ಗುರುವಾರ , ಏಪ್ರಿಲ್ 15, 2021
24 °C

ತಿಪ್ಪೆಗುಂಡಿ ವಿವಾದ: ತಿಂಗಳಲ್ಲಿ ಇತ್ಯರ್ಥಕ್ಕೆ ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಟ್ಲ: .ವಿಟ್ಲ ಕಸಬಾ ಗ್ರಾಮದ ಪಳಿಕೆ ಎಂಬಲ್ಲಿ ಕಳೆದ ಕೆಲವು ಸಮಯದಿಂದ ಗ್ರಾಮಸ್ಥರು ಹಾಗೂ ಪಂಚಾಯಿತಿ ನಡುವೆ ಬಾರೀ ವಿವಾದ ಎಬ್ಬಿಸಿದ್ದ ತಿಪ್ಪೆಗುಂಡಿ ಸಮಸ್ಯೆಯನ್ನು ತಿಂಗಳ ಒಳಗೆ ಬಗೆಹರಿಸುವ ಬಗ್ಗೆ ಮಂಗಳವಾರ ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತುಪಳಿಕೆ ಎಂಬಲ್ಲಿ 2001ರಲ್ಲಿ ವಿಟ್ಲ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಿದ್ದು, ಬಳಿಕ ಅಲ್ಲಿ ಯಾವುದೇ ಕಾಮಗಾರಿ ನಡೆಸಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಭಾನುವಾರ ತಿಪ್ಪೆಗುಂಡಿ ಬಳಿ ಕಸಗಳಿಗೆ ಬೆಂಕಿ ಹಾಕಿದ್ದರು. ತಿಪ್ಪೆಗುಂಡಿಗೆ ತೆರಳುವ ರಸ್ತೆ ಮಧ್ಯ ಹೊಂಡ ತೋಡಿ ಉಗ್ರ ಪ್ರತಿಭಟನೆ ನಡೆಸಿದ್ದರು.ಈ ತಿಪ್ಪೆಗುಂಡಿಗೆ ವಿಟ್ಲ ಅಂಗಡಿ, ಹೋಟೆಲ್, ಕೋಳಿ ಅಂಗಡಿ, ಮಾಂಸದ ಅಂಗಡಿಗಳ ತ್ಯಾಜ್ಯಗಳನ್ನು ಎಸೆಯುತ್ತಿದ್ದ ಪರಿಣಾಮ ಪರಿಸರದ ನಿವಾಸಿಗಳು ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟನೆ ಸಂದರ್ಭದಲ್ಲಿ ಆರೋಪಿಸಿದ್ದರು.ಸತ್ತ ಪ್ರಾಣಿ ತ್ಯಾಜ್ಯಗಳನ್ನು, ಆಸ್ಪತ್ರೆಯ ಸಿರಿಂಜ್‌ಗಳನ್ನು ಎಸೆಯುತ್ತಿರುವುದರಿಂದ ಈ ಪ್ರದೇಶದಲ್ಲಿ ವಾಸಿಸುವ 60ಕ್ಕಿಂತಲೂ ಅಧಿಕ ಮನೆಯವರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದ ಗ್ರಾಮಸ್ಥರು ಪಂಚಾಯಿತಿ ಅಧ್ಯಕ್ಷ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದರು. ಬಳಿಕ ವಿಟ್ಲ ಠಾಣಾಧಿಕಾರಿ ರಕ್ಷಿತ್ ಅವರು ಪ್ರತಿಭಟನಾಕಾರರ ಮನವೊಲಿಸಿ ವಿಟ್ಲ ಪಂಚಾಯಿತಿಯಲ್ಲಿ ಸಭೆ ಕರೆಯಲು ಪಂಚಾಯಿತಿ ಅಧ್ಯಕ್ಷರಿಗೆ ಸೂಚಿಸಿದ್ದರು.ಸೋಮವಾರ ಸಭೆಯಲ್ಲಿ ಬಾರೀ ಗದ್ದಲ ಆರಂಭವಾಗಿತ್ತು. ಆದರೆ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿದೇ ಸಭೆ ವಿಫಲಗೊಂಡಿತ್ತು. ಬಳಿಕ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಇತ್ಯರ್ಥಗೊಳಿಸಲು ನಿರ್ಧರಿಸಲಾಗಿತ್ತು. ಮಂಗಳವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮಾನಾಥ ವಿಟ್ಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಿಪ್ಪೆಗುಂಡಿ ಸಮಸ್ಯೆ ಚರ್ಚಿಸಲಾಯಿತು.ಸಭೆಯಲ್ಲಿ ಪಂಚಾಯಿತಿಗೆ ಸೇರಿದ 3.89 ಸೆಂಟ್ಸ್ ಜಾಗವನ್ನು ಅಳತೆ ಮಾಡಿ ಗುರುತಿಸಿ ಕಾಂಪೌಂಡ್ ಗೋಡೆ ನಿರ್ಮಿಸಿ ಒಂದು ತಿಂಗಳ ಒಳಗೆ ಹೊಸ ಘಟಕದ ನಿರ್ಮಾಣ ಮಾಡಿ ಇದೀಗ ದುರ್ನಾತ ಬೀರುತ್ತಿರುವ ತ್ಯಾಜ್ಯವನ್ನು ಮಣ್ಣು ಹಾಕಿ ಮುಚ್ಚಲಾಗುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದೀಗ ಈ ತೀರ್ಮಾನಕ್ಕೆ ಪಳಿಕೆ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದಾರೆ.ಸಭೆಯಲ್ಲಿ ವಿಟ್ಲ ಗ್ರಾ.ಪಂ.ಉಪಾಧ್ಯಕ್ಷೆ ಶಾಂತಾ ಎಸ್.ಎನ್.ಭಟ್, ತಾ.ಪಂ. ಸದಸ್ಯರಾದ  ಜೂಲಿಯಾನ್ ಮೇರಿ ಲೋಬೋ, ಉಷಾ ಕೆ., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್ ರಾಥೋಡ್ ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.