ಭಾನುವಾರ, ಜನವರಿ 26, 2020
27 °C

ಡೆಂಗೆ ಜ್ವರ ಜಾಗೃತಿಅಗತ್ಯ:ವೈದ್ಯಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಡೆಂಗೆ ಜ್ವರ ವೈರಸ್‌ನಿಂದ ಉಂಟಾಗುವ ಕಾಯಿಲೆ. ಸೊಳ್ಳೆಯಿಂದ ಈ ರೋಗ ಹರಡುತ್ತದೆ. ಡೆಂಗೆ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವುದು ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ. ರತ್ನಾಕರ ತೋರಣ ಹೇಳಿದರು.ತಾಲ್ಲೂಕಿನ ಅರಕೇರಾ (ಬಿ) ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅರಕೇರಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಗೆ ಶನಿವಾರ ಹಮ್ಮಿಕೊಳ್ಳಲಾಗಿದ್ದ ಡೆಂಗೆ ಜ್ವರ ನಿಯಂತ್ರಣ ಕುರಿತಾದ ತಿಳಿವಳಿಕೆ ಸಭೆಯಲ್ಲಿ ಅವರು ಮಾತನಾಡಿದರು.ಈಡಿಸ್ ಸೊಳ್ಳೆಯು ನಮ್ಮ ಮನೆಯಲ್ಲಿರುವ ಇರುವ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತದೆ. ಅಲ್ಲದೆ ಈ ಸೊಳ್ಳೆಯು ಹಗಲು ಹೊತ್ತಿನಲ್ಲಿಯೇ ಮನುಷ್ಯರನ್ನು ಕಚ್ಚುತ್ತದೆ. ಇದ್ದಕ್ಕಿದಂತೆ ತೀವ್ರ ಜ್ವರ ಬರುವುದು, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣಗಳಾಗಿವೆ ಎಂದು               ತಿಳಿಸಿದರು.ಡೆಂಗೆಗೆ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇಲ್ಲ. ರೋಗದ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬಹುದು. ಲಕ್ಷಣ ಕಂಡು ಬಂದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಲ್ಲಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.ಎಲ್ಲ ನೀರಿನ ತೊಟ್ಟಿ, ಬ್ಯಾರಲ್. ಏರ್ ಕೂಲರ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ಸ್ವಚ್ಛ ಮಾಡಿ ಒಣಗಿಸಿ ಮತ್ತೆ ನೀರು ಸಂಗ್ರಹಿಸಬೇಕು. ಯಾವಾಗಲೂ ಭದ್ರವಾದ ಮುಚ್ಚಳ ಮುಚ್ಚಿ ಸೊಳ್ಳೆ ಉತ್ಪತ್ತಿ ಆಗದಂತೆ ಎಚ್ಚರವಹಿಸಬೇಕು ಎಂದರು. ಬಯಲಲ್ಲಿ ಟೈರ್, ಎಳೆನೀರಿನ ಚಿಪ್ಪು ಮತ್ತು ತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಸೂಕ್ತ ವಿಲೇವಾರಿ ಮಾಡಬೇಕು.

ಈ ರೋಗ ಹರಡುವ ಸೊಳ್ಳೆಗಳು ಹಗಲಲ್ಲಿ ಕಚ್ಚುತ್ತಿದ್ದು, ಇದರಿಂದ ಪಾರಾಗಲು ಮಕ್ಕಳು, ವಿಶ್ರಾಂತಿ ಪಡೆಯುವ ವಯೋವೃದ್ಧರು, ಕಾಯಿಲೆಯಿಂದ ನರಳುವವರು ತಪ್ಪದೇ ಸೊಳ್ಳೆ ಪರದೆ ಉಪಯೋಗಿಸಬೇಕು. ಸೊಳ್ಳೆಗಳು ಮನೆಯೊಳಗೆ ಸೇರದಂತೆ ಎಚ್ಚರಿಕೆ ವಹಿಸುವುದು ಉತ್ತಮ. ಸಾಧ್ಯವಾದಷ್ಟು ಸೊಳ್ಳೆಗಳಿಂದ ಕಚ್ಚಿಸಿಕೊಳ್ಳದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸಲಹೆ ಮಾಡಿದರು.

ಅರಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಸ್ಯರು, ಅಧ್ಯಕ್ಷರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ                   ಪಾಲ್ಗೊಂಡಿದ್ದರು.ಗ್ರಾಮ ಪಂಚಾತಿ ಅಧ್ಯಕ್ಷೆ ಚನ್ನಮ್ಮ, ಸದಸ್ಯರಾದ ಹಣಮಂತ ಖಾನಳ್ಳಿ, ಬಂಗಾರಪ್ಪ, ಮಲ್ಲಮ್ಮ, ಲಕ್ಷ್ಮಿಬಾಯಿ, ಶರಣಮ್ಮ ಇದ್ದರು.

ಪ್ರತಿಕ್ರಿಯಿಸಿ (+)