ಭಾನುವಾರ, ಮಾರ್ಚ್ 26, 2023
31 °C

ದಂಡಕಾರಣ್ಯದೊಳಗೆ...

ಕೆ.ಪಿ. ಸುರೇಶ Updated:

ಅಕ್ಷರ ಗಾತ್ರ : | |

ದಂಡಕಾರಣ್ಯದೊಳಗೆ...

ಒಡಿಶಾ, ಛತ್ತೀಸ್‌ಗಡಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಪ್ರಸ್ತಾವವೊಂದನ್ನು ಮೌಲ್ಯಮಾಪನ ಮಾಡುವ ಕಾರ್ಯಕ್ಕಾಗಿ ನಾನು ಬಸ್ತಾರ್, ಕೋರಾಪುಟ ಮತ್ತಿತರ ಜಿಲ್ಲೆಗಳಲ್ಲಿ ಮೊನ್ನೆ ಮೊನ್ನೆ ಓಡಾಡಿದೆ.ರಾಯಗಡ, ಕೋರಾಪುಟ್ ಎಂಬ ದಕ್ಷಿಣ ಒಡಿಶಾದ ಜಿಲ್ಲೆಗಳು ಮತ್ತು ಛತ್ತೀಸ್‌ಗಡದ ಬಸ್ತಾರ್ ಜಿಲ್ಲೆ- ನಮ್ಮ ಮಲೆನಾಡನ್ನು ಅಕ್ಷರಶಃ ಹೋಲುವ ಈ ಜಿಲ್ಲೆಗಳ ಸಮೂಹವನ್ನು ದಂಡಕಾರಣ್ಯ ಎಂದೂ ಕರೆಯುತ್ತಾರೆ. (ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಅಲ್ಪ ಭಾಗವೂ ಇದರಲ್ಲಿ ಸೇರುತ್ತದೆ). ಜೊತೆಗೆ ಹೊಟ್ಟೆಗಿಲ್ಲದ ಸಾವು ಮತ್ತು ಕೋಮುಹಿಂಸೆಯ ಕಾರಣಕ್ಕೆ ನಮ್ಮ ಪ್ರಜ್ಞೆಯಲ್ಲಿ ಅಚ್ಚೊತ್ತಿರುವ ಕಾಲಾಹಂದಿ, ಕಂದಮಾಲ್ ಜಿಲ್ಲೆಗಳನ್ನು ಸೇರಿಸಿದರೆ ಅಲ್ಲಿಗೆ ಒಪ್ಪವಾಯಿತು. ಮಧ್ಯಭಾರತದ ಈ ದಟ್ಟ ಅರಣ್ಯ ಪ್ರದೇಶದ ವಿಸ್ತಾರ ಸುಮಾರಾಗಿ ನಮ್ಮ ದಖನ್ ಪ್ರಸ್ಥಭೂಮಿಯಷ್ಟಿದೆ. ಕಾಲಾಹಂದಿಯಲ್ಲಿ ಹೊಟ್ಟೆಗಿಲ್ಲದೇ ಸಾವನ್ನಪ್ಪಿದ ಆದಿವಾಸಿಗಳ ಚಿತ್ರ ನೋಡಿದ್ದ ನನಗೆ ಅಲ್ಲಿನ ಕಾಡು ಝರಿ ಕಣಿವೆಗಳ ಸಮೃದ್ಧಿ ನೋಡಿ ದಿಗ್ಭ್ರಮೆಯಾಯಿತು.ಕಾಕತಾಳೀಯವೆಂಬಂತೆ ನಾನು ಅಲ್ಲಿದ್ದ ದಿನಗಳಲ್ಲಿ ಮಳೆ ಅವ್ಯಾಹತವಾಗಿ ಬೀಳುತ್ತಿತ್ತು. ಮಿಂದು ಹುಚ್ಚೆದ್ದ ನೆಲ ಹಸಿರು ಚಿಮ್ಮಿಸಿದರೆ, ಕೆರೆ ತೊರೆ ಝರಿಗಳು ಸೊಕ್ಕಿ ಹರಿಯುತ್ತಿದ್ದವು. ಇದ್ಯಾವ ವೈರುಧ್ಯ? ಇಂಥಾ ಕಾಡು ಮಳೆ ಇದ್ದೂ ಜನರೇಕೆ  ಸಾಯುತ್ತಾರೆ? ಪ್ರಶ್ನೆಗಳು ಹುಟ್ಟಿದರೆ ನಿಮ್ಮ ನೆಮ್ಮದಿ ಹಾಳಾಯಿತೆಂದೇ ಅರ್ಥ.ನಾನು ಮೊದಲು ಕಾಲಿಟ್ಟಿದ್ದು ರಾಯಘಡಕ್ಕೆ. ಅಲ್ಲಿನ ಆದಿವಾಸಿಗಳು ಈಗಲೂ ಕುಮೇರಿ ಕೃಷಿ ಮಾಡುತ್ತಾರೆ, ಅಂದರೆ ಕಾಡಿನ ಒಂದಷ್ಟು ಜಾಗ ಸವರಿ ಬೆಂಕಿ ಇಟ್ಟು ಅಲ್ಲಿ ಕೃಷಿ ಮಾಡುವುದು. ಭತ್ತ ಚೆಲ್ಲಿ ಬಿಟ್ಟು ಬಂದದ್ದನ್ನು ಬಳಸೋದು. ಈ ಕೃಷಿ ಈಗ ಕಡಿಮೆಯಾಗುತ್ತಿದೆ. ಆದರೆ ಎರಡು ಬೆಟ್ಟಗಳ ನಡುವೆ ಸುಮಾರಾಗಿ ಮೈಲುದ್ದದ ಕಣಿವೆಗಳಲ್ಲಿ ಸೋಪಾನ ಮಾದರಿ ವ್ಯವಸ್ಥಿತ ಕೃಷಿ ಇದೆ. ಉತ್ತು ಬಿತ್ತಿದರೆ ಹಸನಾದ ಬೆಳೆ.

