ಗುರುವಾರ , ಜೂನ್ 24, 2021
29 °C

ದಿಕ್ಸೂಚಿ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣಾ ಫಲಿತಾಂಶ ಆಡಳಿತಾರೂಢ ಬಿಜೆಪಿಗೆ ಎಚ್ಚರಿಕೆಯ ಗಂಟೆ ಮತ್ತು ಸತತ ಸೋಲುಗಳಿಂದ ಕಂಗೆಟ್ಟುಹೋಗಿರುವ ಕಾಂಗ್ರೆಸ್ ಪಾಲಿಗೆ ಕತ್ತಲ ಸುರಂಗದ ತುದಿಯ ಬೆಳಕು. ಇದು ಮುಂದಿನ ದಿನಗಳಲ್ಲಿ ನಡೆಯಲಿರುವ ರಾಜಕೀಯ ಬದಲಾವಣೆಯ ದಿಕ್ಸೂಚಿಯೂ ಹೌದು.ಉಡುಪಿಯೂ ಸೇರಿದಂತೆ ಕರಾವಳಿಯ ಜಿಲ್ಲೆಗಳು ಬಿಜೆಪಿಯ ಭದ್ರಕೋಟೆ, ದತ್ತಪೀಠ ಚಳವಳಿಯ ಕೇಂದ್ರ ಸ್ಥಾನವಾದ ಚಿಕ್ಕಮಗಳೂರು ಸಂಘ ಪರಿವಾರದ ಹಿಂದುತ್ವದ ಪ್ರಯೋಗ ಶಾಲೆ, ಜತೆಗೆ ಇದು ಮುಖ್ಯಮಂತ್ರಿಯವರ ಸ್ವಂತ ಕ್ಷೇತ್ರ-ಈ ಕಾರಣಗಳಿಂದ ಉಪ ಚುನಾವಣೆ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.ಭ್ರಷ್ಟಾಚಾರದ ಆರೋಪ ಮತ್ತು ಭಿನ್ನಮತೀಯ ಚಟುವಟಿಕೆಗಳಿಂದಾಗಿ ನೈತಿಕವಾಗಿ ಕುಸಿದುಹೋಗಿದ್ದ ಪಕ್ಷ ಮುಖ ಉಳಿಸಿಕೊಳ್ಳಲಿಕ್ಕಾದರೂ ಈ ಚುನಾವಣೆ ಗೆಲ್ಲಬೇಕಾಗಿತ್ತು.

 

ಈ ಹಿನ್ನೆಲೆಯಿಂದಾಗಿಯೇ ಬಿಜೆಪಿ ಪಾಲಿಗೆ ಇದು ಮುಖಭಂಗದ ಸೋಲು. ಮತದಾರರು ಪ್ರತೀಕಾರ ಕೈಗೊಳ್ಳುವವರಂತೆ ಬಿಜೆಪಿ ಅಭ್ಯರ್ಥಿಯನ್ನು ಭಾರಿ ಅಂತರದಿಂದ ಸೋಲಿಸಿಬಿಟ್ಟಿದ್ದಾರೆ. ಕೋಮುವಾದದ ರಾಜಕೀಯವನ್ನು ತಿರಸ್ಕರಿಸಿದ್ದಾರೆ.

 

