ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನತದೃಷ್ಟ ನೊಬೆಲ್!

Last Updated 24 ಜನವರಿ 2015, 19:30 IST
ಅಕ್ಷರ ಗಾತ್ರ

 ಭಾರತದ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆಯಾದಾಗ ಇಡೀ ದೇಶವೇ ಸಂಭ್ರಮಿಸಿತ್ತು. ಸತ್ಯಾರ್ಥಿ ಅವರ ಜತೆಗೆ ಪಾಕಿಸ್ತಾನದ ಮಕ್ಕಳ ಶಿಕ್ಷಣ ಹಕ್ಕುಗಳ ಚಳವಳಿಯ ರೂವಾರಿ, ಹದಿನೇಳು ವರ್ಷದ ಮಲಾಲಾ ಯೂಸಫ್‌ಝೈ ಕೂಡಾ ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾದ ಸುದ್ದಿಯೂ ಬೆರಗಿಗೆ, ಸಂಭ್ರಮಕ್ಕೆ ಕಾರಣವಾಗಿದೆ.  ಆದರೆ, ಕಿರಿಯ ವಯಸ್ಸಿನ ಮಲಾಲಾಗೆ, ಮಕ್ಕಳ ಹಕ್ಕುಗಳ ಹೋರಾಟಗಾರ ಸತ್ಯಾರ್ಥಿ ಅವರಿಗೆ ಸಿಕ್ಕ ನೊಬೆಲ್ ಗೌರವ ಜಗತ್ತಿಗೇ ಶಾಂತಿ ಸಂದೇಶ ನೀಡಿದ ನಮ್ಮ ‘ಮಹಾತ್ಮ’ನಿಗೇಕೆ ಸಿಗಲಿಲ್ಲ ಎಂಬ ಪ್ರಶ್ನೆ ಕೆಲವರನ್ನಾದರೂ ಕಾಡಿದೆ.

ಅಂದಹಾಗೆ, ನೊಬೆಲ್ ಶಾಂತಿ ಪುರಸ್ಕಾರಕ್ಕೆ ಗಾಂಧೀಜಿ ಅವರ ಹೆಸರು ಐದು ಬಾರಿ ನಾಮನಿರ್ದೇಶನಗೊಂಡಿತ್ತು.  ಆದರೂ ಪ್ರಶಸ್ತಿಗೆ ಅವರ ಹೆಸರನ್ನು ಅಂತಿಮಗೊಳಿಸಲು ಹಲವಾರು ತೊಡರುಗಳು ಎದುರಾಗಿದ್ದು ಇತಿಹಾಸ. ಗಾಂಧೀಜಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಲು ನಡೆದ ಪ್ರಯತ್ನಗಳೆಲ್ಲವೂ ವಿಫಲಗೊಂಡಿದ್ದು ಕೂಡಾ ಈಗ ಗತಕ್ಕೆ ಸಂದ ಅಧ್ಯಾಯ.

ಗಾಂಧೀಜಿ ಹೆಸರು ನೊಬೆಲ್ ಪುರಸ್ಕಾರಕ್ಕೆ ಮೊದಲ ಬಾರಿಗೆ ನಾಮನಿರ್ದೇಶನಗೊಂಡಿದ್ದು 1937ರಲ್ಲಿ. ನಂತರ 1938, 1939, 1947 ಮತ್ತು 1948ರಲ್ಲಿ ಕೂಡಾ ಮಹಾತ್ಮನ ಹೆಸರು ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿತ್ತು. ಗಾಂಧೀಜಿಯ ಮಾರ್ಗ ಹಾಗೂ ಆಲೋಚನೆಗಳ ಬಗೆಗೆ ಮೂಡಿದ ಆಯ್ಕೆ ಸಮಿತಿ ಸದಸ್ಯರ ಮತ್ತು ಸಲಹೆಗಾರರ ಭಿನ್ನವಾದ ಅಭಿಪ್ರಾಯಗಳಿಂದಾಗಿ ಮಹಾತ್ಮನಿಗೆ ನೊಬೆಲ್ ಗೌರವ ತಪ್ಪುವಂತಾಯಿತು.

