ಒಂದೂರಲ್ಲಿ ಇಬ್ಬ ಗುಂಡ ಅಂತ ಇದ್ದ. ಅವನಿಗೆ ಅಪ್ಪ – ಅಮ್ಮ ಯಾರೂ ಇರಲಿಲ್ಲ. ಅಜ್ಜೀನೆ ಅವನನ್ನು ಸಾಕಿಕೊಂಡಿದ್ದಳು. ಅವನೋ ಎಂಟು ವರ್ಷ ಆದರೂ ದಂಟು ಅನ್ನಲು ಬಾರದ ದಡ್ಡ. ಮೂಗಿನ ಎಡ ಹೊಳ್ಳೆಯಲ್ಲಿ ಸುರಿಯುತ್ತಿದ್ದ ಸಿಂಬಳವನ್ನು ತನ್ನ ಬಲಗೈಯಿಂದಲೂ, ಬಲ ಹೊಳ್ಳೆಯಿಂದ ಸುರಿಯುತ್ತಿದ್ದ ಸಿಂಬಳವನ್ನು ಎಡ ಮುಂಗೈಯಿಂದಲೂ ತೀಡಿ ತೀಡಿ ಅವನ ಎರಡೂ ಮುಂಗೈಗಳ ಮೇಲೂ ಹೊಕ್ಕುಹಾಕಿಕೊಂಡ ಗೊಣ್ಣೆ ರೊಟ್ಟಿಯಂತಾಗಿರುತ್ತಿತ್ತು. ನೊಣಗಳು ಇವನ ಮುಖಕ್ಕೆ ಸದಾ ಮುತ್ತಿಕೊಂಡಿರುತ್ತಿದ್ದವು. ಅರಳೀಕಟ್ಟೆ ಮೇಲೆ ಕೂತ ಇವನಿಗೆ ಅವುಗಳನ್ನು ಹೊಡೆಯೋದೆ ಕೆಲಸ. ಒಂದು ದಿನ ಎರಡೂ ಅಂಗೈಗಳನ್ನು ಸೇರಿಸಿ ‘ಫಟ್’ ಎಂದು ಹೊಡೆದ ಏಟಿಗೆ ಎಂಟು ನೊಣಗಳು ಸತ್ತುಬಿದ್ದವು.

ಅಂದಿನಿಂದ ಅವನು ನಾನು ‘ಏಟಿಗೆ ಎಂಟು ಹೊಡೀತಿನಿ’, ‘ಏಟಿಗೆ ಎಂಟು ಹೊಡೀತಿನಿ’ ಎಂದು ಜಂಭದಿಂದ ಹೇಳುತ್ತಾ ತಿರುಗುತ್ತಿದ್ದ. ಇದನ್ನು ಕೇಳಿದ ಜನ ಇವನು ಏಟಿಗೆ ಎಂಟು ಜನರನ್ನು ಹೊಡೆದು ಉರುಳಿಸಬಲ್ಲ ಎಂದು ತಿಳಿದು, ಅವನನ್ನು ಕಂಡರೆ ಭಯ ಪಡತೊಡಗಿದರು. ಇದರಿಂದ ಅವನ ಜಂಭ ಇನ್ನೂ ಹೆಚ್ಚಾಗಿ ಸದಾ ಎದೆಯುಬ್ಬಿಸಿ ವೀರನಂತೆ ತಿರುಗಲು ತೊಡಗಿದ.

ಆ ಊರಿಗೆ ಒಂದು ಸೊಕ್ಕಿದ ಆನೆ ನುಗ್ಗಿತು ಕಾಡಿಂದ. ಅದು ಊರಿನ ಹೊಲ, ಗದ್ದೆ, ತೋಟ ಎಲ್ಲಾ ನಾಶ ಮಾಡಲು ಶುರು ಮಾಡಿತು. ಭೀತರಾದ ಜನ ನಾಡಿನ ಅರಸನಲ್ಲಿ ಬೇಡಿಕೊಂಡರು– ‘ಸ್ವಾಮಿ ಆನೆಯಿಂದ ನಮ್ಮನ್ನು ಕಾಪಾಡಿ’ ಅಂತ. ರಾಜ ಡಂಗುರ ಸಾರಿಸಿದ. ‘ಕೇಳ್ರಪ್ಪೋ! ಕೇಳ್ರಿ! ನಮ್ಮೂರಿಗೆ ನುಗ್ಗಿರೋ ಆನೆಯನ್ನು ಹಿಡಿದು ಕೊಟ್ಟವರಿಗೆ ರಾಜರು ಒಳ್ಳೇ ಬಹುಮಾನ ಕೊಡ್ತಾರಂತೆ .... ಕೇಳ್ರಪ್ಪೋ! ಕೇಳ್ರಿ’.