ಇನ್ನೊಂದು ವರ್ಷದ ಅವಧಿಯಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಗೆಲುವು ಮರೀಚಿಕೆಯಾಗಿತ್ತು. ನಿರಂತರ ಸೋಲುಗಳ ಹೊಡೆತದಿಂದಾಗಿ ಪಕ್ಷ ತನ್ನ ಮೇಲಿನ ವಿಶ್ವಾಸವನ್ನೇ ಕಳೆದುಕೊಂಡು ಕುಸಿದುಹೋಗಿತ್ತು.ಸಮರ್ಥ ಅಭ್ಯರ್ಥಿಯ ಆಯ್ಕೆ, ಪಕ್ಷದ ನಾಯಕರ ಒಗ್ಗಟ್ಟಿನ ಪ್ರಯತ್ನ ಮತ್ತು ಆತ್ಮವಿಶ್ವಾಸದಿಂದ ಕೂಡಿದ ಪ್ರಚಾರ ಏನೆಲ್ಲ ಅಚ್ಚರಿಯನ್ನು ಉಂಟುಮಾಡಬಲ್ಲದು ಎನ್ನುವುದಕ್ಕೆ ಕಾಂಗ್ರೆಸ್ ಪಕ್ಷದ ಗೆಲುವು ಉತ್ತಮ ಉದಾಹರಣೆ.ಎಲ್ಲ ಚುನಾವಣೆಗಳ ಫಲಿತಾಂಶದಲ್ಲಿಯೂ ರಾಜಕೀಯ ಪಕ್ಷಗಳು ಕಲಿಯಬೇಕಾದ ಪಾಠಗಳಿರುತ್ತವೆ.  ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೂ ಈ ಶ್ರೇಯಸ್ಸಿನಲ್ಲಿ ಅಭ್ಯರ್ಥಿಯ ವ್ಯಕ್ತಿತ್ವದ ಪಾಲು ಅಷ್ಟೇ ಮಹತ್ವದ್ದು.ಭ್ರಷ್ಟಾಚಾರ ಮತ್ತು ನೀತಿಗೆಟ್ಟ ನಡವಳಿಕೆಗಳಿಂದಾಗಿ ರಾಜಕಾರಣಿಗಳು ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ತತ್ವಭ್ರಷ್ಟತೆಯಿಂದಾಗಿ ಎಲ್ಲ ರಾಜಕೀಯ ಪಕ್ಷಗಳು ಒಂದೇ ಎಂಬ ಭಾವನೆ ಕೂಡಾ ಜನರಲ್ಲಿದೆ.ಇಂತಹ ಸಂದರ್ಭದಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಮತದಾರರು ಜಾತಿ, ಧರ್ಮ ಮತ್ತು ಪಕ್ಷ ಭೇದಗಳನ್ನು ಮರೆತು ಬೆಂಬಲಿಸುತ್ತಾರೆ ಎಂಬ ಸಂದೇಶವನ್ನು ಈ ಚುನಾವಣೆ ನೀಡಿದೆ.ಗೆದ್ದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ರಾಜಕಾರಣಿಗಳಲ್ಲಿ ಅಪರೂಪವಾದ ಸಜ್ಜನಿಕೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡವರು. ಮತದಾರರು ಅದನ್ನು ಗುರುತಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ವರ್ಚಸ್ಸಿನ ಎದುರು ಬಿಜೆಪಿ ಅಭ್ಯರ್ಥಿ ಮಂಕಾಗಿ ಹೋಗಿದ್ದು ಸ್ಪಷ್ಟ.

 

ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಜಾತಿ, ದುಡ್ಡು ಮತ್ತು ತೋಳ್ಬಲದಿಂದ ಕೂಡಿದ ಗೆಲ್ಲಬಲ್ಲ ಸಾಮರ್ಥ್ಯವೊಂದನ್ನೇ ಮುಖ್ಯ ಮಾನದಂಡವನ್ನಾಗಿ ಇಟ್ಟುಕೊಳ್ಳುವ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಲು ಈ ಫಲಿತಾಂಶ ಪ್ರೇರಣೆಯಾಗಬೇಕು.ಜಾತಿ ಮತ್ತು ದುಡ್ಡಿನ ಬಲವನ್ನು ಮುಂದೊಡ್ಡಿ ನಾಯಕತ್ವದ ಪೈಪೋಟಿಗಿಳಿದಿರುವ ಬಿಜೆಪಿ ನಾಯಕರು ಕೂಡಾ ಎಚ್ಚೆತ್ತುಕೊಳ್ಳಲು ಇದು ಸಕಾಲ. ಗೋಡೆಯ ಮೇಲಿನ ಬರಹವನ್ನು ಅವರು ಓದದೆ ಹೋದರೆ ಬುದ್ಧಿ ಕಲಿಸಲು ಮತದಾರರು ಸಿದ್ಧವಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.