ಸೋಮವಾರ, ಏಪ್ರಿಲ್ 19, 2021
25 °C

ತೋಟದಲ್ಲಿನ ಪುಟಾಣಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಅಮ್ಮ ಅಪ್ಪ ಇಬ್ಬರೂ ಬೆಂಗಳೂರಿನ ಚಿಕ್ಕ ಫ್ಯಾಕ್ಟರಿಯಲ್ಲಿ ಕೆಲಸದಲ್ಲಿದ್ದಾರೆ, ನಾನು ಕೂಡ ಅಲ್ಲಿಗೆ ಹೋಗುತ್ತಿದ್ದೆ, ಅಷ್ಟರಲ್ಲಿ ನನ್ನ ಅಜ್ಜಿ ತಡೆದು, ನನ್ನ ಬಳಿ ಇದ್ದುಕೊಂಡೇ ಹಳ್ಳಿ ಶಾಲೆಯಲ್ಲಿಯೇ ಓದು ಎಂದು ದುಂಬಾಲು ಬಿದ್ದರು. ಹಾಗಾಗಿ ನಮ್ಮೂರ ಶಾಲೆಯೇ ಈಗ ನನಗೆ ಅಚ್ಚುಮೆಚ್ಚಾಗಿದೆ~ ಎಂದು ಹೇಳಿ, ಥಟ್ಟನೆ ತನ್ನ ಪುಸ್ತಕದತ್ತ ಮಗ್ನರಾದವರು 5ನೇ ತರಗತಿ ವಿದ್ಯಾರ್ಥಿನಿ ಮಧು ಮಹೇಶ್ವರಿ.

                