ಬಹುಮಾನದ ಆಸೆಗಾಗಿ ಆನೆಗೆ ಯಾರು ಬಲಿಯಾಗ್ತಾರೆ? ಯಾರೂ ಮುಂದೆ ಬರಲಿಲ್ಲ. ಆಗ ರಾಜನ ಮುಂದೆ ಯಾರೋ ಹೇಳಿದರು. ‘ಸ್ವಾಮಿ, ನಮ್ಮೂರಿನ ಗುಂಡ ಏಟಿಗೆ ಎಂಟು ಹೊಡೀತಾನೆ’ ಎಂದು. ರಾಜ ಗುಂಡನನ್ನು ಕರೆಸಿದ. ಹೆದರಿ ನಡುಗುತ್ತಾ ಹೋದ ಗುಂಡ, ‘ಮಹಾಪ್ರಭು ನಾನೇನೂ ಮಾಡಿಲ್ಲ... ನಾನೇನೂ ಮಾಡಿಲ್ಲ. ಕಾಪಾಡಿ’ ಎಂದ.
ಆಗ ರಾಜ, ‘ಹೆದರಬೇಡ ಗುಂಡ. ಊರಿಗೆ ನುಗ್ಗಿರೋ ಆನೆ ಹಿಡಿದು ಕೊಡು, ಸೂಕ್ತ ಬಹುಮಾನ ಕೊಡ್ತೇವಿ. ಇಲ್ಲ ಅಂದ್ರೆ ಛಡೀ ಏಟು. ತಿಳಿತೋ?’ ಎಂದ. ‘ಆಯ್ತು ಮಹಾಪ್ರಭು’ ಎಂದು ಬಗ್ಗಿ ನಮಸ್ಕರಿಸಿ ಬಂದ ಗುಂಡ.

ಅಜ್ಜಿ ಬಳಿ ಬಂದವನೇ ಗೊಳೋ ಎಂದು ಅಳಲು ಶುರು ಮಾಡಿದ. ಅಜ್ಜಿ, ‘ಅಳಬೇಡ, ನೀನು ಆನೆ ಹಿಡಿಯೋದೂ ಬ್ಯಾಡ. ನಾನು ನಿನಗೆ ಪ್ರಯಾಣಕ್ಕೆ ರೊಟ್ಟಿ ಕಟ್ಟಿ ಕೊಡ್ತೀನಿ. ರಾತ್ರೀಲೆ ದೂರದ ದೇಶಕ್ಕೆ ಹೋಗಿ ಬದುಕ್ಕೋ’ ಎಂದಳು. ಅಂದಂತೆ ರೊಟ್ಟಿ ಗಂಟು ಕಟ್ಟದಳು. ನಡುವೆ ದಬ್ಬಳ (ದೊಡ್ಡ ಸೂಜಿ) ಹಾಕಿದಳು. ದೆವ್ವಗಳು ಕಾಟ ಕೊಡಬಾರದು ಅಂತ.

ಘಮಘಮ ಪಲ್ಯ ಹಾಗೂ ರೊಟ್ಟಿ ಗಂಟು ಕಂಕುಳಲ್ಲಿ ಇಟ್ಟುಕೊಂಡು ಗುಂಡ ರಾತ್ರೋರಾತ್ರಿ ಹೊರಟ. ಎದುರಿಗೆ ಆ ಕಾಡಾನೆ ಬಂದೇ ಬಿಡ್ತು. ಭಯದಿಂದ ಓಡಿದ ಗುಂಡ ಮರ ಹತ್ತತೊಡಗಿದ. ಆನೆ ಸೊಂಡಿಲೆತ್ತಿ ಅವನನ್ನು ಹಿಡಿಯಲು ಹೋಯ್ತು. ಅದೇ ಸಮಯಕ್ಕೆ ಇವನ ಕಂಕುಳಲ್ಲಿದ್ದ ರೊಟ್ಟಿ ಗಂಟು ಜಾರಿ ಆನೆಯ ಗಂಟಲಿಗೇ ಬಿದ್ದು ಬಿತ್ತು. ದಬ್ಬಳ ಗಂಟಲಲ್ಲಿ ಸಿಕ್ಕಿಕೊಂಡು ಉಸಿರಾಡಲಾಗದೆ ಆನೇ ಅಲ್ಲೇ ಸತ್ತು ಬಿತ್ತು. ಗುಂಡನಿಗೆ ಭಯ. ಬೆಳಗಿನವರೆಗೂ ಅಲ್ಲೇ ಮರದ ಮೇಲೆ ಕುಳಿತಿದ್ದ. ಬೆಳಿಗ್ಗೆ ಜನ ಬಂದು ನೋಡಿ ‘ಗುಂಡ ಆನೆಯನ್ನು ಕೊಂದ’ ಎಂದು ಖುಷಿಯಿಂದ ಅವನನ್ನು ರಾಜನ ಬಳಿಗೊಯ್ದು ಬಹುಮಾನ ಕೊಡಿಸಿದರು.

ಕೆಲವು ದಿನಗಳು ಕಳೆದ ಮೇಲೆ ಆ ಊರಿಗೆ ಒಂದು ಹುಲಿ ದಾಳಿಯಿಟ್ಟಿತು. ಹಸು, ಕುರಿ, ಕರು, ಕೋಳಿ ಅಲ್ಲದೆ ಜನರನ್ನೂ ಹಿಡಿದು ತಿನ್ನತೊಡಗಿತು. ಜನ ರಾತ್ರಿ ಹೊತ್ತು ಮನೆಯಿಂದ ಹೊರಬರಲು ಹೆದರತೊಡಗಿದರು. ಯಥಾಪ್ರಕಾರ ರಾಜನಿಗೆ ದೂರು ಹೋಯ್ತು. ರಾಜ ಗುಂಡನನ್ನು ಕರೆಸಿದ. ಗುಂಡನಿಗೋ ‘ಅತ್ತ ದರಿ ಇತ್ತ ಪುಲಿ’ ಎಂಬ ಸ್ಥಿತಿಯಾಯ್ತು. ಅಜ್ಜಿಯ ಮುಂದೆ ತನ್ನ ಗೋಳನ್ನು ಹೇಳಿಕೊಂಡು ಅತ್ತ. ಅಜ್ಜಿ ‘ನೋಡು ಈ ಬಾರಿ ಹಿತ್ತಲಲ್ಲಿರುವ ನಮ್ಮ ಕುರಿದೊಡ್ಡಿಯಿಂದ ಒಂದು ದಪ್ಪ ಕುರಿ ಹಿಡಿದುಕೊಂಡು ಊರು ಬಿಟ್ಟು ದೂರ ಹೋಗು. ಕುರಿ ಮಾರಾಟ ಮಾಡಿ, ಬಂದ ದುಡ್ಡಿನಲ್ಲಿ ದಾರಿ ಖರ್ಚು ಮಾಡಿಕೋ. ಎಲ್ಲಾದರೂ ಸುಖವಾಗಿ ಬದುಕಿಕೋ’ ಎಂದಳು.