 

ಆದರೆ, ಪೂರ್ತಿ ಮಳೆಯಾಧಾರಿತ. ಮಳೆ ಕೊಂಚ ಕಣ್ಣುಮುಚ್ಚಾಲೆಯಾಡಿದರೂ ಬೆಳೆ ಕೈ ಕೊಟ್ಟಿತೆಂದೇ ಅರ್ಥ. ಮಳೆಯಾಯಿತೆಂದರೆ ಜುಳುಜುಳು ಹರಿಯುವ ನೀರು. ಈ ನೀರು ಇಳಿ ಇಳಿದು ನಾಗವಲ್ಲಿ ನದಿ ಸೇರುತ್ತದೆ. ದಶಂಬರದಿಂದಾಚೆ ನೆಲದಲ್ಲಿ ಪಸೆ ಹನಿ ಇಲ್ಲ.ಇಲ್ಲಿನ ಮಣ್ಣಿನಲ್ಲಿ ತುಂಬಾ ನೀರು ನಿಲ್ಲೋದಿಲ್ಲ. ಇಂಗಿ ಇಳಿದು ಹೋಗುತ್ತದೆ. ಹೋಗಲಿ ಬೋರ್‌ವೆಲ್ ಹೊಡೆಯೋಣ ಅಂದರೆ ಆಳ ಶಿಲಾ ಪದರದ ಕಾರಣಕ್ಕೆ 200-300 ಅಡಿ ಬಗೆಯದೇ ನೀರು ದಕ್ಕುವುದಿಲ್ಲ. ಸಿಕ್ಕರೂ ಆ ನೀರಿನ ಗುಣಮಟ್ಟ ಅಷ್ಟಕ್ಕಷ್ಟೇ. ವಿದ್ಯುತ್ ಕಣ್ಣಾಮುಚ್ಚಾಲೆಯ ಸಂಕಷ್ಟವೂ ಸೇರಿದರೆ ಇನ್ನೇನು ಉಳಿಯಿತು?ಈ ದಕ್ಷಿಣ ಒಡಿಶಾವೇ ಸುಮಾರಾಗಿ ಆಂಧ್ರದ ನದಿಗಳ ಜಲಾನಯನ ಪ್ರದೇಶ. ಆಂಧ್ರದ ಲಕ್ಷಾಂತರ ಎಕರೆಗೆ ದೊರಕುವ ನೀರು ಒಡಿಶಾದಿಂದಲೇ ಬಸಿದು ಹೋಗುತ್ತದೆ. ಒಮ್ಮೆ ಕೋರಾಪುಟದ ಘಾಟಿಯ ನೆತ್ತಿಯ ಮೇಲೆ ನಿಂತರೆ, ಕೆಳಗೆ ಆಂಧ್ರದ ವಿಸ್ತಾರ ಕಾಣುತ್ತದೆ. ಇಲ್ಲಿನ ಬದುಕನ್ನು ಚಾರಿತ್ರಿಕವಾಗಿ ನಿರ್ಧರಿಸಿರುವುದೇ ಆಂಧ್ರ ಮತ್ತು ಮಳೆ.ಶತಮಾನಗಳಿಂದ ಆಂಧ್ರದ ಮುಷ್ಠಿಯೊಳಗಿರುವ ವಸಾಹತುಗಳಿವು ಎಂದರೂ ತಪ್ಪಾಗದು. ಈ ಪ್ರದೇಶದ ಸಕಲ ವ್ಯಾಪಾರಗಳನ್ನು ಇಂದು ನಿಯಂತ್ರಿಸುತ್ತಿರುವುದೇ ಆಂಧ್ರ. ಇಲ್ಲಿನ ಅದಿರು, ತರಕಾರಿ, ಆದಿವಾಸಿಗಳು ಸಂಗ್ರಹಿಸುವ ತರಹೇವಾರಿ ಅರಣ್ಯ ಕಿರು ಉತ್ಪನ್ನಗಳು (ತೆಂಡು ಎಲೆ, ಊಟದ ಎಲೆ, ಹುಣಸೆಹಣ್ಣು ಇತ್ಯಾದಿ) ಮೂರು ಕಾಸಿಗೆ ಆಂಧ್ರಕ್ಕೆ ಹೋಗುತ್ತದೆ.ಆಂಧ್ರದ ಯಜಮಾನಿಕೆಗೆ ಈ ಅಂಚಿನ ಜಿಲ್ಲೆಗಳು ಎಷ್ಟು ಒಗ್ಗಿಕೊಂಡಿವೆಯೆಂದರೆ ಒಡಿಯಾ ಜೊತೆಗೆ ತೆಲುಗು ಬೋರ್ಡುಗಳು ತೀರಾ ಸಾಮಾನ್ಯ. ಇನ್ನು ಹೇಳುವುದಾದರೆ ಈ ಜಿಲ್ಲೆಗಳನ್ನು ಪೂರಾ ನಿಯಂತ್ರಿಸುತ್ತಿರುವ ಮಾವೋವಾದಿಗಳೂ ಆಂಧ್ರ ಮೂಲದಿಂದ ಬಂದವರೇ!***

