ಶುಕ್ರವಾರ, ಮೇ 14, 2021
32 °C

ಡಿವಿಎಸ್, ಈಶ್ವರಪ್ಪ ಪ್ರಧಾನರಿಂದ ದೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಭಾನುವಾರ ನಗರಕ್ಕೆ ಬರುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲಿಗ ಸಚಿವರು ಮತ್ತು ಶಾಸಕರು ಪ್ರಧಾನ್ ಅವರನ್ನು ಭೇಟಿ ಮಾಡಿ ಸರ್ಕಾರದ ನಾಯಕತ್ವ ಬದಲಾವಣೆಗೆ ಒತ್ತಡ ಹೇರುವ ಸಾಧ್ಯತೆ ಇದೆ.ಪಕ್ಷದ ಹೈಕಮಾಂಡ್ ಪರವಾಗಿ ಪ್ರಧಾನ್ ಅವರು ನಗರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಬರಪೀಡಿತ ಪ್ರದೇಶಗಳ ಪ್ರವಾಸ ಮೊಟಕುಗೊಳಿಸಿ ಶನಿವಾರ ಸಂಜೆಯೇ ಬೆಂಗಳೂರಿಗೆ ದೌಡಾಯಿಸಿದ್ದಾರೆ.ಆದರೆ, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಭಾನುವಾರ ನಗರದಲ್ಲಿ ಇರುವುದಿಲ್ಲ. ಇಬ್ಬರೂ ಪ್ರಧಾನ್ ಭೇಟಿಯಿಂದ ದೂರ ಉಳಿಯಲಿದ್ದಾರೆ.ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿ ಆಧಾರದಲ್ಲಿ ತಮ್ಮ ವಿರುದ್ಧ ದಾಖಲಿಸಿದ್ದ `ಪ್ರಥಮ ಮಾಹಿತಿ ವರದಿ~ಯನ್ನು ರದ್ದು ಮಾಡಿ ಹೈಕೋರ್ಟ್ ತೀರ್ಪು ನೀಡಿದ ದಿನದಿಂದಲೂ ಯಡಿಯೂರಪ್ಪ ಅವರು ನಾಯಕತ್ವ ಬದಲಾವಣೆಗೆ ಪಟ್ಟುಹಿಡಿದಿದ್ದಾರೆ.

 

ಬಜೆಟ್ ಅಧಿವೇಶನದ ಸಮಯದಲ್ಲಿ ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯುವ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರ ಜೊತೆ ಚರ್ಚಿಸಲು ಪ್ರಧಾನ್ ಬರುತ್ತಿದ್ದಾರೆ ಎನ್ನಲಾಗಿದೆ. ಆದರೆ, ತಮ್ಮ ಭೇಟಿಯ ಸ್ಪಷ್ಟ ಉದ್ದೇಶವನ್ನು ಈವರೆಗೂ ಅವರು ಬಹಿರಂಗಪಡಿಸಿಲ್ಲ.ಪ್ರಧಾನ್ `ಪ್ರಜಾವಾಣಿ~ ಜತೆ ಮಾತನಾಡಿ `ತಮ್ಮ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ತಾವು ಪಕ್ಷದ ಉಸ್ತುವಾರಿಯಾದ ಕಾರಣ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಆ ಸಂದರ್ಭದಲ್ಲಿ ಪಕ್ಷದ ಪ್ರಮುಖರ ಜತೆಗೂ ಮಾತುಕತೆ ನಡೆಸಲಾಗುವುದು~ ಎಂದು ಹೇಳಿದರು. ಭೇಟಿ ನಂತರ ವರಿಷ್ಠರಿಗೆ ವರದಿ ನೀಡುತ್ತೀರಾ ಎಂದು ಕೇಳಿದ್ದಕ್ಕೆ `ಅದು ಪಕ್ಷದ ಆಂತರಿಕ ವಿಷಯ. ಎಲ್ಲವನ್ನೂ ಮಾಧ್ಯಮಗಳಿಗೆ ಹೇಳಲು ಆಗುವುದಿಲ್ಲ~ ಎಂದು ನುಣುಚಿಕೊಂಡರು.ಯಡಿಯೂರಪ್ಪ ಅವರು ಪ್ರತ್ಯೇಕವಾಗಿ ಪ್ರಧಾನ್ ಅವರನ್ನು ಭೇಟಿ ಮಾಡಿ, ತಮ್ಮನ್ನು ಮತ್ತೆ ಮುಖ್ಯಮಂತ್ರಿ ಮಾಡುವಂತೆ ಮನವಿ ಮಾಡಲು ಮುಂದಾಗಿದ್ದಾರೆ. ಬಳಿಕ ಅವರ ಬೆಂಬಲಿಗ ಸಚಿವರು ಮತ್ತು ಶಾಸಕರು ಭೇಟಿ ಮಾಡಿ, ತಮ್ಮ ನಾಯಕನ ಪರ ಒತ್ತಡ ಹೇರಲು ಸಿದ್ಧತೆ ನಡೆಸಿದ್ದಾರೆ.ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ವಿ.ಸತೀಶ್ ಮತ್ತು ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಉಪಸ್ಥಿತರಿರುತ್ತಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.