‘ಸರಿ ಹೊರಡು. ಹುಲಿ ಗಿಲಿ ಇದ್ದೀತು ಜೋಪಾನ’ ಎಂದು ಎಚ್ಚರಿಕೆ ನೀಡಿದಳು. ಈ ಎಚ್ಚರಿಕೆ ಮಾತನ್ನು ಅಲ್ಲೇ ಹಿತ್ತಲಲ್ಲಿ ಕುರಿ ಮಂದೆಯಲ್ಲಿ ಅಡಗಿ ಕುಳಿತಿದ್ದ ಹುಲಿ ಕೇಳಿಸಿಕೊಂಡು ನಡುಗಿ ಹೋಯ್ತು. ಯಾವುದಪ್ಪ ಇದು ‘ಗಿಲಿ’– ನನಗಿಂತ ದೊಡ್ಡದೋ? ಅದು ಬಂದು ನನ್ನ ಹಿಡಿದರೆ ಏನಪ್ಪ ನನ್ನ ಗತಿ ಎಂದು ಮುದುರಿ ಕುಳಿತುಬಿಟ್ಟಿತು. ಗುಂಡ ಬಂದು ಕತ್ತಲಲ್ಲಿ ತಡವುತ್ತಾ ದಪ್ಪಗಿದ್ದ ಹುಲಿಯನ್ನೇ ಕುರಿ ಎಂದು ತಿಳಿದು ಕುತ್ತಿಗೆಗೆ ಹಗ್ಗ ಕಟ್ಟಿಬಿಟ್ಟ. ಹುಲಿ, ‘ಅಯ್ಯೋ! ನನ್ನ ಗಿಲಿ ಹಿಡಿದು ಬಿಡ್ತು’ ಎಂದು ನಡುಗುತ್ತಾ ಹಿಂದೆ ಜಗ್ಗತೊಡಗಿತು. ಗುಂಡ ಮುಂದೆ ಎಳೆಯುತ್ತಾ ಹೊರಟ.

ಹುಲಿ ಬಂದೀತೆಂಬ ಭಯ ಗುಂಡನಿಗೆ. ಹುಲಿಗೆ ಗಿಲಿಯ ಭಯ. ಹೀಗೆ ಸಾಗುತ್ತಿರಬೇಕಾದರೆ ಬೆಳಗಾಯಿತು. ಜನ ಎದ್ದು ಹೊಲ ಗದ್ದೆ ಕಡೆಗೆ ಹೊರಟವರು ಹುಲಿಯನ್ನು ಎಳೆದೊಯ್ಯುತ್ತಿದ್ದ ಗುಂಡನನ್ನು ನೋಡಿದರು. ‘ನಮ್ಮ ಗುಂಡ ಹುಲಿ ಹಿಡಿದಿದ್ದಾನೆ. ಬನ್ರೋ, ಎಲ್ಲಾ ಬನ್ರೋ’ ಎಂದು ದೊಣ್ಣೆಗಳನ್ನು ಹಿಡಿದು ಓಡಿ ಬಂದರು. ಆಗ ಹಿಂದಿರುಗಿ ನೋಡಿ ಹೆದರಿ ಹಗ್ಗ ಬಿಟ್ಟು ಬಿಟ್ಟ. ಹುಲಿ ಬದುಕಿದೆಯಾ ಬಡಜೀವವೇ ಎಂದು ಕಾಡಿನ ಕಡೆ ಓಡಿಹೋಯ್ತು. ಜನ ಗುಂಡನಿಗೆ ಜಯಕಾರ ಹಾಕುತ್ತಾ ರಾಜನಲ್ಲಿಗೆ ಕರೆದೊಯ್ದರು. ರಾಜನೂ ಇವನ ಸಾಹಸ ಮೆಚ್ಚಿ ಬಹುಮಾನ ನೀಡಿದ. ಸಂತೋಷಗೊಂಡ ಗುಂಡ. ಬಹುಮಾನದ ರೂಪದಲ್ಲಿ ಬಂದ ವಸ್ತು, ಒಡವೆ ಎಲ್ಲಾ ಅಜ್ಜಿಗೆ ಕೊಟ್ಟು ನಡೆದುದ್ದನ್ನೆಲ್ಲಾ ಹೇಳಿದ. ಅಜ್ಜಿ ‘ಒಳ್ಳೇದಾಯ್ತು ಬಿಡಪ್ಪ’ ಎಂದು ಆಶೀರ್ವದಿಸಿದಳು.

