ಬುಧವಾರ, ಏಪ್ರಿಲ್ 14, 2021
23 °C

ತಕ್ಕ ಪಾಠ ಕಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಶಾನ್ಯ ರಾಜ್ಯಗಳ ಪ್ರಜೆಗಳಲ್ಲಿ ಗಲಿಬಿಲಿ ಸೃಷ್ಟಿಸಿರುವ ಕೃತ್ಯ ಕ್ಷಮಾರ್ಹವೇ ಅಲ್ಲ. ಸಾಮಾಜಿಕ ಸಂಪರ್ಕ ಜಾಲಗಳನ್ನು ಬಳಸಿಕೊಂಡು ಧಾರ್ಮಿಕ ಭಾವನೆ ಕೆರಳಿಸುವ, ಆ ಮೂಲಕ ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ಈ ರೀತಿಯ ಕೆಲಸ ನೆರೆಯ ರಾಷ್ಟ್ರವಾದ ಪಾಕಿಸ್ತಾನದಿಂದಲೇ ನಡೆಯುತ್ತಿದೆ ಎನ್ನುವ ಆಘಾತಕಾರಿ ಸಂಗತಿಯೂ ಬಯಲಾಗಿದೆ.ಈ ರೀತಿಯ `ದ್ವೇಷ ಭೀತಿ~ ಯನ್ನು ಬಿತ್ತುವುದೂ ಕೂಡ ಭಯೋತ್ಪಾದಕತೆಯ ಮತ್ತೊಂದು ಮುಖ. ಅಂತಹ ಶಕ್ತಿಗಳನ್ನು ಬಗ್ಗುಬಡಿಯುವಂತೆ ಪಾಕಿಸ್ತಾನಕ್ಕೆ ಭಾರತ ಒತ್ತಾಯಿಸಿರುವುದೂ ಸಕಾಲಿಕವೇ ಆಗಿದೆ. ಈ ವಿಷಯದಲ್ಲಿ ಭಾರತ ಬಿಗಿ ನಿಲುವು ತಳೆಯಬೇಕಾದ್ದು ಅಗತ್ಯ.

 

ಮೇಲಿಂದ ಮೇಲೆ ನಡೆಯುತ್ತಿರುವ ಇಂತಹ ಉಪಟಳವನ್ನು ಗಂಭೀರನೆಲೆಯಲ್ಲಿ ಪರಿಗಣಿಸಿ ಕ್ರಮಕ್ಕೆ ಮುಂದಾಗಬೇಕು. ಪಾಕಿಸ್ತಾನ ಭಯೋತ್ಪಾದಕರ ಅಡ್ಡೆಯಾಗಿದ್ದು, ಅಲ್ಲಿನ ಸರ್ಕಾರ ಅವರಿಗೆ ಆಶ್ರಯ ನೀಡುತ್ತಿದೆ ಎಂದು ಭಾರತ ಪದೇಪದೇ ಸಾಕ್ಷ್ಯ ಸಹಿತ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರತಿಪಾದಿಸುತ್ತಲೇ ಬಂದಿದೆ.ದೇಶದ ಭದ್ರತೆಗೆ ಸವಾಲಾಗಿ, ಭಯೋತ್ಪಾದಕರಿಗೆ ಪಾಕಿಸ್ತಾನದಲ್ಲಿ ತರಬೇತಿ, ಆಶ್ರಯ, ಪ್ರಚೋದನೆ, ಬೆಂಬಲ ಸಿಗುತ್ತಿದೆ ಎಂದು ಭಾರತ ಹೇಳುತ್ತಲೇ ಬಂದಿರುವುದಕ್ಕೆ ಲಾಡೆನ್ ಅಡಗುದಾಣ ಪತ್ತೆಯ ನಂತರ ಪುರಾವೆಯೂ ಲಭಿಸಿತ್ತು.ಅಸ್ಸಾಂ ಪ್ರಜೆಗಳಲ್ಲಿ ಉಂಟಾಗಿರುವ ಮಾನಸಿಕ ಭೀತಿಗೆ ಅಲ್ಲಿನ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಕೈವಾಡವೇ ಕಾರಣ ಎನ್ನುವುದೂ ದೃಢಪಟ್ಟಿದೆ.  ವಾಸ್ತವವಾಗಿ ಭಯೋತ್ಪಾದಕರಿಗೆ ಬೆನ್ನೆಲುಬಿನಂತಿರುವುದೇ ಐಎಸ್‌ಐ. ಸರ್ಕಾರವೂ ರಹಸ್ಯದಳದ ಬಿಗಿ ಹಿಡಿತದಲ್ಲೇ ಇದೆ. ಪಾಕಿಸ್ತಾನದ ಅಸ್ಥಿರ ಆಡಳಿತದಿಂದಾಗಿ, ಅಲ್ಲಿ ಉಗ್ರರ ಕೈ ಮೇಲಾಗಿದೆ.