ಒಂದು ಸರಳ ಪ್ರಯೋಗ ಮಾಡಿ. ಈ ದೇಶದ ದಟ್ಟ ಅರಣ್ಯವಿರುವ ಭೂಪಟ ತೆಗೆದುಕೊಳ್ಳಿ. ಅದರ ಮೇಲೆ ಆದಿವಾಸಿ ಜನ ಸಮುದಾಯ ಇರುವ ಭೂಪಟ ಇಡಿ. ಅದರ ಮೇಲೆ ಅಪಾರ ಅದಿರು ಸಂಪತ್ತು ಲಭ್ಯ ಇರುವ ಭೂಪಟ ಇಡಿ. ಸರಿಯಾಗಿ ಈ ಮೂರೂ ಒಂದರ ಮೇಲೊಂದು ಕೂತಿರುತ್ತದೆ. ಅದೇ ದಂಡಕಾರಣ್ಯ! ಇದರ ಮೇಲೆ ಮಾವೋವಾದಿ ಪ್ರಭಾವದ ಭೂಪಟ ಇಟ್ಟರೆ ಅಲ್ಲಿಗೆ ಪ್ರಯೋಗ ಪೂರ್ತಿಯಾದಂತೆ.ಸ್ವಾತಂತ್ರ್ಯಾನಂತರ ಸರ್ಕಾರವೇ ಸಕಲ ನೆಲಜಲಕ್ಕೆ ಅಧಿಪತಿಯಾದ ಬಳಿಕ, ತೆಂಡು ಎಲೆಯಿಂದ ಹಿಡಿದು ಸಕಲವನ್ನೂ ಅಧಿಕಾರಿ ಮತ್ತು ಗುತ್ತಿಗೆದಾರರ ಕೈಗಿತ್ತಿತು. ಅಲ್ಲಿ ಅನಾದಿಕಾಲದಿಂದ ಬಾಳುವೆ ಮಾಡುತ್ತಿದ್ದವರನ್ನೇ ಅತಿಕ್ರಮ ಪ್ರವೇಶಿಗರೆಂಬಂತೆ ಸರ್ಕಾರ ನೋಡತೊಡಗಿತು. ಸೋಪಾನ ಕಣಿವೆಗಳಲ್ಲಿ ಆದಿವಾಸಿಗಳು ಕೃಷಿ ಮಾಡುತ್ತಿದ್ದ ಜಮೀನಿಗೆ ತಕ್ಕ ಪಹಣಿ ದಾಖಲೆಗಳಿಲ್ಲದೆ, ಕಂದಾಯ, ಅರಣ್ಯ ಎರಡೂ ಇಲಾಖೆಗಳ ಅಡಕತ್ತರಿಯಲ್ಲಿ ಈ ಮಂದಿ ಬಸವಳಿದು ಹೋದರು. ಕಾಡಿನೊಳಗೆ, ಅಂಚಿನಲ್ಲಿ ಬದುಕುತ್ತಾ ಬಂದಿದ್ದ ಆದಿವಾಸಿಗಳು ಈ ಜುಲುಮೆಯೊಂದಿಗೇ ಬದುಕುವುದೂ ಕಲಿತರು. ಎಷ್ಟಾದರೂ ಕಿರು ಅರಣ್ಯ ಉತ್ಪನ್ನ, ಟಿಂಬರು ಸಂಗ್ರಹಿಸಲು ಯಾವ ಅಧಿಕಾರಿ ತಾನೇ ಕಾಡೊಳಗೆ ಹೋಗುತ್ತಾನೆ? ತಮ್ಮ ನೆಲದಲ್ಲೇ ಜೀತದಾಳುಗಳಾದ ಈ ಮಂದಿಯನ್ನು ಮುಖ್ಯ ವಾಹಿನಿಗೆ ತರುವ ದಿಸೆಯಲ್ಲಿ ಶಾಲೆ, ಆಸ್ಪತ್ರೆಗಳನ್ನೂ ತೆರೆಯಲಾಯಿತು. ಆದಿವಾಸಿಗಳು ಗುಣಮಟ್ಟದ ಶಿಕ್ಷಣವಿಲ್ಲದೇ ನಪಾಸಾಗಿ ಕೀಳರಿಮೆಯಲ್ಲಿ ಒದ್ದಾಡುತ್ತಿದ್ದರೆ, ಇನ್ನೊಂದೆಡೆ- ವೈದ್ಯರು, ಔಷಧಿ ಎರಡೂ ಇಲ್ಲದ ಆಸ್ಪತ್ರೆಗಳ ಮೂಲಕ ಅವರನ್ನು ದಿಕ್ಕೆಡುವಂತೆ ಮಾಡಿದ ಬಗೆ ದಾರುಣ. ತನ್ನ ಪಾಡಿಗೆ ಬಾಳುವವರ ಬದುಕನ್ನೂ ನರಕವಾಗಿಸುವ ವಿಕೃತ ಪ್ರತಿಭೆ ಸರ್ಕಾರಕ್ಕಿದೆ.ಒಂದು ಬೆಳೆ ಭತ್ತ, ತೊಗರಿ, ಸಜ್ಜೆ, ಅರಿಶಿನ ಇತ್ಯಾದಿ ಬೆಳೆವ ಈ ಮಂದಿ ಈಗ ತಾವು ಬೆಳೆದ ಸ್ವಾದಿಷ್ಟ ನಾಟಿ ತಳಿ ಫಸಲನ್ನೂ ನಗದು ಅಗತ್ಯಕ್ಕಾಗಿ ಮಾರಿ, ಕೇಜಿಗೆ 2 ರೂಪಾಯಿಯ ಮುಗ್ಗುಲು ರೇಷನ್ ಅಕ್ಕಿ ತಿನ್ನುತ್ತಾರೆ. ಸರ್ಕಾರವೇ ಮುತುವರ್ಜಿ ವಹಿಸಿ ನೀಡಿರುವ ಅಪೌಷ್ಟಿಕತೆಯ ಉಡುಗೊರೆ ಇದು.ಜಾಗತೀಕರಣದ ಮೊದಲು ಸರ್ಕಾರಿ ಹಿಂದುಸ್ತಾನ್ ಅಲ್ಯೂಮಿಯಂ ಇಲ್ಲಿನ ಅದಿರನ್ನು ಬಗೆಯುತ್ತಿತ್ತು. ಆದರೆ ಜಾಗತೀಕರಣದ ಬಳಿಕ ಖಾಸಗಿ ಕಂಪೆನಿಗಳಿಗೆ ಇಲ್ಲಿನ ಊಹಾತೀತ ಅದಿರು ಬಗೆಯಲು ನವೀನ್ ಪಟ್ನಾಯಕ್ ಸರ್ಕಾರ ಸ್ವಾಗತ ನೀಡಿತು. ನಮ್ಮ ಬಳ್ಳಾರಿಯ ನೂರು ಪಟ್ಟು ಖನಿಜ ಸಂಪತ್ತನ್ನು ಒಡಲೊಳಗೆ ಇಟ್ಟುಕೊಂಡಿರುವ ಪ್ರದೇಶ ಈ ದಂಡಕಾರಣ್ಯ. ವೇದಾಂತ ಎಂಬ ಹೆಸರಿನ ಕಂಪೆನಿಯೂ ಕಾಲಿಟ್ಟಿದ್ದು ಆಗಲೇ. (ಈ ಹೆಸರನ್ನು ಬದಲಾಯಿಸಬೇಕು ಅಂತ ನಮ್ಮ ಮಠಾಧೀಶರುಗಳು ಸಾಂಕೇತಿಕವಾಗಿಯಾದರೂ ಒತ್ತಾಯಿಸಬೇಕು!).ಅಲ್ಲಿಂದ ಉದ್ಘಾಟನೆಗೊಂಡ ಅಶಾಂತಿ ಇಂದು ಇಡೀ ಮಧ್ಯಭಾರತವನ್ನು ಆವರಿಸಿದೆ. ಆದಿವಾಸಿಗಳ ಹಕ್ಕಿನ ಸಾಂವಿಧಾನಿಕ ಹೋರಾಟವೂ ಹೊಸ ಮಜಲು ತಲುಪಲು ಸಾಧ್ಯವಾಗಿದ್ದು ಆಗಲೇ. ಇದು ತುರೀಯ ಸ್ಥಿತಿಗೆ ತಲುಪಿ 2008ರಲ್ಲಿ ಆದಿವಾಸಿಗಳ ಅರಣ್ಯಹಕ್ಕು ಕಾಯಿದೆಯೇನೋ ಜಾರಿಗೆ ಬಂದಿತು. ಆದರೆ ಅದೂ ಯಥಾ ಪ್ರಕಾರ ಚಿತಾವಣೆ ರಾಜಕಾರಣ, ದರ್ಪಿಷ್ಟ ಅಧಿಕಾರಶಾಹಿಯಿಂದಾಗಿ ಕುಂಟುತ್ತಾ ಅನುಷ್ಠಾನಗೊಳ್ಳುತ್ತಿದೆ.