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಲೈ ಮಹದೇಶ್ವರ ಬೆಟ್ಟಕ್ಕೆ ಸಾಗುವ ಮಾರ್ಗ ಮಧ್ಯೆ ಸಿಗುವ ಮತ್ತೀಪುರ ಎಂಬ ಪುಟ್ಟ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿಯು ತನ್ನ ಶಾಲೆಯ ಒಲವನ್ನು ವ್ಯಕ್ತಪಡಿಸಿದ ರೀತಿ. ಪ್ರಸಕ್ತ ಸನ್ನಿವೇಶದಲ್ಲಿ ಎಲ್ಲರಿಗೂ ಈ ಶಾಲೆ ಮಾದರಿಯಾಗಿ ಗುರುತಿಸಿಕೊಂಡಿದೆ.ಒಂದರಿಂದ ಐದನೇ ತರಗತಿವರೆಗಿದ್ದು, ಒಟ್ಟು 22 ವಿದ್ಯಾರ್ಥಿಗಳಿದ್ದಾರೆ. ಇವರ ಕಾರ್ಯವೈಖರಿ ಎಂತಹವರಿಗೂ ಆಶ್ಚರ್ಯ ಮೂಡಿಸುವಂತಿದೆ. ಏಕೆಂದರೆ ವಿದ್ಯಾರ್ಥಿಗಳೇ ತಮ್ಮ ಮನೆಗಳ ಬಳಿ ಇರುವ ಪುಟ್ಟ ಪುಟ್ಟ ತೋಟಗಳಲ್ಲಿ ಸ್ವತಃ ಬಿಡುವಿನ ವೇಳೆಯಲ್ಲಿ ತರಕಾರಿಗಳನ್ನು ಬೆಳೆದು ಮಧ್ಯಾಹ್ನದ ಬಿಸಿಯೂಟದ ತಯಾರಿಕೆಗೆ ನೀಡುತ್ತಾ ಬಂದಿದ್ದಾರೆ.   ಪ್ರಸ್ತುತ ಸಾಲಿನಲ್ಲಿ ತರಕಾರಿ ಬೆಳೆಯಲು ಮುಂದಾಗಿ, ಪ್ರತಿನಿತ್ಯ ತಪ್ಪದೇ ಮಧ್ಯಾಹ್ನದ ಊಟಕ್ಕೆ ವಿದ್ಯಾರ್ಥಿಗಳೇ ಬೆಳೆದ ತರಕಾರಿಗಳಿಂದಲೇ ನಿತ್ಯದ ಸಾಂಬಾರ್ ಸಿದ್ಧಪಡಿಸುವಿಕೆ. ವಿದ್ಯಾರ್ಥಿಗಳು ಕಾವೇರಿ, ಕಬಿನಿ, ಶರಾವತಿ ಹಾಗೂ ನೇತ್ರಾವತಿ ಎಂಬ ನಾಲ್ಕು ನದಿಗಳ ಹೆಸರಿನಲ್ಲಿ ತಂಡಗಳನ್ನು ರಚಿಸಿಕೊಂಡು, ಚಾಚೂ ತಪ್ಪದೆಯೇ ತರಕಾರಿಗಳನ್ನು ಸ್ವಚ್ಛಗೊಳಿಸಿ ಶಾಲೆಯ ಅಡುಗೆ ಸಿಬ್ಬಂದಿಗೆ ಒಪ್ಪಿಸುತ್ತಾ ಬಂದಿದ್ದಾರೆ. ಮೂಲಂಗಿ, ಬೀನ್ಸ್(ಹುರುಳಿಕಾಯಿ), ಟೊಮೆಟೊ, ಆಲೂಗೆಡ್ಡೆ ಸೇರಿದಂತೆ ಎಲ್ಲ ಬಗೆಯ ತರಕಾರಿ, ಸೊಪ್ಪುಗಳನ್ನು ಸ್ವತಃ ಬೆಳೆದು ಪ್ರತಿನಿತ್ಯ ಶಾಲೆಗೆ ತರುತ್ತಿದ್ದಾರೆ.`ನನ್ನ ಬಿಡುವಿನ ವೇಳೆಯನ್ನು ತರಕಾರಿಗಳನ್ನು ಬೆಳೆಯಲು ಉಪಯೋಗಿಸುತ್ತೇನೆ. ಇರುವ ಚಿಕ್ಕ ತೋಟವನ್ನು ಸಿದ್ಧಪಡಿಸಿ, ಯಾರ ಸಹಾಯವಿಲ್ಲದೆಯೇ ತರಕಾರಿಗಳನ್ನು ಬೆಳೆದು ಶಾಲೆಗೆ ಕೊಡುತ್ತೇನೆ. ಮನೆಗೂ ಸಹ ನೀಡುತ್ತೇನೆ. ನಗರದಿಂದ ತರುವ ತರಕಾರಿಗಳಿಗಿಂತ, ನಾವೇ ಬೆಳೆದಂತಹ ತರಕಾರಿಗಳಿಂದ ತಯಾರಾದ ಮಧ್ಯಾಹ್ನದ ಸಾಂಬಾರ್ ಹೆಚ್ಚಿನ ರುಚಿಯಿಂದ ಕೂಡಿರುತ್ತದೆ ಎಂದು ಹಸನ್ಮುಖಿಯಿಂದ ಹೇಳಿಕೊಳ್ಳುವ 5ನೇ ತರಗತಿ ವಿದ್ಯಾರ್ಥಿನಿ ಕೀರ್ತನಾ ವ್ಯಾಸಂಗದಲ್ಲೂ ಮುಂದು.       ಮಧ್ಯಾಹ್ನದ ಬಿಸಿಯೂಟಕ್ಕೆ ಹಲವಾರು ವರ್ಷಗಳಿಂದಲೂ ಪಕ್ಕದ ಕೊಳ್ಳೇಗಾಲ ಮಾರುಕಟ್ಟೆಯಲ್ಲಿ ತಂದಂತಹ ತರಕಾರಿಗಳಿಂದಲೇ ಸಾಂಬಾರ್ ತಯಾರಾಗುತಿತ್ತು. ಒಮ್ಮೆ ಶಾಲೆಗೆ ಭೇಟಿ ನೀಡಿದ ನೈಸರ್ಗಿಕ ಕೃಷಿಕರಾದ ಎಂ.ಕೆ.ಕೈಲಾಸಮೂರ್ತಿಯವರು, ವಿದ್ಯಾರ್ಥಿಗಳಿಗೆ ನಗರ ಪ್ರದೇಶಗಳಲ್ಲಿ ಕೊಂಡು ತರುವ ತರಕಾರಿಗಳು ಆರೋಗ್ಯಕ್ಕೆ ಎಷ್ಟು ಹಾನಿಕಾರಕವಾಗಿವೆ. ಮನೆಯಲ್ಲೂ ಬಳಸುತ್ತಿರುವ ತರಕಾರಿಗಳು ಹಾಗೂ ಮಾರುಕಟ್ಟೆಯ ಹಣ್ಣು ಹಂಪಲುಗಳ ಸೇವನೆಯಿಂದ ಯಾವ ತೊಂದರೆಯಾಗುತ್ತದೆ ಎಂಬುದರ ಬಗ್ಗೆ ಪಿಪಿಟಿ (ಪವರ್ ಪಾಯಿಂಟ್ ಪ್ರೆಸೆಂಟೇಷನ್) ಮೂಲಕ ಮತ್ತೀಪುರ ಶಾಲೆಯ ವಿದ್ಯಾರ್ಥಿಗಳಿಗೆ ಪರಿ ಪರಿಯಾಗಿ ತಿಳಿಸಿಕೊಟ್ಟಿದ್ದರು.    ಇವುಗಳ ಸೇವನೆಯಿಂದ ಮುಂದೆ ಯಾವ ತರಹದ ದುಷ್ಪರಿಣಾಮಗಳು ಬೀರುತ್ತವೆ, ಕೃಷಿ ಉತ್ಪನ್ನದ ಆಸೆಗೆ ಬಳಸುತ್ತಿರುವ ಎಂಡೋಸಲ್ಫಾನ್, ರಾಸಾಯನಿಕಗಳಂತಹವುಗಳನ್ನು ಬೆಳೆಗಳಿಗೆ ಸಿಂಪಡಿಸುವುದರಿಂದ ವಿಷಕಾರಿ ರೂಪ ತಾಳುತ್ತಿದ್ದು, ಅವುಗಳ ಸೇವನೆಯಿಂದ ಮುಂದಾಗುವ ಪರಿಣಾಮಗಳು, ಕ್ರಿಮಿನಾಶಕ ಹಾಗೂ ರಾಸಾಯನಿಕಗಳನ್ನು ಬಳಸದೆಯೇ ಸಾವಯವ ಪದ್ಧತಿ, ನೈಸರ್ಗಿಕವಾಗಿ ಮತ್ತು ಸಾಮಾನ್ಯ ರೀತಿಯ ಕೊಟ್ಟಿಗೆ ಗೊಬ್ಬರ ಹಾಕಿ ತರಕಾರಿಗಳನ್ನು ಬೆಳೆಯಬಹುದು ಎಂಬ ಉತ್ತಮ ಮಾಹಿತಿಯನ್ನು ತಿಳಿಸಿಕೊಟ್ಟಿದ್ದರು.

