ಶುಕ್ರವಾರ, ಮೇ 20, 2022
19 °C

ದೇಶಭಾಷೆಗಳೇ ವಿಶ್ವಭಾಷೆ ಆಗಬೇಕಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ದೇಶಭಾಷೆಗಳು ವಿಶ್ವದ ಬೇರೆ ಬೇರೆ ಭಾಷೆಗಳ ಅನುಭವಗಳನ್ನು ಒಳಗೊಳ್ಳಬೇಕೆ ವಿನಾ ದೇಶಭಾಷೆಗಳೇ ವಿಶ್ವಭಾಷೆಯಾಗಬೇಕಿಲ್ಲ ಎಂದುಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಹೇಳಿದರು.

ಹೆಗ್ಗೋಡಿನಲ್ಲಿ ನಡೆಯುತ್ತಿರುವ `ನೀನಾಸಂ~ ಸಂಸ್ಕೃತಿ ಶಿಬಿರದಲ್ಲಿ ಭಾನುವಾರ `ದೇಶಭಾಷೆಗಳು~ ಕುರಿತ ಗೋಷ್ಠಿಯಲ್ಲಿ ನಡೆದ ಚರ್ಚೆ ಹಾಗೂ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಭಾಷೆ ಸತ್ಯವನ್ನು ಹುಡುಕುವ ಸಾಧನ. ಇಂಗ್ಲಿಷ್‌ನಲ್ಲೂ ಹಲವು ಬಗೆಯ ಇಂಗ್ಲಿಷ್ ಗೊತ್ತಿದ್ದವರು ಮಾತ್ರ ಇಂಗ್ಲಿಷ್ ಸಾಹಿತ್ಯವನ್ನು ರಚಿಸಬಲ್ಲರು. ಭಾಷೆಯ ಒಳಸುಳಿಗಳ ಪರಿಚಯವಿಲ್ಲದೇ ಇದ್ದರೆ ಕೇವಲ ವ್ಯವಹಾರಿಕ ಭಾಷೆಯಲ್ಲಿ ಪರಿಣತಿ ಸಾಧಿಸಬಹುದೇ ವಿನಾ ಸೃಜನಾತ್ಮಕ ಪ್ರತಿಕ್ರಿಯೆ ಸಾಧ್ಯವಿಲ್ಲ ಎಂದರು.

ಭಾರತದಲ್ಲಿ ಇಂಗ್ಲಿಷ್‌ನಲ್ಲಿ ಬರೆಯುವವರಿಗೆ ಯುರೋಪ್‌ನ ಲೇಖಕರು  ಮಾದರಿಯಾಗಿದ್ದಾರೆ. ಆದರೆ, ಆಫ್ರಿಕಾದ ಲೇಖಕರು ಹೀಗೆ ಯಾರನ್ನೂ ಮಾದರಿಯನ್ನಾಗಿ ಇಟ್ಟುಕೊಂಡಿಲ್ಲ. ಇಂಗ್ಲಿಷ್ ಬಗ್ಗೆ ಇರುವ `ಸಂಕೋಚ~ವನ್ನು ತೆಗೆದು ಹಾಕಿ ತಪ್ಪಾಗಿಯಾದರೂ ಅದನ್ನು ಮಾತನಾಡಬೇಕು. ಶಾಲೆಗಳಲ್ಲಿ  ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಬೇಕೆ ವಿನಾ ಇತರ ವಿಷಯಗಳನ್ನು ಇಂಗ್ಲಿಷ್‌ನಲ್ಲಿ ಕಲಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.ಇ-ಮೇಲ್ ಹಾಗೂ ಫೇಸ್‌ಬುಕ್‌ಗಳ ಮೂಲಕ ಹೊಸ ತಲೆಮಾರು ತನ್ನದೇ ಆದ ಭಾಷೆಯನ್ನು ಸೃಷ್ಟಿಸಿಕೊಳ್ಳುತ್ತಿರುವ ವಿದ್ಯಮಾನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ಈಜಿಪ್ಟ್‌ನಲ್ಲಿ ಫೇಸ್‌ಬುಕ್ ಮೂಲಕವೇ ಪ್ರಭುತ್ವದ ವಿರುದ್ಧ ಕ್ರಾಂತಿ ನಡೆಸಲು ಸಾಧ್ಯವಾಗಿದೆ. ನಮ್ಮಲ್ಲೂ ಫೇಸ್‌ಬುಕ್‌ನಲ್ಲಿ ವ್ಯವಹರಿಸುವವರು ಪ್ರಭುತ್ವದ `ಫೇಸ್~ ಬದಲಿಸಲು ಸಾಧ್ಯವಾದರೆ ಒಳ್ಳೆಯದು ಎಂದು ಉತ್ತರಿಸಿದರು.ಎಲ್ಲಾ ರೀತಿಯ ಅನುಭವಗಳನ್ನು ಸ್ವೀಕರಿಸುವ ಗುಣ ಭಾಷೆಗೆ ಇದೆ. ಎರಡು ಭಾಷೆ ಗೊತ್ತಿದೆ ಎಂದರೆ ಎರಡು `ಪ್ರಪಂಚ~ದ ಅರಿವು ನಮಗಿದೆ ಎಂದರ್ಥ. ಕನ್ನಡದವರಾದ ನಮಗೆ ಇಂಗ್ಲಿಷ್‌ನ ಗ್ರಹಿಕೆ ಇದ್ದರೆ ಸಾಕು. ಇಂಗ್ಲಿಷ್‌ನಲ್ಲಿ ಅಭಿವ್ಯಕ್ತಿ ಸಾಧ್ಯವಿಲ್ಲದಿದ್ದರೂ ಆತಂಕಪಡಬೇಕಿಲ್ಲ ಎಂದರು.ಕನ್ನಡದಲ್ಲೇ ಇರುವ ಹಲವು ಉಪಭಾಷೆಗಳ ಕುರಿತು ಪ್ರಸ್ತಾಪಿಸಿದ ಅವರು, ಇಲ್ಲಿನ ಉಪಭಾಷೆಗಳಲ್ಲಿ ತನ್ನದೇ ಆದ `ಆತ್ಮೀಯತೆ~ ಅಡಗಿದೆ. ಈ ಆತ್ಮೀಯತೆ ಹೊರಟುಹೋದ ಕ್ಷಣ ಭಾಷೆ ಕೃತಕವಾಗುತ್ತದೆ.ಡಾ.ರಾಜ್‌ಕುಮಾರ್ ಅಂತಹವರು `ಕೃತಕ~ವಾದ ಭಾಷೆಯನ್ನೇ ಕೃತಕವಲ್ಲದ ರೀತಿಯಲ್ಲಿ ಆಡುವ ಮೂಲಕ ಇಡೀ ಕರ್ನಾಟಕಕ್ಕೆ ಒಂದೇ ಕನ್ನಡ ಎನ್ನುವ  ರೀತಿಯಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿದ ಪರಿ ಅನನ್ಯವಾದುದು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.