ಬುಧವಾರ, ಮೇ 25, 2022
22 °C

ಡಾ.ಸವದತ್ತಿಮಠರಿಗೆ ಚೆನ್ನರೇಣುಕಬಸವ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಹಿರಿಯ ಸಾಹಿತಿ, ಸಂಶೋಧಕ ಡಾ.ಸಂಗಮೇಶ ಸವದತ್ತಿಮಠರಿಗೆ ಬುಧವಾರ ತಾಲ್ಲೂಕಿನ ಹಾರಕೂಡ ಹಿರೇಮಠದಲ್ಲಿ ಹಮ್ಮಿಕೊಂಡ ಲಿಂ.ಗುರುಲಿಂಗ ಶಿವಾಚಾರ್ಯರ 42 ನೇ ಪುಣ್ಯತಿಥಿ ಮತ್ತು ಅನುಭಾವ ಪ್ರಚಾರ ಉಪನ್ಯಾಸ ಮಾಲೆಯ ಬೆಳ್ಳಿಹಬ್ಬದಲ್ಲಿ `ಚೆನ್ನರೇಣುಕಬಸವ~ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 25 ಸಾವಿರ ರೂಪಾಯಿ ನಗದು, ಒಂದು ಚಿನ್ನದ ಉಂಗುರ ಒಳಗೊಂಡಿದೆ.ಮಠಾಧೀಶ ಚೆನ್ನವೀರ ಶಿವಾಚಾರ್ಯರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ ಮಠವು ಗುರು- ವಿರಕ್ತ ಎರಡೂ ಪರಂಪರೆಯನ್ನು ಗೌರವಿಸಿ ಸಮನ್ವಯ ಪಥದಲ್ಲಿ ಸಾಗುತ್ತಿದೆ. ಆದ್ದರಿಂದ ಪ್ರಶಸ್ತಿಗೆ ಲಿಂ. ಚೆನ್ನಬಸವಶಿವಯೋಗಿಗಳ ಜತೆಯಲ್ಲಿ ರೇಣುಕಾಚಾರ್ಯ ಮತ್ತು ಬಸವಣ್ಣನ ಹೆಸರು ಇಡಲಾಗಿದೆ. ಪ್ರಶಸ್ತಿ ಪಡೆದಿರುವ ಸವದತ್ತಿಮಠರು 80 ಕ್ಕೂ ಹೆಚ್ಚಿನ ಗ್ರಂಥಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ ಎಂದರು.ಬೆಂಗಳೂರಿನ ಸಂಸ್ಕೃತ ಪ್ರಾಧ್ಯಾಪಕ ಡಾ.ಶಿವಕುಮಾರ ಸ್ವಾಮಿ ಮಾತನಾಡಿ ಬಸವಾದಿ ಶರಣರು ವೇದ, ಉಪನಿಷತ್ತು, ಪುರಾಣಗಳ ವಿರೋಧಿ ಆಗಿರಲಿಲ್ಲ. ಅವರು ಸಂಸ್ಕೃತದಲ್ಲಿನ ಜ್ಞಾನವನ್ನು ಕನ್ನಡದಲ್ಲಿ ಕೊಟ್ಟು ಸಾಮಾನ್ಯ ಜನರೂ ಉತ್ತಮ ವಿಚಾರ ತಿಳಿದುಕೊಳ್ಳುವಂತೆ ಮಾಡಿದ್ದಾರೆ ಎಂದರು.ಚಕ್ರವರ್ತಿ ಸೂಲಿಬೆಲೆ ಮಾತನಾಡಿ ಹಣವಂತರಿಗೆ ಮಾತ್ರ ಬೆಲೆ ಇದೆ ಎನ್ನುವುದು ತಪ್ಪು. ಕೋಟ್ಯಂತರ ರೂಪಾಯಿ ನುಂಗಿದವರು ಜೈಲಿಗೆ ಹೋದರೆ ಒಬ್ಬರೂ ಪ್ರತಿಭಟಿಸುತ್ತಿಲ್ಲ. ಅಣ್ಣಾ ಹಜಾರೆಯಂತಹ ಸಾಮಾನ್ಯರು ಜೈಲಿಗೆ ಹೋದರೆ ಲಕ್ಷಾಂತರ ಜನರು ಜೈಲಿಗೆ ಸೇರಲು ಸಿದ್ಧರಾದರು. ಇದು ಪ್ರಾಮಾಣಿಕರಿಗೆ ಈಗಲೂ ಬೆಲೆ ಇದೆ ಎನ್ನುವುದನ್ನು ತೋರಿಸಿದೆ ಎಂದರು.ಪಶು ಸಂಗೋಪನಾ ಸಚಿವ ರೇವು ನಾಯಕ್ ಬೆಳಮಗಿ ಮಾತನಾಡಿ ಹಾರಕೂಡ ಮಠದಿಂದ 43 ಕೃತಿಗಳನ್ನು ಪ್ರಕಟಿಸಿ ಉತ್ತಮ ಕಾರ್ಯ ಮಾಡಲಾಗಿದೆ ಎಂದರು. ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಡಾ.ಗವಿಸಿದ್ಧಪ್ಪ ಪಾಟೀಲ, ಸೂಗಯ್ಯ ಹಿರೇಮಠ, ಗೋಪಿಕಾದೇವಿ ದೇಶಮುಖ ಮಾತನಾಡಿದರು. ಕರಬಸಯ್ಯ ಸ್ವಾಮಿಯವರು `ಶಿವಶರಣರ ವಚನಗಳಲ್ಲಿ ಜೀವನ ಮೌಲ್ಯಗಳು~ ಮತ್ತು `ಮರಕುಂದಿ ಬಸವಣ್ಣೆಪ್ಪ ಕೃತ ನಿಜಾನಂದ ಲಹರಿ~ ಎಂಬ ಗ್ರಂಥಗಳನ್ನು ಬಿಡುಗಡೆ ಮಾಡಿದರು.ಹಿರಿಯ ಮುಖಂಡ ಬಾಬು ಹೊನ್ನಾನಾಯಕ್, ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಶೇಖರ ಪಾಟೀಲ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗುರುಲಿಂಗಪ್ಪ ಸೈದಾಪುರೆ ಉಪಸ್ಥಿತರಿದ್ದರು. ಬಸವರಾಜ ವರಕಾಲೆ ನಿರೂಪಿಸಿದರು.ಶೇಷಪ್ಪ ಗವಾಯಿ ಗಬ್ಬೂರ್, ರಾಜಕುಮಾರ ಹೂಗಾರ, ಜನಾರ್ದನ ವಾಘಮಾರೆ, ನವಲಿಂಗಕುಮಾರ ಪಾಟೀಲ ಸಂಗೀತ ಹಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.