ಸಂತ ಮತ್ತು ಸಾಮಾನ್ಯ ರಾಜಕಾರಣಿ!
ನಾರ್ವೆ ಸಂಸತ್ತಿನ ಲೇಬರ್ ಪಕ್ಷದ ಸದಸ್ಯ ಓಲೆ ಕಾಲ್ಬೋರ್ಸನ್ 1937ರಲ್ಲಿ ಮೊದಲ ಬಾರಿಗೆ ಮಹಾತ್ಮ ಗಾಂಧೀಜಿ ಹೆಸರನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಸೂಚಿಸಿದರು. ಆಯ್ಕೆ ಪಟ್ಟಿಯ 13 ಜನರಲ್ಲಿ ಗಾಂಧೀಜಿಯ ಹೆಸರೂ ಇತ್ತು. ಆದರೆ, ಆಯ್ಕೆ ಸಮಿತಿಯ ಸಲಹೆಗಾರ ಪ್ರೊ.ಜಾಕೊಬ್ ವಾರ್ಮ್ ಮುಲ್ಲರ್ ನೀಡಿದ್ದ ವರದಿಯಿಂದಾಗಿ ಮಹಾತ್ಮನಿಗೆ ನೊಬೆಲ್ ಪುರಸ್ಕಾರ ತಪ್ಪಿತು.

‘ಭಾರತದ ಇಡೀ ಸಮುದಾಯ ಪ್ರೀತಿ ಮತ್ತು ಗೌರವದಿಂದ ಕಾಣುವ ಗಾಂಧೀಜಿ ಒಬ್ಬ ಶ್ರೇಷ್ಠ ವ್ಯಕ್ತಿ ಎಂಬುದರಲ್ಲಿ ಅನುಮಾನವೇ ಇಲ್ಲ’ ಎಂದು ಹೇಳಿದ್ದ ಜಾಕೊಬ್ ಮುಂದುವರಿದು, ‘ರಾಜಕೀಯ ನಾಯಕನಾಗಿ ಗಾಂಧೀಜಿಯನ್ನು ನೋಡಿದಾಗ ಅವರೊಬ್ಬ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸರ್ವಾಧಿಕಾರಿಯಂತೆ ಕಾಣುತ್ತಾರೆ. ಅವರೊಬ್ಬ ಆದರ್ಶವಾದಿ ಮತ್ತು ರಾಷ್ಟ್ರೀಯವಾದಿ. ಆಗಾಗ ಸಂತನಂತೆ ಕಾಣುವ ಗಾಂಧೀಜಿ ಏಕಾಏಕಿ ಸಾಮಾನ್ಯ ರಾಜಕಾರಣಿಯಾಗಿಬಿಡುತ್ತಾರೆ’ ಎಂದು ವಿರೋಧಾಭಾಸದ ವರದಿ ನೀಡಿದ್ದರು.

‘ಗಾಂಧೀಜಿಯ ಆದರ್ಶಗಳು ಸಾರ್ವತ್ರಿಕವಾದವು. ಆದರೆ, ಅವು ಮೂಲದಲ್ಲಿ ಭಾರತೀಯವಾದ ಆದರ್ಶಗಳು. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ನಡೆಸಿದ ಹೋರಾಟ ಅಲ್ಲಿದ್ದ ಭಾರತೀಯರ ಪರವಾಗಿಯೇ ಹೊರತು, ಅತ್ಯಂತ ನಿಕೃಷ್ಟವಾಗಿ ಬದುಕುತ್ತಿದ್ದ ಅಲ್ಲಿನ ಕಪ್ಪು ವರ್ಣೀಯರ ಪರವಾಗಿ ಅಲ್ಲ’ ಎಂದು ಜಾಕೊಬ್ ತಮ್ಮ ವರದಿಯಲ್ಲಿ ಹೇಳಿದ್ದರು.

ಬ್ರಿಟಿಷರ ವಿರುದ್ಧ ಗಾಂಧೀಜಿ ನಡೆಸಿದ ಚಳವಳಿ ಕೆಲವೊಮ್ಮೆ ಹಿಂಸಾಚಾರದ ಸ್ವರೂಪ ಪಡೆದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. 1920–21ರಲ್ಲಿ ನಡೆದ ಅಸಹಕಾರ ಚಳವಳಿ ಸಂದರ್ಭದಲ್ಲಿ ಚೌರಿಚೌರಾದಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದ ಪ್ರತಿಭಟನಾಕಾರರು ಪೊಲೀಸರನ್ನು ಕೊಂದು, ಠಾಣೆಗೆ ಬೆಂಕಿ ಇಟ್ಟಿದ್ದರು. ಇದೂ ಕೂಡಾ ಮಹಾತ್ಮನಿಗೆ ನೊಬೆಲ್ ಪುರಸ್ಕಾರ ಸಿಗದಿರಲು ಅಡ್ಡಗಾಲಾಗಿತ್ತು. ಅಂತಿಮವಾಗಿ 1937ರಲ್ಲಿ ‘ಅಂತರರಾಷ್ಟ್ರೀಯ ಶಾಂತಿ ಅಭಿಯಾನ’ದ ಸಂಸ್ಥಾಪಕ ರಾಬರ್ಟ್ ಸೆಸಿಲ್‌ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಯಿತು.

1938 ಮತ್ತು 1939ರಲ್ಲಿ ಮತ್ತೆ ಓಲೆ ಕಾಲ್ಬೋರ್ಸನ್ ಅವರು ಗಾಂಧೀಜಿ ಹೆಸರನ್ನು ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಿದ್ದರು. ಆದರೆ, ಎರಡೂ ವರ್ಷವೂ ಗಾಂಧೀಜಿ ಹೆಸರನ್ನು ಆಯ್ಕೆ ಸಮಿತಿ ಅಂತಿಮಗೊಳಿಸಲಿಲ್ಲ. 1938ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಿರಾಶ್ರಿತರ ಏಳಿಗೆಗಾಗಿ ಕೆಲಸ ಮಾಡುತ್ತಿದ್ದ ‘ನಾನ್‌ಸೆನ್’ ಪ್ರತಿಷ್ಠಾನವನ್ನು ಆಯ್ಕೆ ಮಾಡಲಾಯಿತು. 1939ರ ಪುರಸ್ಕಾರಕ್ಕೆ ಯಾರೂ ಆಯ್ಕೆಯಾಗಲಿಲ್ಲ. 1947ರಲ್ಲಿ ನಾರ್ವೆಯ ವಿದೇಶಾಂಗ ಕಚೇರಿಗೆ ಭಾರತದಿಂದ ಒಂದು ಟೆಲಿಗ್ರಾಂ ಸಂದೇಶ ಕಳಿಸಲಾಗಿತ್ತು. ಬಿ.ಜಿ.ಖೇರ್, ಗೋವಿಂದ ವಲ್ಲಭ ಪಂತ್ ಮತ್ತು ಮಾಲವಾಳ್ಕರ್ ಅವರು ಗಾಂಧೀಜಿ ಹೆಸರನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಪರಿಗಣಿಸುವಂತೆ ಸಂದೇಶದಲ್ಲಿ ಮನವಿ ಮಾಡಿದ್ದರು.

ಭಾರತದ ಮನವಿ ಪರಿಗಣಿಸಿದ ಆಯ್ಕೆಸಮಿತಿ 1947ರ ಪುರಸ್ಕಾರಕ್ಕೆ ಗಾಂಧೀಜಿ ಹೆಸರನ್ನು ಆಯ್ಕೆ ಪಟ್ಟಿಗೆ ಸೇರಿಸಿತ್ತು. 1937ರ ಬಳಿಕ ಭಾರತದ ರಾಜಕೀಯ ಇತಿಹಾಸದಲ್ಲಿ ಗಾಂಧೀಜಿಯವರ ಪಾತ್ರದ ಬಗ್ಗೆ ಆಯ್ಕೆ ಸಮಿತಿಯ ಅಂದಿನ ಸಲಹೆಗಾರ ಜೇನ್ಸ್ ಅರುಪ್ ಸೈಪ್ ವರದಿ ಸಲ್ಲಿಸಿದ್ದರು. ‘1937ರಿಂದ 1947ರ ನಡುವೆ ಗಾಂಧೀಜಿ ಮತ್ತು ಅವರ ಚಳವಳಿಯು ಗೆಲುವು ಹಾಗೂ ಸೋಲು ಎರಡನ್ನೂ ಕಂಡಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಚಳವಳಿಯ ಗೆಲುವಾದರೆ, ಭಾರತ ವಿಭಜನೆಯಾದುದು ದೊಡ್ಡ ಸೋಲು’ ಎಂದು ಸೈಪ್ ವರದಿಯಲ್ಲಿ ಹೇಳಿದ್ದರು. ಭಾರತ ವಿಭಜನೆ, ಹಿಂದೂ– ಮುಸ್ಲಿಮರ ಬಗ್ಗೆ ಗಾಂಧೀಜಿಗಿದ್ದ ಅಭಿಪ್ರಾಯಗಳು, ಪಾಕಿಸ್ತಾನದ ಬಗ್ಗೆ ಗಾಂಧೀಜಿ ಹೊಂದಿದ್ದ ಧೋರಣೆಗಳನ್ನು ಸೈಪ್ ವರದಿಯಲ್ಲಿ ವಿಮರ್ಶಿಸಿದ್ದರು.

