ಗುರುವಾರ , ಏಪ್ರಿಲ್ 22, 2021
22 °C

ಟೇಕ್ವಾಂಡೊ ಸಂಸ್ಥೆಗಳ ಕಿತ್ತಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲೆಬೆನ್ನೂರು, ದಾವಣಗೆರೆ: ಈಚೆಗೆ ಇಲ್ಲಿ ನಡೆದ 30ನೇ ರಾಜ್ಯ ಟೇಕ್ವಾಂಡೊ ಚಾಂಪಿಯನ್‌ಷಿಪ್‌ಗೆ ಸಂಬಂಧಪಟ್ಟಂತೆ ಕೆಲವು ಪಟ್ಟಭದ್ರರು ನಿರಾಧಾರ ಆರೋಪ ಮಾಡಿ, ರಾಜ್ಯದಾದ್ಯಂತ ಇರುವ ಟೇಕ್ವಾಂಡೊ ಅಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೈಯದ್ ಮನ್‌ಫೂಶ್ ಹೇಳಿದ್ದಾರೆ.ಈ ರೀತಿ ಆರೋಪ ಮಾಡಿರುವವರನ್ನು ಭಾರತೀಯ ಟೇಕ್ವಾಂಡೊ ಫೆಡರೇಷನ್‌ನವರು ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಿದ್ದಾರೆ. ಇಲ್ಲಿ ನಡೆದ ರಾಜ್ಯ ಚಾಂಪಿಯನ್‌ಷಿಪ್‌ಗೆ ಕಂಡು ಬಂದ ಉತ್ತಮ ಸ್ಪಂದನದಿಂದ ಅಸೂಯೆಯಿಂದ  ಇದನ್ನು ತಡೆಯಲು ವಿಫಲ ಯತ್ನ ನಡೆಸಿದ್ದರು. ಈಗ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದೂ ಮನ್‌ಫೂಶ್ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.ರಾಷ್ಟ್ರೀಯ ಫೆಡರೇಷನ್‌ನಿಂದ ತಮ್ಮ ಸಂಸ್ಥೆಯೇ ಅಧಿಕೃತ ಎಂಬ ಮಾನ್ಯತೆ ಸಿಕ್ಕಿದ್ದು, ರಾಜ್ಯ ಚಾಂಪಿಯನ್‌ಷಿಪ್ ನಡೆಸಲು ತಮಗೆ ಬಂದಿರುವ ಅಧಿಕೃತ ಪತ್ರವನ್ನು ಕೂಡಾ ಮನ್‌ಫೂಶ್ ಪತ್ರಕರ್ತರ ಮುಂದಿಟ್ಟರು. ಈ ಕುರಿತು ಇಂಟರ್‌ನೆಟ್‌ನಲ್ಲಿ ಸರ್ವಮಾಹಿತಿಗಳೂ ಲಭ್ಯ ಇವೆ ಎಂದರು. `ಈ ಚಾಂಪಿಯನ್‌ಷಿಪ್ ನ್ಯಾಯಬದ್ಧವಾಗಿರುವುದರಿಂದಲೇ ಬೆಂಗಳೂರು ಹಾಗೂ ಧಾರವಾಡಗಳಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ ಸೇರಿದಂತೆ ರಾಜ್ಯದ ಪ್ರಮುಖ ಅಧಿಕೃತ ತಂಡಗಳು ಪಾಲ್ಗೊಂಡಿದ್ದವು~ ಎಂದೂ ಅವರು ತಿಳಿಸಿದರು.ಹೀಗೆ ಕ್ರೀಡೆಗೆ ಸಂಬಂಧಿಸಿದಂತೆ ಪ್ರಾಮಾಣಿಕ ಕೈಂಕರ್ಯಕ್ಕೆ ಅಡ್ಡಿ ಪಡಿಸುವವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದೂ ಅವರು ಹೇಳಿದರು.

ಆರೋಪ ನಿರಾಕರಣೆ (ಬೆಂಗಳೂರು ವರದಿ): ಈ ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯ ಟೇಕ್ವಾಂಡೊ ಸಂಸ್ಥೆಯ ಕಾರ್ಯದರ್ಶಿ ಶಶಿವರ್ಧನ್ ಅವರನ್ನು ಸಂಪರ್ಕಿಸಿದಾಗ `ಈ ಆರೋಪಗಳೆಲ್ಲವೂ ನಿರಾಧಾರವಾದುದು~ ಎಂದಿದ್ದಾರೆ.“ನಾವು ಸೆಪ್ಟೆಂಬರ್ 16 ಮತ್ತು 17ರಂದೇ ಅಧಿಕೃತವಾಗಿ ಬೆಂಗಳೂರಿನಲ್ಲಿ ರಾಜ್ಯ ಚಾಂಪಿಯನ್‌ಷಿಪ್ ನಡೆಸಿದ್ದೇವೆ. ಸುಮಾರು 600ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಹೀಗೆ ಒಮ್ಮೆ ನಡೆದಿರುವ ಕೂಟವನ್ನು ಇನ್ನೊಮ್ಮೆ ನಡೆಸುವಂತಿಲ್ಲ.  ಈ ಕೂಟದ ವಿರುದ್ಧ ದಾವಣಗೆರೆ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಲು ಯತ್ನಿಸುತ್ತಿದ್ದಂತೆಯೇ, ರಾತ್ರೋರಾತ್ರಿ ಮಲೆಬೆನ್ನೂರಿನಲ್ಲಿ ಈ ಕೂಟ ನಡೆಸಿದ್ದಾರೆ. ಹೀಗಾಗಿ ಮಲೆಬೆನ್ನೂರಿನಲ್ಲಿ ನಡೆದ ಕೂಟವನ್ನು ವಿರೋಧಿಸಿದ್ದೇವೆ” ಎಂದೂ ಶಶಿವರ್ಧನ್ ಆರೋಪಿಸಿದ್ದಾರೆ.“ಕೆಲವು ಕಾರಣಗಳಿಂದ ಭಾರತೀಯ ಟೇಕ್ವಾಂಡೊ ಫೆಡರೇಷನ್ ವಿರುದ್ಧ ನಾನು ಮೊಕದ್ದಮೆ ಹೂಡಿದ್ದೆ. ನನ್ನನ್ನು `ಕಪ್ಪುಪಟ್ಟಿ~ಗೆ ಸೇರಿಸಿದ್ದುದರ ವಿರುದ್ಧ ಬೆಂಗಳೂರು ನ್ಯಾಯಾಲಯದಿಂದಲೇ ತಡೆಯಾಜ್ಞೆ ಪಡೆದಿದ್ದೇನೆ” ಎಂದೂ ಅವರು ಹೇಳಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.