ಶನಿವಾರ, ಫೆಬ್ರವರಿ 27, 2021
31 °C
ಇಂದಿನಿಂದ ರಾಯದುರ್ಗದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

ತೆಲುಗು ನೆಲದಲ್ಲಿ ಬಾರಿಸು ಕನ್ನಡ ಡಿಂಡಿಮವ

ಪ್ರಜಾವಾಣಿ ವಾರ್ತೆ/ ಗಾಣಧಾಳು ಶ್ರೀಕಂಠ /ಕೊಂಡ್ಲಹಳ್ಳಿ ಜಯಪ್ರಕಾಶ್ Updated:

ಅಕ್ಷರ ಗಾತ್ರ : | |

ತೆಲುಗು ನೆಲದಲ್ಲಿ ಬಾರಿಸು ಕನ್ನಡ ಡಿಂಡಿಮವ

ಚಿತ್ರದುರ್ಗ/ ಮೊಳಕಾಲ್ಮುರು: ರಾಯದುರ್ಗ ಆಂಧ್ರಪ್ರದೇಶಕ್ಕೆ ಸೇರಿದ್ದರೂ, ಮೊಳಕಾಲ್ಮುರಿನಿಂದ ಕೇವಲ 11 ಕಿ.ಮೀ. ದೂರವಿದೆ. ಇದು ಆಂಧ್ರ – ಕರ್ನಾಟಕದ ಗಡಿಭಾಗದ ಊರು. ಇಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ.ರಾಯದುರ್ಗವಷ್ಟೇ ಅಲ್ಲ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳು ಅನೇಕ ಹಳ್ಳಿಗಳು ನೆರೆಯ ಆಂಧ್ರಪ್ರದೇಶದ ಹಳ್ಳಿಗಳೊಂದಿಗೆ ಸಾಮಾಜಿಕ, ಆರ್ಥಿಕ ಹಾಗೂ ಭಾವನಾತ್ಮಕವಾಗಿ ಪರಸ್ಪರ ಸಂಬಂಧ ಹೊಂದಿವೆ.ಗಡಿಭಾಗದಲ್ಲಿರುವ ಎರಡೂ ರಾಜ್ಯಗಳ ಹಳ್ಳಿಗಳಲ್ಲಿ ಆಚಾರ, ವಿಚಾರ, ಸಂಸ್ಕೃತಿಗಳು ಅದರಲ್ಲೂ ಬುಡಕಟ್ಟು ಸಂಸ್ಕತಿ ಒಂದೇ ರೀತಿಯಲ್ಲಿವೆ. ಅನೇಕ ಜಾತ್ರೆಗಳು, ಆಚರಣೆಗಳನ್ನು ಎರಡೂ ರಾಜ್ಯದವರು ಸೇರಿ ಮಾಡುವ ಪದ್ಧತಿ ಇರುವುದು ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.ಆಂಧ್ರದಲ್ಲಿಯೇ ಅತಿದೊಡ್ಡ ಜೀನ್ಸ್‌ ಸಿದ್ಧಉಡುಪು ತಯಾರಿಕಾ ಸ್ಥಳವಾಗಿ ಹೊರಹೊಮ್ಮಿರುವ ರಾಯದುರ್ಗ ಇದಕ್ಕೂ ಮೊದಲು  ಮೊಳಕಾಲ್ಮುರು ರೇಷ್ಮೆಸೀರೆ ತಯಾರಿಕೆ ಕಾರ್ಯ ಸ್ಥಳವಾಗಿತ್ತು. 1,000ಕ್ಕೂ ಹೆಚ್ಚು ಕೈಮಗ್ಗ ಹೊಂದಿತ್ತು.ಆಧುನಿಕತೆ ಸೆಳೆತಕ್ಕೆ ಮಗ್ಗಗಳು ಮುಚ್ಚಿಹೋಗಿವೆ. 10 ವರ್ಷಗಳಿಂದ ಜೀನ್ಸ್ ಉದ್ಯಮ ರಾಯದುರ್ಗ ತಾಲ್ಲೂಕು ಹಾಗೂ ಗಡಿಭಾಗದ ಸಾವಿರಾರು ಕುಟುಂಬಗಳಿಗೆ ಅನ್ನ ನೀಡುತ್ತಿದೆ.ಈ ಭಾಗದ ಪ್ರಮುಖ ವಾಣಿಜ್ಯ ಬೆಳೆ ಶೇಂಗಾ. ಮಳೆ, ಬೆಳೆ ಶಾಶ್ವತ ನೀರಾವರಿ ಸೌಲಭ್ಯಗಳಿಲ್ಲದೇ ಜನರು ಕೂಲಿ ಹೋಗುತ್ತಾರೆ. ಇಲ್ಲವಾದರೆ ಗುಳೆ ಹೋಗುವುದು ಸಾಮಾನ್ಯ. ಗಡಿಭಾಗದಲ್ಲಿರುವ ಹಳ್ಳಿಗಳಲ್ಲಿ ಸಮಸ್ಯೆ, ಸೌಲಭ್ಯ, ಜಾತಿ, ಪಂಗಡ, ಬುಡಕಟ್ಟು ಸಂಸ್ಕೃತಿ, ಆಚಾರ– ವಿಚಾರ ಎಲ್ಲದರಲ್ಲೂ ಸಾಮ್ಯತೆ ಇದೆ. ಮದುವೆ ಸಂಬಂಧಗಳು ಅಂತರರಾಜ್ಯಕ್ಕೆ ವಿಸ್ತಾರಗೊಂಡಿವೆ. ಅಜ್ಜಿ ಊರು, ತಾತನ ಗ್ರಾಮ, ಅಮ್ಮನ ಬಂಧುಗಳು ಹೀಗೆ ಸಂಕಷ್ಟದಲ್ಲಿ ಸಮಾಧಾನ ಹೇಳಲು ಇಲ್ಲಿ ಗಡಿರೇಖೆ ಅಡ್ಡಿಯಾಗಿಲ್ಲ.