ಭಾನುವಾರ, ಜೂನ್ 20, 2021
28 °C

ದಾಹ ತಣಿಸಿಕೊಳ್ಳಲು ಜ್ಯೂಸ್ ಮೊರೆ

ಪ್ರಜಾವಾಣಿ ವಾರ್ತೆ/ವಿನಾಯಕ ಭಟ್ Updated:

ಅಕ್ಷರ ಗಾತ್ರ : | |

ದಾಹ ತಣಿಸಿಕೊಳ್ಳಲು ಜ್ಯೂಸ್ ಮೊರೆ

ಬೆಳಗಾವಿ: ನಗರದಲ್ಲೆಗ ಬಿಸಿಲಿನ ದಗೆ ಹಾಗೂ ಚಳಿ ನಡುವೆ `ಜುಗಲ್ ಬಂದಿ~ ನಡೆಯುತ್ತಿದೆ. ರಾತ್ರಿಯಾಗುತ್ತಿದ್ದಂತೆ ಚಳಿ ಮೈ ನಡುಗಿಸಿದರೆ, ಬೆಳಿಗ್ಗೆಯಿಂದ ಹೊತ್ತೇರುತ್ತಿದ್ದಂತೆ ಬಿಸಿಲಿನ ದಗೆಯಿಂದ ದಾಹ ಹೆಚ್ಚಿ ತಂಪು ಪಾನೀಯ ಕುಡಿಯಲು ಮನಸ್ಸು ತವಕಿಸುತ್ತದೆ.ರಾತ್ರಿಯಿಂದ ಮುಂಜಾನೆ ಏಳೆಂಟು ಗಂಟೆಯವರೆಗೂ ಸಣ್ಣಗೆ ಚಳಿ ಕಾಡುತ್ತಿದೆ. ಆದರೆ, ಸೂರ್ಯ ಮುಗಿಲೆತ್ತರಕ್ಕೆ ಏರುತ್ತಿದ್ದಂತೆ `ಉಸ್! ಏನಾರ ಬಿಸಿಲ ಬೀಳಾಕ ಹತ್ತೈತಿ~ ಎಂಬ ಉದ್ಗಾರ ಜನರಿಂದ ತೇಲಿ ಬರುತ್ತಿವೆ. ಶಿವರಾತ್ರಿ ಕಳೆದ ಒಂದೆರಡು ದಿನಗಳಲ್ಲೇ ನಗರದಲ್ಲಿ ಬಿಸಿಲಿನ `ಝಳ~ ಏಕಾಏಕಿ ಹೆಚ್ಚತೊಡಗಿದೆ.ಮಧ್ಯಾಹ್ನ 11ರಿಂದ ಸಂಜೆ ನಾಲ್ಕೈದು ಗಂಟೆಯವರೆಗೂ ಬಿಸಿಲಿನ ದಗೆಯಿಂದ ಬಸವಳಿದ ಜನರು ತಂಪು ಪಾನೀಯ, ಎಳೆನೀರಿನ ಮೊರೆ ಹೋಗುತ್ತಿದ್ದಾರೆ.ನಗರದ ಗಣಪತಿಗಲ್ಲಿ, ಕಾಕತಿವೇಸ್, ಸಮಾದೇವಿ ರಸ್ತೆ, ಖಡೆಬಜಾರ್ ರಸ್ತೆಗಳಲ್ಲಿ ಒಂದಾದ ಮೇಲೆ ಒಂದರಂತೆ ತಳ್ಳುವ ಗಾಡಿಗಳಲ್ಲಿ `ಜ್ಯೂಸ್~ ಮಾರುವವರು ಸಿಗುತ್ತಿದ್ದಾರೆ. ಮಾರುಕಟ್ಟೆಗೆ ಬಂದವವರು ಬಿಸಿಲಿಂದ ಸುಸ್ತಾಗಿ ದಣಿವಾರಿಸಿಕೊಳ್ಳಲು `ಜ್ಯೂಸ್~ ಅಂಗಡಿಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಏಳೆಂಟು ರೂಪಾಯಿಗೆ ಒಂದು ಕಪ್

ಹಣ್ಣಿನ ರಸವನ್ನು ಹೀರಿ, ಮತ್ತೆ ಚೈತನ್ಯ ಪಡೆದುಕೊಂಡು ಮುನ್ನಡೆಯುತ್ತಾರೆ.`ಬಿಸಿಲಿನ ಝಳ ಹೆಚ್ಚಾಗಿದ್ದರಿಂದ ಮಧ್ಯಾಹ್ನದ ಹೊತ್ತಿಗೆ ನಮ್ಮ ಅಂಗಡಿಯ `ಜ್ಯೂಸ್~ ಕುಡಿಯಲು ಜನ ಮುಗಿ ಬೀಳುತ್ತಿದ್ದಾರೆ. ಮುಸುಂಬಿ, ಕಿತ್ತಳೆ, ನಿಂಬೆಹಣ್ಣಿನ ಜ್ಯೂಸ್‌ಗಳನ್ನೇ ಹೆಚ್ಚೆಚ್ಚು ಕುಡಿಯುತ್ತಿದ್ದಾರೆ. ಈಗ ಮೂರ್ನಾಲ್ಕು ತಿಂಗಳು ಅಷ್ಟೇ ನಮಗೆ ಉತ್ತಮ ವ್ಯಾಪಾರ ಆಗುತ್ತದೆ~ ಎನ್ನುತ್ತಾರೆ ಗಣಪತಿ ಗಲ್ಲಿಯಲ್ಲಿ ಜ್ಯೂಸ್ ಮಾರುವ ಉಸ್ಮಾನ್.ರಸ್ತೆ ಪಕ್ಕದಲ್ಲಿ ಇಟ್ಟುಕೊಂಡಿರುವ ಕಬ್ಬಿನ ರಸ, `ಕೋಲ್ಡ್ ಡ್ರಿಂಕ್ಸ್~ ಅಂಗಡಿಯವರಿಗೆ `ಹಬ್ಬ~ ಆರಂಭವಾಗಿದೆ. ಜನರು ದಣಿವಾರಿಸಿಕೊಳ್ಳಲು ಅಂಗಡಿಯವರು ಹೇಳಿದಷ್ಟು ಹಣ ನೀಡಿ ತಂಪು ಪಾನೀಯ ಕುಡಿದು ಹೋಗುತ್ತಿದ್ದಾರೆ.