ಅಷ್ಟರಲ್ಲಾಗಲೇ ಆಂಧ್ರದಲ್ಲಿ ಬೇರೂರಿದ್ದ ಮಾವೋವಾದಿ ಸಂಘಟನೆ ಈ ಮಧ್ಯಭಾರತದ ಆದಿವಾಸಿ ಪ್ರದೇಶಗಳಲ್ಲಿ ಬಲಿಷ್ಠವಾಗಿ ಕಾಲೂರಿತ್ತು. ಇಂದು ಯಾವ ಪರಿಸ್ಥಿತಿ ಇದೆಯೆಂದರೆ ನಾನು ಓಡಾಡಿದ ಮೂರ‌್ನಾಲ್ಕು ಜಿಲ್ಲೆಗಳಲ್ಲಿ ಅಕ್ಷರಶಃ ಮಾವೋವಾದಿಗಳ ನಿಯಂತ್ರಣ ಇದೆ. ಹೆದ್ದಾರಿ, ದೊಡ್ಡ ನಗರಗಳು ಬಿಟ್ಟರೆ, ಗ್ರಾಮಾಂತರ ಪ್ರದೇಶಗಳಲ್ಲಿ, ಅಧಿಕೃತ ರಾಜ್ಯ ಸರ್ಕಾರ ಒಂದಷ್ಟು ಕಚೇರಿ, ಶಾಲೆ, ಕುಡಿಯುವ ನೀರು ಇಷ್ಟನ್ನು ನಿರ್ವಹಿಸುತ್ತಾ ಕೂತಿದೆ.ಇಲ್ಲಿನ ಪೊಲೀಸ್ ಇಲಾಖೆ ಸುಮ್ಮನೆ ಉಠ್ ಬೈಸ್ ಮಾಡಿ ನೊಣ ಓಡಿಸಲು ಲಾಠಿ ಬೀಸುವ ಮಟ್ಟಕ್ಕಿದೆ. ಇಡೀ ಪ್ರದೇಶವನ್ನೇ ಕೇಂದ್ರ ಮೀಸಲು ಪೊಲೀಸ್ ಪಡೆ ನಿರ್ವಹಿಸುತ್ತಿದೆ.ಪ್ರತಿ 30-40 ಕಿ.ಮೀ.ಗೆ ಗಾಡಿ ನಿಲ್ಲಿಸಿ ತಪಾಸಣೆ ಮಾಡುತ್ತಾರೆ. ಸೆಮಿ ಆಟೋಮ್ಯಾಟಿಕ್ ರೈಫಲ್ ಹೊಂದಿದ ತರುಣ ಪೊಲೀಸರು ಕೂಂಬಿಂಗ್ ಅಂತ ಕಾಡಿಗೆ ತೆರಳುತ್ತಾರೆ, ಶಿಕಾರಿಗೆ ಹೋದವರು ಹಂದಿ ಸಿಗದಿದ್ದರೆ, ಮೊಲವಾದರೂ ಹೊಡೆದು ತರುವ ಒತ್ತಡದಲ್ಲಿರುತ್ತಾರೆ. ಹಾಗೇ ಈ ಪೊಲೀಸರು ಮಾವೋವಾದಿಗಳ ಬೇಟೆಗೆ ತೆರಳಿ, ಅಲ್ಲಿ ಸಿಕ್ಕಿದ ಆದಿವಾಸಿ ಹುಡುಗರಿಗೆ ಗುಂಡಿಕ್ಕಿ ಮೂರು ಮಾವೋವಾದಿಗಳನ್ನು ಕೊಂದೆವು ಎಂದು ಘೋಷಿಸಿ ವಾಪಸ್ಸಾಗುತ್ತಾರೆ.ಛತ್ತೀಸ್‌ಗಡದ ಬಿಜಾಪುರದಲ್ಲಿ ಬಲಿಯಾದದ್ದು ಇಂಥ ಅಮಾಯಕರೇ, ಇಂಥಾ ಒಂದು ಅಡ್ಡಕಸುಬಿ ಕೆಲಸ ಇಡೀ ದಂಡಕಾರಣ್ಯದ ತುಂಬಾ ಪರಿಣಾಮ ಬೀರುತ್ತದೆ. ಈಗ ಎಂಥಾ ಡೆಡ್‌ಲಾಕ್ ಇದೆಯೆಂದರೆ ರಸ್ತೆ ಮಾಡುವುದಕ್ಕೂ ಮಾವೋವಾದಿಗಳೇ ಬಿಡುತ್ತಿಲ್ಲ.