ಗಾಂಧಿ ಮತ್ತು ಯುದ್ಧ
1947ರಲ್ಲಿ ಗಾಂಧೀಜಿಗೆ ನೊಬೆಲ್ ಶಾಂತಿ ಪುರಸ್ಕಾರ ತಪ್ಪಲು ಬಲವಾದ ಕಾರಣ ಪಾಕಿಸ್ತಾನದ ಬಗ್ಗೆ ಗಾಂಧೀಜಿ ವ್ಯಕ್ತಪಡಿಸಿದ್ದ ಅಭಿಪ್ರಾಯ. ‘ಯುದ್ಧವನ್ನು ಯಾರೂ ಬಯಸುವುದಿಲ್ಲ. ಆದರೆ, ಪಾಕಿಸ್ತಾನ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಇಲ್ಲವಾದರೆ ಭಾರತ ಅದರ ವಿರುದ್ಧ ಯುದ್ಧ ಸಾರುವುದು ಅನಿವಾರ್ಯವಾಗುತ್ತದೆ’ ಎಂದು ಗಾಂಧೀಜಿ ಪ್ರಾರ್ಥನಾ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆಂದು 1947ರ ಸೆಪ್ಟೆಂಬರ್ 27ರಂದು ‘ದಿ ಟೈಮ್ಸ್’ ಪತ್ರಿಕೆ ವರದಿ ಮಾಡಿತ್ತು. ಹೆಚ್ಚೂ ಕಡಿಮೆ ಆ ವರದಿಯೇ ಆ ವರ್ಷ ಮಹಾತ್ಮ ಗಾಂಧೀಜಿಗೆ ನೊಬೆಲ್ ಪುರಸ್ಕಾರ ತಪ್ಪುವಂತೆ ಮಾಡಿತು. ‘ಆ ವರದಿ ಸರಿಯಾಗಿದೆ. ಆದರೆ ಅಪೂರ್ಣವಾಗಿದೆ’ ಎಂದು ಗಾಂಧೀಜಿ ಕೂಡಲೇ ಪ್ರತಿಕ್ರಿಯಿಸಿದ್ದರು. ಆದರೆ, ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಆಯ್ಕೆ ಸಮಿತಿ ಗಾಂಧೀಜಿ ಪ್ರತಿಕ್ರಿಯೆಯ ಕಡೆಗೆ ಹೆಚ್ಚು ಗಮನ ನೀಡಲಿಲ್ಲ.

ಆಗಿನ ಆಯ್ಕೆ ಸಮಿತಿ ಅಧ್ಯಕ್ಷ ಗುನ್ನಾರ್ ಜಾನ್ ಮತ್ತು ಸದಸ್ಯರಾದ ಹರ್ಮನ್ ಸ್ಮಿತ್, ಓಫ್ಟೆಡಾಲ್ ಅವರು ಗಾಂಧೀಜಿ ಪರವಾಗಿದ್ದರೂ ದೇಶ ವಿಭಜನೆ ಹಾಗೂ ಪಾಕಿಸ್ತಾನದ ಬಗ್ಗೆ ಗಾಂಧೀಜಿ ವ್ಯಕ್ತಪಡಿಸಿದ ನಿಲುವನ್ನು ಲೇಬರ್ ಪಕ್ಷದ ನಾಯಕ ಮಾರ್ಟಿನ್ ಟ್ರಾನ್‌ಮೆಲ್ ಮತ್ತು ಮಾಜಿ ವಿದೇಶಾಂಗ ಸಚಿವರಾಗಿದ್ದ ಬಿರ್ಗರ್ ಬ್ರಾಂಡ್‌ಲ್ಯಾಂಡ್‌ ಅವರು ತೀವ್ರವಾಗಿ ಆಕ್ಷೇಪಿಸಿದ್ದರು. ಅಂತಿಮವಾಗಿ ಆ ವರ್ಷದ ಪುರಸ್ಕಾರವನ್ನು ‘ದಿ ಕ್ವಾಕರ್ಸ್’ ಸಂಘಟನೆಗಳಿಗೆ (ಫ್ರೆಂಡ್ಸ್ ಸರ್ವಿಸ್ ಕೌನ್ಸಿಲ್ ಮತ್ತು ಅಮೆರಿಕನ್ ಫ್ರೆಂಡ್ಸ್ ಸರ್ವಿಸ್ ಕಮಿಟಿ) ನೀಡಲಾಯಿತು.

