ಗುರುವಾರ , ಮೇ 19, 2022
20 °C

ತುಂಡು ಗುತ್ತಿಗೆ ಅಕ್ರಮ: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಯಲ್ಲಿ 1995ರಿಂದ 1998ರವರೆಗೆ ನಡೆದಿರುವ ತುಂಡು ಗುತ್ತಿಗೆ ಸೇರಿದಂತೆ ಹಲವು ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ನಗರದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.`ಕೃಷ್ಣಾ ಭಾಗ್ಯ ಜಲ ನಿಗಮದ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಯ ನಾರಾಯಣಪುರ, ಕೆಂಭಾವಿ ಮತ್ತು ಭೀಮರಾಯನಗುಡಿ ವಿಭಾಗಗಳ ಕಾಮಗಾರಿಯ ಅನುಷ್ಠಾನದಲ್ಲಿ ಅವ್ಯವಹಾರ ನಡೆದಿದೆ. ಸರ್ಕಾರಿ ಅಧಿಕಾರಿಗಳು, ಗುತ್ತಿಗೆದಾರರು, ಅಧಿಕಾರೇತರರು ಸುಳ್ಳು ದಾಖಲೆ ಪತ್ರಗಳನ್ನು ಸೃಷ್ಟಿಸಿ ಹಾಗೂ ಕಾನೂನು ಉಲ್ಲಂಘಿಸಿ ಸಾಕಷ್ಟು ಅವ್ಯವಹಾರ ನಡೆಸಿದ್ದಾರೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆಯಾಗಿದೆ~ ಎಂದು ಸಿಐಡಿ ಡಿವೈಎಸ್ಪಿ ಎಂ.ಶಂಕರಪ್ಪ ಅವರು ದೂರಿನಲ್ಲಿ ತಿಳಿಸಿದ್ದಾರೆ.ದೂರಿನ ಸಂಬಂಧ ಭಾರತೀಯ ದಂಡ ಸಂಹಿತೆ 420 (ವಂಚನೆ), 408 (ನಂಬಿಕೆ ದ್ರೋಹ), 465 (ಸಹಿ ನಕಲು ಮಾಡುವುದು), 467 (ನಕಲಿ ದಾಖಲೆಗಳ ಸೃಷ್ಟಿ), 471 (ನಕಲಿ ದಾಖಲೆ ಪತ್ರಗಳನ್ನು ಬಳಸಿ ವಂಚಿಸುವುದು), 468 (ವಂಚನೆ ಉದ್ದೇಶಕ್ಕಾಗಿ ನಕಲಿ ದಾಖಲೆ ಪತ್ರಗಳ ಸೃಷ್ಟಿ) ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1998ರ ಅಡಿ ಪ್ರಕರಣ ದಾಖಲಾಗಿದೆ.ಯೋಜನೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ರಾಜ್ಯ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಕಾರ್ಯದರ್ಶಿಯಾದ ನಿವೃತ್ತ ಮುಖ್ಯ ಎಂಜಿನಿಯರ್ ಆದ ಎಚ್.ಟಿ.ಸೋಮಶೇಖರ ರೆಡ್ಡಿ ಎಂಬುವರು 1999ರಲ್ಲಿ ರಾಜ್ಯ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸುವಂತೆ 2009ರ ನವೆಂಬರ್ 9ರಂದು ಆದೇಶ ಹೊರಡಿಸಿತ್ತು.ಈ ಹಿನ್ನೆಲೆಯಲ್ಲಿ ಸೋಮಶೇಖರ ರೆಡ್ಡಿ ಅವರು 2010ರ ಜನವರಿ 22ರಂದು ಸರ್ಕಾರಕ್ಕೆ ದೂರು ಕೊಟ್ಟಿದ್ದರು. ಈ ದೂರಿನಲ್ಲಿನ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದ್ದ ಸದನ ಅಂದಾಜು ಸಮಿತಿ, ಮಹಾಲೇಖಪಾಲರು ಹಾಗೂ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ವರದಿ ನೀಡಿದ್ದರು.ಈ ವರದಿ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ನಡೆಸುವಂತೆ 2010ರ ಡಿ.20ರಂದು ಸರ್ಕಾರ ಆದೇಶ ಹೊರಡಿಸಿತ್ತು.

