ಮಂಗಳವಾರ, ಜೂನ್ 22, 2021
22 °C

ನಗರಗಳ ಹೆಸರು ಬದಲಾವಣೆ ಆಗಬೇಕೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಸೇರಿದಂತೆ ಕರ್ನಾಟಕದ ಹನ್ನೆರಡು ನಗರಗಳ ಹೆಸರುಗಳ ಕನ್ನಡೀಕರಣ ಪ್ರಸ್ತಾವಕ್ಕೆ ಭಾರತ ಸರ್ವೇಕ್ಷಣಾ ಇಲಾಖೆ ಒಪ್ಪಿಗೆ ನೀಡಿದೆ. ಅದರ ಅಧಿಕೃತ ಆದೇಶ ಪತ್ರವಷ್ಟೇ ರಾಜ್ಯ ಸರ್ಕಾರಕ್ಕೆ ತಲುಪಬೇಕಿದೆ. ಅದು ತಲುಪಿದ ನಂತರ ಸರ್ಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪತ್ರಿಕಾ ವರದಿಯೊಂದು ತಿಳಿಸಿದೆ.ಆದೇಶ ತಲುಪುತ್ತದೆ. ಸರ್ಕಾರ ಮುಂದಿನ ಕ್ರಮವನ್ನೂ ಕೈಗೊಳ್ಳುತ್ತದೆ. ಯಾಕೆಂದರೆ ಇದರಲ್ಲಿ ಇರುವುದು ಕೇವಲ ಕಾಗದದ ಕೆಲಸ. ನಾವು ಕಾಗದದ ಮೇಲೆ ಕೆಲಸ ಮಾಡುವುದರಲ್ಲಿ ನಿಷ್ಣಾತರು. ಆ ಬಗ್ಗೆ ಬೇಸರ ಪಟ್ಟುಕೊಳ್ಳುವವರಲ್ಲ. ಅದಾದ ಮೇಲೆ ಏನಾದೀತು? ಬೆಂಗಳೂರನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಇಂಗ್ಲಿಷ್‌ನಲ್ಲಿ ಬಿ ಇ ಎನ್ ಜಿ ಎ ಎಲ್ ಒ ಒ ಆರ್ ಯು ಎಂದು ಬರೆಯಬೇಕಾಗುತ್ತದೆ ಮತ್ತು ಬೆಂಗಳೂರು ಎಂದೇ ಉಚ್ಚರಿಸಬೇಕಾಗುತ್ತದೆ.ಅಸಂಖ್ಯಾತ ದಾಖಲೆಗಳಲ್ಲಿ, ನಾಮ ಫಲಕಗಳಲ್ಲಿ ಸ್ಪೆಲಿಂಗ್ ಬದಲಾವಣೆ ಆಗಬೇಕು. ಅದಕ್ಕೆ ಸರ್ಕಾರ ಮತ್ತು ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಸರ್ಕಾರದ ಹತೋಟಿಯಲ್ಲಿರುವ ದಾಖಲೆ, ನಾಮಫಲಕಗಳಲ್ಲಿ ಹೆಸರು ಬದಲಾವಣೆ ಆದೀತು. ಆದರೆ ಇತರ ಕಡೆಗಳಲ್ಲಿ ಬದಲಾವಣೆ ಕಾರ್ಯರೂಪಕ್ಕೆ ತರುವುದು ಕಷ್ಟ. ಪ್ರತಿಯೊಂದು ಇಂಗ್ಲಿಷ್ ಬೋರ್ಡಿನಲ್ಲಿ ಅದೇ ವಿವರಗಳು ಕನ್ನಡದಲ್ಲೂ ಇರಬೇಕಾದ್ದು ಕಡ್ಡಾಯ ಎಂದು ಕಾನೂನು ಮಾಡಿ ಅದನ್ನು ಅನುಷ್ಠಾನಕ್ಕೆ ತಂದರೆ ಅದು ಕನ್ನಡಿಗರಿಗೆ ಅನುಕೂಲವಾಗುವ ಹಾಗೂ ನಮ್ಮ ಭಾಷೆಯ ಉನ್ನತಿಗೆ ಕಾರಣವಾಗುವ ಕ್ರಮ ವಾಗುತ್ತಿತ್ತು. ಸರ್ಕಾರ ಅದನ್ನು ಮಾಡಿಲ್ಲ.ಕೇವಲ ಕಾಗದದಲ್ಲಿರುವ ಅನೇಕ ಕಾನೂನುಗಳ ಜೊತೆಗೆ ಸ್ಪೆಲಿಂಗ್ ಬದಲಾವಣೆಯ ಮತ್ತೊಂದು ಕಾನೂನು ಸೇರಿಕೊಳ್ಳುತ್ತದಷ್ಟೆ.ಊರಿನ ಹೆಸರುಗಳ ಕನ್ನಡೀಕರಣ ಎಂಬುದು ದೊಡ್ಡ ಪ್ರಕ್ರಿಯೆಯಂತೆ ಕಂಡರೂ ಅದು ವಾಸ್ತವವಾಗಿ ಇದು ಸ್ಪೆಲ್ಲಿಂಗ್ ಬದಲಾವಣೆಯೇ ಹೊರತು ಬೇರೇನೂ ಅಲ್ಲ. ಬೆಂಗಳೂರು, ಕನ್ನಡಿಗರ ಬಾಯಲ್ಲಿ, ಗ್ರಂಥಗಳಲ್ಲಿ, ಬರಹಗಳಲ್ಲಿ ಶತಮಾನಗಳಿಂದ ಬೆಂಗಳೂರಾಗಿಯೇ ಇದೆ. ಬ್ರಿಟಿಷರ ಕಾಲದಲ್ಲೂ ಬೆಂಗಳೂರೆಂಬ ಹೆಸರೇ ಬಳಕೆಯಲ್ಲಿತ್ತು. ಬ್ರಿಟಿಷರು ಹಾಗೂ ಅನ್ಯ ಭಾಷಿಕರು ತಮ್ಮ ನಾಲಿಗೆ ಹೊರಳುವಿಕೆಗೆ ಅನುಕೂಲವಾಗುವಂತೆ ಅದನ್ನು ಬ್ಯಾಂಗಲೂ(ಳೋ)ರ್ ಎಂದು ಹೇಳುತ್ತಿದ್ದರಲ್ಲದೆ ಹಾಗೇ ಬರೆದರು.ಇಂಗ್ಲಿಷ್ ಭಾಷೆಯಲ್ಲಿ ವಾಕ್ಯ ರಚನೆಗೆ ಶಬ್ದಗಳು ಅರ್ಧಾಕ್ಷರದಲ್ಲಿ ಅಂತ್ಯವಾಗುವುದು ಅನುಕೂಲಕರ. ನಮ್ಮ ವಾಕ್ಯ ರಚನೆಯ ಕ್ರಮಕ್ಕೆ ಹೊಂದಿಕೊಂಡು ನಮ್ಮ ಬಾಯಲ್ಲಿ ಇಂಗ್ಲಿಷ್ ಭಾಷೆಯ ಅರ್ಧಾಕ್ಷರಾಂತ ಶಬ್ದಗಳು ಉಕಾರಾಂತವಾಗಿಲ್ಲವೇ? ಬ್ಯಾಂಕು, ಕಾರು ಇತ್ಯಾದಿ. ಇಂಗ್ಲಿಷಿನಲ್ಲಿ ಬರೆದಾಗ ಮಾತ್ರ ಅದು ಬ್ಯಾಂಗಲೂ(ಳೋ)ರ್ ಆಗಿದೆ. ಅವರು ಕನ್ನಡದಲ್ಲಿ ಬರೆಯುವಾಗ ಬ್ಯಾಂಗಳೋರ್, ಮ್ಯಾಂಗಳೋರ್ ಎಂದು ಬರೆಯುವಂತೆ ಹೇಳಿಲ್ಲ. ಹಾಗೆ ಕಾನೂನು ಮಾಡಿಲ್ಲ.19ನೇ ಶತಮಾನದಲ್ಲಿ ಮುದ್ರಣವಾದ ಪುಸ್ತಕಗಳಲ್ಲಿ `ಮಂಗಳೂರಿನಲ್ಲಿ ಮುದ್ರಿಸಲ್ಪಟ್ಟಿತು~ ಎಂದಿದೆಯೇ ಹೊರತು ಮ್ಯಾಂಗಳೋರ್‌ನಲ್ಲಿ ಮುದ್ರಿಸಲ್ಪಟ್ಟಿತು ಎಂಬುದಾಗಿ ಬರೆದಿಲ್ಲ. ಇದರ ಅರ್ಥ ನಾವು ಇಂಗ್ಲಿಷ್ ಭಾಷಿಗರನ್ನು ತಿದ್ದಲು ಹೊರಟಿದ್ದೆೀವೆಯೇ ವಿನಾ ಕನ್ನಡಿಗರನ್ನಲ್ಲ.  ಈ ಸ್ಪೆಲ್ಲಿಂಗ್ ಬದಲಾವಣೆಯು ಕನ್ನಡದ ಮೇಲಾದ ಅಕ್ರಮವನ್ನು ನೇರ್ಪುಗೊಳಿಸುವ ಕಾರ್ಯವಲ್ಲ ಎಂದಾಯಿತು. ಹಾಗೆ ನಾವು ಸ್ಪೆಲ್ಲಿಂಗ್ ಬದಲಾಯಿಸಿದ ತಕ್ಷಣ ಅವರು ಸರಿಯಾಗಿ `ಳ~ ಕಾರಕ್ಕೆ ಒತ್ತುನೀಡಿ  ಬೆಂಗಳೂರು ಎಂದು ಹೇಳಲಾರರು.