 

ನಂತರದಲ್ಲಿಯೇ ಶಿಕ್ಷಕರು ನಗರದಿಂದ ತರುತ್ತಿದ್ದ ತರಕಾರಿಗಳನ್ನು ವಿದ್ಯಾರ್ಥಿಗಳೇ ನಿಲ್ಲಿಸಿ, ಕೊಟ್ಟಿಗೆ ಗೊಬ್ಬರ ಬಳಸಿ ಸ್ವತಃ ಬೆಳೆದ ತರಕಾರಿಗಳನ್ನು ಶಾಲೆಗೆ ತರಲು ಮುಂದಾಗುತ್ತಿದ್ದಾರೆ. ತಾವು ಬೆಳೆಯುವಂತಹ ತರಕಾರಿಗಳ ಬೆಳೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ನೆರವಾಗುವುದು ವಿಶೇಷತೆಯಿಂದ ಕೂಡಿದ್ದು, ಯಾವುದೇ ರಜಾ ದಿನಗಳು ಬಂದರೆ ಸುಮ್ಮನೆ ಕಾಲ ಕಳೆಯುವುದಿಲ್ಲ, ಒಂದೆಡೆ ಸೇರಿ ಚರ್ಚೆ ನಡೆಸಿ ತರಕಾರಿ ಬೆಳೆಯುವಲ್ಲಿ ನಿರತರಾಗಿ, ನಾಲ್ಕು ತಂಡದವರು ಮಿಕ್ಕ ಸಮಯವನ್ನು ಪಠ್ಯ ವಿಷಯವಾಗಿ ಕಳೆಯಲು ಮುಂದಾಗುತ್ತಾರೆ.ಇಲಾಖೆಯಿಂದ ತರಕಾರಿಗಾಗಿ ನೀಡುವ 473ರೂಗಳನ್ನು ಉಳಿಸಿ ವಿಶೇಷ ಒಂದು ದಿನದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡಲು ಮುಂದಾಗುತ್ತಿದ್ದಾರೆ. ವಿದ್ಯಾರ್ಥಿಗಳ ಪೋಷಕರು ಸಹ ತಮ್ಮ ಮಕ್ಕಳ ಕಾರ್ಯಶೈಲಿಗೆ ಪ್ರೊತ್ಸಾಹಿಸುತ್ತಾ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಎಂ.ಕೆ.ಕೈಲಾಸಮೂರ್ತಿಯವರು ವಿದ್ಯಾರ್ಥಿಗಳ ಮನಪರಿವರ್ತನೆಯನ್ನು ಕಂಡು ಆಶ್ಚರ್ಯಗೊಂಡರು.          ಮತ್ತೀಪುರ ಗ್ರಾಮದಲ್ಲಿ ಕೆಲ ವರ್ಷಗಳ ಹಿಂದೆ ಮಕ್ಕಳನ್ನು ಪಕ್ಕದ ಕೊಳ್ಳೇಗಾಲ ನಗರದ ಕಾನ್ವೆಂಟ್‌ಗಳಿಗೆ ಸೇರಿಸಿದ್ದರು. ನಂತರದಲ್ಲಿ ಶಾಲೆಯ ವಾಸ್ತವ ಚಿತ್ರಣ ಕಂಡು ಊರಿನವರು ಸಹ, ತಮ್ಮ ಮಕ್ಕಳನ್ನು ತಮ್ಮೂರ ಸರ್ಕಾರಿ ಶಾಲೆಗೆ ಸೇರಿಸಲು ತೀರ್ಮಾನಿಸಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂಬುದನ್ನು ಮುಖ್ಯಶಿಕ್ಷಕ ತೋಮಯ್ಯನ್ ಹೇಳುತ್ತಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.