ಇಷ್ಟಕ್ಕೇ ಮುಗಿಯಲಿಲ್ಲ. ಊರಿಗೆ ಡಕಾಯಿತರ ಗುಂಪೊಂದು ಬಿದ್ದು ಮನೆ ಮನೆಗಳನ್ನು ದೋಚತೊಡಗಿದರು. ಅವರನ್ನು ಹಿಡಿಯುವ ಜವಾಬ್ದಾರಿಯೂ ಗುಂಡನ ತಲೆಗೇ ಬಂತು. ಈ ಬಾರಿ ಅಜ್ಜಿ ಕೂಡ ಊರು ಬಿಡುವ ಯೋಚನೆ ಮಾಡಿ, ದಾರಿಗಾಗಿ ಬುತ್ತಿ ತಯಾರಿಸಿದಳು. ರಾಗಿ ಮುದ್ದೆಗಳನ್ನು ಮಾಡಿ ಮಂಕರಿ ತುಂಬಿ, ಚಟ್ನಿ ಅರೆಯತೊಡಗಿದಳು. ರಾತ್ರಿ ಕತ್ತಲು, ಅರೆಯುವಾಗ ಚಟ್ನಿಗೆ ಹಲ್ಲಿ ಬಿದ್ದು ಅದನ್ನೂ ಅರೆದಿದ್ದರಿಂದ ಚಟ್ನಿ ವಿಷಮಯವಾಯ್ತು. ಇದೊಂದೂ ತಿಳಿಯದ ಅಜ್ಜಿ ಬುತ್ತಿ ಕಟ್ಟಿ ಗುಂಡನೊಟ್ಟಿಗೆ ರಾತ್ರೋ ರಾತ್ರಿ ಹೊರಟಳು.

ಡಕಾಯಿತರ ಗುಂಪು ಇವರ ಎದುರಿಗೇ ಬಂದು ಬಿಡ್ತು. ಗುಂಪಿನ ನಾಯಕ ಇವರನ್ನು ನೋಡಿ ‘ಯಾರದು? ಏನದು ಗಂಟು?’ ಎಂದು ಅಬ್ಬರಿಸಿದ. ಅಜ್ಜಿ ಸಾವರಿಸಿಕೊಂಡು ‘ಅಯ್ಯೋ ರಾಗಿ ಮುದ್ದೆ ಕಣಪ್ಪ’ ಎಂದಳು. ‘ಸರಿ ಸರಿ ಕೊಡು, ಹಸಿವಾಗಿದೆ’ ಎಂದು ಅವರಿಂದ ಕಿತ್ತುಕೊಂಡು ಎಲ್ಲರೂ ತಿಂದರು. ವಿಷವೇರಿ ಸತ್ತು ಬಿದ್ದರು. ಅಜ್ಜಿ ಮತ್ತು ಗುಂಡ ಇವರು ನಿದ್ದೆ ಮಾಡುತ್ತಿದ್ದಾರೆ ಎಂದು ತಿಳಿದು ಅಲ್ಲಿಂದ ಕಾಲು ತೆಗೆಯಲೂ ಧೈರ್ಯವಾಗದೆ ಹಾಗೇ ನಿಂತಿದ್ದರು.

ಅಂತೂ ಬೆಳಗಾಯ್ತು. ಜನವೆಲ್ಲಾ ಬಂದು ನೋಡಿ ಆಶ್ಚರ್ಯಪಟ್ಟರು. ‘ಗುಂಡ ಧೀರ, ವೀರ, ಶೂರ. ಆನೆ ಹಿಡಿದ, ಹುಲಿ ಹಿಡಿದ, ಈಗ ಕಳ್ಳರ ಗುಂಪನ್ನೂ ಕೊಂದ’ ಎಂದು ಜನ ಜೈಕಾರ ಕೂಗಿದರು. ರಾಜನೂ ಹೊಗಳಿದ. ಗುಂಡನ ಸಾಹಸ ಮೆಚ್ಚಿ ಮಗಳನ್ನು ಕೊಟ್ಟು ಮದುವೆ ಮಾಡಿದ. ದಂಡನಾಯಕನನ್ನಾಗಿ ನೇಮಿಸಿದ. ಗುಂಡನೂ ವಿದ್ಯೆ ಕಲಿತು, ದೇಶವನ್ನು ರಕ್ಷಿಸುತ್ತಾ ಸುಖವಾಗಿ ಬಾಳಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.