಿದ್ರಂತೆ...~`ಅವರ ಮಗ ಜೈಲಲ್ಲೇ ಗಣೇಶನ ಹಬ್ಬ ಮಾಡಿದ್ರಂತೆ? ಗಣೇಶನಿಗೆ ವಿಶೇಷ ಪ್ರಾರ್ಥನೆ ಬೇರೆ ಸಲ್ಲಿಸಿದ್ರಂತಪ್ಪ...~

`ಹೌದಾ? ಏನದು ಪ್ರಾರ್ಥನೆ?~

`ಎಷ್ಟಿದ್ದರೇನು ಧನ ಕನಕ

ಜೈಲಿನಲ್ಲೇ ನಿನ್ನ

ಪೂಜಿಸುವಂತಾಯಿತೆ ಬೆನಕ

ಬಿಡಬೇಡ ನನ್ನ ಇಲ್ಲಿ ಕೊನೆತನಕ~

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.