 

ಭಾರತದಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ಕೆಲಸವನ್ನು ಭಯೋತ್ಪಾದಕರು ಪದೇಪದೇ ಮಾಡುತ್ತಲೇ ಬಂದಿದ್ದಾರೆ. ಮುಂಬೈ ಸ್ಪೋಟದಂತಹ ಘಟನೆ, ಪುಣೆ ಸರಣಿ ಬಾಂಬ್ ಸ್ಫೋಟ ಎಲ್ಲದರಲ್ಲೂ ಪಾಕಿಸ್ತಾನದ ಕೈವಾಡವಿರುವುದು ರಹಸ್ಯವಾಗೇನೂ ಉಳಿದಿಲ್ಲ.ಮುಂಬೈ ದಾಳಿಗೆ ಸಂಬಂಧಪಟ್ಟಂತೆ ಪಾಕಿಗಳ ಸಂಚನ್ನು ಭಾರತ ಪುರಾವೆ ಸಹಿತ ಸಲ್ಲಿಸಿದರೂ ಪಾಕಿಸ್ತಾನ ದಿವ್ಯ ಮೌನ ತಾಳಿರುವುದು ಅದರ ಪುಕ್ಕಲುತನಕ್ಕೆ ಸಾಕ್ಷಿ. ಭಯೋತ್ಪಾದಕ ಗುಂಪುಗಳನ್ನು ಹತ್ತಿಕ್ಕುವ ವಿಷಯವನ್ನು ಪಾಕಿಸ್ತಾನ ಅಷ್ಟೊಂದು ಗಂಭೀರವಾಗಿ ಪರಿಗಣಿಸದಿರುವುದು ಭಾರತದೊಂದಿಗಿನ ಸೌಹಾರ್ದ ಸ್ಥಾಪನೆ ಯತ್ನಕ್ಕೆ ಅಡ್ಡಿಯಾಗಿದೆ.ಪಾಕಿಸ್ತಾನಕ್ಕೆ ಪ್ರಾಮಾಣಿಕತೆಯ ಕೊರತೆ ಇದೆ. ಪಾಕಿಸ್ತಾನದ ನೆಲದಿಂದಲೇ ಭೀತಿ ಸೃಷ್ಟಿಸುತ್ತಿರುವ 76 ಅಂತರ್ಜಾಲ ತಾಣಗಳನ್ನು ಪತ್ತೆಹಚ್ಚಲಾಗಿದೆ. ಸಿಕ್ಕ ಪುರಾವೆಗಳನ್ನು ಪಾಕಿಸ್ತಾನಕ್ಕೆ ನೀಡಿದ್ದರೂ, ಮೊಂಡು ಸರ್ಕಾರ ಅದೇ ರಾಗ ಹಾಡುತ್ತಿದೆ. ಈ ತಾಣಗಳಿಗೆ ಭಾರತ ಈಗಾಗಲೇ ತಡೆಯನ್ನೂ ವಿಧಿಸಿದೆ.ಎಸ್‌ಎಂಎಸ್ ಹಾಗೂ ಎಂಎಂಎಸ್ ಕಳುಹಿಸುವುದನ್ನು ಇದೇ ಮೊದಲ ಬಾರಿಗೆ  ನಿಷೇಧಿಸಲಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೇಳುತ್ತದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುವುದು, ತಂತ್ರಜ್ಞಾನಗಳನ್ನು ದುರುಪಯೋಗಪಡಿಸಿಕೊಳ್ಳುವುದು ಭಯೋತ್ಪಾದಕರ ಹೊಸ ತಂತ್ರ.

 

ಸರ್ಕಾರ ದೃಢನಿಲುವು ತಳೆದು ಅದನ್ನು ಬಲಿಹಾಕಲು ಸಾಧ್ಯವಾಗದಿದ್ದರೆ ಅಲ್ಲಿನ ಸರ್ಕಾರಕ್ಕೇ ಅದು ಮಗ್ಗಲಮುಳ್ಳಾಗುವುದರಲ್ಲಿ ಸಂಶಯವಿಲ್ಲ. ಪಾಕಿಸ್ತಾನ ಸರ್ಕಾರಕ್ಕೆ ಈ ಅಪಾಯದ ಅರಿವೂ ಇಲ್ಲವಾಗಿದೆ. ದಿಟ್ಟ ನಿಲುವು ತಳೆಯದೆ, ಅದೇ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದರೆ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತಕ್ಕ ಪಾಠಕಲಿಸಲು ಭಾರತ ಮುಂದಾಗಬೇಕಾಗುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.