ಸ್ವಯಂಸೇವಾ ಸಂಸ್ಥೆಗಳು, ಕಂಪೆನಿಗಳು ಮಾವೊವಾದಿಗಳಿಗೆ ಹಫ್ತಾ ನೀಡುತ್ತಾರೆ ಎಂದು ಸರ್ಕಾರ ದೂರುತ್ತಿದೆ. ಗುತ್ತಿಗೆದಾರರು ಇಲ್ಲಿ ಕೆಲಸ ಮಾಡುವುದಿಲ್ಲ ಎಂದು ಸ್ವತಃ ಸರ್ಕಾರವೇ ತನ್ನ ಯೋಜನೆಗಳ ಮೊತ್ತಕ್ಕೆ ಶೇ 20ರಷ್ಟು ಹೆಚ್ಚುವರಿ ಸೇರಿಸಿ ನೀಡುತ್ತದಂತೆ. ಈ ಹೆಚ್ಚುವರಿ ಮೊತ್ತವನ್ನು ಗುತ್ತಿಗೆದಾರರು ಮಾವೋವಾದಿಗಳಿಗೆ ನಜರು ಕಾಣಿಕೆಯಾಗಿ ಒಪ್ಪಿಸಿದರೆ ಮಾತ್ರ ಕಾಮಗಾರಿ ಮಾಡಲು ಒಪ್ಪಿಗೆ ಸಿಗುತ್ತದಂತೆ. ಸರ್ಕಾರಕ್ಕೂ ಇದು ಗೊತ್ತಿದೆ. ಅರ್ಥಾತ್ ಸರ್ಕಾರವೇ ಮಾವೋವಾದಿಗಳಿಗೆ ನಜರು ಕಾಣಿಕೆ ನೀಡುತ್ತಿದೆ!ನಾನು ಹೋದ ಮೂರ‌್ನಾಲ್ಕು ಪ್ರದೇಶಗಳ ಆದಿವಾಸಿಗಳು ಆದಿಮ ಜನಾಂಗ ಎಂದು ಘೋಷಿತವಾದ ಕಾರಣ ಇಲ್ಲಿ ಫೋಟೋ ಹೊಡೆಯುವುದನ್ನೂ ಸರ್ಕಾರ ನಿಷೇಧಿಸಿದೆ. ಪರಮ ದುರ್ಗಮ ಪ್ರದೇಶಗಳಿವು.ಸುತ್ತ ಎದ್ದು ನಿಂತಿರುವ ಮಲೆತ ಕಾಡು, ಬೆಟ್ಟ, ಹಸಿರಿನ ದಿವ್ಯ ಸೌಂದರ್ಯ...  `ಸಾರ್, ಅಲ್ಲಿ ಕಾಣುತ್ತದಲ್ಲಾ, ಆ ಬಂಡೆ, ಅಲ್ಲೇ ಪಹರೆ ಕಾಯುತ್ತಾರೆ~ ಎಂದಾಗಲೇ ನನ್ನ ಕನಸೊಡೆದಿದ್ದು. ಹೆಜ್ಜೆ ಇಟ್ಟಲ್ಲೆಲ್ಲಾ ಗಮನಿಸುವ ಕಣ್ಣುಗಳಿದ್ದಾವೆಂದು ಅನಿಸಿದರೆ, ಹೇಗಿರಬಹುದು?ರಾಯಗಡದ ಜಿಲ್ಲಾ ಯೋಜನಾಧಿಕಾರಿ, ಸರ್ಕಾರದ ಯಾವ್ಯಾವ ಯೋಜನೆಗಳು ಎಲ್ಲೆಲ್ಲಿ, ಎಷ್ಟೆಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿವೆ ಎಂದು ನನಗೆ ಜುಲುಮೆಯಲ್ಲಿ ಒಪ್ಪಿಸಿದ್ದರಲ್ಲಿ ನಾನು ತಲೆದೂಗಿದ್ದೆ. ಆದರೆ ಹೊರಬಂದಾಗ, ಅಲ್ಲಿನ ಜವಾನ, `ಸಾಹೇಬರ ಟೈಮು ಕಚೇರಿ ಮೀಟಿಂಗುಗಳ ಭರಾಟೆಯಲ್ಲೇ ಮುಗಿಯುತ್ತದೆ, ಫೀಲ್ಡ್‌ಗೆ ಹೋಗಲು ಟೈಮೇ ಇರುವುದಿಲ್ಲ~ ಎಂದು ಹೇಳಿ ಕಣ್ಣು ಮಿಟುಕಿಸಿದ್ದ. ಎಲ್ಲಾ ಜಿಲ್ಲೆಗಳ ದೊಡ್ಡ ಅಧಿಕಾರಿಗಳ ಕಥೆಯೂ ಇಷ್ಟೆ. ಅಪರೂಪಕ್ಕೊಮ್ಮೆ ಹತ್ತಾರು ಪೊಲೀಸ್ ವಾಹನಗಳ ಶ್ರೀರಕ್ಷೆಯಲ್ಲಿ ಹೋಗಿ ಬಂದರೆ ಅಲ್ಲಿಗೆ ಮುಗಿಯಿತು.