ಅರ್ಜಿದಾರರಾದ ಸೋಮಶೇಖರ ರೆಡ್ಡಿ ಅವರ ದೂರಿಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸಿ ಕೆಲ ದಾಖಲೆ ಪತ್ರಗಳು ಮತ್ತು ಮಾಹಿತಿಯನ್ನು ವಶಪಡಿಸಿಕೊಳ್ಳಲಾಗಿದೆ.

 

ಆ ದಾಖಲೆ ಪತ್ರಗಳು ಮತ್ತು ಮಾಹಿತಿಯನ್ನು ಅವಲೋಕಿಸಿದಾಗ 1995ರಿಂದ 1998ರವರೆಗೆ ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ ಕರ್ತವ್ಯದಲ್ಲಿದ್ದ ಸರ್ಕಾರಿ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಅಧಿಕಾರೇತರರು ಅಕ್ರಮದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಬಗ್ಗೆ ಇನ್ನೂ ಮಾಹಿತಿ ಕಲೆ ಹಾಕಬೇಕಿದೆ ಎಂದು ಶಂಕರಪ್ಪ ದೂರಿನಲ್ಲಿ ಹೇಳಿದ್ದಾರೆ.ಸೋಮಶೇಖರ ರೆಡ್ಡಿ ಅವರ ಅರ್ಜಿಯಲ್ಲಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಅವರು ಆರೋಪಿಸಿರುವಂತೆ ಯೋಜನೆಯಲ್ಲಿ ಸರ್ಕಾರದ ಹಣ ದುರುಪಯೋಗವಾಗಿದೆ. ಈ ಸಂಬಂಧ ಹೆಚ್ಚಿನ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲು, ಪೂರಕ ಸಾಕ್ಷಿಗಳ ವಿಚಾರಣೆ ನಡೆಸಲು ಮತ್ತು ಆರೋಪಿಗಳನ್ನು ಗುರುತಿಸಲು ವಿಚಾರಣೆಯಿಂದ ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಸಮಗ್ರ ತನಿಖೆ ನಡೆಸಲು ದೂರು ದಾಖಲಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಮತ್ತು ಅಗತ್ಯ ದಾಖಲೆ ಪತ್ರಗಳನ್ನು ಸಿಐಡಿ ಘಟಕಕ್ಕೆ ನೀಡಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.ರೆಡ್ಡಿ ದೂರಿನಲ್ಲಿರುವ ಅಂಶಗಳು: ಸಿಮೆಂಟ್, ಉಕ್ಕು ಮತ್ತು ಸ್ಫೋಟಕಗಳ ಖರೀದಿಯಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಹಣ ಪಡೆಯಲಾಗಿದೆ. ಒಬ್ಬ ಗುತ್ತಿಗೆದಾರನಿಗೆ ಒಂದಕ್ಕಿಂತ ಹೆಚ್ಚು ಕಾಮಗಾರಿಗಳ ಗುತ್ತಿಗೆ ನೀಡಲಾಗಿದೆ ಮತ್ತು ಕಡಿಮೆ ಗುಣಮಟ್ಟದ ಕೆಲಸಕ್ಕೆ ಹೆಚ್ಚುವರಿ ಹಣ ಪಾವತಿ ಮಾಡಲಾಗಿದೆ.ಕಾಲುವೆಗಳ ಅಗೆತದ ಸಂದರ್ಭದಲ್ಲಿ ಮೆದು ಬಂಡೆ ಅಗೆದಿದ್ದರೂ ಭಾರಿ ಬಂಡೆಗಳನ್ನು ಅಗೆದಿರುವುದಾಗಿ ಗುತ್ತಿಗೆದಾರರು ಸುಳ್ಳು ಮಾಹಿತಿ ನೀಡಿ ಹೆಚ್ಚಿನ ಹಣ ಪಡೆದಿದ್ದಾರೆ. ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಸರ್ಕಾರಕ್ಕೆ ವಂಚಿಸಿದ್ದಾರೆ. ಕಾಲುವೆಗಳ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೂ ದುರಸ್ತಿ ಮಾಡಲಾಗಿದೆ ಎಂದು ವೆಚ್ಚ ತೋರಿಸಲಾಗಿದೆ.ಕಾಲುವೆಗಳಲ್ಲಿ ಹೂಳು ತೆಗೆಯದಿದ್ದರೂ ಹೂಳು ತೆಗೆಯಲಾಗಿದೆ ಎಂದು ವೆಚ್ಚ ತೋರಿಸಲಾಗಿದೆ. ಸದನ ಅಂದಾಜು ಸಮಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕಾಲುವೆಗಳಲ್ಲಿ ಹೂಳು ಶೇಖರಣೆಯಾಗಿರುವ ಅಂಶ ಬೆಳಕಿಗೆ ಬಂದಿದೆ.

