ಭಾನುವಾರ, ಜೂನ್ 20, 2021
27 °C

ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಅಂಕ-ಅನುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ತಿಂಗಳು 2ನೇ ವಾರದಿಂದ 2011-12ನೇ ಸಾಲಿನ ದ್ವಿತೀಯ ಪಿಯು ಮುಖ್ಯ ಪರೀಕ್ಷೆಗಳು ಪ್ರಾರಂಭವಾಗುತ್ತಿವೆ. ಕರ್ನಾಟಕ ಪದವಿಪೂರ್ವ ಶಿಕ್ಷಣ ಮಂಡಳಿ ಮತ್ತು ಸಿಇಟಿ ಘಟಕ ದೇಶದಲ್ಲೇ ಮಾದರಿ ಎಂದು ಬೆನ್ನು ತಟ್ಟಿಕೊಂಡು ಬರುತ್ತಿದ್ದೇವೆ. ಆದರೆ ದ್ವಿತೀಯ ಪಿಯು ಹಳೆಯ ಪ್ರಶ್ನೆಪತ್ರಿಕೆ (ಎಲ್ಲಾ ವಿಷಯಗಳ) ತಿರುವಿ ಹಾಕಿದರೆ, ಪ್ರಶ್ನೆಗಳನ್ನು ಉತ್ತರಿಸಲು ನೀಡುವ ಸೂಚನೆಗಳಲ್ಲಿ ಕೆಲವು ಅನುಮಾನಗಳು ತಲೆದೋರುತ್ತವೆ.

ಮೊದಲು ಕೆಲವು ಪತ್ರಿಕೆಗಳ ವಿಷಯವಾರು ಅಂಕ ವಿಭಜನೆಯನ್ನು ಗಮನಿಸೋಣ (ಪಟ್ಟಿಯನ್ನು ನೋಡಿ). ಅಂಕ ಮತ್ತು ಪದ /ವಾಕ್ಯ ಮಿತಿಗಳ ಬಗೆಗಿನ ಪಟ್ಟಿಯನ್ನು ಅವಲೋಕಿಸಿದಾಗ ಕೆಲವು ವಿಚಿತ್ರ ಪ್ರಶ್ನೆಗಳು ಎದುರಾಗುತ್ತವೆ. ಪಟ್ಟಿಯಲ್ಲಿ ಕೇವಲ ವಿವರಣಾತ್ಮಕ ಉತ್ತರಗಳನ್ನು ಬರೆಯುವ /ಬಯಸುವ ಕೆಲವು ವಿಷಯಗಳನ್ನು ಮಾತ್ರ ಆಯ್ದುಕೊಳ್ಳಲಾಗಿದೆ. ಸಂಖ್ಯಾ /ಲೆಕ್ಕಪ್ರಧಾನ ವಿಷಯಗಳನ್ನು ಈ ವಿಶ್ಲೇಷಣೆಗೆ ಬಳಸಿಲ್ಲ.

ಎಲ್ಲ ವಿಷಯಗಳ 1 ಮತ್ತು 2 ಅಂಕದ ಪ್ರಶ್ನೆಗಳಿಗೆ ನಿಗದಿಮಾಡಿರುವ ಪದ /ವಾಕ್ಯ ಮಿತಿ ಬಹುತೇಕ ಸಮಾನವಾಗಿದೆ. ಆದರೆ 3, 4, 5, 6 ಮತ್ತು 10 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಲು ನಿಗದಿಪಡಿಸಿರುವ ಪದ /ವಾಕ್ಯ ಮಿತಿ ಅಸಮತೋಲನ ಅಥವಾ ಗೊಂದಲದಿಂದ ಕೂಡಿದೆ.

ನಿರ್ದಿಷ್ಟವಾಗಿ ಗಮನಿಸುವುದಾದರೆ, ಕನ್ನಡದಲ್ಲಿ 4 ಅಂಕಗಳ ಪ್ರಶ್ನೆಗೆ 5-6 ವಾಕ್ಯಗಳಲ್ಲಿ , ಅಂದರೆ 80-100 ಪದಗಳನ್ನು ನಿಗದಿಪಡಿಸಲಾಗಿದೆ. ಸಾಮಾನ್ಯ 3 ರಿಂದ 6 ಪದಗಳ ವಾಕ್ಯಗಳನ್ನು ರಚಿಸುವ ವಿದ್ಯಾರ್ಥಿಗಳ ಪ್ರಕಾರ ಇಂಗ್ಲಿಷ್ ಉತ್ತರದ ಮಿತಿ 20 ವಾಕ್ಯಗಳಾಗುತ್ತವೆ. ಕನ್ನಡದಲ್ಲಿ ಕಡಿಮೆ ಬರೆದರೂ ಹೆಚ್ಚು ಅಂಕ ಗಳಿಸಲು ಸಾಧ್ಯ, ಇಂಗ್ಲಿಷ್‌ನಲ್ಲಿ ಅದು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗೆ ಅನಿಸಲಾರದೆ? ಇಲ್ಲಿನ ಉತ್ತರಗಳ ನಡುವಿನ ವ್ಯತ್ಯಾಸ 1:4 ಆಗುತ್ತದೆ.

ಇನ್ನು 5 ಅಂಕಗಳ ಪ್ರಶ್ನೆಗಳಿಗೆ ಬರುವುದಾದರೆ ಮತ್ತೂ ವಿಚಿತ್ರಗಳು ಎದುರಾಗುತ್ತವೆ. ಕನ್ನಡದಲ್ಲಿ ಈ ಪ್ರಶ್ನೆಗೆ (ಪ್ರಬಂಧ) ಪದ /ವಾಕ್ಯ ಮಿತಿ ನಿಗದಿಯಾಗಿಲ್ಲ. ಉಳಿದಂತೆ ಕ್ರಮವಾಗಿ ಇತಿಹಾಸದಲ್ಲಿ 15-20 ಸಾಲುಗಳು, ಇಂಗ್ಲಿಷ್ 100 ಪದಗಳು, ಸಮಾಜಶಾಸ್ತ್ರ 15 ವಾಕ್ಯಗಳು, ರಾಜ್ಯಶಾಸ್ತ್ರ 15-20 ವಾಕ್ಯಗಳು ಮತ್ತು ವ್ಯವಹಾರ ಅಧ್ಯಯನದಲ್ಲಿ (ಕಾಮರ್ಸ್) 15 ಸಾಲುಗಳು ಎಂದು ಸೂಚನೆ ನೀಡಲಾಗಿದೆ. ಎಚ್‌ಇಪಿಎಸ್ ನಿಯೋಜನೆಯಲ್ಲಿ ವ್ಯವಹಾರ ಅಧ್ಯಯನ ಹೊರತುಪಡಿಸಿ ಉಳಿದೆಲ್ಲ ಪತ್ರಿಕೆಗಳನ್ನು ಒಬ್ಬನೇ ವಿದ್ಯಾರ್ಥಿ ಬರೆಯುತ್ತಾನೆ.

ಕನ್ನಡದಲ್ಲಿ ಪ್ರಬಂಧಕ್ಕೆ 5 ಅಂಕ ನಿಗದಿಮಾಡಿ ಯಾವುದೇ ಪದ /ವಾಕ್ಯ ಮಿತಿ ನೀಡಿಲ್ಲ. ಇತಿಹಾಸದ 15-20 ಸಾಲುಗಳು ಮತ್ತು ರಾಜ್ಯಶಾಸ್ತ್ರದ 15-20 ವಾಕ್ಯಗಳಿಗೆ ಯಾವುದೇ ವ್ಯತ್ಯಾಸವಿಲ್ಲವೆ? ಅಂದರೆ ಇದರರ್ಥ ಇತಿಹಾಸದಲ್ಲಿ ಉತ್ತರಗಳನ್ನು ಸಂಗ್ರಹಿಸಿ, ರಾಜ್ಯಶಾಸ್ತ್ರದಲ್ಲಿ ವಿಸ್ತರಿಸಿ ಬರೆಯಬೇಕು ಎಂದರ್ಥವೇ? ಹಾಗಾದರೆ ಇಂಗ್ಲಿಷಿನಲ್ಲಿ 100 ಪದಗಳು ಸಾಕೆ? ಒಬ್ಬನೇ ವಿದ್ಯಾರ್ಥಿ ಬೇರೆ ಬೇರೆ ವಿಷಯಗಳಿಗೆ ಉತ್ತರಿಸುವಾಗ ಈ ಮಿತಿಯ ವ್ಯತ್ಯಾಸವನ್ನು ಮೀರಿ ತನ್ನ ಪರೀಕ್ಷಾ ಆಲೋಚನೆ (ಮೈಂಡ್‌ಸೆಟ್) ಹೊಂದಾಣಿಕೆ ಮಾಡಿಕೊಳ್ಳುವ ಬಗೆಯಾದರೂ ಯಾವುದು?

10 ಅಂಕಗಳ ಪ್ರಶ್ನೆಗಳಲ್ಲೂ ಈ ಗೊಂದಲ ಮುಂದುವರಿಯುತ್ತದೆ. ಇತಿಹಾಸ ವಿಷಯದ ಭೂಪಟದಲ್ಲಿ ಸ್ಥಳ ಗುರುತಿಸಿ ಪ್ರತೀ ಸ್ಥಳದ ಕುರಿತು 2 ವಾಕ್ಯಗಳಲ್ಲಿ ಬರೆಯಲು ಹೇಳಲಾಗಿದೆ. ಸಮಾಜಶಾಸ್ತ್ರದಲ್ಲಿ 30 ವಾಕ್ಯಗಳಲ್ಲಿ ಉತ್ತರಿಸುವಂತೆಯೂ ಮತ್ತು ರಾಜ್ಯಶಾಸ್ತ್ರದಲ್ಲಿ 30 ರಿಂದ 40 ವಾಕ್ಯಗಳಲ್ಲಿ ಉತ್ತರಿಸುವಂತೆಯೂ ಕೇಳಲಾಗಿದೆ. ಈ ತಾರತಮ್ಯವೇಕೆ? 10 ವಾಕ್ಯಗಳು ಎಂದರೆ ಸರಾಸರಿ 6 ಪದಗಳಂತೆ ಅದು ಕನಿಷ್ಠ ಅರ್ಧ ಪುಟ ಅಥವಾ 60 ಪದಗಳ ವ್ಯತ್ಯಾಸ. ಈ ಗೊಂದಲಗಳನ್ನು ತಲೆಯಲ್ಲಿ ತುಂಬಿಕೊಂಡು ಮಕ್ಕಳು ಉತ್ತರಿಸುವುದಾದರೂ ಹೇಗೆ?

ನಾನು ಸಂಬಂಧಿಸಿದ ವಿಷಯಗಳ ಉಪನ್ಯಾಸಕರೊಂದಿಗೆ ಚರ್ಚಿಸಿದಾಗ ತಿಳಿದುಬಂದ ವಿಚಾರವೆಂದರೆ; ಕನ್ನಡದಲ್ಲಿ ಬಹುತೇಕ ಸಂದರ್ಭಗಳಲ್ಲಿ 4 ಅಂಕದ ಪ್ರಶ್ನೆಗಳಿಗೆ ಕೇವಲ 5-6 ವಾಕ್ಯಗಳಲ್ಲಿ ಉತ್ತರಿಸಲು ಸಾಧ್ಯವಾಗುವುದಿಲ್ಲ. ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರಗಳಲ್ಲಿ 40 ವಾಕ್ಯಗಳಷ್ಟು ವಿಸ್ತರಿಸದೆಯೂ ಸಮರ್ಪಕ ಉತ್ತರ ಬರೆಯಲು ಸಾಧ್ಯವಿದೆ. ಹೀಗಾಗಿ ಪದವಿಪೂರ್ವ ಶಿಕ್ಷಣ ಮಂಡಳಿಯು ನಡೆಸುವ ಪಿಯು ಪರೀಕ್ಷೆಯಲ್ಲಿ ಒಬ್ಬನೇ ವಿದ್ಯಾರ್ಥಿ ವಿಭಿನ್ನ ಮಾನದಂಡ ಅನ್ವಯಿಸಿದ ಪದ /ವಾಕ್ಯ /ಸಾಲುಗಳ ಮಿತಿಯನ್ನು ಅರಗಿಸಿಕೊಂಡು ಪರೀಕ್ಷೆ ಎದುರಿಸುವಾಗ ಗೊಂದಲಕ್ಕೆ ಒಳಗಾಗಬಹುದು. ಈ ಗೊಂದಲ ನಿವಾರಣೆ ಸದರಿ ವರ್ಷದಲ್ಲಿ ಆಗದಿದ್ದರೂ ಮುಂದಿನ ವರ್ಷಗಳಲ್ಲಾದರೂ ಅನ್ವಯವಾಗುವಂತೆ ಸರಿಪಡಿಸಬೇಕಾದ ಜರೂರಿದೆ.

ಶಿಕ್ಷಣ ಇಲಾಖೆಯ ಸಚಿವರು, ಅಧಿಕಾರಿಗಳು ಕೇಂದ್ರೀಯ ಪಠ್ಯಕ್ರಮ ಜಾರಿಗೆ ತರುತ್ತೇವೆಂದು ಘೋಷಣೆ ಮಾಡುವುದು, ಇತಿಹಾಸ, ಸಮಾಜವಿಜ್ಞಾನ ಪಠ್ಯ ವಿಷಯಗಳಿಗೆ ಕೇಸರಿಬಣ್ಣ ಬಳಿಯುವುದನ್ನು ಪಕ್ಕಕ್ಕಿರಿಸಿ ಗುಣಾತ್ಮಕ ಬದಲಾವಣೆ ಕಡೆಗೆ ಗಮನಹರಿಸಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.