ಹಣ್ಣಿಗೆ ಬೇಡಿಕೆ: ಬೇಸಿಗೆ ಬರುತ್ತಿದ್ದಂತೆ ಮಾರುಕಟ್ಟೆಗೆ ಮುಸುಂಬಿ, ಕಿತ್ತಳೆ, ದ್ರಾಕ್ಷಿ, ಚಿಕ್ಕು, ಸೇಬು, ಸ್ಟ್ರಾಬೆರಿ ಹಣ್ಣುಗಳು ಲಗ್ಗೆ ಇಡುತ್ತಿವೆ. ಬಿಸಲಿನ ದಗೆ ಹೆಚ್ಚುತ್ತಿರುವುದರಿಂದ ಮನೆಯಲ್ಲಿ ಜ್ಯೂಸ್ ಮಾಡಿ ಕುಡಿಯಲೆಂದು ಮುಸುಂಬಿ, ಕಿತ್ತಳೆ, ಸ್ಟ್ರಾಬೆರಿ, ನಿಂಬೆಹಣ್ಣುಗಳನ್ನು ದುಬಾರಿ ಬೆಲೆ ನೀಡಿಯಾದರೂ ಜನರು ಕೊಂಡು ಹೋಗುತ್ತಿದ್ದಾರೆ.ನಗರದ ಪ್ರಮುಖ ರಸ್ತೆಯ ಪಕ್ಕದಲ್ಲಿ ಅಲ್ಲಲ್ಲಿ ಕಲ್ಲಂಗಡಿ ಹಣ್ಣುಗಳ ರಾಶಿಗಳನ್ನು ಹಾಕಿಕೊಂಡು ಮಾರಾಟಕ್ಕೆ ಕುಳಿತಿರುವ ದೃಶ್ಯ `ಬೇಸಿಗೆ~ ಬಂತು ಎಂಬುದನ್ನು ಸಾರಿ ಹೇಳುತ್ತಿದೆ. ಅಲ್ಲಲ್ಲಿ ಹೊಸದಾಗಿ ಎಳೆನೀರು ಮಾರುವವರು ಹುಟ್ಟಿಕೊಳ್ಳುತ್ತಿದ್ದಾರೆ.ಹೋಟೆಲ್, ಮೆಸ್‌ಗಳಲ್ಲಿ ಮಧ್ಯಾಹ್ನಕ್ಕೆ ಸ್ಪೆಶಲ್ ಮಸಾಲೆ ಮಜ್ಜಿಗೆ, ರಾಗಿ ಅಂಬಲಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಊಟದ ಜೊತೆಗೆ ಮಜ್ಜಿಗೆ, ರಾಗಿ ಅಂಬಲಿಯನ್ನು ಕುಡಿದು ಹೊಟ್ಟೆ ತಣ್ಣಗೆ ಮಾಡಿಕೊಳ್ಳುತ್ತಿದ್ದಾರೆ.ಸ್ವಚ್ಛತೆ ಅಗತ್ಯ: ಬಿಸಿಲಿನ ದಗೆ ಹೆಚ್ಚುತ್ತಿದ್ದಂತೆ ನಗರದ ಮಾರುಕಟ್ಟೆಯ ವಿವಿಧ ರಸ್ತೆಗಳ ಪಕ್ಕದ `ಕೋಲ್ಡ್ ಡ್ರಿಂಕ್ಸ್~, `ಜ್ಯೂಸ್~ ಅಂಗಡಿಗಳು ತಲೆ ಎತ್ತುತ್ತಿವೆ. ನೂರಾರು ಜನರು ಈ ಅಂಗಡಿಗಳಲ್ಲಿ ತಂಪು ಪಾನೀಯ

ಕುಡಿಯುತ್ತಿರುವುದರಿಂದ ಸ್ವಚ್ಛತೆ ಕಾಪಾಡುತ್ತಿಲ್ಲ.ಕೆಲವು ತಳ್ಳುವ ಗಾಡಿಗಳಲ್ಲಿ ಶುದ್ಧ ನೀರು, ಐಸ್‌ಗಳನ್ನು ಬಳಸುತ್ತಿಲ್ಲ. ಇದರಿಂದ ರೋಗ ರುಜಿನ ಹರಡುವ ಸಾಧ್ಯತೆ ಇದೆ. ಹೀಗಾಗಿ ಕೋಲ್ಡ್ ಡ್ರಿಂಕ್ಸ್, ಜ್ಯೂಸ್ ಮಾರುವ ಅಂಗಡಿ ಅವರು ಜನರ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆ ಕಾಪಾಡಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.