 

ಶಹಾಪುರ, ಕೆಂಭಾವಿ ವಿಭಾಗಗಳ ವಿತರಣಾ ನಾಲೆಗಳ ಭೂಮಿ ಅಗೆತದ ಕಾಮಗಾರಿಯ ವೆಚ್ಚಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರು 25.42 ಕೋಟಿ ರೂಪಾಯಿಗೆ ನೀಡಿದ ನಕಲಿ ಬಿಲ್‌ಗಳನ್ನು ಅಧಿಕಾರಿಗಳು ಪರಿಶೀಲಿಸದೆ ಹಣ ಬಿಡುಗಡೆ ಮಾಡಿದ್ದಾರೆ. ಮೆಟ್ಟಿಲು ಹಾಗೂ ನಾಲೆಗಳ ಬಳಿ ದೋಬಿ ಘಾಟ್‌ಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರು ನಕಲಿ ಬಿಲ್‌ಗಳನ್ನು ನೀಡಿ ಹಣ ಪಡೆದಿದ್ದಾರೆ.ಕಾಮಗಾರಿಯ ಗುತ್ತಿಗೆ ಪಡೆದ ಸಿವಿಲ್ ಗುತ್ತಿಗೆದಾರರಿಂದ ಹರಾಜು ದಾಖಲೆ ಪತ್ರಗಳು ಮತ್ತು ನಕಲಿ ಕರಾರು ಪತ್ರಗಳನ್ನು ಪಡೆದ ಅಧಿಕಾರಿಗಳು ನಿಗಮಕ್ಕೆ ಸುಳ್ಳು ವೆಚ್ಚ ತೋರಿಸಿ ವಂಚಿಸಿದ್ದಾರೆ. ಅಧಿಕಾರಿಗಳು ಕಾಮಗಾರಿ ನಿಯಾಮಾವಳಿಯನ್ನು ಉಲ್ಲಂಘಿಸಿ ನಾಲ್ಕು ಆಯ್ದ ಗುತ್ತಿಗೆದಾರರಿಗೆ 59 ಕಾಮಗಾರಿಗಳ ತುಂಡು ಗುತ್ತಿಗೆ ನೀಡಿರುತ್ತಾರೆ. 7,54,540 ರೂಪಾಯಿಗೆ ಸೋಲಾರ್ ಟೇಬಲ್‌ಗಳನ್ನು ಖರೀದಿಸಿದ್ದು, ಪ್ರತಿ ಯುನಿಟ್‌ಗೆ 9,500 ರೂಪಾಯಿ ಪಾವತಿಸಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ಸೋಲಾರ್ ಯುನಿಟ್ ಒಂದರ ದರ ರೂ 4,500 ದಿಂದ 4,700 ಇದ್ದು, ಅಧಿಕಾರಿಗಳು ಐದು ಸಾವಿರ ಹೆಚ್ಚುವರಿಯಾಗಿ ಪಾವತಿ ಮಾಡಿದ್ದಾರೆ ಎಂದು ದೂರಲಾಗಿದೆ.ಎಚ್‌ಡಿಕೆ ಕಿಡಿ

`ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಯ ಅವ್ಯವಹಾರಗಳ ಕುರಿತು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲು ಮಾಡಿರುವುದರ ಹಿಂದೆ ಯಾರ ಕೈವಾಡ ಇದೆ ಎಂದು ಚೆನ್ನಾಗಿ ಬಲ್ಲೆ. ಸೂಕ್ತ ಸಂದರ್ಭದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ~ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದರು.`ಎಫ್‌ಐಆರ್ ದಾಖಲಾತಿಗೆ ಕುಮ್ಮಕ್ಕು ನೀಡಿರುವವರು ಯಾರು ಎನ್ನುವುದು ನನಗೆ ಗೊತ್ತಿದೆ. ಈ ಚಿತಾವಣೆ ನೀಡಿರುವವರ ಸಂಪೂರ್ಣ ಜಾತಕ ನನ್ನ ಕೈಯಲ್ಲಿ ಇದೆ. ಅವರ ಬಣ್ಣ ನನಗೆ ಗೊತ್ತಿದೆ. ಮುಂದೆ ಅವರಿಗೆ ಗಂಡಾಂತರ ಕಾದಿದೆ~ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.