1948ರಲ್ಲಿ....
ಜನವರಿ 30, 1948– ಗಾಂಧೀಜಿ ಗೋಡ್ಸೆ ಗುಂಡಿಗೆ ಬಲಿಯಾದ ದಿನ. ಮಹಾತ್ಮನ ಸಾವಿಗೆ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಕಣ್ಣೀರು ಹರಿಸಿತ್ತು. 1948ರಲ್ಲಿ ಮಹಾತ್ಮನಿಗೆ ಮರಣೋತ್ತರ ನೊಬೆಲ್ ಶಾಂತಿ ಪುರಸ್ಕಾರ ನೀಡುವಂತೆ ಆಯ್ಕೆ ಸಮಿತಿಗೆ ಆರು ಪತ್ರಗಳು ಬಂದಿದ್ದವು. ‘ದಿ ಕ್ವಾರ್ಕರ್’ ಸಂಘಟನೆ ಹಾಗೂ ಅಮೆರಿಕದ ಅರ್ಥಶಾಸ್ತ್ರಜ್ಞೆ ಎಮಿಲಿ ಗ್ರೀನ್ ಬಾಲ್ಚ್ ಬರೆದ ಪತ್ರಗಳೂ ಅದರಲ್ಲಿದ್ದವು. ಮಹಾತ್ಮನಿಗೆ ಆ ವರ್ಷ ನೊಬೆಲ್ ಪುರಸ್ಕಾರ ನೀಡಲು ಆಯ್ಕೆ ಸಮಿತಿಯ ಹಲವರು ಸಮ್ಮತಿ ವ್ಯಕ್ತಪಡಿಸಿದ್ದರು. ಮರಣೋತ್ತರವಾಗಿ ನೊಬೆಲ್ ಪುರಸ್ಕಾರ ನೀಡುವ ಸಂಪ್ರದಾಯ ಇಲ್ಲವಾಗಿದ್ದರೂ ಗಾಂಧೀಜಿಗಾಗಿ ಆ ಸಂಪ್ರದಾಯ ಮುರಿಯುವ ಬಗ್ಗೆ ಅಂದಿನ ಆಯ್ಕೆ ಸಮಿತಿಯಲ್ಲಿ ಚರ್ಚೆ ನಡೆದಿತ್ತು.

ಈ ಮಧ್ಯೆ ಆಯ್ಕೆ ಸಮಿತಿಗೆ ಹೊಸ ಸಮಸ್ಯೆ ಎದುರಾಗಿತ್ತು. ‘ಗಾಂಧೀಜಿ ಯಾವುದೇ ಸಂಘಟನೆಗೆ ಸೇರಿದವರಲ್ಲ, ಯಾರ ಹೆಸರಿನಲ್ಲಿ ಉಯಿಲನ್ನೂ ಬರೆದಿಲ್ಲ. ಹೀಗಾಗಿ ಗಾಂಧೀಜಿ ಪರವಾಗಿ ಯಾರು ನೊಬೆಲ್‌ ಪುರಸ್ಕಾರ ಸ್ವೀಕರಿಸಬೇಕು? ಪುರಸ್ಕಾರದ ಹಣವನ್ನು ಯಾರಿಗೆ ನೀಡಬೇಕು?’ ಎಂಬ ಪ್ರಶ್ನೆಗಳು ಆಯ್ಕೆ ಸಮಿತಿಯನ್ನು ಕಾಡಿದವು. ಆಯ್ಕೆ ಸಮಿತಿ ಈ ಬಗ್ಗೆ ನಾರ್ವೆ ನೊಬೆಲ್ ಸಂಸ್ಥೆಯ ನಿರ್ದೇಶಕ ಆಗಸ್ಟ್ ಸ್ಚೋವ್ ಅವರ ಅಭಿಪ್ರಾಯ ಕೇಳಿತ್ತು. ಈ ಗೊಂದಲದ ನಿವಾರಣೆಗಾಗಿ ಸಮಿತಿಯ ಸಲಹೆಗಾರ ಟಾರ್ಲಿಫ್ ರೋಡ್ ಅವರ ಸಲಹೆಯಂತೆ ಸ್ವೀಡಿಷ್ ಪ್ರಶಸ್ತಿ ಪ್ರದಾನ ಸಂಸ್ಥೆಯ ಅಭಿಪ್ರಾಯ ಕೇಳಲಾಯಿತು. ಆ ಸಂಸ್ಥೆಯಿಂದ ನಕಾರಾತ್ಮಕ ಅಭಿಪ್ರಾಯವೇ ಬಂತು. ನಿಯಮಗಳ ಪ್ರಕಾರ ಮರಣೋತ್ತರವಾಗಿ ಪುರಸ್ಕಾರ ನೀಡುವುದು ಸರಿಯಲ್ಲ ಎಂದು ಸಂಸ್ಥೆ ಹೇಳಿತ್ತು.

