ಶುಕ್ರವಾರ, ಏಪ್ರಿಲ್ 23, 2021
22 °C

ದೇವರಬನ ರಕ್ಷಣೆ ಮಾಡಿದವರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ತಲ್ತರೆಶೆಟ್ಟಳ್ಳಿಯ ಸುಗ್ಗಿದೇವರ ಬನದ ಒತ್ತುವರಿ ಜಾಗ ತೆರವುಗೊಳಿಸಿದವರಿಗೆ ಜಿಲ್ಲಾ ದೇವರ ಕಾಡು ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಸಮೀಪದ ಶಾಂತಳ್ಳಿಯ ಕುಮಾರಲಿಂಗೇಶ್ವರ ದೇವಾಲಯದ ಆವರಣದಲ್ಲಿ ಸನ್ಮಾನ ಸಮಾರಂಭ ಮಂಗಳವಾರ ನಡೆಯಿತು. ತಲ್ತರೆಶೆಟ್ಟಳ್ಳಿಯ ಸುಗ್ಗಿದೇವರ ಬನದಲ್ಲಿ ಕಳೆದ ಹಲವು ವರ್ಷಗಳಿಂದ ಒತ್ತುವರಿ ಮಾಡಿಕೊಂಡು ಇದೀಗ ಸ್ವಯಂ ಪ್ರೇರಿತರಾಗಿ ಜಾಗವನ್ನು ತೆರವುಗೊಳಿಸಿದ 18 ಮಂದಿಯನ್ನು ಸನ್ಮಾನಿಸಲಾಯಿತು. ದೇವರ ಬನ ರಕ್ಷಣೆಗಾಗಿ ಶ್ರಮಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಫ್ರಿ ಮುತ್ತಣ್ಣ, ಕೆ.ಕೆ.ಸುಬ್ಬಯ್ಯ, ಕೆ.ಟಿ.ರಾಜಶೇಖರ್, ಮಾಚಯ್ಯ, ಉತ್ತಯ್ಯ ಅವರನ್ನು ಗೌರವಿಸಲಾಯಿತು.ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕೊಡಗಿನ ನೆಲಜಲ ಹಾಗೂ ಸಂಸ್ಕೃತಿ ರಕ್ಷಣೆಗೆ ನಿಸ್ವಾರ್ಥ ಭಾವದಿಂದ ಹೋರಾಟ ಮಾಡುವವರಿಗೆ ಜಿಲ್ಲೆಯ ಜನರು ಸಹಕಾರ ನೀಡಬೇಕು ಎಂದರು. ಕೊಡಗಿನ ರಕ್ಷಣೆಗೆ ಜಾತ್ಯತೀತ ಹಾಗೂ ರಾಜಕೀಯ ರಹಿತ ಹೋರಾಟ ಅನಿವಾರ್ಯ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೆಲವು ಕಡೆ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.ಜನಪ್ರತಿನಿಧಿಗಳು ಮತ ಬ್ಯಾಂಕ್‌ಗಾಗಿ ವಲಸಿಗರನ್ನು ಓಲೈಸಿಕೊಳ್ಳುವ ಪ್ರಯತ್ನದಲ್ಲಿ ಅಕ್ರಮ ಒತ್ತುವರಿಯನ್ನು ಸಕ್ರಮ ಮಾಡಲು ಹೊರಟಿದ್ದಾರೆ. ಮೂಲ ನಿವಾಸಿಗಳನ್ನು ಕಡೆಗಣಿಸಿ ವಲಸಿಗರನ್ನು ಎತ್ತಿಕಟ್ಟುವ ಹುನ್ನಾರ ಜನಪ್ರತಿನಿಧಿಗಳಿಂದಲೇ ನಡೆಯುತ್ತಿರುವುದು ಜಿಲ್ಲೆಯ ದುರಂತ ಎಂದರು.ಈ ಹಿಂದೆ 17 ಸಾವಿರ ಏಕರೆಯಷ್ಟು ಇದ್ದ ದೇವರಕಾಡು ಇಂದು 7 ಸಾವಿರ ಎಕರೆಗೆ ಇಳಿದಿದೆ. ಔಷಧಿಯ ಗುಣಗಳುಳ್ಳ ಸಸ್ಯಗಳು ಇಂದು ವಿನಾಶದ ಅಂಚಿನಲ್ಲಿವೆ. ಕೊಡಗಿನ ನೆಲ, ಜಲ, ಸಂಸ್ಕೃತಿ ಉಳಿಯಬೇಕಾದರೆ, ಗ್ರಾಮಸ್ಥರೆಲ್ಲರೂ ಪಕ್ಷಾತೀತವಾಗಿ ಒಂದಾಗಬೇಕು. ಆಗ ಮಾತ್ರ ನಾವು ಮತ್ತು ನಮ್ಮ ಪರಿಸರ ಉಳಿಯಲು ಸಾಧ್ಯವೆಂದು ಕಾವೇರಿ ಸೇನೆ ಜಿಲ್ಲಾ  ಸಂಚಾಲಕ ರವಿ ಚಂಗಪ್ಪ ಅಭಿಪ್ರಾಯಪಟ್ಟರು.

ತಲ್ತರೆಶೆಟ್ಟಳ್ಳಿಯ ಸುಗ್ಗಿದೇವರ ಬನ ಸಮಿತಿಯ ಅಧ್ಯಕ್ಷ ಎ.ಕೆ.ಮಾಚಯ್ಯ ಅಧ್ಯಕ್ಷತೆ ವಹಿಸಿದ್ದರು.ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕ ನಿವೃತ್ತ ಮೇಜರ್ ಬಿದ್ದಂಡ ನಂದಾ ನಂಜಪ್ಪ, ವಾಲ್ನೂರು ಬಸವಣ್ಣ ದೇವರ ಬನ ಸಮಿತಿ ಅಧ್ಯಕ್ಷ ಜಫ್ರಿ ಮುತ್ತಣ್ಣ, ಕೊಡಗು ಜಿಲ್ಲಾ ದೇವರಕಾಡು ಸಂರಕ್ಷಣಾ ಸಮಿತಿ ಸಂಚಾಲಕ ಬಿ.ಸಿ.ನಂಜಪ್ಪ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಶಾಂತಳ್ಳಿ ಕುಮಾರಲಿಂಗೇಶ್ವರ ದೇವಾಲಯದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಕೆ.ಸುಬ್ಬಯ್ಯ, ಕಾವೇರಿ ಸೇನೆ ತಾಲ್ಲೂಕು ಸಂಚಾಲಕ ಹೊಸಬೀಡು ಶಶಿ, ಕೂತಿನಾಡು ಸುಗ್ಗಿ ದೇವರ ಬನ ಸಮಿತಿ ಅಧ್ಯಕ್ಷ ಕೆ.ಟಿ.ಜೋಯಪ್ಪ, ತಲ್ತರೆಶೆಟ್ಟಳ್ಳಿ ಸುಗ್ಗಿದೇವರ ಬನದ ಕಾರ್ಯದರ್ಶಿ ಎಸ್.ಆರ್.ಉತ್ತಯ್ಯ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.