ಈ ಜಿಲ್ಲೆಗಳಲ್ಲಿ ನಡೆಯುತ್ತಿರುವ ಯುದ್ಧದಲ್ಲೂ ಮಾವೋವಾದಿಗಳು ಒಂದು ನಿಯಮ ರೂಪಿಸಿದಂತಿದೆ. ವಿದ್ಯುತ್, ಶಾಲೆ, ಕುಡಿಯುವ ನೀರು ಬಗ್ಗೆ ಆಕ್ಷೇಪ ಹೇಳುತ್ತಿಲ್ಲ. ರಸ್ತೆ ವಿಷಯಕ್ಕೆ ಬಂದರೆ ಮಾತ್ರಾ ಕೊಂಚ ಗರಂ ಆಗುತ್ತಾರೆ! ಸುಟ್ಟು ಕರಕಲಾದ ಆರೇಳು ಜೆಸಿಬಿಗಳು ಅನಾಥವಾಗಿ ನಿಂತಿದ್ದನ್ನು ನಾನೇ ನೋಡಿದೆ.ದೊಡ್ಡ ಹುಡುಗರು ಆಟವಾಡುವ ಮೈದಾನದ ಸಂದಿ ಮೂಲೆಯಲ್ಲಿ, ಅವರಿಗೆ ಕಿರಿಕಿರಿ ಆಗದ ಹಾಗೆ ಮಕ್ಕಳು ಗಿಂಜುತ್ತಾ ಲಗೋರಿ ಆಡುತ್ತಾರಲ್ಲ, ಹಾಗೆ ಇಲ್ಲಿನ ಸ್ವಯಂ ಸೇವಾಸಂಸ್ಥೆಗಳು ಕೆಲಸ ಮಾಡುತ್ತಿವೆ. ಆಗಾಗ್ಗೆ ಈ ಮಾವೋವಾದಿಗಳು ಇವರನ್ನು ಕರೆಸಿ, ನಿಮ್ಮ ಫಂಡಿಂಗ್ ಎಲ್ಲಿಂದ ಎಂದು ವಿಚಾರಿಸಿ, ಆಮೇಲೆ ಓಕೆ ಅನ್ನಿಸಿದರೆ, `ಕೆಲಸ ಮಾಡ್ಕೊಳ್ಳಿ, ಆದರೆ, ಸಂಜೆ ನಾಲ್ಕರ ಮೇಲೆ ರಸ್ತೇಲಿರಬೇಡಿ, ಮನೆ ಸೇರಿಕೊಳ್ಳಿ, ಇಲ್ಲಾಂದ್ರೆ, ಇತ್ತಂಡಗಳ ಗುಂಡಿನ ಚಕಮಕಿಗೆ ಬಲಿಯಾದೀರ, ಜೋಕೆ~ ಎಂದು ಎಚ್ಚರಿಸಿ ಕಳಿಸುತ್ತಾರೆ.ನಾನು ಆದಿವಾಸಿಗಳಲ್ಲಿ ಮಾವೋವಾದಿಗಳ ಬಗ್ಗೆ ವಿಚಾರಿಸಿದರೆ, `ಅದೇನು ಹೊಸ ಬಗೆ ತಿಂಡಿಯಾ? ಎಂಬಂಥ ಅಮಾಯಕತೆ ಪ್ರದರ್ಶಿಸಿದರು. ಜಪ್ಪಯ್ಯಾ ಎಂದರೂ ಒಂದೇ ಒಂದು ವಿವರ ಅವರಿಂದ ನಿಮಗೆ ಸಿಗುವುದು ಕಷ್ಟ. ಈ ನಟನೆ ಮತ್ತು ಅವರ ಕಣ್ಣಲ್ಲಿ ಮಿಂಚುವ ಸೂಕ್ಷ್ಮ ಅವಲೋಕನ ಹೇಗಿದೆಯೆಂದರೆ, ಮಾವೋವಾದಿಗಳು ಮತ್ತು ಈ ಆದಿವಾಸಿಗಳ ಕಳ್ಳುಬಳ್ಳಿ ಸಂಬಂಧ ಸದ್ಯಕ್ಕೆ ತುಂಡಾಗುವ ಲಕ್ಷಣ ನನಗೆ ಕಾಣಿಸಲಿಲ್ಲ.