1948ರ ನವೆಂಬರ್ 18ರಂದು ಆಯ್ಕೆ ಸಮಿತಿ ‘ಸೂಕ್ತ ಜೀವಂತ ಸಾಧಕರು ಯಾರೂ ಇಲ್ಲದ ಕಾರಣ’ ಆ ವರ್ಷ ಪುರಸ್ಕಾರವನ್ನು ಯಾರಿಗೂ ನೀಡದಿರಲು ನಿರ್ಣಯಿಸಿತು. 1964ರಲ್ಲಿ ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌ ಅವರಿಗೆ ನೊಬೆಲ್‌ ಶಾಂತಿ ಪುರಸ್ಕಾರ ಪ್ರದಾನ ಮಾಡಿದಾಗ ಆಯ್ಕೆ ಸಮಿತಿಯ ಅಧ್ಯಕ್ಷ ಗುನ್ನಾರ್‌ ಜಾನ್‌ ಅವರು ತಮ್ಮ ಭಾಷಣದುದ್ದಕ್ಕೂ ಮಹಾತ್ಮ ಗಾಂಧೀಜಿಯನ್ನು ಸ್ಮರಿಸಿಕೊಂಡಿದ್ದರು.

1989ರಲ್ಲಿ ಟಿಬೆಟನ್ ಧರ್ಮಗುರು ದಲೈ ಲಾಮಾ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡುವ ಸಂದರ್ಭದಲ್ಲಿ ನಾರ್ವೆ ನೊಬೆಲ್‌ ಸಮಿತಿ ಅಧ್ಯಕ್ಷ ಎಜಿಲ್‌ ಆರ್ವೆಕ್‌ ಮತ್ತು ಪುರಸ್ಕಾರ ಸ್ವೀಕರಿಸಿ ಮಾತನಾಡಿದ್ದ ಲಾಮಾ ತಮ್ಮ ಭಾಷಣದಲ್ಲಿ ಮಹಾತ್ಮನನ್ನು ಸ್ಮರಿಸಿಕೊಂಡಿದ್ದರು.

ಮಹಾತ್ಮನಿಗೆ ನೊಬೆಲ್ ಪುರಸ್ಕಾರಕ್ಕಿಂತಲೂ ಹೆಚ್ಚಿನ ಗೌರವ ಜಗತ್ತಿನ ಶಾಂತಿಪ್ರಿಯರಿಂದ ಸಿಕ್ಕಿದೆ. ಸತ್ಯ, ಅಹಿಂಸೆ, ಸರಳತೆ, ಸ್ವಾವಲಂಬನೆಗೆ ಮತ್ತೊಂದು ಹೆಸರೇ ಗಾಂಧೀಜಿ. 1901ರಿಂದ ಇಲ್ಲಿಯವರೆಗೂ ಅನೇಕರು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಆದರೆ, ಮಹಾತ್ಮ ಗಾಂಧೀಜಿ ನೊಬೆಲ್ ಪುರಸ್ಕಾರಕ್ಕಿಂತಲೂ ಮಿಗಿಲಾದ ವಿಶ್ವಪ್ರೇಮಗಳಿಸಿದ್ದಾರೆಂಬುದು ಭಾರತದ ಹೆಮ್ಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT