ಶನಿವಾರ, ಜೂನ್ 19, 2021
22 °C

ನಂಬಿ, ಉತ್ತರಪ್ರದೇಶ ಬದಲಾಗುತ್ತಿದೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಬಿ, ಉತ್ತರಪ್ರದೇಶ ಬದಲಾಗುತ್ತಿದೆ...

ಬೆಂಗಳೂರು: ಹತ್ತುವರ್ಷಗಳ ಹಿಂದೆ ವಾರಣಾಸಿಯ ಹೊಟೇಲ್ ರೂಮಲ್ಲಿ ನನ್ನ ಮುಂದೆ ಕೂತಿದ್ದ ಹಿರಿಯ ಪತ್ರಕರ್ತ ಅನಿಲ್ ಯಾದವ್ ವಿಸ್ಕಿಯ ಗ್ಲಾಸ್ ಎತ್ತಿ ಚಿಯರ್ಸ್ ಎಂದವನೇ `ಆಜ್ ಕತಲ್ ಕಾ ರಾತ್~ (ಇಂದು ಹತ್ಯೆಯ ರಾತ್ರಿ) ಎಂದು ಮೊದಲ ಗುಟುಕು ಚಪ್ಪರಿಸಿದ್ದು ಇನ್ನೂ ನೆನೆಪಿದೆ.

ಅವನ ಮಾತು ಯಾವುದೋ ಭೂತ-ಪ್ರೇತದ ಕತೆಗೆ ಪೀಠಿಕೆ ಹಾಕುವಂತಿತ್ತು. 2002ರ ವಿಧಾನಸಭಾ ಚುನಾವಣೆಯ ಸಮೀಕ್ಷೆಗೆಂದು ನಾನು ಹೋಗಿದ್ದೆ.  ಮತದಾನದ ಹಿಂದಿನ ರಾತ್ರಿಯನ್ನು ಆ ಕಾಲದ ಉತ್ತರಪ್ರದೇಶದ ಜನರು `ಕತಲ್ ಕಾ ರಾತ್~ ಎನ್ನುತ್ತಿದ್ದರು. ಆ ರಾತ್ರಿ ಬಾಹುಬಲ ಹೊಂದಿರುವ ಅಭ್ಯರ್ಥಿಗಳು ತಮ್ಮ ಪರವಾಗಿರುವ ಮತಪತ್ರಗಳಿಂದ ಮತಪೆಟ್ಟಿಗೆಗಳನ್ನು ತುಂಬಿಸಿಬಿಡುತ್ತಿದ್ದರಂತೆ. ಮರುದಿನ ನಿಜವಾದ ಮತದಾರರು ಮತಗಟ್ಟೆಗಳಿಗೆ ಹೋದಾಗ ಅವರ ಮತಗಳ ಚಲಾವಣೆಯಾಗಿರುತ್ತಿತ್ತು.ಅಂದಿನ ಉತ್ತರಪ್ರದೇಶದ ಚುನಾವಣೆಯ ದಿನಗಳು  ಭಯಾನಕವಾಗಿತ್ತು. ಆ ಚುನಾವಣೆಯ ಕಾಲದಲ್ಲಿ ನಾನು ಮವು ಮತ್ತು ಪ್ರತಾಪ್‌ಗಡ ಎಂಬ ಎರಡು ಕುಖ್ಯಾತ ಕ್ಷೇತ್ರಗಳಿಗೆ ಹೋಗಿದ್ದೆ. ಈ ಬಾರಿ ಜೈಲಿನಿಂದಲೇ ಸ್ಪರ್ಧಿಸುತ್ತಿರುವ ಮುಕ್ತರ್ ಅನ್ಸಾರಿ ಆಗ ಮವು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿದ್ದ. ಆತನ ಮನೆಮುಂದೆ ಮತಗಟ್ಟೆ ಮುಂದೆ ನಿಂತವರಂತೆ ಜನರ ಉದ್ದನೆಯ ಸಾಲು ಇತ್ತು. ಅವರೆಲ್ಲ ದುಡ್ಡು ಕೇಳಲು ಬಂದಿದ್ದವರು. ಮೆಡಿಕಲ್ ಬಿಲ್ ತಂದು ಯಾರು ತೋರಿಸಿದರೂ ಅವರಿಗೆ ಅನ್ಸಾರಿ ಚೇಲಾಗಳು ನೂರು ರೂಪಾಯಿ ಕೊಡುತ್ತಿದ್ದರು. ಪಕ್ಷೇತರನಾಗಿ ಸ್ಪರ್ಧಿಸಿದ್ದ ಆತನ ಮನೆ ಹಜಾರದಲ್ಲಿ ಕೂತವರು ಯಾರು ಎಂದು ವಿಚಾರಿಸಿದರೆ ಅವರೆಲ್ಲರೂ ಅನ್ಸಾರಿ ಬೆಂಬಲ ಕೇಳಲು ಬಂದಿದ್ದ ಸುತ್ತಲಿನ ಕ್ಷೇತ್ರಗಳ ಸಮಾಜವಾದಿ ಅಭ್ಯರ್ಥಿಗಳಾಗಿದ್ದರು.ಅಲ್ಲಿಂದ ಕುಂಡಾ (ಪ್ರತಾಪ್‌ಗಡ)ಕ್ಕೆ ಹೋಗಿದ್ದೆ. ಅಲ್ಲಿನ ಪಕ್ಷೇತರ ಅಭ್ಯರ್ಥಿಯಾಗಿದ್ದವ ಆಗಿನ ಬಿಜೆಪಿ ಸರ್ಕಾರದಲ್ಲಿ ಕಾರ್ಯಕ್ರಮ ಅನುಷ್ಠಾನ ಸಚಿವನಾಗಿದ್ದ ಇನ್ನೊಬ್ಬ ಭೂಗತ ಪಾತಕಿ ರಘುನಾಥ್ ಪ್ರತಾಪ್‌ಸಿಂಗ್ ಯಾನೆ ರಾಜು ಭಯ್ಯಾ. ವಿರೋಧಿಗಳನ್ನು ಗುಂಡಿಕ್ಕಿ ಕೊಂದು ಮನೆ ಎದುರಿಗಿನ ಕೊಳದಲ್ಲಿನ ಮೊಸಳೆಗಳಿಗೆ ಎಸೆಯುತ್ತಿದ್ದ ಎಂಬ ಕತೆಯೂ ಸೇರಿದಂತೆ ಆತನ ಕ್ರೌರ್ಯದ ಬಗ್ಗೆ ರೋಚಕ ದಂತಕತೆಗಳಿದ್ದವು.ಆತನ ಚುನಾವಣಾ ಪ್ರಚಾರದ ಸಭೆಗಳು ಬೆಂಬಲಿಗರು ಗಾಳಿಯಲ್ಲಿ ಗುಂಡುಹಾರಿಸುವ ಮೂಲಕ ಪ್ರಾರಂಭವಾಗುತ್ತಿತ್ತು. ಆತನ ಕಪ್ಪು ಬೋಲೇರಾ ಹೋಗುತ್ತಿದ್ದಾಗ ಬೀದಿ ಬದಿಯಲ್ಲಿದ್ದ ಜನ `ಭಯ-ಭಕ್ತಿ~ಯಿಂದ ತಲೆಬಾಗುತ್ತಿದ್ದರು. ಇಡೀ ಕ್ಷೇತ್ರದಲ್ಲಿ ಎಲ್ಲಿಯೂ ವಿರೋಧಿ ಅಭ್ಯರ್ಥಿಗಳ ಬ್ಯಾನರ್-ಪೋಸ್ಟರ್‌ಗಳಿರಲಿಲ್ಲ. ಎಲ್ಲಿ ನೋಡಿದರೂ ಆತನ ಚಿಹ್ನೆಯಾಗಿದ್ದ `ಕುರ್ಚಿ~ ನೇತಾಡುತ್ತಿತ್ತು. ಆತ ಒಂದು ಸಭೆಯಲ್ಲಿ ಮಾತನಾಡುತ್ತಾ ` ಮತದಾನದ ದಿನ ಯಾರಾದರೂ ಬಾಲ ಬಿಚ್ಚಿದರೆ ಕೈಕಾಲು ಮುರಿದು ಹಾಕುತ್ತೇನೆ~ ಎಂದು ಬೆದರಿಕೆಯೊಡ್ಡಿದಾಗ ಸೇರಿದ್ದ ಜನ ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿದ್ದರು. ಅದು ನಿಜವಾದ ಜಂಗಲ್‌ರಾಜ್.ಈ ಬಾರಿ ಮವು ಮತ್ತು ಪ್ರತಾಪ್‌ಗಡಕ್ಕೆ ನಾನು ಹೋಗಿರಲಿಲ್ಲ. ಕುಂಡಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಾಯಾವತಿ ಅವರ ಭಾಷಣವನ್ನು ಟಿವಿಯಲ್ಲಿ ನೋಡುತ್ತಿದ್ದೆ. ಅಪರೂಪಕ್ಕೆ ಲಿಖಿತ ಭಾಷಣವನ್ನು ಪಕ್ಕಕ್ಕೆ ಇಟ್ಟು ಮಾತನಾಡಿದ ಮಾಯಾವತಿ `ಮತದಾನ್ ಕಾ ದಿನ್ ಯಹಾಂ ಕೋಯಿ ಬಿ ಗೂಂಡಾಗರ್ದಿ ಕಿಯಾ ತೋ, ಉಸ್‌ಕೋ ಉಲ್ಟಾ ಲಟಕಾ ದೂಂಗಾ~ (ಮತದಾನದ ದಿನ ಇಲ್ಲಿಯಾರಾದರೂ ಗೂಂಡಾಗಿರಿ ನಡೆಸಿದರೆ ತಲೆಕೆಳಗೆ ಮಾಡಿ ನೇತುಹಾಕುತ್ತೇನೆ) ಎಂದು ತೋರುಬೆರಳು ತೋರಿಸಿ ಎಚ್ಚರಿಕೆ ಕೊಟ್ಟಾಗ ಜನ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದುದನ್ನು ನೋಡಿದೆ. ಇದು ಹತ್ತುವರ್ಷಗಳ ಅವಧಿಯಲ್ಲಿ ಬದಲಾದ ಉತ್ತರಪ್ರದೇಶ.ಕಳೆದ ಆರು ಸುತ್ತುಗಳ ಮತದಾನದ ಅವಧಿಯಲ್ಲಿ ಎಲ್ಲಿಯೂ  ಮತಗಟ್ಟೆಗಳ ಮೇಲೆ ದಾಳಿ ಇಲ್ಲವೇ ಅಕ್ರಮ ಮತದಾನ ನಡೆದ ಬಗ್ಗೆ ದೂರುಗಳಾಗಲಿ, ಹಣ ಇಲ್ಲವೇ ಹೆಂಡ ಹಂಚಿದ ಆರೋಪಗಳಾಗಲಿ ಕೇಳಿ ಬಂದಿಲ್ಲ. ನಾಲ್ಕು ದಿಕ್ಕುಗಳಿಂದಲೂ ಮಾಧ್ಯಮಗಳು ಆವರಿಸಿಕೊಂಡಿರುವ ಇಂದಿನ ದಿನಗಳಲ್ಲಿ ಯಾವ ಸಣ್ಣ ಘಟನೆಯೂ ಪತ್ರಕರ್ತರ ಕಣ್ಣಿಗೆ ಬೀಳದೆ ಇರಲು ಸಾಧ್ಯ ಇಲ್ಲ. ಕಣ್ಣಿಗೆ ಬಿದ್ದಿಲ್ಲ ಎಂದರೆ ನಡೆದಿಲ್ಲ ಎಂದೇ ಅರ್ಥ.ಹೋಲಿಕೆಯಲ್ಲಿ ಹೆಚ್ಚು ಶಿಕ್ಷಿತರಿರುವ ಮತ್ತು ಕಡಿಮೆ ಬಡವರು ಇರುವ ಕರ್ನಾಟಕ, ಇಲ್ಲವೇ ಆಂಧ್ರಪ್ರದೇಶಗಳಂತಹ ರಾಜ್ಯಗಳಿಗಿಂತಲೂ ಹೆಚ್ಚು ಮುಕ್ತವಾಗಿ ಮತ್ತು ನ್ಯಾಯಬದ್ಧವಾಗಿ ಉತ್ತರಪ್ರದೇಶದಲ್ಲಿ ಈ ಬಾರಿ ಚುನಾವಣೆ ನಡೆದಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಮತದಾನದ ಪ್ರಮಾಣ ಶೇಕಡಾ ಹನ್ನೆರಡರಷ್ಟು ಹೆಚ್ಚಿದ್ದು ಕೂಡಾ ಇದನ್ನೇ ಸೂಚಿಸುತ್ತದೆ.ಜನ ಯಾಕೆ ಈ ರೀತಿ ಹುಚ್ಚರ ರೀತಿ ಪಾತಕಿಗಳನ್ನು ಬೆಂಬಲಿಸುತ್ತಾರೆ ಎಂದು ಹತ್ತುವರ್ಷಗಳ ಹಿಂದೆ ಸ್ನೇಹಿತ ಅನಿಲ್ ಯಾದವ್ ಅವರನ್ನು ಪ್ರಶ್ನಿಸಿದ್ದೆ. `ಇದಕ್ಕೆ ಮೂರು ಕಾರಣಗಳಿವೆ. ಮೊದಲನೆಯದಾಗಿ ಸರ್ಕಾರಿ ಕಚೇರಿ,ಪೊಲೀಸ್ ಠಾಣೆ ಇಲ್ಲವೆ ಶಾಲೆ -ಆಸ್ಪತ್ರೆಗಳಲ್ಲಿ ಆಗಬೇಕಾಗಿರುವ ಕೆಲಸಗಳನ್ನು ಈ ಪಾತಕಿಗಳು ಒಂದು ಬೆದರಿಕೆಯ ಕರೆಯಿಂದ ಜನರಿಗೆ ಮಾಡಿಕೊಡುತ್ತಿದ್ದರು, ಎರಡನೆಯದಾಗಿ  ಸಾಲ ವಸೂಲಿ, ಬಾಡಿಗೆಯವರಿಂದ ಮನೆ ಬಿಡಿಸುವುದು, ಹೆತ್ತವರು ಒಲ್ಲದ ಮಕ್ಕಳ ಪ್ರೇಮಪ್ರಕರಣವನ್ನು ಮುರಿಯುವುದು ಮೊದಲಾದ ಕಾನೂನಿನ ಮೂಲಕ ಮಾಡಲಾಗದ ಕೆಲಸಗಳನ್ನು ಈ ಪಾತಕಿಗಳು ತೋಳ್ಬಲದ ಮೂಲಕ ಮಾಡಿಕೊಡುತ್ತಿದ್ದರು.ಮೂರನೆಯದಾಗಿ ರಾಜಕಾರಣಿಗಳೇ ಈ ಪಾತಕಿಗಳ ಕೈಕಾಲು ಹಿಡಿಯುತ್ತಿರುವಾಗ ಅವರಿಗಿಂತ ಇವರೇ ವಾಸಿ ಎಂದು ಜನ ತಿಳಿದುಕೊಂಡಿರುವುದೂ ಕಾರಣ ಇರಬಹುದು~ ಎಂದು ಯಾದವ್ ದೀರ್ಘ ಉತ್ತರ ನೀಡಿದ್ದ. ಈ ಉತ್ತರದಲ್ಲಿಯೇ ಉತ್ತರಪ್ರದೇಶದ ಈಗಿನ ಬದಲಾವಣೆಗೆ ಏನು ಕಾರಣ ಎನ್ನುವ ಪ್ರಶ್ನೆಗೂ ಉತ್ತರ ಇದೆ.ಕಳೆದ ಹತ್ತುವರ್ಷಗಳ ಅವಧಿಯಲ್ಲಿ ಮುಖ್ಯವಾಗಿ ಮಾಯಾವತಿ ಅವರ ಆಡಳಿತದ ಅವಧಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆಯೂ ಸೇರಿದಂತೆ ಒಟ್ಟು ಆಡಳಿತದಲ್ಲಿ ಸುಧಾರಣೆಯಾಗಿದೆ.ಜನರು ಹಿಂದಿನಷ್ಟು ಅಸಹಾಯಕರಲ್ಲ. ಇದರ ಜತೆಗೆ ಹೆಚ್ಚಿದ ಯುವಮತದಾರರ ಸಂಖ್ಯೆ, ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳು, ಸ್ವಯಂಸೇವಾ ಸಂಸ್ಥೆಗಳು ನಡೆಸಿದ ಮತದಾರರ ಜಾಗೃತಿ ಮತ್ತು ಮಾಧ್ಯಮಗಳ ಕಾವಲುಕಣ್ಣುಗಳ ಕೊಡುಗೆಯೂ ಇದೆ. ಈ ಬಾರಿಯೂ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಕ್ರಿಮಿನಲ್‌ಗಳಿದ್ದಾರೆ, ಭ್ರಷ್ಟಚಾರದಿಂದಾಗಿ ಕೋಟ್ಯಧಿಪತಿಗಳಾದವರಿದ್ದಾರೆ. ಆದರೆ ಮತದಾರರು ಬದಲಾಗಿದ್ದಾರೆ, ಉತ್ತರಪ್ರದೇಶ ಬದಲಾಗುತ್ತಿದೆ, ನಂಬಿ.(ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಸಮೀಕ್ಷೆ ಇಲ್ಲಿಗೆ ಮುಗಿಯಿತು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.