ಒಂದು ಮಾಹಿತಿ ಪ್ರಕಾರ ಇಡೀ ಆಂಧ್ರದಾದ್ಯಂತ 84 ಕನ್ನಡ ಶಾಲೆಗಳಿವೆ. ವಿಶೇಷವಾಗಿ ಗಡಿನಾಡ ಭಾಗದಲ್ಲಿ ಕನ್ನಡ ಸಾಹಿತ್ಯವನ್ನು ಓದುವ ಹಾಗೂ  ಅದರ ಬಗ್ಗೆ ಮಾತನಾಡುವಂತಹ ಸಾಹಿತಿಗಳಿದ್ದಾರೆ. ಅಷ್ಟರಮಟ್ಟಿಗೆ ಆಂಧ್ರದಲ್ಲಿ ಕನ್ನಡ ಪ್ರೀತಿ ಹಾಸುಹೊಕ್ಕಾಗಿದೆ. ಇಷ್ಟೆಲ್ಲ ಕನ್ನಡ ಶಾಲೆಗಳಿದ್ದರೂ, ಆ ಶಾಲೆಗಳಿಗೆ ರಾಜ್ಯ ಸರ್ಕಾರ ಸಮರ್ಪಕವಾದ ಪಠ್ಯ ಪುಸ್ತಕಗಳನ್ನು ಪೂರೈಸುತ್ತಿಲ್ಲ ಎಂಬ ನೋವಿನ ನುಡಿಯೂ ಕೇಳಿಬರುತ್ತಿದೆ. ಇನ್ನೊಂದೆಡೆ ಆಂಧ್ರದಲ್ಲಿರುವ ಕನ್ನಡ ಶಾಲೆಗಳಿಗೆ ಯಾವ ಸರ್ಕಾರ ಪುಸ್ತಕಗಳನ್ನು ಪೂರೈಸಬೇಕೆಂಬ ಜಿಜ್ಞಾಸೆಯೂ  ಮುಂದುವರಿದಿದೆ. ಇದಕ್ಕೆ ಸಂಬಂಧಿಸಿದಂತೆ ಆಂಧ್ರ ಗಡಿನಾಡ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ವಿ.ಅಗ್ರಹಾರಂ ಎಚ್. ಬಿ.ಶಿವಕುಮಾರ್, ಸರ್ಕಾರಗಳಿಗೆ ಪತ್ರ ಬರೆದು ಪುಸ್ತಕ ಪೂರೈಕೆಗೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಗಮನಸೆಳೆದಿದ್ದಾರೆ. ಇತ್ತೀಚೆಗೆ ಕೊಡಗಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಈ ಬಗ್ಗೆ ಸಾಹಿತ್ಯಾಸಕ್ತರು, ಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ.ಹೀಗೆ ಭಾಷೆ, ಸಂಸ್ಕೃತಿ, ಗಡಿ ಶಾಲೆಗಳಲ್ಲಿನ ಕನ್ನಡ ಪಠ್ಯ ಪುಸ್ತಕಗಳ ಕೊರತೆ ಸೇರಿದಂತೆ ಅನೇಕ ಸಾಹಿತ್ಯ ವಿಚಾರಗಳನ್ನಿಟ್ಟುಕೊಂಡು ಇದೇ 15, 16ರಂದು ಆಂಧ್ರ ಗಡಿಭಾಗದ ರಾಯದುರ್ಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಂಧ್ರ ಗಡಿನಾಡ ಕನ್ನಡ ಘಟಕದಿಂದ 4ನೇ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ಆಂಧ್ರ– ಕರ್ನಾಟಕದ ಸಾಹಿತಿಗಳು, ಉಪನ್ಯಾಸಕರು ಪಾಲ್ಗೊಳ್ಳುತ್ತಿದ್ದಾರೆ. ಒಟ್ಟಾರೆ ಈ ಸಮಮೇಳನ ಗಡಿಕನ್ನಡಿಗರ ಕಷ್ಟ–ಸುಖಗಳನ್ನು ಹಂಚಿಕೊಳ್ಳುವ ವೇದಿಕೆಯಾಗಲಿದೆ.ಸಮ್ಮೇಳನಾಧ್ಯಕ್ಷರಾಗಿ ಶಿಕ್ಷಣ ತಜ್ಞ ಡಾ. ವೊಡೇ ಪಿ.ಕೃಷ್ಣ ಆಯ್ಕೆಯಾಗಿದ್ದಾರೆ. ಸಮ್ಮೇಳನವನ್ನು ಹಂಪಿ ವಿವಿ ಕುಲಪತಿ ಡಾ. ಹಿ.ಬಿ. ಬೋರಲಿಂಗಯ್ಯ ಉದ್ಘಾಟಿಸುತ್ತಿದ್ದಾರೆ. ರಾಯದುರ್ಗ ಶಾಸಕ ಕಾಪೂ ರಾಮಚಂದ್ರರೆಡ್ಡಿ ವಹಿಸಲಿದ್ದಾರೆ. ಎರಡು ಪ್ರಮುಖ ಗೋಷ್ಠಿಗಳಿವೆ. ಜೊತೆಗೆ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಪುಸ್ತಕಗಳ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಇವೆ.ಒಟ್ಟಾರೆ ಎರಡು ದಿನಗಳ ಕಾಲ ತೆಲುಗು ನಾಡಿನ ನೆಲದಲ್ಲಿ ಕನ್ನಡದ ಕಹಳೆ ಮೊಳಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.