ಇದನ್ನೆಲ್ಲಾ ಸರಿಪಡಿಸಲು ಸಾವಿರಾರು ಕೋಟಿ ರೂಪಾಯಿ ಅನುದಾನ ಕೊಡಿ ಎಂದು ಒಡಿಶಾದ ಅಧಿಪತಿ ನವೀನ ಪಟ್ನಾಯಕ್ ಬೇಡಿಕೆ ಇಡುತ್ತಾರೆ. ಅದಕ್ಕೂ ಮೊದಲು ಪೊಲೀಸು ಬಲವರ್ಧನೆಗೆ ಕೋಟ್ಯಂತರ ರೂಪಾಯಿ ಕೊಡಿ ಎನ್ನುತ್ತಾರೆ. ಪಕ್ಕದ ನಿತೀಶ್‌ಗಿರುವ ಅನುಕಂಪ ಈತನಿಗಿಲ್ಲ. ಒಡಿಶಾದ ಮಾನ ಸಮ್ಮಾನದ ಪದಕದಂತಿರುವ ತನ್ನ ಅಪ್ಪ ಬಿಜು ಪಟ್ನಾಯಕ್ ಹೆಸರ ಹೆಗ್ಗಳಿಕೆಯಲ್ಲಿ ಈತ ಚುನಾವಣೆ ಗೆಲ್ಲುತ್ತಾನೆ.ಈ ಪೂರ್ವ ಕರಾವಳಿಯ ಕಳಿಂಗಾ ಹೆಮ್ಮೆಯ ಭುವನೇಶ್ವರ, ಕಟಕ್, ಪುರಿ, ಕೋಣಾರ್ಕಗಳೇ ಒಡಿಶಾದ `ಭದ್ರಲೋಕ್~. ಈ ಆಢ್ಯ ವರ್ಗ ಎಂದೂ ಆದಿವಾಸಿ ಪ್ರಪಂಚದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಇಲ್ಲಿ ನಿರಂತರ ನಡೆವ ಸಂಸ್ಕೃತಿ ಉತ್ಸವಗಳ ಅಮಲು ಘಮಲು ಸೇರಿದರೆ ಈ ಆದಿವಾಸಿ ಒಡಿಶಾದ ದುರಂತದ ಚಿತ್ರದ ಚೌಕಟ್ಟು ಪೂರ್ತಿಯಾಗುತ್ತದೆ. ದಸರಾ ವೈಭವದ ಮೈಸೂರಿನ ಮೂವತ್ತು ಮೈಲಿಯಾಚೆ ಇಂದಿಗೂ ಬಡತನದಲ್ಲಿ ದಿಕ್ಕೆಟ್ಟು ಬದುಕುತ್ತಿರುವ ಜೇನುಕುರುಬ, ಕಾಡುಕುರುಬರನ್ನು ಕಂಡಿರುವ ನನಗೆ ಇದೇನು ಆಘಾತ ತರಲಿಲ್ಲ.ಆದರೆ ಈ ನಿರ್ಲಕ್ಷ್ಯಕ್ಕೆ ಚರಿತ್ರೆ ಮತ್ತು ಪ್ರಕೃತಿ-  ಮಾವೋವಾದಿಗಳೆಂಬ ಪ್ರತಿಕ್ರಿಯೆಯನ್ನು ಸೃಷ್ಟಿಸಿದೆ. ಈ ಸವಾಲು ಮಾತ್ರ ಭವಿಷ್ಯವನ್ನು ಅಸ್ಪಷ್ಟವಾಗಿಸಿದೆ. ಈ ಮಾವೋವಾದಿಗಳ ಪಾಡೂ ರಾಮಾಯಣದ ವಾಲಿಯ ತರಹದ್ದೇ. ಋಷ್ಯಮೂಕದ ಒಳಗಿರುವಷ್ಟು ದಿನ ಸುರಕ್ಷೆ. ಹೊರಬಂದರೆ?ಭೋರ್ಗರೆದು ಹರಿವ ನಾಗವಲ್ಲಿ, ಇಂದ್ರಾವತಿ ನದಿಗಳ ಕೆಂಪುನೀರೂ ಸಾಂಕೇತಿಕವೇ. ಪರಿಹಾರ ಕಾಣದ, ಆದರೆ, ನಾವೆಲ್ಲರೂ ಜವಾಬ್ದಾರರಾಗಿರುವ ಸಮಸ್ಯೆಯೊಂದನ್ನು ಚಿತ್ತಕೋಶದೊಳಗೆ ನಾಟಿಕೊಂಡು ಬುದ್ಧಿಭಾವಕ್ಕೆ ಜೋಮು ಹಿಡಿಸಿಕೊಂಡು ನಾನು ವಾಪಸಾದೆ. ಆದರೆ, ಸದ್ಯಕ್ಕೆ ಗುಣಮುಖನಾಗುವ ಲಕ್ಷಣ ಕಾಣುತ್ತಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.