ಗುರುವಾರ , ಮೇ 28, 2020
27 °C

ದಾರದಹಳ್ಳಿ ಪಶುಚಿಕಿತ್ಸೆ ಕೇಂದ್ರ: ಗೋ ವಿಶ್ವರೂಪ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾರದಹಳ್ಳಿ (ಮೂಡಿಗೆರೆ): ‘ಹಸು ಸಾಕುವ ರೈತರು ಹಾಲಿನ ಮೇಲೆ ಅವಲಂಬಿಸದೆ ಆಗದೆ ಸ್ವಾವಲಂಬನೆ ಸಾಧಿಸ ಬಹುದು...’

- ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಪಶು ಚಿಕಿತ್ಸಾ ಕೇಂದ್ರದ ಪಶು ಚಿಕಿತ್ಸಕ ಕ.ದಾ.ಕೃಷ್ಣರಾಜು ಅವರು ಹೇಳುವ ಮಾತಿದು. ರಾಜ್ಯಕ್ಕೇ ಮಾದರಿಯಾಗಬಹುದಾದ ಅತ್ಯು ತ್ತಮ ಪಶು ಆಸ್ಪತ್ರೆ ರೂಪಿಸಿರುವ ಕೃಷ್ಣರಾಜು ‘ಪ್ರಜಾವಾಣಿ’ ಯೊಂದಿಗೆ ತಮ್ಮ ಕನಸು- ಆಶೋತ್ತರಗಳನ್ನು ಇತ್ತೀಚೆಗೆ ಮುಕ್ತವಾಗಿ ಹಂಚಿಕೊಂಡರು.*ಪಶು ಚಿಕಿತ್ಸಾ ಕೇಂದ್ರದ ವೈಶಿಷ್ಟ್ಯವೇನು?

- ನಮ್ಮ ಆಸ್ಪತ್ರೆಯ ಅಂಗಳದಲ್ಲಿ ಪಶುಗಳಿಗೆ ಪೌಷ್ಟಿಕ ಆಹಾರವಾಗಿರುವ ಅಜೊಲ್ಲಾ ಘಟಕ, ದೀನಬಂಧು ಗೋಬರ್ ಗ್ಯಾಸ್, ಜೀವಾಮೃತ, ಬೀಜಾಮೃತ ತಯಾರಿಕೆಯ ಪ್ರಾತ್ಯಕ್ಷಿಕೆ, ಪಶುಗಳಿಗೆ ಬರುವ ವಿವಿಧ ಕಾಯಿಲೆಗಳ ನಿವಾ ರಣೆಗೆ ಬಳಕೆಯಾಗುವ ಔಷಧೀಯ ಸಸ್ಯಗಳು, ಸೆಗಣಿಯಿಂದ ಮತ್ತು ಮಜ್ಜಿಗೆಯಿಂದ ನಡೆ ಯುವ ಗಡಿಯಾರವಿದೆ.ವಿವಿಧ ಕಾರಣಗಳಿಗೆ ಭೇಟಿ ನೀಡುವ ರೈತರಿಗೆ ಹೈನುಗಾರಿಕೆಯಿಂದ ಸ್ವಾವಲಂಬನೆ ಹೇಗೆ ಎಂಬ ಮಾಹಿತಿ ಯಾರೂ ಹೇಳದೆ ರವಾನೆಯಾಗುವಂತೆ ಎಲ್ಲವನ್ನೂ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿದೆ.*ದಾರದಹಳ್ಳಿ ಸುತ್ತಮುತ್ತಲ ‘ಗೋ ಸೇವಕರು’ ಇದ್ದಾರೆ ಆಂತ ಕೇಳಿದ್ದೇನೆ. ಯಾರದು?

- ನಮ್ಮ ಇಲಾಖೆಗೂ ರೈತರಿಗೂ ನಡು ವಣ ಕೊಂಡಿ ಅವರು. ನಾನು ಇಂಥ ದಿನ ಇಂಥ ಹಳ್ಳಿಗೆ ಬರುತ್ತೇನೆಂದು ಆ ಹಳ್ಳಿಯ ಗೋ ಸೇವಕನಿಗೆ ಹೇಳಿರುತ್ತೇನೆ. ಅವರು ಆ ಗ್ರಾಮದ ಎಲ್ಲ ರೈತರಿಗೂ ಈ ಮಾಹಿತಿ ಮುಟ್ಟಿಸುತ್ತಾರೆ. ಹೀಗಾಗಿ ಸರ್ಕಾರದ ಕೆಲಸ ಸುಲಭವಾಗುತ್ತದೆ. ಹೊಸನಗರದ ರಾಘವೇಶ್ವರ ಭಾರತಿ ಸ್ವಾಮಿ ಗಳು ‘ಗೋ ಸೇವಕ’ರಿಗೆ ಪ್ರಮಾಣ ಪತ್ರ ಕೊಟ್ಟಿದ್ದಾರೆ.ನಾನು ಹಳ್ಳಿಗಳಲ್ಲಿ ಪಶುಗಳಿಗೆ ಇಂಜೆಕ್ಷನ್ ಕೊಡುವಾಗ, ರೈತರಿಗೆ ಔಷಧಿ ನೀಡುವಾಗ ಅವರು ಖುದ್ದು ಹಾಜರಿಸದ್ದು ಪ್ರಮಾಣ ಮತ್ತು ಗುಣಮಟ್ಟ ಪರಿಶೀಲಿಸುತ್ತಾರೆ. ಸರ್ಕಾರದ ಸೌಲಭ್ಯ ದುರುಪಯೋಗವಾಗದ ಎಚ್ಚರಿಕೆ ಇದರಿಂದ ಬೆಳೆಯುತ್ತದೆ.*ಮೂಡಿಗೆರೆ ತಾಲ್ಲೂಕಿನಲ್ಲಿ ಮಿಲ್ಕ್‌ರೂಟ್ ಇಲ್ಲ. ರೈತರು ನಿಮ್ಮ ಮಾತು ಕೇಳಿ ಹಸು ಕಟ್ಟಿಕೊಂಡರೆ ಹಾಲನ್ನು ಏನು ಮಾಡಬೇಕು? ಅವರಿಗೆ ವೃಥಾ ಹೊರೆಯಲ್ಲವೇ?

- ಮಿಲ್ಕ್‌ರೂಟ್ ಇಲ್ಲದಿರುವುದರಿಂದ ರೈತರಿಗೆ ತೊಂದರೆಯಾಗಿದೆ ಎನ್ನುವುದನ್ನು ನಾನು ಒಪ್ಪುತ್ತೇನೆ. ಮಿಲ್ಕ್ ರೂಟ್ ಇಲ್ಲದಿದ್ದರೆ ಏನಂತೆ, ರೈತರೇ ಒಂದು ನೆಟ್ ವರ್ಕ್ ರೂಪಿಸಿಕೊಂಡು ಹಾಲನ್ನು ನಗರಕ್ಕೆ ಸಾಗಿಸಿ ಮಾರಬಹುದು. ಕಮಿಷನ್ ಆಧಾರದ ಮೇಲೆ ಈ ವ್ಯವಸ್ಥೆ ರೂಪುಗೊಂಡರೆ ಹಳ್ಳಿಗಳಲ್ಲಿರುವ ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕಂತೆ ಆಗುತ್ತದೆ.* ಹಸುಗಳಿಂದ ಹಾಲಿನ ಹೊರತಾಗಿ ಮತ್ತೇನು ಉಪಯೋಗವಿದೆ?

- ಹಸು ಸಾಕುವುದೇ ಹಾಲಿಗಾಗಿ ಎನ್ನುವ ಪರಿಕಲ್ಪನೆ ಎಚ್‌ಎಫ್- ಜೆರ್ಸಿಯಂಥ ವಿದೇಶಿ ತಳಿಗಳಿಗೆ ಸೂಕ್ತವಾಗಬಹುದು. ಆದರೆ ನಾಟಿ ಹಸುಗಳ ಸೆಗಣಿ, ಗಂಜಲದಿಂದ ಅನೇಕ ಉತ್ಪನ್ನಗಳ ತಯಾರಿಕೆ ಸಾಧ್ಯ. ಎರಡು ಮಲೆನಾಡು ಗಿಡ್ಡ ಹಸುಗಳನ್ನು ಕಟ್ಟಿಕೊಂಡರೆ ಒಂದು ಕುಟುಂಬ ಆರಾಮವಾಗಿ ಜೀವಿಸಬಹುದು.*ಅದು ಹೇಗೆ? ಸ್ವಲ್ಪ ವಿವರಿಸಿ...

- ಹಸುವಿನ ಗಂಜಲ ಮತ್ತು ಸೆಗಣಿಯನ್ನು ಬಳಸಿ ವೀಭೂತಿ, ಹಲ್ಲುಪುಡಿ, ಸೋಪು, ಫೆನಾ ಯಿಲ್, ನೋವಿನ ಎಣ್ಣೆ, ಔಷಧಿ, ಟಾನಿಕ್, ಅಮೃತಾಂಜನ, ಬಿತ್ತನೆ ಬೀಜ ಸಂರಕ್ಷಣೆಗೆ ಪುಡಿ, ಪಂಚಗವ್ಯಘೃತಂ ಇತ್ಯಾದಿ ಉಪ ಉತ್ಪನ್ನಗಳನ್ನು ತಯಾರಿಸಬಹುದು.ಗೋಬರ್‌ಗ್ಯಾಸ್ ಘಟಕ ಇದ್ದರೆ ಉರುವಲು ಸಮಸ್ಯೆ ಇರುವುದಿಲ್ಲ. ಇದೇ ಘಟಕದ ಸ್ಲರಿ ಯನ್ನು ಗೊಬ್ಬರಕ್ಕಾಗಿ ಬೇಕಾದರೂ ಬಳಸ ಬಹುದು ಅಥವಾ ಉಂಡೆ ಕಟ್ಟಿ ಒಣಗಿಸಿ ಮತ್ತೆ ಒಲೆಗೆ ಬೇಕಾದರೂ ಹಾಕಬಹುದು. ಸಾವಯವ ಕೃಷಿ ಪದ್ಧತಿಯಲ್ಲಿ ಬಳಕೆಯಲ್ಲಿರುವ ಜೀವಾ ಮೃತ- ಬೀಜಾಮೃತಗಳ ತಯಾರಿಕೆಗೂ ಹಸು ಗಳು ಬೇಕೇ ಬೇಕು. ಎರೆಗೊಬ್ಬರ ಘಟಕ ದಿಂದಲೂ ಉತ್ತಮ ಆದಾಯವಿದೆ.ಹಾಲು ಕರೆಯದೆ ಗೊಡ್ಡಾದ ಹಸುಗ ಳಿಂದ ಲೂ ರೈತರು ಖಂಡಿತ ಲಾಭ ಮಾಡಿ ಕೊಳ್ಳ ಬಹುದು.*ಹೈನುಗಾರಿಕೆ ರೈತರು ಮಾತ್ರ ಮಾಡಬೇಕೆ?

- ಇದೊಂದು ಭ್ರಮೆ. ಆದರೆ ಅರ್ಧ ಎಕರೆ ಭೂಮಿ ಇದ್ದರೆ ಅದು ಹೈನುಗಾರಿಕೆಗೆ ಪೂರಕ ಅಂಶವಾಗುತ್ತದೆ. ವಿದ್ಯಾವಂತ ನಿರುದ್ಯೋಗಿಗಳೂ ಸೇರಿದಂತೆ ಯಾರು ಬೇಕಾದರೂ ಹೈನುಗಾರಿಕೆ ಮಾಡಬಹುದು. ಮೇವಿನ ಬೆಳೆಗಳ ಮಾಹಿತಿ, ವಿವಿಧ ಋತುಮಾನದಲ್ಲಿ ವಹಿಸ ಬೇಕಾದ ಎಚ್ಚರಿಕೆ, ಪೌಷ್ಠಿಕ ಆಹಾರದ ಮಾಹಿತಿ, ಮಾರುಕಟ್ಟೆಯ ಚಾಕಚಕ್ಯತೆ ಇದ್ದರೆ ಯಾರು ಬೇಕಾದರೂ ಹೈನುಗಾರಿಕೆ ಕೈಗೊಂಡು ಯಶಸ್ವಿ ಯಾಗಬಹುದು.* ಫೀಡ್, ಹಿಂಡಿ, ಬೂಸಾ ದುಬಾರಿಯಾಗುತ್ತಿದೆ. ಗೋಮಾಳಗಳು ಕಣ್ಮರೆಯಾಗುತ್ತಿವೆ. ಹೈನುಗಾರಿಕೆಗೆ ಉಳಿಗಾಲವಿಲ್ಲ ಎನಿಸುತ್ತದೆ...

- ನಿಮ್ಮ ಅನಿಸಿಕೆ ಖಂಡಿತಾ ತಪ್ಪು. ಫೀಡ್ ಬದಲು ಅಜೋಲ್ಲಾ ಬಳಕೆ, ಬದುವಿನ ಮೇಲೆ ಮೇವಿನ ಗಿಡ ಬೆಳೆಸುವ ಹೊಸ ಪದ್ಧತಿ ಬೆಳಕಿಗೆ ಬರುತ್ತಿದೆ. ಗೋಮಾಳಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಪಾಕೆಟ್ ಹಾಲಿನ ಕೆಲವು ಕಂಪೆನಿಗಳು ಹಾಲಿನ ಹೆಸರಿರುವ ಕವರ್‌ನಲ್ಲಿ ಬಿಳಿ ರಾಸಾಯನಿಕದ ನೀರು ಮಾರುತ್ತಿರುವ ಬಗ್ಗೆ ಜನರಿಗೆ ಅರಿವಾಗಿದೆ. ಹೈನುಗಾರಿಕೆ ಮುಂದಿನ ದಿನಗಳಲ್ಲಿ ಖಂಡಿತಾ ಪ್ರವರ್ಧಮಾನಕ್ಕೆ ಬರುತ್ತದೆ.*ಹೈನುಗಾರಿಕೆ ಮಾಡಿ ಉದ್ಧಾರ ಆಗಿರೋರು ಯಾರು ಹೇಳ್ತಿರಾ? - ಯಾವುದೇ ಉದ್ಯಮವಿರಲಿ, ಹಣಕಾಸಿನ ನಿರ್ವಹಣೆ ಸರಿಯಿಲ್ಲ ಎಂದರೆ ಅದಕ್ಕೆ ಉಳಿಗಾಲವಿಲ್ಲ. ನಮ್ಮ ರೈತರು ಸಾಲ ಮಾಡಿ ಹಸು ತರುತ್ತಾರೆ. ಸಾಲದ ಬಗ್ಗೆ ವಿಪರೀತ ಹೆದ ರುವ ಅವರು ಕರಾವಿನ ದುಡ್ಡನ್ನೆಲ್ಲಾ ಸಾಲಕ್ಕೆ ಕಟ್ಟುತ್ತಾರೆ. ಹೀಗಾಗಿ ಮನೆ ನಡೆಯಲು, ಹಸುವಿಗೆ ಬೇಕಾದ ಮೇವು ಇತ್ಯಾದಿ ಖರೀದಿಸಲು ಹಣ ಸಾಲುವುದಿಲ್ಲ. ಒಂದು ಹಸು 10 ಲೀಟರ್ ಹಾಲು ಕರೆಯುತ್ತದೆ ಎಂದಿಟ್ಟುಕೊಳ್ಳೋಣ. ಅದರಲ್ಲಿ ಬರುವ ಆದಾಯವನ್ನು 5 ಭಾಗವಾಗಿ ವಿಂಗಡಿಸಬೇಕು. 1 ಭಾಗ ಪಿಗ್ಮಿಗೆ, 1 ಭಾಗ ಮನೆ ಬಳಕೆಗೆ, 1 ಭಾಗ ಹಸುವಿನ ಯೋಗಕ್ಷೇಮಕ್ಕೆ, 2 ಭಾಗ ಸಾಲಕ್ಕೆ ಬಳಸಬೇಕು. ಆಗ ಹೈನುಗಾರಿಕೆ ದೀರ್ಘಾವಧಿಯಲ್ಲಿ ಲಾಭ ತಂದುಕೊಡಲು ಸಾಧ್ಯ.

(ಕೃಷ್ಣರಾಜು ಮೊಬೈಲ್ ಸಂಖ್ಯೆ- 94480 73711)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.