 

ಪ್ರಪಂಚದ ಇತರ ಭಾಷೆಯವರಿಗೆ ಭಾರತೀಯ ಭಾಷೆಯ ಶಬ್ದಗಳ ಉಚ್ಚಾರಣೆ ದುರೂಹ್ಯವಾಗುವುದು ಸಹಜವಾದ ವಿಚಾರ. ವಿದೇಶ ಸಂಚಾರ ಮಾಡಿದ ಪ್ರತಿಯೊಬ್ಬರಿಗೂ ಅದು ಗೊತ್ತಿದೆ; ಪಾಸ್‌ಪೋರ್ಟ್‌ನಲ್ಲಿರುವ ನಮ್ಮ ಹೆಸರನ್ನು ಓದಲು ಅವರು ಕಷ್ಟಪಟ್ಟು, ಕೈಬಿಟ್ಟು ಕೊನೆಗೆ ಅದನ್ನು ನಮ್ಮಿಂದಲೇ ಹೇಳಿಸುತ್ತಾರೆ. ಒಮನ್ ದೇಶದಲ್ಲಿ ಗಿಂಡೀಮನೆ ಮೃತ್ಯುಂಜಯ ಎಂಬ ನನ್ನ ಹೆಸರನ್ನು ಏನು ಮಾಡಿದರೂ ಅವರು ಉಚ್ಚರಿಸಲಾಗದೆ ಕೊನೆಗೆ ಕೆಲವರು ಮೂರ್ತಿ ಎಂದರು. ಇನ್ನು ಕೆಲವರು ಜಿಂದಿಮಾನಿ ಎಂದರು. ಹೀಗಾಗಿ ನಾವು ಸ್ಪೆಲ್ಲಿಂಗ್ ತಿದ್ದುವುದರ ಮೂಲಕ ನಮ್ಮ ಊರಿನ ಹೆಸರನ್ನು ನಮ್ಮಂತೆಯೇ ಹೇಳುವುದನ್ನು ಅವರಿಗೆ ಕಲಿಸಲಾಗದು. ತಮಗೆ ಆದಂತೆ ಅದನ್ನು ಹೇಳಿಯಾರು.ಹಾಗೆ ನೋಡಿದರೆ ದೇಶಗಳ ಹೆಸರನ್ನೇ ಬೇರೆ ಬೇರೆ ರೀತಿಯಲ್ಲಿ ಉಚ್ಛರಿಸುತ್ತಾರೆ. ನಮ್ಮ ದೇಶವನ್ನು ಫ್ರೆಂಚರು `ಆಂದೇ~ ಎನ್ನುತ್ತಾರೆ. ಚೈನಾಕ್ಕೆ `ಶಿನ್ವಾ~ ಅನ್ನುತ್ತಾರೆ. ಅರಬರು ಇಂಡಿಯಾ ಎಂಬುದನ್ನು `ಅಲ್ ಹಿಂದ್~ ಎನ್ನುತ್ತಾರೆ. ನಿಪ್ಪನ್ ಎಂಬ  ಹೆಸರು ಪ್ರಪಂಚಾದ್ಯಂತ ಜಪಾನ್ ಆಗಿದೆ. ಅದನ್ನೆಲ್ಲ ಬದಲಾಯಿಸಲು ಹೊರಡುವುದು ವಿವೇಕವೇ? ಅದು ಸಾಧ್ಯವೆ? ಅದನ್ನು ಬಿಡಿ, ನಾವು ಬೆಂಗಳೂರು ಎಂದು ಇಂಗ್ಲಿಷನ್ನು ತಿದ್ದಲು ಹೊರಟಿದ್ದೆೀವಲ್ಲ, ನಮ್ಮ ಪಕ್ಕದ ಆಂಧ್ರದಿಂದ ಬರುವ ಬಸ್ಸುಗಳ ಮೇಲೆ ಬೆಂಗುಳೂರು ಎಂದು ಬರೆದಿದ್ದಾರಲ್ಲ! ಕೇರಳದವರು ಮಂಗಳೂರಿಗೆ ಮಂಗಳಾಪುರಂ ಎನ್ನುತ್ತಾರೆ, ಕೊಲ್ಲೂರನ್ನು ಮೂಕಾಂಬಿಕೈ ಎನ್ನುತ್ತಾರೆ.ತಮಿಳಿನಲ್ಲಿ ಬರೆದ ಹೆಸರನ್ನು ಬೆಂಗಳೂರು ಎಂದಾದರೂ ಓದಬಹುದು, ಪೆಂಗಳೂರು ಎಂದಾದರೂ ಓದಬಹುದು. ಹಾಗಂತ ಚಿಟ್ಟಲ್ಡುರ್ಗ್, ಕೂರ್ಗ್, ಮರ್ಕೆರ ಮುಂತಾದ ಶಬ್ದಗಳನ್ನು ಹಾಗೇ ಇಟ್ಟುಕೊಳ್ಳಬೇಕೆಂದಿಲ್ಲ. ಇವುಗಳು ಈಗಾಗಲೇ ಕನ್ನಡ ರೂಪದಲ್ಲಿ ಬರೆಯಲ್ಪಡುತ್ತಿರುವುದರಿಂದ ಅಧಿಕೃತಗೊಳಿಸುವುದರಲ್ಲಿ ಬಾಧಕವಿಲ್ಲ. ಅದರಿಂದ ಬೆಂಗಳೂರಿನ ಸಂದರ್ಭದಲ್ಲಿ ಅಗತ್ಯ ಬೀಳುವಂತೆ ಪ್ರಪಂಚದಾದ್ಯಂತ ದಾಖಲೆಗಳನ್ನು ತಿದ್ದುವ ಅಗತ್ಯ ಬೀಳದು.ಸ್ಪೆಲ್ಲಿಂಗ್ ಬದಲಾವಣೆಯು ಕನ್ನಡದ ಸ್ಥಿತಿಯನ್ನಾಗಲೀ, ಕನ್ನಡಿಗರ ಜೀವನ ಮಟ್ಟವನ್ನಾಗಲೀ ಉನ್ನತ ಸ್ತರಕ್ಕೆ ಏರಿಸಬಲ್ಲ ಸಾಮರ್ಥ್ಯ ಹೊಂದಿಲ್ಲ.  ಆದ್ದರಿಂದ ಇದು ಆದ್ಯತೆ ಮೇಲೆ  ಕೈಗೆತ್ತಿಕೊಳ್ಳಬೇಕಾದ ಕೆಲಸವಲ್ಲ. ಒಟ್ಟಿನಲ್ಲಿ ಎಲ್ಲ ಸಾಧಕ, ಬಾಧಕಗಳನ್ನು ವಿಚಾರ ಮಾಡಿದರೆ, ಎಲ್ಲೆಲ್ಲಿ ವಿಮಾನ ನಿಲ್ದಾಣಗಳಿಲ್ಲವೋ ಆ ನಗರಗಳ ಇಂಗ್ಲಿಷ್ ಹೆಸರುಗಳ ಸ್ಪೆಲ್ಲಿಂಗ್‌ಗಳನ್ನು ಮಾತ್ರ ಬದಲಾಯಿಸುವುದು ಸೂಕ್ತ ಅನ್ನಿಸುತ್ತದೆ.

-ಜಿ.ಮೃತ್ಯುಂಜಯ, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.